ADVERTISEMENT

ಬೆಟ್ಟಗಳನ್ನೇ ಮಣಿಸಿ ಅಂತರ್ಜಲ ಉಕ್ಕಿಸಿದ ಧೀರರು!

ಚಂದ್ರಹಾಸ ಹಿರೇಮಳಲಿ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಬೆಟ್ಟಗಳನ್ನೇ ಮಣಿಸಿ ಅಂತರ್ಜಲ ಉಕ್ಕಿಸಿದ ಧೀರರು!
ಬೆಟ್ಟಗಳನ್ನೇ ಮಣಿಸಿ ಅಂತರ್ಜಲ ಉಕ್ಕಿಸಿದ ಧೀರರು!   

ಶಿವಮೊಗ್ಗ:ಮಳೆಗಾಲದಲ್ಲಿ ಸಾಕಷ್ಟು ಮಳೆ ಸುರಿದರೂ ಬೇಸಿಗೆಯಲ್ಲಿ ಎದುರಾಗುತ್ತಿದ್ದ ನೀರಿನ ಸಮಸ್ಯೆ ನೀಗಿಸಲು ಎರಡು ಹಳ್ಳಿಗಳ ಜನರು ಒಟ್ಟಾಗಿ ಬೆಟ್ಟಗಳನ್ನೇ ಮಣಿಸುವ ಮೂಲಕ ಅಂತರ್ಜಲ ಉಕ್ಕಿಸಿದ್ದಾರೆ !

– ಇದು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದ ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಲ್ಲಿ ಇರುವ ಕರ್ಕಿ, ಮಕ್ಕಿಕೊಪ್ಪ ಗ್ರಾಮಸ್ಥರ ಸಾಧನೆ.
ಗ್ರಾಮಗಳ ಎರಡೂ ಬದಿ ಪರ್ವತ ಶ್ರೇಣಿ ಹಾದು ಹೋಗಿವೆ. ಬೆಟ್ಟಗಳ ಸಾಲಿನ ಮಧ್ಯೆ ನೆಲೆ ಕಂಡುಕೊಂಡಿರುವ ಜನರು ತಪ್ಪಲಿನ ಅಲ್ಪಸ್ವಲ್ಪ ಸಮತಟ್ಟಾದ ಭೂಮಿಯನ್ನೇ ಉಳುಮೆ ಮಾಡಿ ಭತ್ತ, ಅಡಿಕೆ, ಮೆಣಸು, ಬಾಳೆ, ಶುಂಠಿ, ಬೆಳೆಯುತ್ತಾ ಬಂದಿದ್ದಾರೆ.

ಗ್ರಾಮದ ಸುತ್ತಲೂ ನೆಲ್ಲಿಸರ ಗುಡ್ಡ, ಒಡ್ಡಿನಬೈಲು, ದೂಪದಸರ, ಏಲಕ್ಕಿಸರ, ಗೋವಿನಕಟ್ಟೆ, ಚಾರ್‍ಲಿ ಬೆಟ್ಟಗಳಿವೆ. ಕವಳಿ, ಚೆಂಬರ್‍ಲು, ತುಮರಿ, ಚಾರ್‍ಲಿ ಹಣ್ಣಿಗೆ ಈ ಬೆಟ್ಟಗಳು ಪ್ರಸಿದ್ಧಿ ಪಡೆದಿವೆ. ಮಳೆಗಾಲದಲ್ಲಿ ಈ ಆರೂ ಬೆಟ್ಟಗಳ ಮೇಲೆ ಸುರಿಯುವ ನೀರು ನೇರವಾಗಿ ಕರ್ಕಿ ಹಳ್ಳ ಸೇರುತ್ತದೆ. ಹಳ್ಳದ ಆಸುಪಾಸಿನಲ್ಲೇ  ಕಲರ್‌ಗುಂಡಿ, ಚಟ್ಟರ್‌ಕಲ್ಲು, ಕಪ್ಪೆ ಹೊಂಡಗಳಿವೆ.

ADVERTISEMENT

ಈ ಭಾಗದಲ್ಲಿ ವರ್ಷಕ್ಕೆ ಸರಾಸರಿ ಮೂರೂವರೆ ಸಾವಿರ ಮಿ.ಮೀ.  ಮಳೆಯಾಗುತ್ತಿದೆ. ಮೂರ್‍ನಾಲ್ಕು ವರ್ಷಗಳಿಂದ ಮಳೆ ಕೊರತೆ ಕಾರಣ ಎಂದೂ ಬತ್ತದ ಈ ಎಲ್ಲ ಜಲಮೂಲಗಳು ಕಳೆದ ಬೇಸಿಗೆಯಲ್ಲಿ ಸಂಪೂರ್ಣ ಬರಿದಾಗಿದ್ದವು. ತೋಟ ಉಳಿಸಿಕೊಳ್ಳಲು ಕೊರೆಸಿದ ಕೊಳವೆ ಬಾವಿಗಳಲ್ಲೂ ಶೇ 90ರಷ್ಟು ವಿಫಲವಾಗಿದ್ದವು. ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಲ್ಲಿನ ರೈತರು ತುಂಗಾ ನದಿಯಿಂದ ಟ್ಯಾಂಕರ್‌ಗಳ ಮೂಲಕ ನೀರು ತಂದು ತೋಟ ಉಳಿಸಿಕೊಂಡಿದ್ದರು.

ಬೆಟ್ಟಗಳ ಮೇಲೆ ಜಲ ಸಂರಕ್ಷಣಾ ವಿಧಾನ: ಭವಿಷ್ಯದಲ್ಲಿ ಎಂತಹ ಬರಗಾಲ ಎದುರಾದರೂ ಜಲ ಸಂಕಷ್ಟ ಎದುರಾಗದಂತೆ  ಬೆಟ್ಟಗಳ ಮೇಲೆ ಗ್ರಾಮಸ್ಥರು ನೀರು ಸಂರಕ್ಷಣಾ ವಿಧಾನ ಅಳವಡಿಸಿಕೊಂಡಿದ್ದಾರೆ.

ಎಂಜಿನಿಯರ್‌ ರಮೇಶ್, ಶಿವಮೊಗ್ಗ ದೊಡ್ಡಪೇಟೆ ಸಿಪಿಐ ಕೆ.ಟಿ.ಗುರುರಾಜ್‌,  ಮುಖಂಡರಾದ ಮಂಜಪ್ಪ ಮಾಸ್ಟರ್, ಶ್ರೀಧರ, ಜಯರಾಜ್, ಉಮೇಶ್, ಗಣೇಶ್, ಶಿವಾನಂದ್‌ ಅವರ ನೇತೃತ್ವದಲ್ಲಿ ಜಲತಜ್ಞರ ಸಲಹೆ ಪಡೆದು ಬೆಟ್ಟಗಳ ತುದಿಯಿಂದ ತಪ್ಪಲಿನವರೆಗೂ ಜಲಸಂರಕ್ಷಣಾ ವಿಧಾನ ಅಳವಡಿಸಲಾಗಿದೆ.

ಕರ್ಕಿಯಲ್ಲಿ 5 ಹಾಗೂ ಮಕ್ಕಿಕೊಪ್ಪದಲ್ಲಿ 25 ಮನೆಗಳಿವೆ. ಎಲ್ಲ ಮನೆಗಳೂ ಸೇರಿ ಹಾರೆ, ಪಿಕಾಸಿ ಹಿಡಿದು 3 ತಿಂಗಳು ಬೆವರು ಹರಿಸಿದ್ದಾರೆ. ವಿಶಾಲ ಜಾಗಗಳಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡಿದ್ದಾರೆ. ಉದ್ಯೋಗದಲ್ಲಿ ಇರುವ ಗ್ರಾಮದ ಯುವಕರು ಆರ್ಥಿಕ ನೆರವು ನೀಡಿದ್ದಾರೆ.
ತುದಿಯಿಂದ ತಪ್ಪಲಿನವರೆಗೂ ಹಲವು ಹಂತಗಳಲ್ಲಿ ಬೃಹತ್ ಇಂಗುಗುಂಡಿ ನಿರ್ಮಿಸಲಾಗಿದೆ. ಪ್ರತಿ ಗುಂಡಿಗಳು 50ರಿಂದ 100 ಅಡಿ ಉದ್ದ, 6–7 ಅಡಿ ಆಳ, 3–4 ಅಡಿ ಅಗಲ ವಿಸ್ತಾರ ಹೊಂದಿವೆ. ಪ್ರತಿ ಗುಂಡಿಯೂ ಚಂದ್ರಾಕೃತಿಯಲ್ಲಿ ಇದ್ದು, ಎರಡೂ ತುದಿಯಲ್ಲಿ ಮೆಟ್ಟಿಲು ನಿರ್ಮಿಸಲಾಗಿದೆ. ಈ ರೀತಿ ಐದು ನೂರಕ್ಕೂ ಹೆಚ್ಚು ಗುಂಡಿ ಸಿದ್ಧವಾಗಿವೆ. ತಪ್ಪಲಿನ ಕೆಳಗೂ ದೊಡ್ಡ ಹೊಂಡಗಳನ್ನು ನಿರ್ಮಿಸಲಾಗಿದೆ.

ಜೂನ್‌ನಲ್ಲಿ ಮಳೆ ಆರಂಭವಾಗುತ್ತಿದಂತೆ ಎಲ್ಲ ಗುಂಡಿಗಳಲ್ಲೂ ನೀರು ತುಂಬಿದೆ.  ಮೊದಲು ಬೆಟ್ಟದ ಮೇಲೆ ಸುರಿದ ಮಳೆ ನೀರು ನೇರವಾಗಿ ಹಳ್ಳ ಸೇರುತ್ತಿತ್ತು. ನೀರಿನ ಜತೆಗೆ ಮಣ್ಣು, ಕಲ್ಲುಗಳು ನೇರವಾಗಿ ಹಳ್ಳಕ್ಕೆ ಬಂದು ಸೇರುತ್ತಿದ್ದ ಕಾರಣ ಹೂಳಿನ ಸಮಸ್ಯೆಯೂ ಎದುರಾಗಿತ್ತು. ಈಗ ಒಂದಾದ ಮೇಲೆ ಒಂದು ಗುಂಡಿಗೆ ನೀರು ಹರಿದು ನಂತರ ಹಳ್ಳಕ್ಕೆ ಸೇರುತ್ತಿರುವ ಕಾರಣ ಹೂಳಿನ ಸಮಸ್ಯೆಗೂ ಪರಿಹಾರ ದೊರೆತಿದೆ.

‘ಬೆಟ್ಟದ ಮೇಲೆ ತೋಡಿರುವ ಅರ್ಧ ಚಂದ್ರಾಕೃತಿಯ ಗುಂಡಿಗಳಲ್ಲಿ  ಕಾಡುಪ್ರಾಣಿಗಳು, ಜಾನುವಾರು ಬಿದ್ದರೂ ಸುಲಭವಾಗಿ ಮೇಲೆ ಹತ್ತಿ ಬರಲು ಪ್ರತಿ ಗುಂಡಿಯ ಎರಡೂ ತುದಿ ಇಳಿಜಾರಿನ ಮೆಟ್ಟಿಲು ನಿರ್ಮಿಸಲಾಗಿದೆ. ನೈಸರ್ಗಿಕ ಮರ ಗಿಡಗಳಿಗೂ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಖಾಲಿ ಇರುವ ಸ್ಥಳಗಳಲ್ಲಿ ಹೊಸದಾಗಿ ಗಿಡ ನೆಡಲೂ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮೊದಲ ಪ್ರಯತ್ನದಲ್ಲೇ ಫಲಿತಾಂಶ ದೊರೆತಿದೆ’ ಎಂದು ಯೋಜನೆ ಯಶಸ್ಸಿನ ಚಿತ್ರಣ ಬಿಚ್ಚಿಟ್ಟರು ಅನುಷ್ಠಾನದ ನೇತೃತ್ವ ವಹಿಸಿದ್ದ ಕೆ.ಟಿ.ಗುರುರಾಜ ಕರ್ಕಿ.
ಈ ವಿಧಾನ ಅಳವಡಿಸಿಕೊಂಡ ಕಾರಣ ಕೃಷಿಗೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ಜಾನುವಾರು, ಕಾಡು ಪ್ರಾಣಿಗಳಿಗೂ ನೀರು ಸಮೃದ್ಧವಾಗಿ ದೊರೆಯುತ್ತದೆ ಎಂದು ಎಂಜಿನಿಯರ್ ರಮೇಶ್ ಸಂತಸ ವ್ಯಕ್ತಪಡಿಸಿದರು.

ಮಲೆನಾಡಿನ ಇತಿಹಾಸದಲ್ಲಿ ಕರ್ಕಿ ಹಳ್ಳ ಬತ್ತಿರುವುದು ಇದೇ ಮೊದಲು. ಭವಿಷ್ಯದಲ್ಲಿ ಮತ್ತೆ ಎಂದೂ ನೀರಿಗೆ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ.


ಕೆ.ಟಿ.ಗುರುರಾಜ್‌,  ಕರ್ಕಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.