ADVERTISEMENT

‘ಇನ್ನು ಟ್ಯಾಂಕರ್ ಬೇಡ; ಬೇಕಂದ್ರೆ ಬೇರೆಡೆಗೆ ನೀರು ಕೊಡ್ತೀವಿ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
‘ಇನ್ನು ಟ್ಯಾಂಕರ್ ಬೇಡ; ಬೇಕಂದ್ರೆ ಬೇರೆಡೆಗೆ ನೀರು ಕೊಡ್ತೀವಿ’
‘ಇನ್ನು ಟ್ಯಾಂಕರ್ ಬೇಡ; ಬೇಕಂದ್ರೆ ಬೇರೆಡೆಗೆ ನೀರು ಕೊಡ್ತೀವಿ’   

‘ನಮಗಿನ್ನು ಟ್ಯಾಂಕರ್ ನೀರು ಬೇಡವೇ ಬೇಡ. ನೀರಿಲ್ಲದ ಬೇರೆ ಊರಿಗೆ ಬೇಕಾದರೆ ನೀರು ಕೊಡ್ತೀವಿ’ – ಇದು ಮಹಾರಾಷ್ಟ್ರದಲ್ಲಿ ದಶಕಗಳಿಂದ ಟ್ಯಾಂಕರ್ ನೀರು ಕುಡಿಯುತ್ತಿರುವ ಹಳ್ಳಿಗಳಲ್ಲೊಂದು ತಹಶೀಲ್ದಾರರಿಗೆ ಮಾಡಿದ ವಿನಂತಿ.

‘ನಾನು ನೋಡಿದ 13–14 ಬಾವಿಗಳಲ್ಲೂ ಒಳ್ಳೆ ತಿಳಿಯಾದ ನೀರಿತ್ತು. ಇವುಗಳಲ್ಲಿ ಐದು ಬಾವಿಗಳು ಹಿಂದೆ ಪೂರ್ತಿ ಒಣಗಿದ್ದುವು. ತಪ್ಪಲಲ್ಲಿರುವ ಕೆಲವು ತೆರೆದ ಬಾವಿಗಳು ಓವರ್ ಫ್ಲೋ ಆಗಿರುವುದನ್ನು ಕಂಡೆ’.

‘ಸಂಜೆ ಆರು ಗಂಟೆಗೆ ಒಂದು ಮಳೆ ಸುರಿಯಿತು. ಆಗ ಜನ ಎಷ್ಟು ಆನಂದತುಂದಿಲರಾದರೆಂದು ಗೊತ್ತೇ? ಒಂದಷ್ಟು ಮಂದಿ ಅದೇ ನೀರಲ್ಲಿ ಮಿಂದರು, ಫೋಟೊ ಕ್ಲಿಕ್ಕಿಸಿದರು, ಈಜಿದರು, ಅಗರ್ ಬತ್ತಿ ಉರಿಸಿ ಪೂಜೆ ಮಾಡಿದರು. ಸಂಭ್ರಮವೇ ಸಂಭ್ರಮ. ಕಳೆದ ನಾಕು ವರ್ಷ ಇಲ್ಲಿ ಬಿದ್ದ ಮಳೆ ನಾಮಮಾತ್ರದ್ದು’.

ADVERTISEMENT

‘ಸತ್ಯಮೇವ ಜಯತೆ’ ವಾಟರ್ ಕಪ್ಪಿಗಾಗಿ ಪಾನಿ ಫೌಂಡೇಶನ್ ನಡೆಸಿದ ಜಲಾನಯನ ಅಭಿವೃದ್ಧಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸತಾರಾ ಜಿಲ್ಲೆಯ ಮಾನ್ ತಾಲೂಕಿನ ಹಳ್ಳಿಗಳ ದೃಶ್ಯಗಳಿವು. ಫೌಂಡೇಶನಿನ ತಾಂತ್ರಿಕ ತರಬೇತಿಗಾರ ರವೀಂದ್ರ ಪೊಮಾನೆ ಹತ್ತು ಗ್ರಾಮಗಳ ತ್ರಿದಿನ ಭೇಟಿ ಮುಗಿಸಿದ ಖುಷಿಯಲ್ಲಿ ವಾಟ್ಸಪ್ ಕಟಕಟಾಯಿಸುತ್ತಿದ್ದರು.

ಎಲ್ಲಾ ಗ್ರಾಮಗಳೂ ಈ ಜೂನ್ ಮಧ್ಯಕ್ಕೆ ‘ಟ್ಯಾಂಕರ್ ಸಾಕು’ ಎಂದಿವೆ. ಸ್ಪರ್ಧೆಯ ಮುಂಚೂಣಿಯಲ್ಲಿರುವ ಹನ್ನೆರಡು ಗ್ರಾಮದಲ್ಲಿ ರವೀಂದ್ರ ಭೇಟಿಕೊಟ್ಟ ಬಿದಾಲ್ ಮತ್ತು ಅನ್ಭುಲೆವಾಡಿ. ಕಾರ್ಖೇಲ್ ಗ್ರಾಮವೂ ‘ನಮಗಿನ್ನು ಹತ್ತು ವರ್ಷಕ್ಕೆ ಟ್ಯಾಂಕರ್’ ಬೇಡ ಎನ್ನಹತ್ತಿವೆ.

ವಾರ್ಷಿಕ ಸರಾಸರಿ ನಾನೂರು ಮಿಲಿಮೀಟರ್ ಮಳೆಯ ಗ್ರಾಮಗಳು ಇವೆಲ್ಲ. ಇಲ್ಲಿ ಹೆಚ್ಚು ಸಿಗುವುದು ಸೆಪ್ಟೆಂಬರ್ ನಂತರದ, ಇವರು ‘ರಿಟರ್ನ್ ರೈನ್’ ಎಂದು ಕರೆಯುವ ಹಿಂಗಾರು ಮಳೆ. ಈ ಬಾರಿ ಇವರ ಅದೃಷ್ಟ ಖುಲಾಯಿಸಿದೆ. ಇಷ್ಟರಲ್ಲೇ 90ರಿಂದ ನೂರಹತ್ತು ಮಿಲಿಮೀಟರ್ ಮಳೆ ಸುರಿದಿದೆ.

ಪ್ರತಿ ಗ್ರಾಮದಲ್ಲೂ ವಾಟ್ಸಪ್ ಗುಂಪುಗಳಿವೆ. ‘ನೀರಿಗೆ ನಮಗಿಂತ ಕಷ್ಟ ಇರುವ ಊರಿಗೆ ನಾವು ಸಂತೋಷದಿಂದ ನೀರು ಕೊಡುತ್ತೇವೆ’ ಎಂದು ಘೋಷಿಸಿರುವುದು ಅನ್ಭುಲೆವಾಡಿ.

‘ಇಷ್ಟೇ ಮಳೆಯಲ್ಲಿ ನೀರು ತುಂಬಲು ಕಾರಣ ಪ್ರತಿ ಜಮೀನು, ಗುಡ್ಡದಲ್ಲಿ ಅಚ್ಚುಕಟ್ಟಾಗಿ ಮಾಡಿದ  ಸೀಸೀಟಿ ( ಕಂಟಿನ್ಯುವಸ್ ಕಂಟೂರ್ ಟ್ರೆಂಚ್) ಮತ್ತು ಡೀಪ್ ಸೀಸೀಟಿಗಳು. ತಪ್ಪಲಲ್ಲಿರುವ ಬಾವಿಗಳಿಗೆ ಗುಡ್ಡದ ಮಧ್ಯ ಮತ್ತು ಮೇಲ್ಭಾಗದಲ್ಲಿರುವ ಟ್ರೇಂಚುಗಳು ಇಂಗಿಸಿಕೊಂದ ನೀರಿನ ಬೆಂಬಲ
ಹೆಚ್ಚು ಕಾಲ ಸಿಗಬಹುದು. ಆದರೆ ಇನ್ನು ಮಳೆ ಬಾರದಿದ್ದರೆ ಮಧ್ಯ ಮತ್ತು ಗುಡ್ಡದ ಮೇಲ್ಭಾಗದಲ್ಲಿನ ಬಾವಿಗಳು ಜನವರಿ ಹೊತ್ತಿಗೆ ಬತ್ತಿಹೋಗಬಹುದು’ ಎನ್ನುತ್ತಾರೆ ರವೀಂದ್ರ.

‘ರಿಟರ್ನ್ ರೈನಿನ ಅವಧಿಯಲ್ಲಿ ಇನ್ನು ನೂರು ಮಿಲಿಮೀಟರ್ ಸುರಿಯಿತೋ ಈ ಯಾವ ಬಾವಿಗಳು ಬತ್ತಲಾರವು. ಸತತ ನೀರು ತೆಗೆದರೆ ಕೆಲವು ಬತ್ತಲೂಬಹುದು’ ಎಂದು ಪೊಮಾನೆ ಮುಂದುವರಿಸುತ್ತಾರೆ, ‘ನಮಗೆ ಸ್ಪರ್ಧೆಯಲ್ಲಿ ಬಹುಮಾನ ಸಿಗದಿದ್ದರೂ ಬೇಸರವಿಲ್ಲ. ಈ ಬಹುಮಾನ
ಊರಿನ ಚರಿತ್ರೆಯಲ್ಲೇ ಬಹುದೊಡ್ಡ ಕೊಡುಗೆ ಎನ್ನುತ್ತಾರೆ ಕೆಲವು ಹಳ್ಳಿಯ ಮಂದಿ’.

ಈ ಗ್ರಾಮಗಳ ಮುಂದಿನ ಸಾಲಿನ ಕೃಷಿ ಭವಿಷ್ಯ ಇನ್ನು ಮಳೆ ಎಷ್ಟು ಸಿಗುತ್ತದೆ ಎನ್ನುವುದರ ಮೇಲೆ ಅವಲಂಬಿಸಿದೆ. ಖಾರಿಫ್ ಬೆಳೆ ಬಿತ್ತುವ ಕಾಲಾವಧಿ ಬಹುತೇಕ ಆಗಿಹೋಗಿದೆ. ಬಾವಿಯಲ್ಲಿ ನೀರು ಸಿಗುತ್ತಿರುವುದು ಇದೇ ಮೊದಲು. ‘ಎಷ್ಟು ಸಿಗಬಹುದು ಎನ್ನುವ ಸ್ಪಷ್ಟತೆ ಇಲ್ಲದ ಕಾರಣ ಎಲ್ಲ ರೈತರೂ ತಮ್ಮ ಜಮೀನಿನ 20 ಅಥವಾ 30 ಶೇಕಡಾ ಮಾತ್ರ ಬಿತ್ತಿದ್ದಾರೆ. ತಪ್ಪಲಲ್ಲಿ ಬಾವಿ ಇರುವ ಕೆಲವು ಕೃಷಿಕರು ನೀರಿನ ನಂಬಿಕೆಯಿಂದ ಬ್ಯಾಂಕ್ ಸಾಲ ತೆಗೆದು ಪೈಪ್ ಅಳವಡಿಸಿ ಪೂರ್ಣಮನಸ್ಸಿನ ಕೃಷಿ ತೊಡಗಿದ್ದಾರೆ. ಬಾವಿಗಳಲ್ಲಿ ನೀರು ಕಾಣಿಸಿಕೊಂದಿದೆ. ಆದರೆ ಯಾವುದೇ ಬಾವಿಯಿಂದಲೂ ನೇರೆತ್ತುವ ವ್ಯವಸ್ಥೆ ಇನ್ನಷ್ಟೇ ಮಾಡಬೇಕಿದೆ’. ಕೃಷಿಯ ಯಶಸ್ಸಿನ ಬಗ್ಗೆ ಧೈರ್ಯ ಇಲ್ಲದಿದ್ದರೂ ಕುಡಿನೀರಿಗೆ ಸಮಸ್ಯೆ ಆಗದು ಎನ್ನುವ ಭರವಸೆ ಎಲ್ಲರಲ್ಲಿದೆಯಂತೆ.

ಜನರ ಭಾವೋದ್ರೇಕ ಹೇಗಿದೆಯೆಂದರೆ ‘ನಮ್ಮನೆಗೆ ಬಂದು ಚಹಾ ಕುಡ್ರೀ ಅಣ್ಣಾ’ ಎಂದು ಆಹ್ವಾನಿಸದವರಿಲ್ಲ, ರವೀಂದ್ರ ಮುಂದುವರಿಸುತ್ತಾರೆ. ಕಾರ್ಖೇಲ್ ಗ್ರಾಮದಲ್ಲಿ ಅವರ ಅದೃಷ್ಟಕ್ಕೆ ತುಂಬ ಮಳೆಯಾಗಿದೆ. ಒಮ್ಮೆಲೇ ಸುರಿದ ಮಳೆಯ ಓಘ ಹೇಗಿತ್ತೆಂದರೆ ಒಂದು ‘ಮಾಟಿ ನಾಲಾ ಬಂದ್’ (ಮಣ್ಣಿನ ತಡೆಗಟ್ಟ) ಇನ್ನೇನು ಒಡೆಯುವುದರಲ್ಲಿತ್ತು. ಈ ಸುದ್ದಿ ಊರಿನ ವಾಟ್ಸಪ್ಪುಗಳಲ್ಲಿ ಹಬ್ಬಿದ್ದು ಮಧ್ಯರಾತ್ರಿ ಹನ್ನೆರಡಕ್ಕೆ. ಜನ ಸಿಕ್ಕಸಿಕ್ಕ ಬೈಕು, ಟ್ರಾಕ್ಟರ್ ಏರಿ ಸ್ಥಳಕ್ಕೆ ಧಾವಿಸಿದರು. ಪೋಕ್ ಲೈನಿನವರಿಗೆ ಅದಕ್ಕೂ ಮೊದಲೇ ಕರೆ ಹೋಗಿತ್ತು. ಇಷ್ಟೆಲ್ಲಾ ಗಡಿಬಿಡಿ ಏಕೆ ಗೊತ್ತೇ, ಆ ಮಾಟಿ ಬಾಂದ್ ಒಡೆದರೆ ಅದಕ್ಕೂ ಕೆಳಗಿರುವ ಇನ್ನೂ ಎರಡು ಬಾಂದ್ ಕೂಡಾ ಒಡೆಯುತ್ತಿತ್ತು. ಅಕ್ಷರಶಃ ಹಳ್ಳಿಗೆ ಹಳ್ಳಿಯೇ ಅಲ್ಲಿ ಜಮಾಯಿಸಿ ಅಪಾಯ ನಿಲ್ಲಿಸಿಯೇಬಿಟ್ಟಿತು.

‘ಸ್ಪರ್ಧೆಯ ಅವಧಿಯಲ್ಲಿ ತೋಡಿಟ್ಟ ಹೊಂಡಗಳಲ್ಲಿ ಎಲ್ಲೆಡೆ ಗಿಡ ನೆಟ್ಟಿದ್ದಾರೆ. ಕಳೆದ ಹತ್ತು ದಿನ ಮಳೆ ಬಾರದಿದ್ದಾಗ ಕೆಲವೆಡೆ ಟ್ಯಾಂಕರ್ ತರಿಸಿ ನೀರು ಹನಿಸಿದ್ದಾರೆ. ಸರಿಯಾಗಿ ಮಳೆ ತಡೆಯುವ ಕೆಲಸ ಮಾಡಿದರೆ ನಿಮ್ಮೂರಿಗೆ ನೀರಿನ ಸಮಸ್ಯೆ ಆಗದು ಎಂದು ನಾವುಗಳು ಈವರೆಗೆ
ಹೇಳಿದ್ದು ಮಾತು ಮಾತ್ರ ತಾನೇ.

ಈಗ ನಮ್ಮ ಮಾತಿನ ಸತ್ಯ ಎಲ್ಲರಿಗೂ ಅರ್ಥವಾಗತೊಡಗಿದೆ. ಮುಂದಿನ ಸಾಲಿನಲ್ಲಿ ಇನ್ನಷ್ಟು ಕೆಲಸ ಮಾಡಬೇಕು ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ’
ಭರವಸೆ ಮೋಡದಂತೆ. ಅದರ ಅನುಷ್ಠಾನವೇ ಮಳೆ ಎಂಬ ಹಳೆ ನಾಣ್ಣುಡಿಯಿದೆ. ಈ ಬಾರಿ ಮೋಡದ ಹಿನ್ನೆಲೆಯಲ್ಲೇ ಸಿಕ್ಕಿದ ಮಳೆಮಾನ್ ತಾಲೂಕಿನ ಹಳ್ಳಿಗರ ಆತ್ಮವಿಶ್ವಾಸ ವರ್ಧಿಸಿದೆ. ಊರ ಜನ ಒಂದಾದರೆ ಮಳೆ ನೀರು ಉಳಿಸಿ ಮಂದಹಾಸ ಗಳಿಸಬಲ್ಲೆವು ಎನ್ನುವುದು ಈಗ ಅವರಿಗೆ ಸ್ಪಷ್ಟವಾಗಿದೆ.ಕನ್ನಾಡಿನ ಮೂರುಸಾವಿರ ಮಿಲಿಮೀಟರಿನ ಮಳೆಸಿರಿವಂತ ಊರುಗಳು, ನಾನೂರು ಮಿಲಿಮೀಟರಿನ ಮಳೆಬಡ ಜಿಲ್ಲೆಗಳು ಕೇಳುತ್ತಿವೆಯೇ?
ರವೀಂದ್ರ ಪೊಮಾನೆ (ಹಿಂದಿ, ಅಲ್ಪಸ್ವಲ್ಪ ಇಂಗ್ಲಿಷ್) – 9096125413

-ಶ್ರೀ ಪಡ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.