ADVERTISEMENT

ಬೊಮ್ಮನಳ್ಳಿ ಬೆಟ್ಟದಲ್ಲಿ ಜಲ ಪರ್ವ

ಓಡುವ ಮಳೆ ನೀರಿಗೆ ತಡೆ; 2,000 ಇಂಗುಗುಂಡಿ ನಿರ್ಮಾಣ

ಸಂಧ್ಯಾ ಹೆಗಡೆ
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ಬೊಮ್ಮನಳ್ಳಿ ಬೆಟ್ಟದಲ್ಲಿ ಜಲ ಪರ್ವ
ಬೊಮ್ಮನಳ್ಳಿ ಬೆಟ್ಟದಲ್ಲಿ ಜಲ ಪರ್ವ   

ಶಿರಸಿ: ಕಳೆದ ಎರಡು ವರ್ಷಗಳಲ್ಲಿ ಮಲೆನಾಡು ಎದುರಿಸಿದ ಬರ, ಬಿಸಿಲ ತಾಪಕ್ಕೆ ಬೆಚ್ಚಿದ ಈ ಹಳ್ಳಿಗರು ಊರಿನ ಬೆಟ್ಟದ ತುಂಬೆಲ್ಲ ಜಲಪಾತ್ರೆ ನಿರ್ಮಿಸಿ, ಹರಿಯುವ ಮಳೆ ನೀರಿಗೆ ತಡೆಯೊಡ್ಡಿದ್ದಾರೆ. ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಬೆಟ್ಟದಲ್ಲಿ ಜಲಕೋಟೆ ನಿರ್ಮಿಸಿದೆ.

ಮಳೆ ನೀರು ಇಂಗಿಸಿ ಊರನ್ನು ಹಸಿರಾಗಿಸುವ ತಾಲ್ಲೂಕಿನ ಅಗಸಾಲ ಬೊಮ್ಮನಳ್ಳಿ ಗ್ರಾಮಸ್ಥರ ಕನಸಿಗೆ, ಗ್ರಾಮ ಅರಣ್ಯ ಸಮಿತಿ (ವಿಎಫ್‌ಸಿ) ನೀರೆರೆದಿದೆ. ಅಂದಾಜು 620 ಹೆಕ್ಟೇರ್ ಬೆಟ್ಟ ಭೂಮಿಯಲ್ಲಿ 2000 ಇಂಗುಗುಂಡಿಗಳನ್ನು ರಚಿಸಿದೆ.

‘ವಿಎಫ್‌ಸಿ ವ್ಯಾಪ್ತಿಯಲ್ಲಿ 1,520 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದೆ. ಅದರಲ್ಲಿ 562 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯವಿದ್ದರೆ, ಉಳಿದೆಡೆ ಬೆಟ್ಟ ಇದೆ. ‘ಪಾಲಿಸಿದರೆ ಪಾಲು’ ಯೋಜನೆಯ ಅಡಿಯಲ್ಲಿ ದೊರೆತ ಲಾಭಾಂಶದಲ್ಲಿ  ₹ 3 ಲಕ್ಷ ವೆಚ್ಚದಲ್ಲಿ ಇಂಗುಗುಂಡಿ ರಚಿಸಲಾಗಿದೆ.

ADVERTISEMENT

ಕಳೆದ ಎರಡು ವರ್ಷಗಳಲ್ಲಿ ಬೆಟ್ಟದಲ್ಲಿ 500 ಇಂಗುಗುಂಡಿ ರಚಿಸಲಾಗಿತ್ತು. ಈ ಬಾರಿ 1500ರಷ್ಟು ಹೊಸ ಇಂಗುಗುಂಡಿ ರಚಿಸಲಾಗಿದೆ’ ಎನ್ನುತ್ತಾರೆ ವಿಎಫ್‌ಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಬುಗಡಿಮನೆ.

‘ಇಂಗುಗುಂಡಿಯ ಜೊತೆಗೆ ಆರು ಸಣ್ಣ ಕೆರೆಗಳು, 25 ದೊಡ್ಡ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇಳಿಜಾರಿನಲ್ಲಿ ಗುಂಡಿಗಳನ್ನು ನಿರ್ಮಿಸಿರುವುದರಿಂದ ಬೆಟ್ಟದಲ್ಲಿ ಬೀಳುವ ಹನಿ ನೀರು ಕೂಡ ಜಾರಿ ರಸ್ತೆಯ ಬದಿಯ ಗಟಾರದಲ್ಲಿ ಹರಿದು ಹೋಗುವುದಿಲ್ಲ. ಒಮ್ಮೆ ಮಳೆಯಾದರೆ ಒಂದು ಕೋಟಿ ಲೀಟರ್ ನೀರು ಬೆಟ್ಟದಲ್ಲಿ ಸಂಗ್ರಹವಾಗಿ ಭೂಮಿಯಲ್ಲಿ ಇಂಗುತ್ತದೆ’ ಎಂದು ಅವರು ಹೇಳಿದರು.

‘ಅಗಸಾಲ ಬೊಮ್ಮನಳ್ಳಿ ಸುತ್ತಲಿನ ಆರು ಮಜಿರೆಗಳಲ್ಲಿ  311 ಕುಟುಂಬಗಳು ವಾಸವಾಗಿವೆ. ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಈ ಭಾಗದ ಬೆಟ್ಟ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದ್ದೆ.

ರೈತರು, ಊರಿನ ಯುವಕ ಮಂಡಳದ ಸದಸ್ಯರು ಬೆಟ್ಟದ ಅಭಿವೃದ್ಧಿಗೆ ಆಸಕ್ತಿ ತೋರುತ್ತಿರುವುದರಿಂದ ಊರಿನಲ್ಲಿ ಜಲಮೂಲ ಬಲಗೊಂಡಿದೆ. ಕಳೆದ ವರ್ಷ ತೀವ್ರ ಜಲಕ್ಷಾಮ ಎದುರಾಗಿದ್ದರೂ ಭೈರುಂಬೆ ಹೊಳೆಯ ಹರಿವು ನಿಂತಿರಲಿಲ್ಲ. ಜಲಸಂವರ್ಧನೆ ಕಾರ್ಯಕ್ರಮದ ಪರಿಣಾಮ ಇದಾಗಿದೆ’ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

***

ಇಂಗುಗುಂಡಿಯ ಮಣ್ಣನ್ನು ಬಳಸಿ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ 500 ಸಸಿಗಳನ್ನು ಊರಿನ ಜನರಿಗೆ ವಿತರಿಸಲಾಗುತ್ತದೆ.
ಶ್ರೀಕಾಂತ ಹೆಗಡೆ, ವಿಎಫ್‌ಸಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.