ADVERTISEMENT

ಕೇರಳದ ಕಣ್ಣೂರಿನಲ್ಲಿ ರಕ್ತ–ಕಣ್ಣೀರು

ರಾಜೇಶ್ ರೈ ಚಟ್ಲ
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST
ಕೇರಳದ ಕಣ್ಣೂರಿನಲ್ಲಿ ರಕ್ತ–ಕಣ್ಣೀರು
ಕೇರಳದ ಕಣ್ಣೂರಿನಲ್ಲಿ ರಕ್ತ–ಕಣ್ಣೀರು   

ಕಣ್ಣೂರಿನ ಜನರ ನರನಾಡಿಗಳಲ್ಲಿನ ಜೀವದ್ರವ್ಯದಲ್ಲಿ ತತ್ವ, ಸಿದ್ಧಾಂತ, ಪಕ್ಷ ರಾಜಕೀಯದ ಸತ್ವ ತುಂಬಿಕೊಂಡಿದೆ. ಅದರೊಂದಿಗೆ ಆಟವಾಡುವುದು ಅವರಿಗೆ ಸಲೀಸು. ಅದಕ್ಕೆ ಸಂಬಂಧ, ಗೆಳೆತನ, ಸಂದರ್ಭ, ಕಾರಣಗಳ ಹಂಗು ಇಲ್ಲ. ಅಕ್ಕಪಕ್ಕದ ಮನೆಯವರು, ಸಹೋದ್ಯೋಗಿಗಳು ಎಂಬುದನ್ನೂ ನೋಡದೆ ಅಮಾನವೀಯ ಕೊಲೆಗಳು ರಾಜಕೀಯ ಪಡಸಾಲೆಯಲ್ಲಿ ನಿರಂತರ ನಡೆಯುತ್ತಿವೆ. ಇಲ್ಲಿನ ಈ ರಾಜಕೀಯ ದ್ವೇಷದ ಇತಿಹಾಸ ಇಂದು–ನಿನ್ನೆಯದಲ್ಲ. ಮನುಷ್ಯತ್ವವೇ ಇಲ್ಲದ ಹತ್ಯೆಗಳಿಗೆ ಕಾರಣವಾಗುವ ತಳಮಟ್ಟದ ವಾಸ್ತವಗಳನ್ನು ಅರಿಯಲು ಕಣ್ಣೂರು ಜಿಲ್ಲೆಯಾದ್ಯಂತ ಸುತ್ತಾಡಿದಾಗ ಕಂಡಿದ್ದು, ಇಲ್ಲಿ ಭದ್ರವಾಗಿದ್ದ ಕಮ್ಯುನಿಸ್ಟರಲ್ಲಿ ರಾಜಕೀಯ ನೆಲೆಯನ್ನು ಕಳೆದುಕೊಳ್ಳುವ ಆತಂಕ. ಇನ್ನೊಂದೆಡೆ, ಪ್ರಭಾವ ವಿಸ್ತರಿಸಿಕೊಳ್ಳಲು ಆರ್‌ಎಸ್ಎಸ್‌– ಬಿಜೆಪಿಯವರ ಪ್ರಯತ್ನ, ಹಪಾಹಪಿ.

ನಂಬಿದ ಸಿದ್ಧಾಂತಕ್ಕೆ ಅಡ್ಡಿಯಾದವರನ್ನು ಅಟ್ಟಾಡಿಸಿ ಜೀವ ತೆಗೆಯುವುದರಲ್ಲಿ ಇಲ್ಲಿನ ಪಕ್ಷನಿಷ್ಠರು ನಿಸ್ಸೀಮರು. ಮತ್ತೊಂದು ಸಿದ್ಧಾಂತವನ್ನು ಅಪ್ಪಿಕೊಳ್ಳಲು ಮುಂದಾದರೆ, ಜೊತೆಗಿದ್ದವರು ಅದನ್ನು ಸಹಿಸಿಕೊಳ್ಳಲು ಸಿದ್ಧರಿಲ್ಲ. ಅಷ್ಟೇ ಏಕೆ, ಅವರು ಇದ್ದಕ್ಕಿದ್ದಂತೆ ವಿರೋಧಿಗಳಾಗುತ್ತಾರೆ. ರಾಜಕೀಯ ಸೇಡಿನ ಕಿಡಿಗೆ ಸಿಲುಕಿ ಮಂಡಿಯಿಂದ ಕೆಳಗೆ ಎರಡೂ ಕಾಲುಗಳನ್ನು ಕಳೆದುಕೊಂಡರೂ ಸಂಘ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಆರ್‌ಎಸ್‌ಎಸ್‌ ಮುಖಂಡ ಸದಾನಂದ ಮಾಸ್ಟರ್‌ ಅವರ ಬದ್ಧತೆ, ಬಲಗೈ ಸ್ವಾಧೀನ ಕಳೆದುಕೊಂಡರೂ ಪಕ್ಷ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ. ಜಯರಾಜ್‌ ಅವರಂಥ ಕಾಮ್ರೇಡ್‌ಗಳ ತತ್ವನಿಷ್ಠೆ ಅಚ್ಚರಿ ಮೂಡಿಸುತ್ತದೆ.

‘ಕಣ್ಣೂರಿನ ಕೆಂಪು ಮಣ್ಣಿನಲ್ಲಿ ಕೇಸರಿ ಬಿತ್ತಿ ಬೆಳೆಸಿದ್ದೇ ಸಿಪಿಎಂ. ಕೆಂಬಾವುಟಗಳೇ ಹಾರಾಡುತ್ತಿದ್ದ ತಲಚ್ಚೇರಿ, ಪಾಣೂರು, ಪಯ್ಯನ್ನೂರು, ಕೂತುಪರಂಬು ಮತ್ತಿತರ ಪ್ರದೇಶಗಳಲ್ಲಿ ಈಗ ಆರ್‌ಎಸ್‌ಎಸ್‌– ಬಿಜೆಪಿ ಬೆಂಬಲಿಗರ ಸಂಖ್ಯೆ ವೃದ್ಧಿಸಿದೆ. ಕಮ್ಯುನಿಸ್ಟ್‌ ಸಿದ್ಧಾಂತದಿಂದ ಹೊರಬಂದವರು ಆರ್‌ಎಸ್‌ಎಸ್‌– ಬಿಜೆಪಿ ಕಡೆಗೆ ವಾಲುತ್ತಿರುವುದು ಬಹುತೇಕ ರಾಜಕೀಯ ಸಂಘರ್ಷಗಳಿಗೆ ಕಾರಣ’ ಎನ್ನುವುದು ಕೂತುಪರಂಬಿನ ಹೋಟೆಲ್ ಉದ್ಯಮಿ ಸಿ.ಕೆ. ವೇಲಾಯುಧನ್‌ ಅನಿಸಿಕೆ.



‘ಕೊಲೆಯಾದ ಕಾರ್ಯಕರ್ತನೊಬ್ಬನ ಕುಟುಂಬಕ್ಕೆ ಪೊಲೀಸ್‌ ಬೆಂಗಾವಲು ಇಲ್ಲದೆ ನೆರವು ತಲುಪಿಸಲು ಸಾಧ್ಯ ಇಲ್ಲದ ಸ್ಥಿತಿಯನ್ನು ನೀವೇ ಕಲ್ಪಿಸಿಕೊಳ್ಳಿ. ಆಧಾರವನ್ನೇ ಕಳೆದುಕೊಂಡ ಕುಟುಂಬಕ್ಕೆ ಸಹಾಯಹಸ್ತ ನೀಡಿದರೆ ಸ್ಥಳೀಯ ವಿರೋಧಿ ಬಣದಿಂದ ಜೀವಬೆದರಿಕೆ. ರಾಜಕೀಯ ಹೆಸರಿನಲ್ಲಿ ಬಲಿಯಾಗುವವರು ಸಾಮಾನ್ಯರು ಎನ್ನುವುದು ವಿಪರ್ಯಾಸ. ಅದೂ ಕನಸು ಕಾಣುವ ವಯಸ್ಸಿನ ಜೀವಗಳು. ಕೇಸು ದಾಖಲಾದರೆ ಪಕ್ಷ ನೋಡಿಕೊಳ್ಳುತ್ತದೆ ಎಂಬ ಅಭಯ ಅವರ ಬೆನ್ನಿಗಿದೆ’ ಎಂದೂ ಮಾತು ಸೇರಿಸುತ್ತಾರೆ.

ಸ್ವಾತಂತ್ರ್ಯಪೂರ್ವದಲ್ಲಿ, ಬಡತನ ಕಿತ್ತು ತಿನ್ನುತ್ತಿದ್ದ ಕಾಲದಲ್ಲಿ ಧನಿಕರ ಪತ್ತಾಯ (ಭತ್ತ ಸಂಗ್ರಹಿಸಿಡುವ ಕಣಜ) ಒಡೆದು ಸಾಮಾನ್ಯರಿಗೆ ಹಂಚಿದ ಕಮ್ಯುನಿಸ್ಟ್‌ ಚಳವಳಿ, ಸ್ಥಳೀಯರಲ್ಲಿ ಸಹಕಾರಿ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ ಮೂಡಿಸಿತ್ತು. ಆ ಛಾಯೆ ಈಗಲೂ ಇಲ್ಲಿದೆ. ಒಂದರ್ಥದಲ್ಲಿ, ಈ ಜಿಲ್ಲೆ ಕಮ್ಯುನಿಸ್ಟರ ಪಾಲಿಗೆ ಪ್ರಯೋಗಶಾಲೆ ಇದ್ದಂತೆ. ಎಡಪಂಥೀಯ ಚಿಂತನೆ ಇಲ್ಲಿ ಬೇರುಮಟ್ಟದಲ್ಲಿದೆ. ರೋಲ್‌ ಮಾಡೆಲ್‌ಗಳೆನಿಸಿಕೊಂಡ ಎ.ಕೆ. ಗೋಪಾಲನ್, ಇ.ಕೆ. ನಾಯನಾರ್, ಆಯಿಕ್ಕೋಡ್‌ ರಾಘವನ್ ಬಂದಿದ್ದು ಇದೇ ಭಾಗದಿಂದ. ಜಿಲ್ಲೆಯ ಶೇ 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಮ್ಯುನಿಸ್ಟರ ಆಧಿಪತ್ಯವಿದೆ. ಕೆಲವು ಪ್ರದೇಶಗಳಲ್ಲಿ ಹಿಡಿತ ಸಾಧಿಸಿರುವ ಆರ್‌ಎಸ್‌ಎಸ್‌– ಬಿಜೆಪಿ, ಇತ್ತೀಚಿನ ದಿನಗಳಲ್ಲಿ ಸಾಮ್ರಾಜ್ಯ ವಿಸ್ತರಿಸುತ್ತಿರುವ ಉಮೇದಿನಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ರಾಜಕೀಯ ಗಲಭೆಗಳಿಗೆ ಹೇತುವಾಗುತ್ತವೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.

‘ಕಾಲದಿಂದ ಕಾಲಕ್ಕೆ ಸಿಪಿಎಂ ಅನ್ನು ಒಂದಿಲ್ಲೊಂದು ಪಕ್ಷ ವಿರೋಧಿಸುತ್ತಲೇ ಬಂದಿದೆ. 60ರ ದಶಕದಲ್ಲಿ ಸಿಪಿಎಂ ವಿರುದ್ಧ ಸೋಷಿಯಲಿಸ್ಟ್ ಪಾರ್ಟಿ ಮತ್ತು ಕಾಂಗ್ರೆಸ್ ಸೆಣಸಾಡುತ್ತಿದ್ದವು. ಈಗ ಆ ಸ್ಥಾನವನ್ನು ಆರ್‌ಎಸ್‌ಎಸ್– ಬಿಜೆಪಿ ಆಕ್ರಮಿಸಿಕೊಂಡಿವೆ. 70ರ ದಶಕದಲ್ಲಿ ಮಲಬಾರ್ ಭಾಗದಲ್ಲಿ ಹಿಂದೂ– ಮುಸ್ಲಿಂ ಸಂಘರ್ಷ ಆರಂಭವಾಯಿತು. ಮುಂದೆ ಇದೇ ಆರ್‌ಎಸ್ಎಸ್ ಮತ್ತು ಕಮ್ಯುನಿಸ್ಟರ ನಡುವಿನ ಸಂಘರ್ಷವಾಗಿ ಬದಲಾಗಿರುವುದನ್ನು ಗಮನಿಸಬಹುದು. ಎಡಪಕ್ಷಗಳ ಒಕ್ಕೂಟ ಕೇರಳದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಸಂದರ್ಭಗಳಲ್ಲಿ ಕಣ್ಣೂರು ಜಿಲ್ಲೆಗೇ ಆದ್ಯತೆ.

ಬಹುಶಃ ವಿಶ್ವದ ಯಾವ ಮೂಲೆಯಲ್ಲೂ ಕಾಣಸಿಗ‌ದ ‘ಪಾರ್ಟಿ (ಪಕ್ಷ) ಗ್ರಾಮ’ ಎಂಬ ವಿಚಿತ್ರ ಪರಿಕಲ್ಪನೆ ಈ ಜಿಲ್ಲೆಯಲ್ಲಿದೆ. ಮದುವೆ– ಸಂಭ್ರಮ, ಸಾವು– ನೋವು, ವಾದ– ವಿವಾದ, ಶಿಕ್ಷಣ– ಆರ್ಥಿಕತೆ ಹೀಗೆ ಎಲ್ಲ ವಿಷಯಗಳಲ್ಲಿ ಗ್ರಾಮವಾಸಿಗಳು ಒಗ್ಗಟ್ಟು ಪ್ರದರ್ಶಿಸಿ, ಪರಸ್ಪರ ಸಹಕಾರ ತತ್ವದಡಿ ಅನುಭವಿಸುವ, ಬಗೆಹರಿಸಿಕೊಳ್ಳುವ, ಪೂರೈಸಿಕೊಳ್ಳುವ ವ್ಯವಸ್ಥೆಯಿದು. ಸ್ಥಳೀಯವಾಗಿ ಮಾಡಿಕೊಂಡ ಅಲಿಖಿತ ಒಪ್ಪಂದವೂ ಹೌದು. ನಿಯಮವೆಂದರೂ ಸರಿಯೇ. ಪಾರ್ಟಿ ತತ್ವ, ಸಿದ್ಧಾಂತ ಒಪ್ಪಿಕೊಂಡು, ಅದಕ್ಕೆ ಬದ್ಧವಾಗಿದ್ದರೆ ಪಾರ್ಟಿ ಗ್ರಾಮದಲ್ಲಿ ನೆಮ್ಮದಿಯ ಬದುಕು ಸಾಧ್ಯ. ವಿರೋಧ ವ್ಯಕ್ತಪಡಿಸಿದರೆ ಜೀವನ ದುಸ್ತರ. ಮೊದಲು ಬೆದರಿಕೆ, ತಿದ್ದಿಕೊಳ್ಳದಿದ್ದರೆ ಜೀವಕ್ಕೇ ಅಪಾಯ. ಇಡೀ ಕುಟುಂಬಕ್ಕೆ ‌ನಿಷೇಧದ ಕಾವು.

‘ಸಿಪಿಎಂ ಮತ್ತು ಆರ್‌ಎಸ್‌ಎಸ್‌–ಬಿಜೆಪಿಯು ಕೇಡರ್‌ ವ್ಯವಸ್ಥೆಯನ್ನೇ ಆಧರಿಸಿದ ಸಂಘಟನೆಗಳು. ಕೇರಳದ ರಾಜಕೀಯ ಹತ್ಯೆಗಳ ಇತಿಹಾಸ ಕೆದಕಿದರೆ ಹೋಗಿ ನಿಲ್ಲುವುದು 1960ರ ದಶಕಕ್ಕೆ. ಆ ದಿನಗಳಲ್ಲಿ ‌ಕಣ್ಣೂರು ಜಿಲ್ಲೆಯಲ್ಲಿ ಗಟ್ಟಿಯಾಗಿದ್ದ ದಿನೇಶ್‌ ಬೀಡಿ ಉದ್ಯಮಕ್ಕೆ ಪರ್ಯಾಯವಾಗಿ ಮಂಗಳೂರಿನ ಗಣೇಶ್‌ ಬೀಡಿ ಉದ್ಯಮ ನುಸುಳಿಕೊಂಡಾಗ ಸಂಘರ್ಷದ ಬೀಜ ಮೊಳಕೆಯೊಡೆದಿತ್ತು. ಅಂದಿನ ಮುಖ್ಯಮಂತ್ರಿ ಇ.ಎಂ.ಎಸ್‌. ನಂಬೂದಿರಿಪ್ಪಾಡ್‌ ಅವರು ದಿನೇಶ್‌ ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಿದಾಗ ಗಣೇಶ್‌ ಬೀಡಿ ಉದ್ಯಮ ದಿಕ್ಕು ತಪ್ಪಿತ್ತು. ಅದನ್ನು ಆಶ್ರಯಿಸಿದ್ದ ನೂರಾರು ಕಾರ್ಮಿಕರು ಬೀದಿಗೆ ಬಂದರು. ಆಗ ಉಂಟಾದ ಗಲಭೆಯಲ್ಲಿ ಭಾರತೀಯ ಜನಸಂಘದ ಕಾರ್ಯಕರ್ತ ವಾಡಿಕಲ್‌ ರಾಮಕೃಷ್ಣನ್‌ (1969, ಏಪ್ರಿಲ್‌ 28) ಕಮ್ಯುನಿಸ್ಟ್ ಬೆಂಬಲಿತ ಬೀಡಿ ಕಾರ್ಮಿಕರ ಕೈಯಲ್ಲಿ ಹತರಾದರು. ರಾಜಕೀಯ ಹತ್ಯೆಯ ಆರಂಭವಿದು’ ಎಂದು ನೆನಪಿಸುತ್ತಾರೆ ಹಿರಿಯ ಪತ್ರಕರ್ತ ಕೆ.ಟಿ. ಶಶಿಧರನ್‌.‌

‘ಕಣ್ಣೂರು ಸೇರಿದಂತೆ ಮಲಬಾರ್ ಭಾಗದಲ್ಲಿ ಎಡಪಕ್ಷಗಳು ಹಿಂದಿನಿಂದಲೂ ಬಲಿಷ್ಠವಾಗಿವೆ. ನಂಬಿಕಸ್ಥ ಕಾರ್ಯಕರ್ತರ ದೊಡ್ಡ ಪಡೆಯೇ ಈ ಪಕ್ಷಕ್ಕಿದೆ. ಆದರೆ, ಬಿಜೆಪಿ ವಿಚಾರಕ್ಕೆ ಬಂದಾಗ, ಕೇರಳದಲ್ಲಿ ಆ ಪಕ್ಷ ಅಸ್ತಿತ್ವದಲ್ಲಿದ್ದರೆ ಇದೇ ಭಾಗದಲ್ಲಿ ಎಂಬುದನ್ನು ಗಮನಿಸಬೇಕು. ಕೇರಳದಲ್ಲಿ ಹೆಚ್ಚಿನ ರಾಜಕೀಯ ಕೊಲೆಗಳು ನಡೆಯುವುದು ಉತ್ತರದ ಮಲಬಾರ್ ಭಾಗದಲ್ಲಿ. ಅದರಲ್ಲೂ ಜಿಲ್ಲೆಯ ತಲಚ್ಚೇರಿ, ಪಾಣೂರು, ಪಯ್ಯನ್ನೂರು, ಕೂತುಪರಂಬು ಪ್ರದೇಶಗಳ ‘ಪಾರ್ಟಿ ಗ್ರಾಮ’ಗಳಲ್ಲಿ. ಇಲ್ಲಿನವರು ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಭಾವೋದ್ರೇಕದ ಜನ. ಅದರಲ್ಲೂ ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರುವುದನ್ನು ಕ್ಷಮಿಸುವುದೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಪಾರ್ಟಿ ಗ್ರಾಮಗಳಲ್ಲಿ ನಡೆಯುವ ಪಕ್ಷಾಂತರದ ವಿಷಯ ಬೀದಿಗೆ ಬಂದಾಗ ಕಿಡಿ ಹೊತ್ತಿಕೊಳ್ಳುತ್ತದೆ. ಪಕ್ಷ ಬದಲಿಸಿದ ಕಾರಣಕ್ಕೆ ಕೊಲೆಯಾದ, ತಿರುಗೇಟಿಗೆ ಜೀವ ತೆತ್ತವರ ದೊಡ್ಡ ಪಟ್ಟಿಯೇ ಇದೆ' ಎನ್ನುತ್ತಾರೆ ಅವರು.

ರಾಜಕೀಯ ಕೊಲೆಗಳು ನಡೆದಾಗಲೆಲ್ಲಾ ಅ‌ದನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಲು ರಾಜಕೀಯ ಪಕ್ಷಗಳು ಮುಂದಾಗುತ್ತವೆ. ಹೀಗೆ ಸತ್ತವರನ್ನು ಹುತಾತ್ಮರನ್ನಾಗಿಸಿ ಕಾರ್ಯಕರ್ತರ ಪಡೆಯಲ್ಲಿ ಆಕ್ರೋಶವನ್ನು ನಿರಂತರವಾಗಿ ಎರಡೂ ಪಕ್ಷಗಳು ಕಾಯ್ದಿಟ್ಟುಕೊಂಡು ಬಂದಿವೆ. ಇದು ಮತ್ತೊಂದು ಕೊಲೆಯಲ್ಲಿ ಪರ್ಯವಸಾನಗೊಳ್ಳುತ್ತದೆ. ಮತ್ತೆ ಸೇಡಿನ ಸ್ವರೂಪ ಪಡೆಯುತ್ತದೆ. ಚಕ್ರದ ರೀತಿಯಲ್ಲಿ ಪುನರಾವರ್ತನೆಯಾಗುತ್ತಲೇ ಇರುತ್ತದೆ.

ಆರನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಜಯಕೃಷ್ಣನ್‌ ಮಾಸ್ಟರ್‌ (ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ) ಮೇಲೆ 1999ರ ಡಿ. 1ರಂದು ಮುಗಿಬಿದ್ದಿದ್ದ ಗುಂಪು ಮಕ್ಕಳ ಎದುರಲ್ಲೇ ಅವರನ್ನು ಕತ್ತರಿಸಿ ಹಾಕಿತ್ತು. ಹತ್ಯೆಯ ಭೀಕರತೆಗೆ ತತ್ತರಿಸಿದ್ದ ಕಂದಮ್ಮಗಳಿಗೆ ಬಳಿಕ ಕೌನ್ಸೆಲಿಂಗ್‌ ಮಾಡಲಾಗಿತ್ತು. ಈ ಪ್ರಕರಣದ ಬೆನ್ನಿಗೆ ಭುಗಿಲೆದ್ದಿದ್ದ ಸರಣಿ ರಾಜಕೀಯ ಸಂಘರ್ಷಕ್ಕೆ ಎಂಟು ಜೀವಗಳು ಬಲಿಯಾಗಿದ್ದವು. 2014ರಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮನೋಜ್ ಹತ್ಯೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ನಂತರದ ಎರಡು ವರ್ಷ ತಣ್ಣಗಿದ್ದ ಜಿಲ್ಲೆ, 2016ರ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಮತ್ತೆ ‘ವಧಾ ಕ್ಷೇತ್ರ’ವಾಗಿದೆ. ಎಡಪಕ್ಷಗಳ ಒಕ್ಕೂಟ ಮತ್ತೆ ಅಧಿಕಾರಕ್ಕೆ ಏರಿದ್ದು, ಆ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಮತ್ತೊಂದೆಡೆ ಚುನಾವಣೆಯಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಂಡಿರುವುದು ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಕೇಸರಿ ಕಾರ್ಯಕರ್ತರ ಒಡಲಲ್ಲಿ ಗಟ್ಟಿ ನೆಲೆ ಕಂಡುಕೊಳ್ಳುವ ಹುಮ್ಮಸ್ಸು ಮೂಡಿಸಿದೆ.

ಅದರ ಪರಿಣಾಮ, ಮತ ಎಣಿಕೆ (2016ರ ಮೇ 19) ದಿನ ಸಿಪಿಎಂ ಕಾರ್ಯಕರ್ತ ರವೀಂದ್ರನ್ ಕೊಲೆ. ಸಿಪಿಎಂ ವಿಜಯೋತ್ಸವ ಮೆರವಣಿಗೆ ಮೇಲೆ ಬಿಜೆಪಿ ಬೆಂಬಲಿಗರೆನ್ನಲಾದ ಗುಂಪು ಎಸೆದ ಕಚ್ಚಾ ಬಾಂಬ್‌ಗೆ ರವೀಂದ್ರನ್‌ ಬಲಿಯಾಗಿದ್ದರು. ಹೀಗೆ ಎಡಪಕ್ಷಗಳ ಒಕ್ಕೂಟ ಅಧಿಕಾರ ಚುಕ್ಕಾಣಿ ಹಿಡಿಯುತ್ತಲೆ ಕಮ್ಯುನಿಸ್ಟ್– ಸಂಘ ಪರಿವಾರದ ಮಧ್ಯೆ ಕದನ ಆರಂಭವಾಗಿತ್ತು.

2016ರ ಫೆಬ್ರುವರಿಯಲ್ಲಿ ಕಣ್ಣೂರಿನಲ್ಲಿ ವೃದ್ಧ ತಂದೆ–ತಾಯಿ ಎದುರಿನಲ್ಲೇ ಆರ್‌ಎಸ್ಎಸ್‌ ಕಾರ್ಯಕರ್ತ ಸುಜಿತ್‌ ಕೊಲೆ ನಡೆದಿದೆ. ಮೇ 12ರಂದು ಪಯ್ಯನ್ನೂರಿನಲ್ಲಿ ಅದೇ ಸಂಘಟನೆಯ ಬಿಜು  ಬಲಿಯಾಗಿದ್ದಾರೆ. ಜುಲೈ 11 ರಂದು ಪಯ್ಯನ್ನೂರಿನಲ್ಲಿ ಡಿವೈಎಫ್ಐ ನಾಯಕ ಧನರಾಜ್, ಕೆಲವೇ ಗಂಟೆಗಳ ಅಂತರದಲ್ಲಿ ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತ‌ ರಾಮಚಂದ್ರನ್ ಕೊಲೆ ನಡೆದಿದೆ. ಅ. 10 ರಂದು ಕಣ್ಣೂರು ಜಿಲ್ಲೆಯ ವಲಂಕಿಚಲ್ ಎಂಬಲ್ಲಿ ಸಿಪಿಎಂ ಸ್ಥಳೀಯ ಘಟಕದ ನಾಯಕ ಮೋಹನ್‌ ಅವರನ್ನು ಕೊಲೆ ಮಾಡಲಾಗಿತ್ತು. ಮೋಹನ್‌ ನಡೆಸುತ್ತಿದ್ದ ಶೇಂದಿ ಅಂಗಡಿಗೆ ನುಗ್ಗಿದ ಗುಂಪು ಹತ್ಯೆ ಮಾಡಿತ್ತು. 48 ಗಂಟೆ ಕಳೆಯುವ ಮುನ್ನವೇ ಚಕ್ರ ತಿರುಗಿತ್ತು. ಆರ್‌ಎಸ್‌ಎಸ್ ಕಾರ್ಯಕರ್ತ ರೆಮಿತ್ ಕೊಲೆಯಾಗಿದ್ದರು. ವಿಚಿತ್ರವೆಂದರೆ, ರೆಮಿತ್ ತಂದೆ 2002ರಲ್ಲಿ ನಡೆದ ರಾಜಕೀಯ ಸಂಘರ್ಷದಲ್ಲಿ ಶವವಾಗಿದ್ದರು!

ಪೊಲೀಸ್‌ ಇಲಾಖೆ ಮಾಹಿತಿ ಪ್ರಕಾರ 1969ರಿಂದ ಈವರೆಗೆ 210 ರಾಜಕೀಯ ಕೊಲೆಗಳು ನಡೆದಿವೆ. ಅದರಲ್ಲೂ 2000ದಿಂದ ಈವರೆಗೆ ( 2017ರ ಆಗಸ್ಟ್ 15)  ಕಣ್ಣೂರು ಜಿಲ್ಲೆಯೊಂದರಲ್ಲಿಯೇ 71 ರಾಜಕೀಯ ಹತ್ಯೆಗಳು ನಡೆದಿವೆ. 2016ರಲ್ಲಿ ಏಳು ಹತ್ಯೆಗಳು ( ಬಿಜೆಪಿ– 4, ಸಿಪಿಎಂ– 3) ನಡೆದಿವೆ. 2017ರಲ್ಲಿ ನಾಲ್ಕು (ಎಲ್ಲರೂ ಬಿಜೆಪಿ) ಕೊಲೆಗಳು ನಡೆದಿವೆ. ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕಣ್ಣೂರು ಜಿಲ್ಲೆಯೊಂದರಲ್ಲೇ ಏಳು ಮಂದಿ ಹತ್ಯೆಗೆ ಈಡಾಗಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ 31 ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರು ಆರಿಸಿ ಬಂದಿದ್ದಾರೆ. ಚೆರುವಂಶೇರಿಯ ಎರಡು ವಾರ್ಡ್‌ಗಳು, ಪಾಣೂರು, ಇಳಾಂಗೋಡು, ಪಾಡಿಯಂ, ಪೊನ್ಯಯಂ, ನಾಯನಾರ್‌ ರೋಡ್‌, ಮಾಹಿ, ಚೆಂಬರ ಮತ್ತಿತರ ಕಡೆಗಳಲ್ಲಿ ಆರ್‌ಎಸ್‌ಎಸ್‌– ಬಿಜೆಪಿ ಪ್ರಾಬಲ್ಯ ಪಡೆದಿದೆ. ಇವು ಕೇಸರಿ ಪಾರ್ಟಿ ಗ್ರಾಮಗಳೆಂದೇ ಗುರುತಿಸಿಕೊಂಡಿವೆ. ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಉಪಸ್ಥಿತಿಯಲ್ಲಿ ಕಳೆದ ವರ್ಷ ಚಿರಕಲ್‌ ಎಂಬಲ್ಲಿ ಮೂರು ದಿನ ಆರ್‌ಎಸ್‌ಎಸ್‌ ರಾಜ್ಯ ಬೈಠಕ್‌ ನಡೆದಿತ್ತು. ಸಿಪಿಎಂ ಪ್ರಾಬಲ್ಯದ ಗ್ರಾಮಗಳಲ್ಲಿ ಹೋರಾಟ ತೀವ್ರಗೊಳಿಸುವ ಕುರಿತು ಈ ಬೈಠಕ್‌ನಲ್ಲಿ ತೆಗೆದುಕೊಂಡ ತೀರ್ಮಾನಗಳು, ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಜಿಲ್ಲೆಗೆ ಹರಿದ ಆರ್ಥಿಕ ನೆರವು ಇಲ್ಲಿ ಆರ್‌ಎಸ್‌ಎಸ್‌– ಬಿಜೆಪಿ ಚಟುವಟಿಕೆಗೆ ಮತ್ತಷ್ಟು ಚುರುಕು ನೀಡಿದೆ’ ಎನ್ನುವುದು ರೈಲ್ವೆ ನಿಲ್ದಾಣದ ಬಳಿ ಹಲವು ವರ್ಷಗಳಿಂದ ತರಕಾರಿ ಮಾರುತ್ತಿರುವ ಕೆ. ರಾಧಾಕೃಷ್ಣನ್ ಅಭಿಪ್ರಾಯ.

‘ನೆತ್ತರು ಹರಿದಾಗಲೆಲ್ಲ ನಡೆಯುವ ಸರ್ವಪಕ್ಷ ಶಾಂತಿಸಭೆಗಳು ಫಲ ನೀಡದೇ ಇರಲು ಕಾರಣಗಳು ಹಲವು ಇವೆ. ಮುಯ್ಯಿ ತೀರಿಸಿಕೊಳ್ಳಬೇಕೆಂಬ ಕಾತರದಲ್ಲಿರುವ ಬಿಸಿರಕ್ತದ ಹದಿಹರೆಯದ ಹಸಿಹಸಿ ಮನಸ್ಸುಗಳು ಸೌಹಾರ್ದ ಮಂತ್ರ ಆಲಿಸಲು ತಯಾರಿಲ್ಲ. ಹೀಗಾಗಿ ಶಾಂತಿ ಬಗ್ಗೆ ಮಾತನಾಡುವುದು ಅಪಹಾಸ್ಯವಾಗುತ್ತದೆ’ ಎನ್ನುತ್ತಾರೆ ಕಣ್ಣೂರಿನಲ್ಲಿ ನಾಲ್ಕು ದಶಕಗಳಿಂದ ಟ್ಯಾಕ್ಸಿ ಓಡಿಸುತ್ತಿರುವ ಕೆ. ಶ್ರೀಶನ್.

‘ಹಣೆಯಲ್ಲಿ ತಿಲಕ ಇದ್ದರೆ, ಕೇಸರಿ ತೊಟ್ಟಿದ್ದರೆ ಆರ್‌ಎಸ್ಎಸ್‌ ಅನುವರ್ತಿ; ಕೆಂಪು ಬಟ್ಟೆಯಿಂದ ಮೈ ಮುಚ್ಚಿಕೊಂಡಿದ್ದರೆ ಕಮ್ಯುನಿಸ್ಟ್‌ ಅನುಯಾಯಿ ಎಂಬ ಜನಮನ ಇಲ್ಲಿನದು. ಆಯಾ ಪಕ್ಷದ ಪ್ರಾಬಲ್ಯವಿರುವ ಗ್ರಾಮಗಳಿಗೆ ಹೋಗುವ ಸಂದರ್ಭದಲ್ಲೂ ಈ ಸೂಕ್ಷ್ಮ ಮನಸ್ಸಿನಲ್ಲಿರಬೇಕು. ನಿತ್ಯ ದುಡಿದು ಬದುಕುವ ನಮ್ಮಂಥ ಸಾಮಾನ್ಯರೇ ಬಲಿಯಾಗುತ್ತಿರುವ ಈ ಹತ್ಯಾ ರಾಜಕೀಯ ಇನ್ನೆಷ್ಟು ಕಾಲವೋ’ ಎನ್ನುವ ಅವರ ಮಾತುಗಳಲ್ಲಿ ನೋವು ಇತ್ತು.

‘ಗ್ರಾಮ ಪಂಚಾಯಿತಿಗಳ ಆಡಳಿತ ನಡೆಸುವ ಪಕ್ಷಗಳು ಅಲ್ಲಿ ತಮ್ಮದೇ ರಾಜ್ಯಭಾರ ಎಂದುಕೊಂಡಿರುತ್ತವೆ’ ಎನ್ನುತ್ತಾರೆ ಜಿಲ್ಲೆಯ ಮಟ್ಟನ್ನೂರು ವೃತ್ತದ ಪೊಲೀಸ್ ಅಧಿಕಾರಿ.
‘ಕೊಲೆ ಆರೋಪಿಗಳನ್ನು ಬಂಧಿಸಲು ಮುಂದಾದರೆ ಆ ಪಾರ್ಟಿ ಗ್ರಾಮದ ಜನ ಅಡ್ಡಿಪಡಿಸುತ್ತಾರೆ. ಆರೋಪಿಗಳನ್ನು ಬಂಧಿಸುವಾಗ ಲಾಠಿ ಪ್ರಹಾರ ಅನಿವಾರ್ಯ’ ಎನ್ನುವ ಅವರ ಮಾತುಗಳಲ್ಲಿ ರಾಜಕೀಯ ಒತ್ತಡ ಇರುವುದು ಸ್ಪಷ್ಟವಾಗುತ್ತದೆ.

‘ಜಿಲ್ಲೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕೆಂದು ಹಲವು ಪ್ರಯತ್ನಗಳು ನಡೆದಿವೆ. ಆದರೆ, ಶಾಂತಿ ಮಾತುಕತೆಯನ್ನು ಆರ್‌ಎಸ್ಎಸ್–ಬಿಜೆಪಿ ತಿರಸ್ಕರಿಸುತ್ತದೆ. ಶಾಂತಿಯಿಂದ ಇರುವಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಕರೆ ನೀಡಿದಾಗೆಲ್ಲ, ಆ ಸಂಘಟನೆಯ ಕಾರ್ಯಕರ್ತರು ಮತ್ತಷ್ಟು ಹಿಂಸಾಚಾರ ನಡೆಸುತ್ತಾರೆ’ ಎನ್ನುವುದು ಸಿಪಿಎಂ ಮುಖಂಡ ಪಿ. ಜಯರಾಜನ್ ಆರೋಪ. ಇಂಥದ್ದೇ ಆರೋಪಗಳನ್ನು ಸಿಪಿಎಂ ವಿರುದ್ಧ ಬಿಜೆಪಿ ರಾಜ್ಯ ಘಟಕದ ಪ್ರಮುಖ ರಂಜಿತ್‌ ಮಾಡುತ್ತಾರೆ.

‘ಶಾಂತಿ‌ ಸಭೆಯಲ್ಲಿನ ತೀರ್ಮಾನಗಳನ್ನು ಉಲ್ಲಂಘಿಸುವವರು ಕಮ್ಯುನಿಸ್ಟರು. ಮಾರ್ಕ್ಸಿಸ್ಟ್‌ –ಕಮ್ಯುನಿಸ್ಟ್‌ ಕೋಟೆಗಳಲ್ಲಿ ಆರ್‌ಎಸ್ಎಸ್‌ ಬೆಳವಣಿಗೆ ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ತಾತ್ವಿಕ ವಿರೋಧದಿಂದ ಮಟ್ಟ ಹಾಕಲು ಸಾಧ್ಯವಾಗದೇ ಹಿಂಸಾಚಾರದ ಮೂಲಕ ಶಾರೀರಿಕವಾಗಿ ಮುಗಿಸುವ ಕೆಲಸ ನಡೆಯುತ್ತಿದೆ. ಆ ಮೂಲಕ ಆರ್‌ಎಸ್‌ಎಸ್‌ ಕಡೆ ಯಾರೂ ಆಕರ್ಷಿತರಾಗದಂತೆ ಮಾಡಲಾಗುತ್ತಿದೆ. ಇಂಥ ಸಂಘರ್ಷದಲ್ಲಿ ನಮ್ಮ 85 ಕಾರ್ಯಕರ್ತರು ಹತರಾಗಿದ್ದಾರೆ. ಕಣ್ಣೂರಿನ ಎಲ್ಲ ಗ್ರಾಮಗಳಲ್ಲೂ ಸಂಘದ ಚಟುವಟಿಕೆ ಸಕ್ರಿಯವಾಗಿದೆ. ಕೊಲೆ, ಕ್ರೌರ್ಯಗಳಿಗೆ ನಾವು ಹೆದರುವುದಿಲ್ಲ’ ಎನ್ನುತ್ತಾರೆ ರಂಜಿತ್‌.

ಕಳೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಲಾಗಿತ್ತಾದರೂ ಫಲಿತಾಂಶ ಬಿಜೆಪಿ-ಆರ್‍ಎಸ್‍ಎಸ್ ಆಂತರಿಕ ವಲಯದಲ್ಲಿ ತೀವ್ರ ನಿರಾಶೆ ಮೂಡಿಸಿತ್ತು. ಎಡಪಕ್ಷಗಳ ಒಕ್ಕೂಟದ ಗೆಲುವಿನ ಬೆನ್ನಲ್ಲೇ ಸರಣಿ ದಾಳಿಗಳು ನಡೆದಿವೆ. ಸಿಪಿಎಂ, ಆರ್‌ಎಸ್ಎಸ್‌– ಬಿಜೆಪಿ ಕಾರ್ಯಕರ್ತರು ಬೀದಿ ಹೆಣವಾಗಿದ್ದಾರೆ. ಈ ಮಾರಕ ದಾಳಿಗಳನ್ನು ಯಾರು ಹುಟ್ಟು ಹಾಕಿದರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಈ ಹಿಂಸಾಚಾರ ಈಗ ಕಣ್ಣೂರು ಕೇಂದ್ರಿತವಾಗಿ ಉಳಿದಿಲ್ಲ.

‘ಇಂದಿನ ಪರಿಸ್ಥಿತಿ ನೋಡಿದರೆ, ಇಲ್ಲಿ ಸರಣಿ ಕೊಲೆಗಳು ನಿಲ್ಲುವ ಲಕ್ಷಣಗಳು ಇಲ್ಲ. ರಾಜಕೀಯ ಕೊಲೆಗಳಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುವುದರಿಂದ ಯಾರೂ ಹಿಂದೆಬಿದ್ದಿಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರು ರಕ್ತಪಿಪಾಸುಗಳಾಗಿದ್ದಾರೆ. ಶಾಂತಿ ಕುರಿತು ಮಾತನಾಡುವುದೇ ವ್ಯರ್ಥ ಎನ್ನುವಂತಾಗಿದೆ. ಹಿಂಸಾತ್ಮಕ ದಾಳಿಗಳ ಹಾದಿ ನಿರರ್ಥಕ ಮತ್ತು ತಿರುಗುಬಾಣ ಆಗುವಂಥದ್ದು ಎನ್ನುವುದನ್ನು ಎರಡೂ ಪಕ್ಷಗಳ ನಾಯಕತ್ವ ಅರ್ಥ ಮಾಡಿಕೊಳ್ಳಬೇಕು. ಹಿಂಸಾ ರಾಜಕೀಯಕ್ಕೆ ಇತಿಶ್ರೀ ಹಾಡಬೇಕು’ ಎಂದು ಸಲಹೆ ನೀಡುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಕರಿವೆಳ್ಳೂರು.

ಹಿಂದುತ್ವ ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಸಿಪಿಎಂ, ಸಾಮೂಹಿಕ ಪ್ರಚಾರಾಂದೋಲನ ನಡೆಸುತ್ತಿದೆ. ಬಲಿಷ್ಠವಾದ ಪ್ರತಿ ಪ್ರಚಾರದ ಮೂಲಕ ಕೋಮುವಾದಿ ಸಂದೇಶ ಪಸರಿಸಲು ಆರ್‍ಎಸ್‍ಎಸ್ ಮತ್ತು ಬಿಜೆಪಿ ತಂತ್ರ ರೂಪಿಸಿದೆ. ಸಿಪಿಎಂ ಕಾರ್ಯಕರ್ತರ ಮೇಲೆ ದಾಳಿ ಮುಂದುವರಿಯಲು ಇದೂ ಕಾರಣವಾಗಿದೆ. ಶಸ್ತ್ರಾಸ್ತ್ರಗಳು ಮತ್ತು ತರಬೇತಿ ನೀಡುವ ಆರ್‍ಎಸ್‍ಎಸ್ ಶಾಖೆಗಳ ಚಟುವಟಿಕೆಯನ್ನು ದೇವಸ್ಥಾನಗಳಲ್ಲಿ ನಡೆಸುವುದರ ಮೇಲೆ ನಿಷೇಧ ಹೇರಲು ಎಡಪಕ್ಷಗಳ ಒಕ್ಕೂಟದ ಸರ್ಕಾರ ಚಿಂತನೆ ನಡೆಸಿದೆ. ಇದು ಬಿಜೆಪಿ, ಆರ್‍ಎಸ್‍ಎಸ್ ಕೂಟದ ಸಿಟ್ಟು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸಿಪಿಎಂನ ಈ ‘ಕುಟಿಲ’ ರಾಜಕೀಯದ ವಿರುದ್ಧ ಜನಜಾಗೃತಿ ಮೂಡಿಸಲು ಬಿಜೆಪಿ ಮುಂದಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೇತೃತ್ವದಲ್ಲಿ ಸೆ. 7ರಿಂದ 23ರವರೆಗೆ ಕಣ್ಣೂರು ಜಿಲ್ಲೆಯಾದ್ಯಂತ ಪಾದಯಾತ್ರೆಗೆ ಸಿದ್ಧತೆಯನ್ನೂ ನಡೆಸಿದೆ. ಆರ್‌ಎಸ್‌ಎಸ್‌– ಬಿಜೆಪಿ ಶಕ್ತಿವರ್ಧನೆಗೆ ಹಮ್ಮಿಕೊಂಡ ಈ ಕಾರ್ಯಕ್ರಮ ರಾಜಕೀಯ ಸಂಘರ್ಷದ ಬೆಂಕಿಗೆ ತುಪ್ಪ ಎರೆಯದಿದ್ದರೆ ಸಾಕು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT