ADVERTISEMENT

ಬೇಕೇ ಹೆಣ್ಣು ಕರು?

ಡಾ.ವಿ.ಎಸ್‌.ಸುಂದರ್‌ ಮೂರ್ತಿ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಬೇಕೇ ಹೆಣ್ಣು ಕರು?
ಬೇಕೇ ಹೆಣ್ಣು ಕರು?   

ದುಡಿಮೆಗೆ ಯಾರು ಹೈನುಗಾರಿಕೆ ಕಸುಬನ್ನು ಆಯ್ಕೆ ಮಾಡಿಕೊಂಡಿದ್ದಾರೆಯೋ ಅವರಿಗೆ ಗೊತ್ತು ಹೆಣ್ಣೆಂಬುದರ ನಿಜವಾದ ಬೆಲೆ. ಏಕೆಂದರೆ ಆರ್ಥಿಕ ಅಭಿವೃದ್ಧಿಗೆ ಹಸು ಬೇಕೇ ಬೇಕು ಹೈನುಗಾರಿಕೆ ಬಾಳಿನಲ್ಲಿ.

ಗರ್ಭಧರಿಸಿದ ನೂರು ಹಸುಗಳು ಅವಧಿ ಪೂರ್ಣಗೊಂಡ ಬಳಿಕ ಕರುಗಳಿಗೆ ಜನ್ಮ ನೀಡಿವೆ ಎಂದಿಟ್ಟುಕೊಳ್ಳೋಣ. ಈ ಪೈಕಿ ಸರಿಸುಮಾರು 50 ಕರುಗಳು ಹೆಣ್ಣಾಗಿದ್ದರೆ ಮಿಕ್ಕ ಅಷ್ಟೇ ಕರುಗಳು ಗಂಡಾಗಿರುತ್ತವೆ. ಹೆಣ್ಣು ಮತ್ತು ಗಂಡು ಕರುಗಳ ನಡುವಿನ ಲಿಂಗಾನುಪಾತ ಹೆಚ್ಚು–ಕಡಿಮೆ 50:50ರಷ್ಟಿದೆ. ಇದು ಪ್ರಕೃತಿಯ ನಿಯಮ.

ಲಾಭದಾಯಕ ಹೈನುಗಾರಿಕೆ ದೃಷ್ಟಿಯಿಂದ ಇದೀಗ ಬಹುತೇಕ ಹೈನುಗಾರರು ಪಶುಪಾಲನೆಗೆಂದು ಅವಲಂಬಿಸಿರುವುದು ಮಿಶ್ರತಳಿ ಹಸುಗಳನ್ನು. ಇವುಗಳಿಗೆ ಜನಿಸುವ ಕರು ಒಂದು ವೇಳೆ ಗಂಡಾಗಿದ್ದಲ್ಲಿ ಅವರ ಪಾಲಿಗೆ ಅದು ಹೊರೆಯೇ ಸರಿ. ಏಕೆಂದರೆ, ಕೃಷಿ ಚಟುವಟಿಕೆಗೆ ಅದು ನಿರುಪಯುಕ್ತ. ಮೇಲಾಗಿ ಇಂದು ಬಹುತೇಕ ಕೃಷಿಕರು ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳಿಗೆ ಮೊರೆ ಹೋಗಿದ್ದಾರೆ.

ADVERTISEMENT

ಗಂಡು ಕರುಗಳನ್ನು ಸಾಕಿ ದೊಡ್ಡದು ಮಾಡುವುದರಿಂದ ಯಾವುದೇ ಲಾಭ ಇಲ್ಲ. ಹಾಗಿದ್ದ ಮೇಲೆ ಗಂಡು ಕರುಗಳು ಹೈನುಗಾರಿಕೆಯಲ್ಲಿ ತೊಡಗಿದವರ ಖರ್ಚಿಗೆ ದಾರಿಯಲ್ಲದೆ ಮತ್ತೇನಲ್ಲ. ಅದೇ, ಹುಟ್ಟುವ ಕರು ಹೆಣ್ಣಾಗಿದ್ದರೆ ಅದು ಬೆಳೆದು ಹಸುವಾಗಿ ಮುಂದೊಂದು ದಿನ ಹಾಲು ನೀಡುತ್ತದೆ ಎಂಬುದು ಅವರ ಯೋಚನೆ.

ಲಾಭದಾಯಕ ಹೈನುಗಾರಿಕೆಗೆ ಗಂಡು ಕರುಗಳ ಜನನ ಪ್ರಮಾಣ ತಗ್ಗುವಂತಾಗಬೇಕು. ಅದನ್ನು ನಿಜ ಮಾಡಲು ಇದೀಗ ನಮ್ಮಲ್ಲೊಂದು ಅಸ್ತ್ರ ಇದೆ ಎಂದರೆ ಪ್ರಾಯಶಃ ನಿಮಗೆ ಆಶ್ಚರ್ಯವಾಗಬಹುದು. ಹೌದು, ಹೈನುಗಾರಿಕಾ ಕ್ಷೇತ್ರದಲ್ಲಿ ಇತ್ತೀಚೆಗೆ ಮಹತ್ವದ ಔಷಧಿಯನ್ನೊಂದು ಆವಿಷ್ಕರಿಸಲಾಗಿದೆ. ‘ಓಲ್‌ಪ್ರೊಫೇಮ್‌’ ಎಂಬುದು ಅದರ ಹೆಸರು. ವಾಸ್ತವದಲ್ಲಿ ಹೆಣ್ಣು ಲಿಂಗವನ್ನು ನಿರ್ಧರಿಸಬಲ್ಲ ಸಾಮರ್ಥ್ಯ ಈ ಔಷಧಿಗಿದೆ ಎನ್ನಬಹುದು. ಜಾಗತಿಕ ಮಟ್ಟದಲ್ಲಿ ಇದೊಂದು ಕ್ರಾಂತಿಕಾರಕ ಆವಿಷ್ಕಾರ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಈಗಾಗಲೇ ಈ ಮದ್ದು ಸಾಕಷ್ಟು ಸುದ್ದಿ ಮಾಡಿದೆ. ಹೆಣ್ಣು ಕರುಗಳ ಶೇಕಡಾವಾರು ಜನನ ಪ್ರಮಾಣವನ್ನು ಹೆಚ್ಚು ಮಾಡಬಲ್ಲ ಸಾಮರ್ಥ್ಯ ಈ ಔಷಧಿಗಿದೆ ಎಂಬುದು ‘ಓಲ್‌ಪ್ರೊಫೆಮ್‌’ನ ಹೆಗ್ಗಳಿಕೆ. ಹಾಗಾಗಿ ಈ ಔಷಧಿಯ ಆವಿಷ್ಕಾರವನ್ನು ಹಾಲು ಉತ್ಪಾದನಾ ಕ್ಷೇತ್ರಕ್ಕೆ ಸಿಕ್ಕ ಬೃಹತ್‌ ಕೊಡುಗೆ ಎಂದೇ ಬಣ್ಣಿಸಬಹುದಾಗಿದೆ.

ಕೋಲಾರ– ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲ್ಲೂಕುಗಳ ಕೆಲವು ಸಂಘಗಳ ವ್ಯಾಪ್ತಿಯಲ್ಲಿ ಈ ಔಷಧಿಯನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಬೆದೆಯಲ್ಲಿದ್ದ ಒಟ್ಟು 165 ಪಶುಗಳಿಗೆ ಕೃತಕ ಗರ್ಭಧಾರಣೆ ಮಾಡುವ ಮೊದಲು ಓಲ್‌ಪ್ರೊಫೆಮ್‌ ಔಷಧಿಯನ್ನು ಕುಡಿಸಲಾಗಿತ್ತು. ಗರ್ಭಧಾರಣೆ ಖಾತ್ರಿಯಾಗಿದ್ದ 98 ಹಸುಗಳ ಪೈಕಿ 82 ಹಸುಗಳು ಹೆಣ್ಣು ಕರುಗಳಿಗೆ ಜನ್ಮ ನೀಡಿದ್ದವು. ಉಳಿದ 16 ಹಸುಗಳು ಗಂಡು ಕರುಗಳಿಗೆ ಜನ್ಮ ನೀಡಿದ್ದವು.

ಗುಜರಾತ್‌ ರಾಜ್ಯದ ಅಮುಲ್‌ ಡೈರಿ ವ್ಯಾಪ್ತಿಯಲ್ಲಿಯೂ ಈ ಔಷಧಿಯನ್ನು ಹಸುಗಳಿಗೆ ಪ್ರಾಯೋಗಿಕವಾಗಿ ಬಳಸಲಾಗಿತ್ತು. ಕಲಿಕಾ ವರದಿ ಹೇಳುವಂತೆ 1,692 ಜನನಗಳಲ್ಲಿ 1,336 ಹೆಣ್ಣು ಕರುಗಳಾಗಿದ್ದವು. ಶೇ 79ರಷ್ಟು ಹೆಣ್ಣು ಕರುಗಳು ಜನಿಸಿದ್ದವು ಎಂಬುದನ್ನು ಈ ಕಲಿಕೆ ಸಾಬೀತು ಪಡಿಸಿದೆ.

ಗುಜರಾತ್‌ ರಾಜ್ಯದ ಜಮ್ನಾನಗರ, ಸುರೇಂದ್ರನಗರ ಹಾಗೂ ವಡೋದರ ಜಿಲ್ಲೆಗಳಲ್ಲಿಯೂ ಈ ಔಷಧಿಯ ಬಳಕೆ ಕುರಿತಾಗಿ ಇದೇ ರೀತಿಯ ಪ್ರಯೋಗ ನಡೆಸಲಾಗಿತ್ತು. ಫಲಿತಾಂಶ ವರದಿ ಹೇಳುವಂತೆ ಈ ಮೂರು ಜಿಲ್ಲೆಗಳಲ್ಲಿ ಓಲ್‌ಪ್ರೊಫೆಮ್‌ ಔಷಧಿಯ ಬಳಕೆಯಿಂದ ಹೆಣ್ಣು ಕರುಗಳ ಜನನ ಅನುಕ್ರಮವಾಗಿ ಶೇ 83, ಶೇ 82 ಹಾಗೂ
ಶೇ 79ರಷ್ಟಿತ್ತು ಎಂಬುದು ದೃಢಪಟ್ಟಿದೆ.

ಹೆಣ್ಣು ಕರುಗಳ ಜನನಕ್ಕೆ ಸಂಬಂಧಿಸಿದಂತೆ ಈ ಔಷಧಿ ನೂರಕ್ಕೆ ನೂರರಷ್ಟು ಪ್ರಭಾವಿ ಎಂದೇನೂ ಹೇಳುತ್ತಿಲ್ಲ. ಆದರೆ ಮಾಮೂಲಿ ವಿಧಾನದಲ್ಲಿ ಹೆಣ್ಣು ಹಾಗೂ ಗಂಡು ಕರುಗಳ ನಡುವಿನ ಲಿಂಗಾನುಪಾತ 50:50 ಎಂದಾಗಿದ್ದರೆ, ಓಲ್‌ಪ್ರೊಫೆಮ್‌ ಬಳಕೆಯಿಂದ ಲಿಂಗಾನುಪಾತ 80:20ರಷ್ಟಾಗಿದೆ. ಅಂದರೆ, ಜನಿಸಿದ ಪ್ರತಿ ನೂರು ಕರುಗಳಲ್ಲಿ ಸುಮಾರು 80 ಕರುಗಳು ಹೆಣ್ಣಾಗಿರುತ್ತವೆ.

ನಿರ್ವಹಣೆ ಹೇಗೆ?:
ವೀರ್ಯದಲ್ಲಿ ಎರಡು ವಿಧದ ವೀರ್ಯಾಣುಗಳನ್ನು ಹೊಂದಿರುತ್ತದೆ. ಅವುಗಳನ್ನು ‘ಎಕ್ಸ್‌’ ಮತ್ತು ‘ವೈ’ ವೀರ್‍ಯಾಣುಗಳೆಂದು ಹೆಸರಿಸಲಾಗಿದೆ. ಬೆದೆಗೆ ಬಂದಿದೆ ಎನ್ನಲಾದ ಹಸುವೊಂದಕ್ಕೆ ಕೃತಕ ಗರ್ಭಧಾರಣೆ ಮಾಡಲಾಗಿದೆ ಎಂದಿಟ್ಟುಕೊಳ್ಳೋಣ. ಹಸುವಿನ ದೇಹದಲ್ಲಿ ಅಂಡಾಶಯ ಉತ್ಪತ್ತಿ ಮಾಡುವ ಅಂಡ/ಮೊಟ್ಟೆಯೊಂದಿಗೆ ವೀರ್‍ಯಾಣು ಮಿಲನಗೊಂಡು ಮುಂದೆ ಅದು ಭ್ರೂಣವಾಗಿ ಮಾರ್ಪಡುತ್ತದೆ. ಇದೇ ಭ್ರೂಣ ಗರ್ಭದೊಳಗೆ ಒಂಬತ್ತು ತಿಂಗಳವರೆಗೆ ಬೆಳೆದು, ಬಳಿಕ ಅದು ಕರುವಾಗಿ ಜನಿಸುತ್ತದೆ.

ಅಂಡಾಶಯ ಉತ್ಪತ್ತಿ ಮಾಡುವ ಅಂಡ/ ಮೊಟ್ಟೆ ತನ್ನ ಮೈಮೇಲೆ ‘ಎಕ್ಸ್‌’ ವೀರ್‍ಯಾಣು ಹಾಗೂ ‘ವೈ’ ವೀರ್‍ಯಾಣುಗಳಿಗೆಂದು ಪ್ರತ್ಯೇಕವಾಗಿ ಎರಡು ರೀತಿಯ ಸ್ವೀಕರಣಾ ಬಿಂದುಗಳನ್ನು ಹೊಂದಿರುತ್ತದೆ.

ಗರ್ಭಧಾರಣೆ ಮಾಡಲಾದ ವೀರ್ಯದಲ್ಲಿ ಲಕ್ಷಗಟ್ಟಲೆ ವೀರ್‍ಯಾಣುಗಳಿರುತ್ತವೆ. ಆದರೆ ಮಿಲನ ಪ್ರಕ್ರಿಯೆಗೆಂದು ಬಳಸಲ್ಪಡುವುದು ಒಂದೇ ವೀರ್‍ಯಾಣು ಮಾತ್ರ. ಮಿಲನ ಪ್ರಕ್ರಿಯೆಯಲ್ಲಿ ಮೊಟ್ಟಮೊದಲಿಗೆ ‘ಎಕ್ಸ್‌’ ವೀರ್‍ಯಾಣು ಮೊಟ್ಟೆಯನ್ನು ಸಂಧಿಸಿಬಿಟ್ಟಿತು ಎಂದಿಟ್ಟುಕೊಳ್ಳೋಣ. ಹುಟ್ಟುವ ಕರು ಆಗ ಹೆಣ್ಣಾಗಿರುತ್ತದೆ. ಬದಲಿಗೆ ಮಿಲನ ಪ್ರಕ್ರಿಯೆಯಲ್ಲಿ ‘ವೈ’ ವೀರ್‍ಯಾಣು ಮೊದಲಿಗೆ ಮೊಟ್ಟೆಯನ್ನು ಸಂಧಿಸಿಬಿಟ್ಟತು ಎಂದಿಟ್ಟುಕೊಳ್ಳೋಣ. ಹುಟ್ಟುವ ಕರು ಆಗ ಗಂಡಾಗಿರುತ್ತದೆ.

ಬೆದೆಗೆ ಬಂದ ಹಸುವಿಗೆ ಕೃತಕ ಗರ್ಭಧಾರಣೆಗೆ ಅರ್ಧ ಗಂಟೆ ಮೊದಲು ಓಲ್‌ಪ್ರೊಫೆಮ್‌ ಔಷಧಿಯನ್ನು ಕುಡಿಸಲಾಗಿದೆ ಎಂದಿಟ್ಟುಕೊಳ್ಳೋಣ. ಓಲ್‌ಪ್ರೊಫೆಮ್‌ ಔಷಧಿ ಅಥವಾ ಅದರ ಮೆಟಬೊಲೈಟ್‌ಗಳು ಅಂಡದ ಮೈಮೇಲೆ ವೀರ್‍ಯಾಣು ಸ್ವೀಕರಣೆಗೆಂದು ಲಭ್ಯವಿರುವ ‘ವೈ’ ರಿಸೆಪ್ಟರ್‌ (ಅಥವಾ ‘ವೈ’ ಸ್ವೀಕರಣಾ ಬಿಂದು)ಗಳಿಗೆ ತಡೆಯೊಡ್ಡಿಬಿಡುತ್ತದೆ ಎಂಬುದು ಈ ಔಷಧಿಯ ಆವಿಷ್ಕಾರದ ಹಿಂದೆ ಇರುವ ಸಾರ.

ಅಂದರೆ ಮೈಮೇಲೆ ಆ ಬಳಿಕ ಮಿಲನ ಪ್ರಕ್ರಿಯೆಗೆ ಉಳಿಯುವುದು ‘ಎಕ್ಸ್‌’ ರಿಸೆಪ್ಟರ್‌ಗಳು ಮಾತ್ರ. ಹೀಗಾಗಿ ಮಿಲನ ಪ್ರಕ್ರಿಯೆಯಲ್ಲಿ ಅಂಡದೊಂದಿಗೆ ಮಿಲನಗೊಳ್ಳಲು ಇಲ್ಲಿ ‘ಎಕ್ಸ್‌’ ವೀರ್‍ಯಾಣುಗಳಿಗೆ ಮಾತ್ರ ಅವಕಾಶ ಲಭ್ಯ. ಆದ ಕಾರಣ ಹುಟ್ಟುವ ಕರು ಹೆಣ್ಣಾಗಿರುತ್ತದೆ ಎಂಬುದು ಈ ಔಷಧಿ ಕೆಲಸ ನಿರ್ವಹಿಸುವ ಬಗ್ಗೆ ಇರುವ ತರ್ಕ.

ಓಲ್‌ಪ್ರೊಫೆಮ್‌ ಇದು ದ್ರವ ರೂಪದಲ್ಲಿ ಇರುವಂಥ ಔಷಧಿ. 225 ಮಿಲಿ ಲೀಟರ್‌ ಬಾಟಲ್‌ಗಳಲ್ಲಿ ಇದು ಲಭ್ಯವಿದೆ. ಸುಮಾರು 450–500 ಕೆ.ಜಿ. ದೇಹ ತೂಕವನ್ನು ಹೊಂದಿರುವ ಹಸುವಿಗೆ ಈ ಮದ್ದನ್ನು ಕುಡಿಸಬೇಕು. ಉಪಯೋಗಕ್ಕೆ ಮೊದಲು ಈ ಔಷಧಿಯನ್ನು ಸಮ ಪ್ರಮಾಣದ ಶುದ್ಧ ನೀರಿನೊಂದಿಗೆ ಮಿಶ್ರ ಮಾಡಬೇಕು.

ಗರ್ಭಧಾರಣೆಗೆ ಸುಮಾರು 30–45 ನಿಮಿಷ ಮೊದಲು ಈ ಔಷಧಿಯನ್ನು ಪಶುವಿಗೆ ಕುಡಿಸಬೇಕು. ಓಲ್‌ಪ್ರೊಫೆಮ್‌ ಔಷಧಿಯನ್ನು ಪಶುವಿಗೆ ಬಳಸಬೇಕೆಂದು ನಿರ್ಧರಿಸಿದಾಗ ಬಳಕೆಗೆ 24 ಗಂಟೆ ಮೊದಲು ಹಾಗೂ ನಂತರ ಆ ಹಸುವು ಪ್ರಶಿಜೈವಿಕ ಹಾಗೂ ಸ್ಟೆರಾಯ್ಡ್‌ ಮದ್ದುಗಳ ಉಪಚಾರಕ್ಕೆ ಒಳಪಟ್ಟಿರಬಾರದು ಎಂಬ ಅಂಶವನ್ನು ನೆನಪಿಡಬೇಕು. ಈ ಔಷಧಿಯ ಕುರಿತು ಹಾಲು ಉತ್ಪಾದಕರ ಒಕ್ಕೂಟಗಳು, ಕೃತಕ ಗರ್ಭಧಾರಣೆ ಕಾರ್ಯಕರ್ತರು ಹಾಗೂ ಪಶು ಆಸ್ಪತ್ರೆಗಳಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.