ADVERTISEMENT

ಹೊಸ ‘ಕುರುಕ್ಷೇತ್ರ’ದ ಹಳೆಯ ‘ಅರ್ಜುನ’

ಉಮಾಪತಿ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಹೊಸ ‘ಕುರುಕ್ಷೇತ್ರ’ದ ಹಳೆಯ ‘ಅರ್ಜುನ’
ಹೊಸ ‘ಕುರುಕ್ಷೇತ್ರ’ದ ಹಳೆಯ ‘ಅರ್ಜುನ’   

ಭಾರತೀಯ ವಾಯುದಳದ ಮಹಾದಂಡನಾಯಕ ಅರ್ಜನ್‌ ಸಿಂಗ್, ಕಟ್ಟಕಡೆಯ ಬಾರಿಗೆ ನೀಲಿ ಬಾಂದಳ ಭೇದಿಸಿ, ಅದರಾಚೆಗೆ ಚಿಮ್ಮಿದ್ದಾರೆ. ಈ ಬಾರಿ ಚಿಮ್ಮಿದ ಅವರ ಕಾದಾಳು ವಿಮಾನ ಎಂದಿನಂತೆ ಇಳೆಗೆ ಇಳಿಯುವುದಿಲ್ಲ, ಇನ್ನೆಂದೆಂದಿಗೂ...

ಬದುಕಿದ್ದಾಗಲೇ ದಂತಕತೆಯಾಗಿಬಿಟ್ಟಿದ್ದ ಏರ್ ಫೋರ್ಸ್ ಮಾರ್ಷಲ್ ಅರ್ಜನ್ ಸಿಂಗ್ ಇದೇ 16ರಂದು 98ನೆಯ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಪದವಿಗೇರಿದವರು ಜನರಲ್ ಕೆ.ಎಂ.ಕಾರಿಯಪ್ಪ ಮತ್ತು ಮಣೇಕ್ ಷಾ ಇಬ್ಬರೇ. ವಾಯುಸೇನೆಯಲ್ಲಿ ಫೀಲ್ಡ್‌ ಮಾರ್ಷಲ್ ಪದವಿಗೆ ಸರಿಸಮನಾದದ್ದು ಐದು ರ‍್ಯಾಂಕುಗಳ ಮಾರ್ಷಲ್ ಪದವಿ. ಈವರೆಗೆ ಇಂತಹ ಪದವಿಗೇರಿದ ಭಾರತೀಯ ವಾಯುಸೇನೆಯ ಏಕೈಕ ಅಧಿಕಾರಿ ಅರ್ಜನ್ ಸಿಂಗ್. ಮಿಂಚಿನ ಕಾರ್ಯಾಚರಣೆಗೆ ಹೆಸರುವಾಸಿ.

1965ರ ಸೆಪ್ಟೆಂಬರ್. ಭಾರತೀಯ ವಾಯುದಳದ ಮುಖ್ಯಸ್ಥನನ್ನು ದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ರಕ್ಷಣಾ ಮಂತ್ರಿಯ ಕಚೇರಿಗೆ ಕರೆಸಲಾಗಿತ್ತು. ಜಮ್ಮುವಿನಿಂದ 28 ಕಿ.ಮೀ. ದೂರದ ಚಿನಾಬ್ ನದೀ ದಂಡೆಯ ಊರು ಅಖ್ನೂರ್ (ಅರ್ಥಾತ್ ಕಣ್ಣ ಬೆಳಕು) ಮೇಲೆ ಪಾಕಿಸ್ತಾನದ ದಾಳಿ ನಡೆದಿತ್ತು. ಎದುರೇಟು ನೀಡಲು ನಿಂತ ಭಾರತೀಯ ಸೇನೆಗೆ ಬಾನಿನಿಂದ ವಾಯುದಳದ ಬೆಂಬಲ ಬೇಕಿತ್ತು. ವಾಯುದಳದ ವಿಮಾನಗಳು, ನೆಲದ ಮೇಲೆ ಕಾದಾಡಿದ್ದ ಸೇನೆಗೆ ಇಂಬಾಗಿ ತ್ವರೆಯಿಂದ ಬಾನಿಗೆ ನೆಗೆಯಲು ಎಷ್ಟು  ಸಮಯಾವಕಾಶ ಬೇಕು? ವಾಯುದಳದ ಮುಖ್ಯಸ್ಥರು ಹಿಂದೆ ಮುಂದೆ ನೋಡದೆ, ರೆಪ್ಪೆ ಬಡಿಯದೆ  ನೀಡಿದ ಸಿಡಿಗುಂಡಿನ ಉತ್ತರ- ‘ಒಂದು ತಾಸು ಸಾಕು’.

ADVERTISEMENT

ಸರಿಯಾಗಿ ಅರವತ್ತು ನಿಮಿಷಗಳ ನಂತರ ಭಾರತೀಯ ವಾಯುಸೇನೆಯು, ಪಾಕಿಸ್ತಾನದ ಶಸ್ತ್ರಸನ್ನದ್ಧ ವ್ಯೂಹರಚನೆಗಳ ಅರೆದು ದೂಳೆಬ್ಬಿಸತೊಡಗಿತ್ತು. ಅಂದಿನ  ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ರಕ್ಷಣಾ ಸಚಿವ ಯಶವಂತರಾವ್ ಚವ್ಹಾಣ್ ಅವರಿಗೆ ಅರ್ಜನ್ ಕಾರ್ಯವೈಖರಿಯಲ್ಲಿ ಅಚಲ ವಿಶ್ವಾಸವಿತ್ತು.

ವಾಯುದಳದ ಮುಖ್ಯಸ್ಥ ಅರ್ಜನ್ ಸಿಂಗ್. ಅವರ ವಯಸ್ಸು ಕೇವಲ 45. ಪಾಕಿಸ್ತಾನಿ ವಾಯುಸೇನೆಯ ಬಳಿ ಆಗಲೇ ಅಮೆರಿಕೆಯ ಆಧುನಿಕ ಜೆಟ್ ಸಮರ ವಿಮಾನಗಳಿದ್ದವು. ಭಾರತದ ಬಳಿ ಇದ್ದದ್ದು ಅವೇ ಹಳೆಯ ಪೀಳಿಗೆಯ ಹಂಟರ್, ನ್ಯಾಟ್ ಮತ್ತು ವ್ಯಾಂಪೈರ್ ಫೈಟರ್ ವಿಮಾನಗಳು. ಆದರೆ ಎದುರಾಳಿ ವಾಯುಸೇನೆ ಇನ್ನೂ ಆಕಳಿಸಿ ಮೈಮುರಿಯುವಷ್ಟರಲ್ಲಿ ಭಾರತದ ಯುದ್ಧ ವಿಮಾನಗಳು ಕಾರ್ಯಾಚರಣೆಗೆ ಇಳಿದು ಆಗಿತ್ತು. ಕೆಲ ಆರಂಭಿಕ ಹಿನ್ನಡೆಗಳನ್ನು ಎದುರಿಸಿದರೂ, ಭಾರತೀಯ ವಾಯುಸೇನೆಯದೇ ಅಂತಿಮ ಮೇಲುಗೈ. ಪಾಕಿಸ್ತಾನದ ಪೇಶಾವರ್, ಸರ್ಗೋಧ, ಕರಾಚಿಯ ಮಿಲಿಟರಿ ನೆಲೆಗಳು, ಯುದ್ಧಪೂರಕ ಸರಂಜಾಮುಗಳನ್ನು ಧ್ವಂಸಗೊಳಿಸಿದವು. ಪಾಕಿಸ್ತಾನಿ ವಿಮಾನಗಳಿಗೆ ಆಗ್ರಾ ದೆಹಲಿಯ ಬಳಿಗೂ ಸುಳಿಯಲಾಗಲಿಲ್ಲ. ಅಂಬಾಲದ ಆಚೆಯ ಭಾರತೀಯ  ವಾಯುಸೀಮೆ ಅವುಗಳಿಗೆ ದಕ್ಕಲಿಲ್ಲ.

ಆಗಸದಲ್ಲಿ ಸಕಾಲಕ್ಕೆ ಒದಗಿ ಬಂದ ಬೆಂಬಲದಿಂದ ಭಾರತೀಯ ಪದಾತಿ ದಳಗಳು ಮುನ್ನುಗ್ಗಿ ಶತ್ರುದಾಳಿಯನ್ನು ಹಿಮ್ಮೆಟ್ಟಿಸಿದ್ದವು. ಭಾರತೀಯ ವಾಯುದಳದ ಮುಖ್ಯಸ್ಥರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು. ಮುಖ್ಯಸ್ಥ ಹುದ್ದೆಯನ್ನು ಏರ್ ಚೀಫ್ ಮಾರ್ಷಲ್ ದರ್ಜೆಗೆ ಏರಿಸಲಾಯಿತು. ಅರ್ಜನ್ ಸಿಂಗ್ ಮೊದಲ ಏರ್ ಚೀಫ್ ಮಾರ್ಷಲ್ ಆದರು. ಆನಂತರ ಮೊಟ್ಟ ಮೊದಲ ‘ಮಾರ್ಷಲ್ ಆಫ್ ಏರ್ ಫೋರ್ಸ್’ ಕೂಡ.

ಎರಡನೆಯ ವಿಶ್ವಯುದ್ಧದಲ್ಲಿ ಅರ್ಜನ್ ಸಿಂಗ್ ಫ್ಲೈಯಿಂಗ್ ಆಫೀಸರ್ ಆಗಿದ್ದ ದಿನಗಳಲ್ಲಿ ಭಾರತೀಯ ವಾಯುಸೇನೆಗೆ ಹತ್ತು ವರ್ಷಗಳೂ ತುಂಬಿರಲಿಲ್ಲ. ಅಫ್ಘಾನಿಸ್ತಾನದ ಗಡಿಯ ವಜೀರಿಸ್ತಾನದಲ್ಲಿ ಪಶ್ತೂನ್ ಬುಡಕಟ್ಟುಗಳ ಬಂಡಾಯವನ್ನು ಅಡಗಿಸಲು ಬ್ರಿಟಿಷ್ ರಾಯಲ್ ಏರ್ ಫೋರ್ಸ್‌ಗೆ ನೆರವಾಗಿತ್ತು.

ದೇಶದ ಮಿಲಿಟರಿ ಇತಿಹಾಸದಲ್ಲಿ ಅವರದು ಲಾಂಛನ ಸಮಾನ ವ್ಯಕ್ತಿತ್ವ. 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಆಗತಾನೆ ರೆಕ್ಕೆ ಬಿಚ್ಚುತ್ತಿತ್ತು ಭಾರತೀಯ ವಾಯುಸೇನೆ. ಅರ್ಜನ್ ಆಗ 44ರ ಹರೆಯದ ಅಧಿಕಾರಿ. ಪಾಕಿಸ್ತಾನದ ಮೇಲೆ ಭಾರತದ ವಾಯುದಾಳಿಗೆ ಅವರೇ ಮುಂದಾಳು. ಹಲವು ಇತಿಮಿತಿಗಳ ನಡುವೆಯೂ ವಾಯುಸೇನೆಯನ್ನು ಹುರಿದುಂಬಿಸಿದ ಕಾದಾಳು. ಜೆಟ್ ತಂತ್ರಜ್ಞಾನ ಯುಗದ ‘ಚಿಟ್ಟೆಯಾಗಿ ರೂಪಾಂತರ’ ಹೊಂದಬೇಕಾಗಿದ್ದ 1950 ಮತ್ತು 60ರ ದಶಕಗಳಲ್ಲಿ ಭಾರತೀಯ ವಾಯುಸೇನೆ ಬಲುದೊಡ್ಡ ಸವಾಲನ್ನೇ ಎದುರಿಸಿತ್ತು. ವಾಯುಸೇನೆಯನ್ನು ಮುನ್ನಡೆಸಬೇಕಾದ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕ್ಯಾನ್ಬೆರಾ ಎಂಬ ಅಂದಿನ ಹೊಚ್ಚ ಹೊಸ ಜೆಟ್ ಬಾಂಬರ್ ವಿಮಾನ ಚಾಲನೆಯನ್ನು ಕರಗತ ಮಾಡಿಕೊಂಡಿದ್ದು ಅವರ ಕಾರ್ಯದಕ್ಷತೆ ಮತ್ತು ಸಮರ್ಪಣೆಗೆ ಹಿಡಿದ ಕನ್ನಡಿ. ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಸಿಬ್ಬಂದಿಯ ವಿಶ್ವಾಸ ಗಳಿಸಲು ಬೇಕೇ ಬೇಕಿದ್ದ ಕ್ಷೇತ್ರ ಮಟ್ಟದ ಅನುಭವವನ್ನು ಅವರು ಖುದ್ದು ಗಳಿಸಿಕೊಂಡಿದ್ದರು.

ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಲೈಯಾಲ್‌ಪುರ ಅವರು ಹುಟ್ಟಿದೂರು. 1919ರ ಏಪ್ರಿಲ್ 15ರಂದು ಜನನ. ತಂದೆ ತಾತ ಮುತ್ತಾತ ಎಲ್ಲರೂ ದಂಡಿನಲ್ಲಿ ಸೇವೆ ಸಲ್ಲಿಸಿದವರು. ಹತ್ತೊಂಬತ್ತರ ಹರೆಯದಲ್ಲೇ ಪೈಲಟ್ ತರಬೇತಿಗೆ ಆಯ್ಕೆಯಾದರು. ಬ್ರಿಟನ್‌ನ ಕ್ರ್ಯಾನ್ವೆಲ್ ರಾಯಲ್ ಏರ್ ಫೋರ್ಸ್ ಕಾಲೇಜಿನಲ್ಲಿ ಕಲಿತು ಪೈಲಟ್ ಅಧಿಕಾರಿಯಾಗಿ ವಾಯುಸೇನೆ ಸೇರಿದ್ದು 1938ರಲ್ಲಿ. 1964ರಿಂದ 1969ರ ತನಕ ಭಾರತೀಯ ವಾಯುಸೇನೆಯ ಮುಖ್ಯಸ್ಥರಾಗಿದ್ದರು. ಮೊದಲನೆಯ ವಿಶ್ವಯುದ್ಧದ ಕೊನೆಯ ದಿನಗಳಲ್ಲಿ ಹುಟ್ಟಿದ ಅರ್ಜನ್ ಸಿಂಗ್, ಎರಡನೆಯ ವಿಶ್ವಯುದ್ಧದ ಸಕ್ರಿಯ ಯೋಧ. ಹಲವು ಕಾರ್ಯಾಚರಣೆಗಳಲ್ಲಿ ತಮ್ಮ ದಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಅವರ ಎದೆಯನ್ನು ಅಲಂಕರಿಸಿದ ‘ಫ್ಲೈಯಿಂಗ್ ಕ್ರಾಸ್’ ಸಮ್ಮಾನ ಇಂದಿನ ಪರಮವೀರ ಚಕ್ರಕ್ಕೆ ಸಮಾನ. 1947ರ ಆಗಸ್ಟ್ 15ರ ಸ್ವಾತಂತ್ರ್ಯದ ಹೊಸ ಬೆಳಗಿನಂದು ದೆಹಲಿಯ ಕೆಂಪು ಕೋಟೆಯ ಮೇಲೆ ಹರ್ಷದಿಂದ ಹಾರಾಡಿದ ಭಾರತೀಯ ವಾಯುಸೇನೆಯ ನೂರು ವಿಮಾನಗಳ ನಾಯಕತ್ವದ ವಿಶಿಷ್ಟ ಗೌರವ ಅರ್ಜನ್ ಪಾಲಿಗೆ ಒದಗಿ ಬಂದಿತ್ತು. ಅರವತ್ತಕ್ಕೂ ಹೆಚ್ಚು ಬಗೆಯ ವಿಮಾನಗಳನ್ನು ಹಾರಿಸಿದ ಅಪರೂಪದ ಅನುಭವ ಅವರಿಗಿತ್ತು.

ಭಾರತೀಯ ವಾಯುಸೇನೆಯ ನಿವೃತ್ತ ಸಿಬ್ಬಂದಿಯ ಯೋಗಕ್ಷೇಮಕ್ಕೆಂದು ರಚಿಸಲಾದ ನ್ಯಾಸದ ಇಡುಗಂಟಿಗೆ ಎರಡು ಕೋಟಿ ರೂಪಾಯಿಗಳ ದೇಣಿಗೆ ನೀಡಿದರು. ದೆಹಲಿ ಹೊರವಲಯದ ತಮ್ಮ ಅಳಿದುಳಿದ ಕೃಷಿ ಜಮೀನನ್ನು ಮಾರಿ ಈ ಮೊತ್ತವನ್ನು ಸಂಗ್ರಹಿಸಿದ್ದರು. ಒಕ್ಕಲುತನ ಮಾಡುವ ಜಾಟ್ ಸಿಖ್ ಒಳಪಂಗಡಕ್ಕೆ ಸೇರಿದ ಅವರಿಗೆ ಜಮೀನಿನ ಜೊತೆ ಭಾವನಾತ್ಮಕ ನಂಟು ಕಡಿದುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ತಾತ ರಿಸಲ್ದಾರ್ ಮೇಜರ್ ಭಗವಾನ್ ಸಿಂಗ್ ಅವರಿಗೆ ಸೇರಿದ ಜಮೀನು ದೇಶವಿಭಜನೆಯ ನಂತರ ಪಾಕಿಸ್ತಾನದ ಪಾಲಾದ ಲಿಯಾಲ್‌ಪುರದಲ್ಲೇ (ಈಗಿನ ಫೈಸಲಾಬಾದ್)  ಉಳಿಯಿತು. ಅಂದ ಹಾಗೆ ಹುತಾತ್ಮ ಭಗತ್ ಸಿಂಗ್ ಮತ್ತು ಸುಖದೇವ್ ಇದೇ ಲಿಯಾಲ್‌ಪುರಕ್ಕೆ ಸೇರಿದವರಾಗಿದ್ದರು. ಪಂಜಾಬಿನ ಆದಂಪುರದ ಬಳಿ ಅರ್ಜನ್ ಕುಟುಂಬಕ್ಕೆ 80 ಎಕರೆ ಜಮೀನು ಹಂಚಿಕೆ ಮಾಡಲಾಗಿತ್ತು. ಕಟ್ಟಕಡೆಯ ಜಮೀನಿನ ತುಣುಕನ್ನು ಕಳೆದುಕೊಂಡ ನಂತರ ಹೃದಯ ಹಿಂಡಿಕೊಂಡು ಅವರು ಆಡಿದ ಮಾತು- ‘ಇನ್ನು ನಾನು ಜಾಟ್ (ಒಕ್ಕಲಿಗ) ಅಲ್ಲ’.

ವಿದೇಶಗಳಲ್ಲಿ ಭಾರತದ ರಾಜತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿದರು. ದೆಹಲಿಯ ಉಪರಾಜ್ಯಪಾಲರಾಗಿದ್ದರು. ಭಾರತೀಯ ವಾಯುಸೇನೆಯ ಮಾರ್ಷಲ್ ಪದವಿ ಅವರ ಮುಡಿಗೇರಿದ್ದು 2002ರಲ್ಲಿ. ಪತ್ನಿ ತೇಜಿ 2011ರಲ್ಲಿ ನಿಧನರಾದರು. ಮಗ ಅರವಿಂದ್ ಮತ್ತು ಮಗಳು ಆಶಾ ವಿದೇಶವಾಸಿಗಳು.

ಸೇನೆಯೆಂಬುದು ಪ್ರಭುತ್ವದ ಶಸ್ತ್ರಸನ್ನದ್ಧ ಬಾಹು, ಪ್ರಜೆಗಳ ನಡುವೆ ಬೆರೆತು ಬಾಳುವ ಅವಕಾಶ ಅದಕ್ಕಿಲ್ಲ. ಮಿಲಿಟರಿಯ ಮತ್ತೊಂದು ಜಗತ್ತಿನಲ್ಲಿ ಬದುಕುವವರು ಅರ್ಜನ್ ಸಿಂಗ್ ಅವರಂತಹ ‘ಪರಮ ವೀರಬಾಹು’ಗಳು. ಇಹವನ್ನು ತೊರೆಯುವ ತನಕ ಇಂತಹವರ ಇರವಿಗೆ ಹೊರಜಗತ್ತು ಬಹುತೇಕ  ನಿರ್ಲಿಪ್ತ ಎಂಬುದು ಕಟುಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.