ADVERTISEMENT

ಶನಿವಾರ, 16–12–1967

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಶನಿವಾರ, 16–12–1967
ಶನಿವಾರ, 16–12–1967   

ಮಹಾಜನ್ ವರದಿ ತೀರ್ಪಲ್ಲ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಡಿ. 15– ಮಹಾರಾಷ್ಟ್ರ–ಮೈಸೂರು–ಕೇರಳ ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿಯ ಬಗ್ಗೆ ಸರಕಾರದ ನಿರ್ಧಾರಕ್ಕೆ ಮುಂದೆ ರೂಪಿಸಲಾಗುವ ‘ರಾಷ್ಟ್ರೀಯ ಒಟ್ಟು ಅಭಿಪ್ರಾಯ’ವೇ ಆಧಾರ.

ADVERTISEMENT

ಈ ವಿಷಯವನ್ನು ಗೃಹಖಾತೆಯ ಸ್ಟೇಟ್ ಸಚಿವ ಶ್ರೀ ಶುಕ್ಲ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.

‘ಆಯೋಗದ ವರದಿಯೂ ಪಂಚಾಯ್ತಿದಾರರ ತೀರ್ಪಿನಂತಿಲ್ಲ. ಅದು ಶಿಫಾರಸಿನ ಸ್ವರೂಪದ್ದಾಗಿರುವುದು. ಈ ಶಿಫಾರಸನ್ನು ಸಂಸತ್ತು ಮತ್ತು ಸರಕಾರ ‘ತೂಕ’ ಮಾಡಿ ಅನಂತರ ತೀರ್ಮಾನಕ್ಕೆ ಬರಬೇಕಾಗಿದೆ’ ಎಂದು ಶ್ರೀ ಶುಕ್ಲ ಅವರು ಶ್ರೀ ಎ.ಡಿ. ಮಣಿ ಅವರಿಗೆ ಹೇಳಿದರು.

ಹಿಂದಿ ಚಳವಳಿ ಪರಿಣಾಮ ವಿವಾಹ ವಿಚ್ಛೇದನ

ಲಖನೌ, ಡಿ. 15– ಹಿಂದಿ ಚಳವಳಿಯ ಪರಿಣಾಮವಾಗಿ ಲಖನೌದಲ್ಲಿ ಅನೇಕ ವಿವಾಹ ವಿಚ್ಛೇದನ ಪ್ರಕರಣಗಳು ಸಂಭವಿಸಿವೆ. ಕಳೆದ ಕೆಲವು ದಿನಗಳ ಅವಧಿಯಲ್ಲಿ ವಿವಾಹ ವಿಚ್ಛೇದನಕ್ಕಾಗಿ ನಗರದ ನ್ಯಾಯಾಲಯಗಳಲ್ಲಿ ಸುಮಾರು ಹನ್ನೆರಡು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅಧಿಕೃತ ವಲಯವೊಂದು ತಿಳಿಸಿದೆ.

ಗಂಡಂದಿರ ಅಥವಾ ಪತ್ನಿಯರ ಹಿಂದಿ ವಿರೋಧಿ ಭಾವನೆಗಳ ಕಾರಣ ದಾಂಪತ್ಯ ಬಾಂಧವ್ಯಕ್ಕೆ ಧಕ್ಕೆಯುಂಟಾಗಿದೆ ಎಂಬುದೇ ಈ ಅರ್ಜಿಗಳಲ್ಲಿನ ಮುಖ್ಯ ಸಾರಾಂಶ.

ತನ್ನ ಗಂಡ ತನಗೆ ಚಿತ್ರಹಿಂಸೆ ಕೊಡುತ್ತಿದ್ದಾನೆಂದೂ ತನ್ನ ಗಂಡನ ಹಿಂದಿ ವಿರೋಧಿ ಭಾವನೆಗಳನ್ನು ಸಹಿಸುವುದು ತನಗೆ ಸಾಧ್ಯವಿಲ್ಲವೆಂದೂ, ಅದಕ್ಕಾಗಿ ತಾನು ವಿವಾಹ ವಿಚ್ಛೇದನ ಮಾಡಿಕೊಳ್ಳಲು ಬಯಸುವುದಾಗಿಯೂ ಮಹಿಳೆಯೊಬ್ಬಳು ತನ್ನ ಅರ್ಜಿಯಲ್ಲಿ ತಿಳಿಸಿದ್ದಾಳೆ.

ಹುಬ್ಬಳ್ಳಿ–ಕಾರವಾರ ರೈಲು ಮಾರ್ಗ: ರಾಜ್ಯ ಸರಕಾರದಿಂದ ಟ್ರಾಫಿಕ್ ಸರ್ವೆ

ಬೆಂಗಳೂರು, ಡಿ. 15– ಹುಬ್ಬಳ್ಳಿ– ಕಾರವಾರ ರೈಲು ಮಾರ್ಗದ ಬಗ್ಗೆ ರಾಜ್ಯ ಸರಕಾರವೇ ನಿವೃತ್ತ ರೈಲ್ವೆ ನೌಕರರೊಬ್ಬರ ನೆರವಿನಿಂದ ‘ಟ್ರಾಫಿಕ್ ಸರ್ವೆ’ ನಡೆಸಿದ್ದು, ಆ ಸಂಬಂಧದ ಪುಸ್ತಕ ಸಿದ್ಧವಾಗುತ್ತಿದೆಯೆಂದು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ರಾಜ್ಯದ ಯಾವ ರೈಲು ಮಾರ್ಗಗಳನ್ನೂ ತೆಗೆಯಬಾರದೆಂದು ಕೇಂದ್ರಕ್ಕೆ ತಿಳಿಸುವುದಲ್ಲದೆ ಇನ್ನೂ ಕೆಲವು ಹೊಸ ಮಾರ್ಗಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಅವುಗಳಲ್ಲಿ ಚಾಮರಾಜನಗರ–ಸತ್ಯಮಂಗಲ ಮಾರ್ಗವೂ ಸೇರಿದೆಯೆಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.