ADVERTISEMENT

ಸುಸಜ್ಜಿತ ಆಸ್ಪತ್ರೆ ಇಲ್ಲ, ಸಮಸ್ಯೆಯೇ ಎಲ್ಲ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:34 IST
Last Updated 16 ಡಿಸೆಂಬರ್ 2017, 19:34 IST
ಎಸ್‌.ಸುರೇಶ್‌ ಕುಮಾರ್‌ ಅವರು ಜನಸ್ಪಂದನದಲ್ಲಿ ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಾಲಿಕೆ ಸದಸ್ಯೆ ಪ್ರತಿಮಾ ಕೆ.ಎಸ್‌. ರಮೇಶ್‌, ಎಸಿಪಿ (ಸಂಚಾರ) ಬಿ.ಎ.ಜಗದೀಶ್‌, ಪಾಲಿಕೆ ಸದಸ್ಯೆ ದೀಪಾ ನಾಗೇಶ್‌, ಕಾರ್ಯಪಾಲಕ ಎಂಜಿನಿಯರ್‌ ಶಶಿಕುಮಾರ್‌, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ನಾಗರಾಜ್‌, ಆರೋಗ್ಯ ಅಧಿಕಾರಿ ಬಾಲಸುಂದರ ಇದ್ದಾರೆ
ಎಸ್‌.ಸುರೇಶ್‌ ಕುಮಾರ್‌ ಅವರು ಜನಸ್ಪಂದನದಲ್ಲಿ ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಾಲಿಕೆ ಸದಸ್ಯೆ ಪ್ರತಿಮಾ ಕೆ.ಎಸ್‌. ರಮೇಶ್‌, ಎಸಿಪಿ (ಸಂಚಾರ) ಬಿ.ಎ.ಜಗದೀಶ್‌, ಪಾಲಿಕೆ ಸದಸ್ಯೆ ದೀಪಾ ನಾಗೇಶ್‌, ಕಾರ್ಯಪಾಲಕ ಎಂಜಿನಿಯರ್‌ ಶಶಿಕುಮಾರ್‌, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ನಾಗರಾಜ್‌, ಆರೋಗ್ಯ ಅಧಿಕಾರಿ ಬಾಲಸುಂದರ ಇದ್ದಾರೆ   

ಬೆಂಗಳೂರು: ಕ್ಷೇತ್ರದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಕೊರತೆ ಇದೆ. ಒಂದೂ ಈಜುಕೊಳವಿಲ್ಲ. ರಾಮಮಂದಿರ ವಾರ್ಡ್‌ನ ಮೈದಾನ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ವಸತಿ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ವಾಣಿಜ್ಯ ಚಟುವಟಿಕೆ... ಪಾದಚಾರಿ ಮಾರ್ಗಗಳಲ್ಲಿ ಬೀದಿ ವ್ಯಾಪಾರಿಗಳ ಹಾವಳಿ...

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರ ದೂರುಗಳ ಪಟ್ಟಿ ಇದು. ‘ಪ್ರಜಾವಾಣಿ’ ಮತ್ತು ಡೆಕ್ಕನ್‌ಹೆರಾಲ್ಡ್‌ ಪತ್ರಿಕೆಗಳ ವತಿಯಿಂದ ಶನಿವಾರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ‘ಜನಸ್ಪಂದನ’ದಲ್ಲಿ ಸಾರ್ವಜನಿಕರು ಕ್ಷೇತ್ರದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಜನರ ಅಹವಾಲುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವುದಾಗಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಭರವಸೆ ನೀಡಿದರು.

ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆ ಕೊರತೆ ಇರುವುದರಿಂದ ಸಣ್ಣಪುಟ್ಟ ಕಾಯಿಲೆಗಳಿಗೂ ಖಾಸಗಿ ವೈದ್ಯರ ಬಳಿ ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಶ್ರೀರಾಮಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ವ್ಯವಸ್ಥೆ ಇಲ್ಲ ಎಂದು ಸಾರ್ವಜನಿಕರು ದೂರಿದರು.

ADVERTISEMENT

ಫ್ಲಾರೆನ್ಸ್‌ ಶಾಲೆಯ ಬಳಿಯ ಬಿಬಿಎಂಪಿ ವಾರ್ಡ್‌ ಕಚೇರಿಯಲ್ಲೇ ಆರೋಗ್ಯ ಕೇಂದ್ರವನ್ನು ಆರಂಭಿಸುವಂತೆ ರಘುನಂದನ್‌ ಸಲಹೆ ನೀಡಿದರು.

ವಾಣಿಜ್ಯ ಚಟುವಟಿಕೆಗೆ ಕಡಿವಾಣ ಹಾಕಿ: ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು ಎಂದು ಹೈಕೋರ್ಟ್‌ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ. ವಾಣಿಜ್ಯ ಮಳಿಗೆ ಸ್ಥಾಪಿಸಲು ಅಧಿಕಾರಿಗಳು ಕಣ್ಣುಮುಚ್ಚಿ ಪರವಾನಗಿ ನೀಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ನಮ್ಮನ್ನೇ ಅಲೆದಾಡಿಸುತ್ತಾರೆ ಎಂದು ವೆಂಕಟರಾಜ್‌ ಆಕ್ರೊಶ ವ್ಯಕ್ತಪಡಿಸಿದರು.

ಅವರನ್ನು ಸಮಾಧಾನ ಪಡಿಸಿದ ಶಾಸಕ, ‘ಕಚೇರಿಗೆ ಬನ್ನಿ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳೊಣ’ ಎಂದರು.

‘ನಗರ ಮಹಾ ಯೋಜನೆ 2031ರ ಕರಡಿನಲ್ಲಿ ವಸತಿ ಪ್ರದೇಶದಲ್ಲಿ ಕೆಲವು ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ. ಎಂತಹ ಮಳಿಗೆಗೆ ಅವಕಾಶ ನೀಡಬಹುದು ಎಂಬ ಬಗ್ಗೆ ನೀತಿ ರೂಪಿಸಬೇಕಾದ ಅಗತ್ಯ ಇದೆ’ ಎಂದು ಶಾಸಕರು ಅಭಿಪ್ರಾಯಪಟ್ಟರು.

ರಾಮಮಂದಿರ ವಾರ್ಡ್‌ನಲ್ಲಿ  ಮೈದಾನವಿದ್ದರೂ ಇಲ್ಲಿನ ಯುವಕರು ಆಡವಾಡಲು ಮಲ್ಲೇಶ್ವರ ಅಥವಾ ವಿಜಯನಗರ ಮೈದಾನಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲಿ ವ್ಯಾಯಾಮಶಾಲೆ ನಿರ್ಮಿಸಲಾಗಿದೆ. ಆದರೆ, ಅದಕ್ಕೆ  ₹ 250 ಶುಲ್ಕ ನೀಡಬೇಕು. ಇತ್ತೀಚೆಗೆ ಮಳೆ ಬಂದಾಗ ಮೈದಾನದಲ್ಲಿ ನೀರು ನಿಂತಿತ್ತು. ಇದನ್ನು ಅಭಿವೃದ್ಧಿಪಡಿಸಬೇಕು ಎಂದು ಜಯವರ್ಧನ ಒತ್ತಾಯಿಸಿದರು.

‘ಮೈದಾನದ ಬಳಿ ಸುಸಜ್ಜಿತ ಜಿಮ್‌, ಯೋಗ ಕೇಂದ್ರ, ಇ– ಗ್ರಂಥಾಲಯಗಳನ್ನು ಆರಂಭಿಸಿದ್ದೇವೆ.  ಜಿಮ್‌ಗೆ ಶುಲ್ಕ ರದ್ದುಪಡಿಸುವ ಬಗ್ಗೆ ಚರ್ಚಿಸಿ ತೀರ್ಮಾನಿಸೋಣ. ಮೈದಾನವನ್ನು ಇನ್ನಷ್ಟು ಯುವಜನಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳುತ್ತೇನೆ’ ಎಂದು ಶಾಸಕ ಭರವಸೆ ನೀಡಿದರು.

ಬಸವೇಶ್ವರನಗರದ ಬಳಿಯ ಅಂಬೇಡ್ಕರ್‌ ಮೈದಾನದಲ್ಲಿ ಈಜುಕೊಳ ಸ್ಥಾಪಿಸಲಾಗುತ್ತದೆ. ಗಾಯತ್ರಿದೇವಿ ಉದ್ಯಾನದ ಬಳಿಯೂ ಈಜುಕೊಳ ನಿರ್ಮಿಸುವ ಪ್ರಸ್ತಾವ ಇದೆ ಎಂದರು.

ಪಾದಚಾರಿ ಮಾರ್ಗ ಜನರ ಬಳಕೆಗಿಲ್ಲ: ಹಾವನೂರು ವೃತ್ತದ ಬಳಿ ಪಾದಚಾರಿ ಮಾರ್ಗಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ ಎಂದು ಶಿವಶಂಕರ್‌ ಗಮನಸೆಳೆದರು.  ವ್ಯಾಪಾರಿಗಳನ್ನು ಪ್ರಶ್ನಿಸಿದರೆ ನಮ್ಮ ಮೇಲೆಯೇ ಮುಗಿ ಬೀಳುತ್ತಾರೆ ಎಂದು ರಘುನಂದನ ಅಸಹಾಯಕತೆ ತೋಡಿಕೊಂಡರು.

ವಾಹನ ಚಾಲನಾ ತರಬೇತಿ ಸಂಸ್ಥೆಗಳ ವಾಹನಗಳನ್ನು ಪಾದಚಾರಿ ಮಾರ್ಗಗಳಲ್ಲೇ ನಿಲ್ಲಿಸಲಾಗುತ್ತದೆ. ಬಸವೇಶ್ವರನಗರದ 8ನೇ ಮುಖ್ಯರಸ್ತೆ ಬಳಿ ದೊನ್ನೆ ಬಿರಿಯಾನಿ ಅಂಗಡಿ ಬಳಿಯೇ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಇಲ್ಲಿ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಸಂಚಾರ ಪೊಲೀಸರು ಇದನ್ನೆಲ್ಲ ನೋಡಿಯೂ ಸುಮ್ಮನಿದ್ದಾರೆ ಎಂದು ಆರೋಪಿಸಿದರು.

ಬಾಷ್ಯಂ ವೃತ್ತದಿಂದ ರಾಮಮಂದಿರದವರೆಗಿನ ಪಾದಚಾರಿ ಮಾರ್ಗ ತಗ್ಗು ದಿಣ್ಣೆಗಳಿಂದ ಕೂಡಿದೆ ಎಂದು ಜನಾರ್ಧನ ಅವರು ದೂರಿದರು. ಇದನ್ನು ದುರಸ್ತಿಪಡಿಸುವುದಾಗಿ ಶಾಸಕ ಭರವಸೆ ನೀಡಿದರು.

6 ತಿಂಗಳಿಂದ ನೀರು ಬರುತ್ತಿಲ್ಲ
ನಮ್ಮ ಮನೆಯ ಆಸುಪಾಸಿನ ಏಳೆಂಟು ಮನೆಗಳಿಗೆ ಈ ಹಿಂದೆ ಚೆನ್ನಾಗಿ ನೀರು ಬರುತ್ತಿತ್ತು. ಎಲ್‌ ಆ್ಯಂಡ್‌ ಟಿ ಕಂಪೆನಿಯವರು ಹೊಸತಾಗಿ ಕೊಳವೆ ಮಾರ್ಗ ಅಳವಡಿಸಿದ ಬಳಿಕ ಆರು ತಿಂಗಳಿಂದ ನೀರು ಬರುತ್ತಿಲ್ಲ ಎಂದು ಜೀವನಹಳ್ಳಿಯ ಶ್ರೀಧರ್‌ ದೂರಿದರು.

ಒಂಬತ್ತು ತಿಂಗಳಿಂದ ಕಾವೇರಿ ನೀರು ಸರಬರಾಜು ಆಗುತ್ತಿಲ್ಲ. ಕೊಳವೆಬಾವಿ ನೀರು ಬಳಸುತ್ತಿದ್ದೇವೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು 4ನೇ ಬ್ಲಾಕ್‌ ನಿವಾಸಿ ಸ್ವಪ್ನಿಲ್‌ ಬೋರಗಾಂವ್ಕರ್‌  ಒತ್ತಾಯಿಸಿದರು.

ಸಿದ್ದರಾಮನ ದಿಣ್ಣೆ ಬಳಿ 50 ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. 2014ರಲ್ಲಿ ಹೊಸ ಕೊಳವೆಮಾರ್ಗ ಅಳವಡಿಸಿದ ಬಳಿಕ ನೀರಿನ ಸಂಪರ್ಕ ಕಡಿತಗೊಂಡಿದೆ. ನಮ್ಮ ಪಕ್ಕದ ಬಡಾವಣೆಗೆ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಸ್ಥಳೀಯರೊಬ್ಬರು ಅಳಲು ತೋಡಿಕೊಂಡರು.

ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಜಲಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಶಾಸಕ ಭರವಸೆ ನೀಡಿದರು.

ಉದ್ಯಾನಗಳ ನಿರ್ವಹಣೆಯನ್ನು ಸುಧಾರಿಸಬೇಕು ಎಂದು ಕೆಲವರು ಸಲಹೆ ನೀಡಿದರು. ‘ಹನುಮಂತ ದೇವಸ್ಥಾನ ವಾರ್ಡ್‌ನ ಉದ್ಯಾನದ ವಿದ್ಯುದ್ದೀಪಗಳು ಹಾಗೂ ಶೌಚಾಲಯ ಹದಗೆಟ್ಟಿವೆ. ಇಲ್ಲಿ ನಾಯಿಗಳ ಕಾಟ ಹಾಗೂ ಪೋಲಿ ಹುಡುಗರ ಹಾವಳಿ ಹೆಚ್ಚಾಗಿದೆ’ ಎಂದು ಮಾರುತಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನರಸಿಂಹನ್‌ ಗಮನ ಸೆಳೆದರು.

ಶಾಲೆ ಬಳಿ ಪುಂಡ ಪೋಕರಿಗಳ ಹಾವಳಿ
ಶಾಲೆಗಳ ಬಳಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಶಾಲೆ ಆರಂಭವಾಗುವ ಹಾಗೂ ಬಿಡುವ ಸಮಯದಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಬೇಕು ಎಂದು ದಯಾನಂದ ನಗರ ವಾರ್ಡ್‌ನ ಶಿವಲಿಂಗ ಒತ್ತಾಯಿಸಿದರು.

ರಾಮಮಂದಿರ ಸುತ್ತ ಮುತ್ತ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗವನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿದ್ದಾರೆ. ವಾಹನ ಸವಾರರ ಪಡಿಪಾಟಲು ಕೇಳುವವರಿಲ್ಲ. ಇಲ್ಲಿನ ಬಸ್‌ ಬೇನಲ್ಲಿ ರಿಕ್ಷಾ ನಿಂತಿರುತ್ತದೆ. ಹಾಗಾಗಿ, ಬಸ್‌ಗಳನ್ನು ರಸ್ತೆ ಮಧ್ಯೆಯೇ ನಿಲ್ಲಿಸುತ್ತಾರೆ ಎಂದು ವಿಜಯ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

‘ರಾಮಮಂದಿರ ವಾರ್ಡ್‌ನ ಕುಮಾರವ್ಯಾಸ ಮಂಟಪದಲ್ಲಿ ಪ್ರತಿ ದಿನ ಪ್ರವಚನ ನಡೆಯುತ್ತಿದೆ. ಇದನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ನೀವು ಇಲ್ಲಿ ಭರತನಾಟ್ಯ, ಯೋಗ ಕೇಂದ್ರ ಮಾಡುವುದು ಬೇಡ. ನೀವು ಬೇರೆ ಉದ್ದೇಶಕ್ಕೆ ಇದನ್ನು ಬಳಸುವುದಾದರೆ ನಿಮ್ಮ ಅನುದಾನವೇ ಬೇಕಾಗಿಲ್ಲ. ನಾವು ಭಿಕ್ಷೆ ಬೇಡಿ ಹಣಹೊಂದಿಸಿ ಮಂಟಪವನ್ನು ಉಳಿಸಿಕೊಳ್ಳುತ್ತೇವೆ’ ಎಂದು ಬಿ.ವಿ. ನರಸಿಂಹನ್‌ ಖಾರವಾಗಿ ಹೇಳಿದರು.

’ವಾರ್ಡ್‌ ಸಮಿತಿಗೂ ಮತದಾನ ನಡೆಯಲಿ’
ಪಾಲಿಕೆ ಸದಸ್ಯರು ಅವರಿಗೆ ಬೇಕಾದವರನ್ನು ನೇಮಿಸಿ ವಾರ್ಡ್‌ ಸಮಿತಿ ರಚಿಸಿದ್ದಾರೆ. ಇದು ಸರಿಯಲ್ಲ. ವಾರ್ಡ್‌ ಸಮಿತಿಗಳಿಗೂ ಚುನಾವಣೆ ನಡೆಸಬೇಕು ಎಂದು ಎ.ವಿ.ಆರ್‌.ಅಡಿಗ ಒತ್ತಾಯಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಶಾಸಕ, ‘ವಾರ್ಡ್‌ ಸಮಿತಿ ರಚಿಸುವ ಮೂಲ ಆಶಯ ಈಡೇರಿಲ್ಲ. ಹೈಕೋರ್ಟ್‌ ಕೂಡಾ ಪಾಲಿಕೆ ರಚಿಸಿರುವ ಸಮಿತಿಗಳ ಪಟ್ಟಿ ತರಿಸಿಕೊಂಡು ಪರಿಶೀಲಿಸುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ’ ಎಂದರು.

‘ರಸ್ತೆಯಲ್ಲಿ ನಾಯಿ ಮಲ ವಿಸರ್ಜನೆ– ದಂಡ ವಿಧಿಸಿ’
ನಾಯಿಗಳನ್ನು ಮಲ ಮೂತ್ರವಿಸರ್ಜನೆಗೆ ರಸ್ತೆಗಳಿಗೆ ಕರೆದೊಯ್ಯುತ್ತಾರೆ. ಅವುಗಳ ಮಲಮೂತ್ರದಿಂದಾಗಿ ರಸ್ತೆಗಳು ಗಲೀಜಾಗುತ್ತಿವೆ. ವಿಶೇಷ ಪರಿಕರವನ್ನು ಅಳವಡಿಸುವ ಮೂಲಕ ಅವುಗಳ ಮಲವನ್ನು ಸಂಗ್ರಹಿಸಿ ವಿಲೇವಾರಿ ಮಾಡಬಹುದು. ಈ ಪರಿಕರ ಕೇವಲ ₹ 600ಕ್ಕೆ ಸಿಗುತ್ತದೆ. ಲಕ್ಷಗಟ್ಟಲೆ ರೂಪಾಯಿ ಬೆಲೆಯ ನಾಯಿ ಸಾಕುವವರಿಗೆ ಈ ಮೊತ್ತ ಹೆಚ್ಚೇನಲ್ಲ. ಈ ಪರಿಕರ ಅಳವಡಿಕೆಯನ್ನು ಪಾಲಿಕೆ ಕಡ್ಡಾಯ ಮಾಡಬೇಕು ಎಂದು ಎ.ವಿ.ಆರ್‌ ಅಡಿಗೆ ಸಲಹೆ ನೀಡಿದರು.

‘ನಾಯಿ ಸಾಕಣೆಗೆ ಪಾಲಿಕೆ ನಿಯಮ ರೂಪಿಸುತ್ತಿದೆ. ರಸ್ತೆಗಳಲ್ಲಿ ಅವುಗಳಿಂದ ಶೌಚ ಮಾಡಿಸುವುದನ್ನು  ತಡೆಯುವಂತೆ ಬಿಬಿಎಂಪಿಗೆ ಮನವರಿಕೆ ಮಾಡುತ್ತೇನೆ’ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

‘ತೆಂಗಿನ ಮರಗಳು ಮನೆಯ ಕಾಂಪೌಂಡ್‌ನಿಂದ ಆಚೆ ಬರುವುದನ್ನು ನಿಯಂತ್ರಿಸಬೇಕು. ತಲೆ ಮೇಲೆ ತೆಂಗಿನ ಕಾಯಿ ಬಿದ್ದು ಒಬ್ಬರು ಕೋಮಾ ಹಂತ ತಲುಪಿದ ಉದಾಹರಣೆ ನಮ್ಮ ವಾರ್ಡ್‌ನಲ್ಲಿದೆ’ ಎಂದು ಅಡಿಗ ಗಮನ ಸೆಳೆದರು.

ಮೊದಲರಾತ್ರಿಗೆ ಶುಭ ಕೋರುವುದಕ್ಕೂ ಫ್ಲೆಕ್ಸ್‌!
ಕ್ಷೇತ್ರದಲ್ಲಿ ಫ್ಲೆಕ್ಸ್‌ ಹಾವಳಿ ವಿಪರೀತವಾಗಿದೆ. ಹುಟ್ಟಿದ ಹಬ್ಬಕ್ಕೂ ಫ್ಲೆಕ್ಸ್‌, ಶ್ರದ್ಧಾಂಜಲಿ ಸಲ್ಲಿಸುವುದಕ್ಕೂ ಫ್ಲೆಕ್ಸ್‌. ನವದಂಪತಿಯ ಮೊದಲರಾತ್ರಿಗೆ ಶುಭ ಕೋರಿ ಇತ್ತೀಚೆಗೆ ಒಬ್ಬರು ಫ್ಲೆಕ್ಸ್‌ ಹಾಕಿದ್ದರು. ಈ ಹಾವಳಿಗೆ ಕಡಿವಾಣ ಬೀಳುವುದು ಯಾವಾಗ ಎಂದು ಶಿವಶಂಕರ್‌ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ‘ಪಾಲಿಕೆ ಏಕೋ ಫ್ಲೆಕ್ಸ್‌ಗಳ ಬಗ್ಗೆ ಉದಾರಿಯಾಗಿದೆ. ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆಸುವಂತೆ ಹೈಕೋರ್ಟ್‌ ಸೂಚನೆ ನೀಡಿದ್ದರೂ ಅಧಿಕಾರಗಳು ಏಕೋ ಭಯಪಡುತ್ತಿದ್ದಾರೆ. ನಗರದ 1 ಕೋಟಿ ಜನರೂ ಹುಟ್ಟುಹಬ್ಬಕ್ಕೆ ಫ್ಲೆಕ್ಸ್‌ ಹಾಕಿದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ನಾಯಕರು ಯೋಚಿಸಬೇಕು. ನಾವು ಫ್ಲೆಕ್ಸ್‌ ವಿರೋಧಿಗಳು ಎಂಬ ಸಂದೇಶವನ್ನು ಜನರೇ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ನವರಂಗ್‌ ಬಾರ್‌ ಸ್ಥಳಾಂತರಿಸಿ’
ರಾಜಾಜಿನಗರದ ನಾಲ್ಕು ಪ್ರಮುಖ ರಸ್ತೆಗಳು ಕೂಡುವಲ್ಲಿ ನವರಂಗ್‌ ಬಾರ್‌ ಇದೆ. ಇಲ್ಲಿ ನಿಷೇಧವಿದ್ದರೂ ಬಾರ್‌ನ ಗಿರಾಕಿಗಳು ವಾಹನ ನಿಲ್ಲಿಸುತ್ತಾರೆ. ಕೆಲವರು ಪಾನಮತ್ತರಾಗಿ ಫುಟ್‌ಪಾತ್‌ನಲ್ಲಿ ಬಿದ್ದಿರುತ್ತಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಬಾರ್‌ ಸ್ಥಳಾಂತರ ಮಾಡಬೇಕು ಎಂದು ಡಿವೈಎಫ್‌ಐ ಸಂಘಟನೆಯ ಅನಂತಯ್ಯ, ವಿಶ್ವೇಶ ಹಾಗೂ ಜಯಶ್ರೀ ಒತ್ತಾಯಿಸಿದರು.

‘ಬಾರ್‌ ಬಳಿ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸುತ್ತೇವೆ. ಬಾರ್‌ ಸ್ಥಳಾಂತರದ ಬಗ್ಗೆ ಅಬಕಾರಿ ಇಲಾಖೆಗೆ ದೂರು ನೀಡಬೇಕು. ದೂರಿನ ಪ್ರತಿಯನ್ನು  ನಮಗೂ ನೀಡಿದರೆ ನಾವೂ ಶಿಫಾರಸು ಮಾಡುತ್ತೇವೆ. ಈ ಬಾರ್‌ ಸ್ಥಳಾಂತರಿಸುವ ಬಗ್ಗೆ ಅಬಕಾರಿ ಇಲಾಖೆ ನಮ್ಮ ಅಭಿಪ್ರಾಯವನ್ನೂ ಕೇಳುತ್ತದೆ. ಆಗ ನಾವು ಅದರಿಂದ ಜನರಿಗೆ ಆಗುವ ಸಮಸ್ಯೆ ಬಗ್ಗೆ ವಿವರಿಸುತ್ತೇವೆ’ ಎಂದು ಎಸಿಪಿ ಜಗದೀಶ್ ತಿಳಿಸಿದರು.

ಪಾಲಿಕೆ ಸದಸ್ಯರ ಗೈರು– ಜನರ ಆಕ್ರೋಶ
ಕ್ಷೇತ್ರದ ಎಲ್ಲ ಪಾಲಿಕೆ ಸದಸ್ಯರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಪ್ರಕಾಶ ನಗರ ವಾರ್ಡ್‌ನ ಜಿ.ಪದ್ಮಾವತಿ, ದಯಾನಂದನಗರ ವಾರ್ಡ್‌ನ ಕುಮಾರಿ ಪಳನಿಕಾಂತ, ರಾಜಾಜಿನಗರ ವಾರ್ಡ್‌ನ ಜಿ.ಕೃಷ್ಣಮೂರ್ತಿ, ಬಸವೇಶ್ವರ ನಗರ ವಾರ್ಡ್‌ನ ಉಮಾವತಿ ಪದ್ಮಾವತಿ ಹಾಗೂ ಶಿವನಗರ ವಾರ್ಡ್‌ನ ಮಂಜುಳಾ ವಿಜಯ ಕುಮಾರ್‌ ಸಭೆಯಲ್ಲಿ ಭಾಗವಹಿಸಲಿಲ್ಲ. ರಾಮಮಂದಿರ ವಾರ್ಡ್‌ನ ದೀಪಾ ನಾಗೇಶ್‌, ಕಾಮಾಕ್ಷಿಪಾಳ್ಯ ವಾರ್ಡ್‌ನ ಪ್ರತಿಮಾ ಆರ್‌. ಭಾಗವಹಿಸಿದರು.

‘ಜನಪ್ರತಿನಿಧಿಗಳನ್ನು ನೇರವಾಗಿ ಪ್ರಶ್ನಿಸಲು ಜನಸ್ಪಂದನ ವೇದಿಕೆ ಕಲ್ಪಿಸಿತ್ತು. ಈ ಬಗ್ಗೆ ಮುಂಚಿತವಾಗಿ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದರೂ ಪಾಲಿಕೆ ಸದಸ್ಯರು ತಪ್ಪಿಸಿಕೊಂಡಿದ್ದಾರೆ. ಜನರ ಸಮಸ್ಯೆ ಬಗೆಹರಿಸಲು ಅವರು ಎಷ್ಟು ಮಹತ್ವ ನೀಡುತ್ತಾರೆ ಎಂದು ಇದರಿಂದ ತಿಳಿಯುತ್ತದೆ’ ಎಂದು ವಿಶ್ವೇಶ್‌ ಆಕ್ರೋಶ ವ್ಯಕ್ತಪಡಿಸಿದರು.

‘ಬಿಬಿಎಂಪಿಯ ಸದಸ್ಯರು ಇಂತಹ ಕಾರ್ಯಕ್ರಮ ತಪ್ಪಿಸಿಕೊಂಡರೆ ಜನರಿಗೆ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಎಲ್ಲ ಸದಸ್ಯರೂ ಜನಸ್ಪಂದನದಲ್ಲಿ ಭಾಗವಹಿಸಬೇಕಿತ್ತು’ ಎಂದು ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಬಸವರಾಜ್‌ ಅವರೂ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.