ADVERTISEMENT

ಸೌಹಾರ್ದಕ್ಕೆ ಬೇಕಿದೆ ಸ್ವವಿಮರ್ಶೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಸೌಹಾರ್ದಕ್ಕೆ ಬೇಕಿದೆ ಸ್ವವಿಮರ್ಶೆ
ಸೌಹಾರ್ದಕ್ಕೆ ಬೇಕಿದೆ ಸ್ವವಿಮರ್ಶೆ   

–ವಿದ್ಯಾಧರ ರೈ ಎಂ.ಆರ್. ಐವನ್ ಎಫ್.ಲೋಬೊ

‘ಯಾರಿಗೆ ನೀಚ ಕಾರ್ಯವೆಂದರೆ ಹೇವರಿಕೆಯೋ, ಯಾರು ತನ್ನಂತೆಯೇ ಪರರನ್ನು ಕಾಣುತ್ತಾರೋ, ಯಾರಲ್ಲಿ ಮನೋನಿಗ್ರಹವಿದೆಯೋ ಅವರೇ ನೈಜವಾದ ಸುಶಿಕ್ಷಿತರು’. ಗಾಂಧಿಯವರ ‘ಹಿಂದ್ ಸ್ವರಾಜ್’ ಕೃತಿಯಲ್ಲಿರುವ ಈ ಅರಿವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸುಶಿಕ್ಷಿತರಿರುವ ಜಿಲ್ಲೆಗಳೆಂದು ಗುರುತಿಸಲಾಗುವ ಕರಾವಳಿ ಕರ್ನಾಟಕಕ್ಕೆ ಅನ್ವಯಿಸುವುದು ಹೇಗೆ? ಜೀವನೋಪಾಯಕ್ಕಾಗಿ ಗ್ರಾಮೀಣ ಭಾಗಗಳಿಂದ ನಗರಗಳಿಗೆ ಗಿರಕಿ ಹೊಡೆಯುವ ಜನಸಾಮಾನ್ಯರಲ್ಲಿಕರಾವಳಿ ಕರ್ನಾಟಕದ ಮತಾಂಧತೆ ಹೇವರಿಕೆ ಹುಟ್ಟಿಸುತ್ತಿದೆಯೇ? ಅಸಹ್ಯವಾದರೂ ಬಹಿರಂಗವಾಗಿ ಪ್ರತಿರೋಧಕ್ಕೆ ಮುಂದಾಗದ ಮಡಿವಂತಿಕೆಯನ್ನುಏನೆಂದು ಅರ್ಥೈಸಬೇಕು? ಒಂದು ಮತದ ಅಮಾಯಕರು– ಅನುಯಾಯಿಗಳು ಕೊಲೆಯಾದರೆ ಪ್ರತೀಕಾರಕ್ಕಾಗಿ ಮತ್ತೊಂದು ಮತದ ಅಮಾಯಕರು–ಅನುಯಾಯಿಗಳು ಹತ್ಯೆಯಾಗಬೇಕೆಂಬ ವಿತಂಡ ವಾದ ಈ ಜಿಲ್ಲೆಗಳಲ್ಲಿ ಸಾರ್ವತ್ರೀಕರಣಗೊಳ್ಳುತ್ತಿದೆಯೇ?

ಗಾಂಧೀಜಿ ಕಗ್ಗೊಲೆಯಿಂದ ಗೌರಿ ಲಂಕೇಶ್‍ರ ಅಮಾನುಷ ಹತ್ಯೆವರೆಗೆ ನೆಲಮೂಲದ, ಸಾಂವಿಧಾನಿಕ ಪ್ರಣೀತ ಮೌಲ್ಯಗಳಾದ ಬಹುತ್ವ ಪರಂಪರೆಗಳನ್ನು ಪ್ರತಿಪಾದಿಸುವವರನ್ನು, ಬಹುರೂಪಿ ಸ್ತರಗಳಲ್ಲಿ ದೇಶಪ್ರೇಮವನ್ನು ವ್ಯಕ್ತಪಡಿಸುವವರನ್ನು, ವಿಕೇಂದ್ರಿತ ರಾಷ್ಟ್ರೀಯತೆಯನ್ನು ಅಪ್ಪಿಕೊಂಡವರನ್ನು, ಸಾಮಾಜಿಕ ಅನಿಷ್ಟಗಳ ಕುರಿತು ಧ್ವನಿ ಎತ್ತುವವರನ್ನು ಮೆಕಾಲೆ ಸಂತತಿಯವರೆಂದು ಹಳಿಯಲಾಗುತ್ತಿದೆ. ಅತಿರೇಕದ ರಾಷ್ಟ್ರೀಯತೆಯ ಆವೇಶ ಯಾವ ಹಂತಕ್ಕೆ ಮುಟ್ಟಿದೆಯೆಂದರೆ, ‘ದೇಶದ್ರೋಹಿಗಳೆಂಬ ಹಣೆಪಟ್ಟಿಯನ್ನು ಕಟ್ಟಿಯಾರು’ ಎಂಬ ಭೀತಿಯಿಂದ ಧೈರ್ಯಸ್ಥ ಸಜ್ಜನರು ಕೂಡ ಮುಕ್ತವಾಗಿ ಮಾತನಾಡದೆ ಮೌನಕ್ಕೆ ಶರಣಾಗುವ ಸನ್ನಿವೇಶ ನಿರ್ಮಾಣಗೊಂಡಿದೆ.

ADVERTISEMENT

‘ಏಕ ಮತವಿದ್ದರೇನೇ ಒಂದು ರಾಷ್ಟ್ರ ಎಂಬುವುದು ಲೋಕದಲ್ಲಿ ಎಲ್ಲಿಯೂ ಇಲ್ಲ’. ‘ಹಿಂದ್ ಸ್ವರಾಜ್’ ಕೃತಿಯಲ್ಲಿಉಲ್ಲೇಖಿತವಾದ ಈ ಲೋಕಜ್ಞಾನ, ಕರಾವಳಿ ಕರ್ನಾಟಕದಲ್ಲಿ ಯಾವ ರೀತಿ ಧ್ವನಿಸುತ್ತದೆ? ಒಂದೇ ಮತದ ಏಕಸ್ವಾಮ್ಯವಿರಬೇಕು, ಎಲ್ಲರೂ ಒಂದೇ ವೈರಿಯನ್ನು ದ್ವೇಷಿಸಬೇಕೆಂಬ ಅತಿರೇಕವೇ ಇಲ್ಲಿ ಪ್ರವಹಿಸುತ್ತಿರುವಾಗ, ಒಂದು ಮತ, ಒಂದು ಭಾಷೆ, ಒಂದು ವೈರಿ– ಎಂಬ ಬಗೆಯ ರಾಷ್ಟ್ರೀಯತೆಯು ವಸಾಹತುಶಾಹಿ ಪ್ರಣೀತ ಆಧುನಿಕತೆಯ ಬಳುವಳಿಯೆಂದು ತಿಳಿಹೇಳುವುದಾದರೂ ಹೇಗೆ? ಇದನ್ನೇ ಪ್ರತಿಪಾದಿಸುವವರು ಯಾವಪರಂಪರೆಯ ವಾರಸುದಾರರೆಂದು ಬಿಡಿಸಿಹೇಳುವುದಾ
ದರೂ ಹೇಗೆ?

‘ಭಾರತದ ಮಣ್ಣಿಗೆ, ಜೀವನಕ್ಕೆ ಎಲ್ಲವನ್ನೂ ಹೀರಿಕೊಳ್ಳುವ ಗುಣವಿದೆ’- ‘ಹಿಂದ್ ಸ್ವರಾಜ್’ ಕೃತಿಯಲ್ಲಿಗಾಂಧೀಜಿ ಭಾರತವನ್ನು ಗ್ರಹಿಸುವ ರೀತಿಯಿದು. ಕರಾ
ವಳಿ ಕರ್ನಾಟಕದಲ್ಲಿ ಯಾರು ಯಾವುದನ್ನು ಹೀರಿಕೊಂಡು ಬೆಳೆಯುತ್ತಿದ್ದಾರೆಂಬುದು ನಮಗೆ ಮನವರಿಕೆಯಾಗುತ್ತದೆ. ಈ ನೆಲದ ಮಹಾಜನ ಪರಂಪರೆಯವರು ವಿಜ್ಞಾನ-ತಂತ್ರಜ್ಞಾನ ಮಿಲನದ ಬಂಡವಾಳಶಾಹಿ ತೇರನ್ನು ಬಹುಜನರಿಂದ ಎಳೆಸುತ್ತಾ, ಪ್ರದರ್ಶನದ ಅಧ್ಯಾತ್ಮವನ್ನು ಬಂಡವಾಳಶಾಹಿ ಆರ್ಥಿಕತೆಯೊಂದಿಗೆ ಸಮೀಕರಿಸುವ ಪ್ರಹಸನದಲ್ಲಿ ತೊಡಗಿದ್ದಾರೆ. ಆತ್ಮವಿಮರ್ಶೆಗೆ ಮುಂದಾಗಿರುವವರನ್ನೇ ಗ್ರಹಣಬಾಧಿತರಾಗಿಸಿದ್ದಾರೆ. ಕರಾವಳಿಯ ನೆಲದಲ್ಲಿ ವೈರಿಗಳನ್ನು ಗುರುತಿಸುವುದು, ಗೆಳೆಯರನ್ನು ಕಂಡುಕೊಳ್ಳುವುದೇ ದುಸ್ತರವಾಗಿದೆ.

ಗಾಂಧಿ ಮುಂದಾಳತ್ವದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಬೆಳಕಿಗೆ ಬಂದ ಜಾತಿ-ಲಿಂಗ ಶೋಷಣೆಗಳ ನಿವಾರಣೆ, ಸಾಂವಿಧಾನಿಕ ದೇಶಪ್ರೇಮ, ಅಹಿಂಸೆ, ಮತೀಯ ಸಾಮರಸ್ಯ ಹಾಗೂ ಆರ್ಥಿಕ ಸ್ವಾವಲಂಬನೆಯ ಗುಣಲಕ್ಷಣಗಳು ಸೂರ್ಯಸ್ವಷ್ಟವಾಗಿವೆ. ಇದನ್ನು ನೇಪಥ್ಯಕ್ಕೆ ಸರಿಸಿ ಅತಿರೇಕದ ರಾಷ್ಟ್ರೀಯತೆಯ ಗುಣಲಕ್ಷಣಗಳಾದ ‘ನಮ್ಮ ಮತ– ಸಂಸ್ಕೃತಿಯೇ ಶ್ರೇಷ್ಠ’ ಎನ್ನುವ ಮತಿಹೀನ ವೈಭವೀಕರಣ, ವ್ಯಕ್ತಿಪೂಜೆ (ನಾಯಕ ಪೂಜೆ), ಮತ-ಸಂಸ್ಕೃತಿಯಲ್ಲಿರುವ ದೋಷಗಳನ್ನು ಒರೆಗಲ್ಲಿಗೆ ಹಚ್ಚುವವರನ್ನು ಅವರ ಇಂಗಿತವನ್ನರಿಯದೇಮೆಕಾಲೆ ಸಂತಾನದವರೆಂದು ಬಿಂಬಿಸಲಾಗುತ್ತಿದೆ. ಪ್ರತಿರೋಧ ಒಡ್ಡುವವರನ್ನು ದಾಂದಲೆ, ಹಿಂಸೆಯ ಮೂಲಕ ಮುಗಿಸುವ ಹುನ್ನಾರಗಳನ್ನು ಹೆಣೆಯಲಾಗುತ್ತದೆ. ಹಿಂದ್ ಸ್ವರಾಜ್‍ನಲ್ಲಿ ಹೇಳಲಾದ ‘ಒಳಿತಿನ
ಪ್ರಭಾವವು ಜನರ ಮೇಲೆ ಆಗಲು ಸಮಯ ಹಿಡಿಯುತ್ತದೆ, ಪಾಪಕ್ಕೆ ಅಸಂಖ್ಯಾತ ರೆಕ್ಕೆಗಳಿವೆ’ ಎಂಬ ಮಾತನ್ನು ಸಾರ್ವಕಾಲಿಕ ಸತ್ಯವಾಗಿಸಲು ಶ್ರಮಿಸಲಾಗುತ್ತಿದೆ.

ಕರಾವಳಿ ಕರ್ನಾಟಕಕ್ಕೆ ಕಾಲಿಟ್ಟ ನಾರಾಯಣಗುರು, ಜಾತಿ ಶೋಷಣೆಯ ಕರಾಳತೆಯಲ್ಲಿ ಆತ್ಮವಿಮರ್ಶೆಗೈದ ಕುದ್ಮುಲ್ ರಂಗರಾವ್, ‘ಚೋಮನ ದುಡಿ’ಯನ್ನು ಬೆಳಕಿಗೆ ತಂದ ಶಿವರಾಮ ಕಾರಂತ, ಬೀಡಿ ಕಾರ್ಮಿಕರನ್ನು ಸಂಘಟಿಸಿ ಅವರ ನೋವಿಗೆ ಊರುಗೋಲಾದ ಬಿ.ವಿ.ಕಕ್ಕಿಲ್ಲಾಯ... ಇವರೆಲ್ಲರೂ ನಮ್ಮ ಕರಾವಳಿಯ ನೆಲದವರೇ ಎಂದು ಪ್ರಶ್ನಿಸುವ ಮಟ್ಟಕ್ಕೆ ನಾವು ಮೌನಿಗಳಾದರೆ ನಮ್ಮನ್ನು ಎಚ್ಚರಿಸುವ ಚಿಂತನೆಗಳು-ಕ್ರಿಯೆಗಳು ಇವೆಯೇ?

ತಮ್ಮ ಅರಿವಿಗೆ ಬಾರದೆಯೇ ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳನ್ನು ಕಲಿಯುತ್ತಿದ್ದ– ಬೆರೆಯುತ್ತಿದ್ದ ಕರಾವಳಿಗರು, ಜೆಸಿಬಿ, ಮೊಬೈಲ್, ಬೋರ್‌ವೆಲ್, ಇಂಟರ್‌ನೆಟ್, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಏಕೆ ಸಂಕುಚಿತರಾಗುತ್ತಿದ್ದಾರೆ? ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳಲಾಗದ ಮನಸ್ಥಿತಿಗೆ ಏಕೆ ತಲುಪಿದ್ದಾರೆ?

ಕರಾವಳಿಯಲ್ಲಿ ಈ ತನಕ ಘಟಿಸಿದ ಮತೀಯ ಹಿಂಸೆ, ಕೋಮುದಳ್ಳುರಿಗಳ ಪಾಪಗಳನ್ನು ತೊಳೆಯಲು ಸಾಧ್ಯವಾಗದಿರಬಹುದು. ಆದರೆ ಸುಶಿಕ್ಷಿತರೆಂದು ಕರೆದುಕೊಳ್ಳುವ ನಮ್ಮ ನೆಲದಲ್ಲಿ ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡು, ಮೂಲ ಕಾರಣವನ್ನು ಗುರುತಿಸಿ ಒಪ್ಪಿಕೊಂಡು ನಾಚಿಕೊಂಡರೆ, ಹೊಸ ನಾಡೊಂದನ್ನು ಸೌಹಾರ್ದದ ತಳಹದಿಯಲ್ಲಿ ಮರುನಿರ್ಮಿಸಬಹುದಲ್ಲವೇ? ಆ ಮರುನಿರ್ಮಾಣಕ್ಕೆ ಬೇಕಾಗುವ ಮೂಲದ್ರವ್ಯಗಳು ನಮ್ಮ ನೆಲದಲ್ಲಿಯೇ ಇವೆಯಲ್ಲವೇ?

ಭಾರತದ ನೆಲಕ್ಕೆ ಎಲ್ಲವನ್ನೂ ಹೀರಿಕೊಂಡು ಅರಗಿಸಿಕೊಳ್ಳುವ ಪರಂಪರೆಯಿದೆ. ಆದರೆ ಕರಾವಳಿ ಕರ್ನಾಟಕವು ಸಂಪ್ರದಾಯದ ಹುಳುಕುಗಳ ಜತೆ ಆಧುನಿಕತೆಯ ವಿಕಾರಗಳನ್ನು ಅತಿರೇಕದ ನೆಲೆಯಲ್ಲಿ ಆವಾಹಿಸಿಕೊಳ್ಳುತ್ತಿದೆ. ಸ್ವವಿಮರ್ಶೆಯ ಅಸ್ತ್ರದಿಂದಲೇ ಕರಾವಳಿ ನೆಲವೆಂಬ ಬಿದಿರ ಮೆಳೆಯನ್ನು ಬಿಡಿಸಿ, ಬೆಳಕಿನ ಕಿರಣಗಳು ಪ್ರಕಾಶಿಸುವಂತೆ ರೂಪಿಸಲು ಸಾಧ್ಯ ಎಂಬುವುದನ್ನು ಬಹಿರಂಗವಾಗಿ, ನಿರ್ಭೀತ ಧ್ವನಿಯಲ್ಲಿ ಸಾರಿ ಹೇಳಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.