ADVERTISEMENT

ಬಜೆಟ್ ಸೂಚಿಸುವ ಆರ್ಥಿಕ ನೀತಿ

ಅರವಿಂದ ಚೊಕ್ಕಾಡಿ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ಒಕ್ಕೂಟ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿರುವ ಬಜೆಟ್, ಮಧ್ಯಮ ವರ್ಗವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಇದೆ. ಆದಾಯ ತೆರಿಗೆ‌ ಮಿತಿಯಲ್ಲಿ ಯಾವ ಹೆಚ್ಚಳವನ್ನೂ ಮಾಡದಿರುವುದು ಇದುವರೆಗೆ ಪಾಲಿಸುತ್ತಾ ಬಂದ, ಬಹುಸಂಖ್ಯೆಯ ಮಧ್ಯಮ ವರ್ಗವನ್ನು ಎದುರುಹಾಕಿಕೊಳ್ಳದೆ ಇರುವ ನೀತಿಗೆ ವಿರುದ್ಧವಾದದ್ದು. ಏನೇ ಆದರೂ ಇದು ಓಲೈಕೆಯ ಬಜೆಟ್ ಅಲ್ಲ. ಆದರೆ ಬಜೆಟ್ ನಿರ್ಮಿಸಲು ಹೊರಟಿರುವ ಆರ್ಥಿಕ ರಚನೆ ಏನು ಎಂಬುದು ಅಸ್ಪಷ್ಟ. ನೋಟು ರದ್ದತಿ ಮೂಲಕ ಹಿಂತೆಗೆದುಕೊಂಡ ನಗದು ಹಣವನ್ನು ಮತ್ತೆ ಚಲಾವಣೆಗೆ ತರಬೇಕಾದರೆ ಮಧ್ಯಮ ವರ್ಗದವರಲ್ಲಿರುವ ಹಣ ಹೆಚ್ಚೆಚ್ಚು ಚಲಾವಣೆಗೆ ಬರುವಂತೆ ಮಾಡಬೇಕು. ಆದಾಯ ತೆರಿಗೆ ಮಿತಿ ಹೆಚ್ಚಳ, ಮಧ್ಯಮ ವರ್ಗ ಹೆಚ್ಚಾಗಿ ಬಯಸುವ ಮೊಬೈಲ್ ಫೋನ್‌ನಂತಹ ವಸ್ತುಗಳ ಮೇಲೆ ತೆರಿಗೆ ಇಳಿಕೆಯಂತಹ ಕ್ರಮಗಳನ್ನು ತೆಗೆದುಕೊಂಡಾಗ ಹಣದ ಚಲಾವಣೆ ಜಾಸ್ತಿಯಾಗುತ್ತದೆ. ಆದರೆ ಬಜೆಟ್ ಇದಕ್ಕೆ ವಿರುದ್ಧವಾದ ನಿಲುವನ್ನು ಕಳೆದ ಮೂರು ವರ್ಷಗಳಿಂದಲೂ ತೆಗೆದುಕೊಳ್ಳುತ್ತಾ ಬಂದಿದೆ. ಮೇಲುವರ್ಗದ ಪರವಾಗಿಯೂ, ಕೆಳವರ್ಗಕ್ಕೆ ಭಾಗಶಃ ಪರವಾಗಿಯೂ ಬಜೆಟ್ ನಿಂತುಕೊಳ್ಳುತ್ತದೆ.

ಆದರೆ ಇಲ್ಲಿಯೂ ಒಂದು ಭಿನ್ನ ಧೋರಣೆ ಇದೆ. ಸಾಂಪ್ರದಾಯಿಕವಾಗಿ ಕೆಳವರ್ಗಕ್ಕೆ ಕೊಡುಗೆಗಳ ರೂಪದಲ್ಲಿಯೂ, ಮೇಲುವರ್ಗಕ್ಕೆ ಬೆಂಬಲದ ರೂಪದಲ್ಲಿಯೂ ಬಜೆಟ್‌ಗಳು‌ ನಿಂತುಕೊಳ್ಳುತ್ತವೆ. ಆದರೆ ಈ ಬಜೆಟ್ ಹಾಗಲ್ಲ. ಮೇಲುವರ್ಗಕ್ಕೆ ಕೊಡುಗೆಯ ರೂಪದಲ್ಲಿಯೂ ಕೆಳವರ್ಗಕ್ಕೆ ಬೆಂಬಲದ ರೂಪದಲ್ಲಿಯೂ ನಿಂತುಕೊಳ್ಳುತ್ತದೆ ಇದು. ಬೆಂಬಲದ ರೂಪದಲ್ಲಿ ನಿಲ್ಲುವುದರಿಂದ, ಅದನ್ನು ಪಡೆಯುವ ವರ್ಗ ಸರ್ಕಾರದ ಅವಲಂಬಿಯಾಗದೆ ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಈ ಕಾಳಜಿ ಅರ್ಥವಾಗುತ್ತದೆ. ಆದರೆ ಮೇಲುವರ್ಗಕ್ಕೆ ಕೊಡುಗೆಯ ರೂಪದಲ್ಲಿ ಯಾಕೆ ಹೋಗುತ್ತಿದೆ ಎಂದು ಅರ್ಥ ಆಗುವುದಿಲ್ಲ. ಮೇಲುವರ್ಗಕ್ಕೆ ಬಜೆಟ್ ಅನುಕೂಲ ಮಾಡಿಕೊಡುವುದರ ಅರ್ಥ ಕೃಷಿಯೇತರ ಉತ್ಪಾದನೆಗಳು ಹೆಚ್ಚಬೇಕೆನ್ನುವುದು. ಉತ್ಪಾದನೆ ಹೆಚ್ಚಬೇಕಾದರೆ ಹೂಡಿಕೆ ಜಾಸ್ತಿಯಾಗಬೇಕು. ಒಟ್ಟಾರೆ ಹೂಡಿಕೆ ಕಡಿಮೆಯಾಗಿರುವ ಕಾರಣ ಇದು ಸರಿಯಾದ ನಿಲುವೇ ಆಗಿದೆ.

ಆದರೆ ಕೊಂಡುಕೊಳ್ಳುವವರಿದ್ದಾಗ ಮಾತ್ರ ಹೂಡಿಕೆ ಜಾಸ್ತಿಯಾಗುತ್ತದೆ. ಮಧ್ಯಮ ವರ್ಗದವರ ಕೈಯಲ್ಲಿ ಹಣ ಚಲಾವಣೆಗೆ ಬಾರದಂತೆ ತಡೆದಷ್ಟೂ ಮಾರುಕಟ್ಟೆಯಲ್ಲಿ ಕೊಳ್ಳುವ ಕಾರ್ಯ ಕಡಿಮೆಯಾಗುತ್ತದೆ. ಆಗ ಹೂಡಿಕೆಗೆ ಮಾರುಕಟ್ಟೆಯ ಆಕರ್ಷಣೆ ಉಳಿಯಲು ಸಾಧ್ಯವಿಲ್ಲ. ಹಾಗಿದ್ದರೆ ಏನು? ಇಲ್ಲಿ ಆರ್ಥಿಕ ಚರ್ಚೆಗೆ ಪರಿಗಣಿಸಬಾರದ ಸಂಗತಿಯೊಂದನ್ನು ಪ್ರಸ್ತಾಪಿಸಬೇಕು. ನಿಜವಾಗಿ ಆರ್ಥಿಕ ಚರ್ಚೆಗೆ ರಾಜಕೀಯ ನಡೆಯನ್ನು ಪರಿಗಣಿಸಬಾರದು. ಬಜೆಟ್ ಏನು ಎಂಬುದಕ್ಕೆ ಬಜೆಟ್ಟೇ ಆಧಾರವಾಗಿರಬೇಕು ಹೊರತು ಸಚಿವರ ಮಾತುಗಳಲ್ಲ. ಆದರೆ ಇಲ್ಲಿನ ಅಸ್ಪಷ್ಟತೆಯ ಕಾರಣದಿಂದ ಪ್ರಧಾನ ಮಂತ್ರಿಯವರ ಮಾತುಗಳನ್ನು ಪರಿಗಣಿಸಬೇಕಾಗಿದೆ. ಪ್ರಧಾನಿಯವರು ಬಳಸುವ ಪಕೋಡ, ಟೊಮೆಟೊ, ಈರುಳ್ಳಿ ಎನ್ನುವಂತಾದ್ದನ್ನೆಲ್ಲ ಸಂಕೇತಗಳೆಂದು ಭಾವಿಸಬಹುದಾದರೆ ಉತ್ಪಾದನೆಗಳು ಕೆಳವರ್ಗದಿಂದಲೇ ನಡೆದು ಮಾರುಕಟ್ಟೆಗೆ ಬರಬೇಕು ಮತ್ತು ಅದರಿಂದ ದೇಶೀಯ ಉತ್ಪಾದನೆಯ ಒಂದು ಆರ್ಥಿಕ ರಚನೆ ನಿರ್ಮಾಣವಾಗಬೇಕೆಂದು ಸರ್ಕಾರ ಭಾವಿಸುತ್ತಿದೆ ಅಂದುಕೊಳ್ಳಬಹುದು. ಆಗ ಮೇಲುವರ್ಗಕ್ಕೆ ಕೊಡುಗೆಯನ್ನು ಕೊಟ್ಟೂ ಹೂಡಿಕೆ ಹೆಚ್ಚದಂಥ ಸನ್ನಿವೇಶವನ್ನು ಏಕೆ ನಿರ್ಮಿಸಲಾಗುತ್ತಿದೆ ಎನ್ನುವುದು ಅರ್ಥವಾಗುತ್ತದೆ.

ADVERTISEMENT

ಆದರೆ ಪ್ರಧಾನ ಮಂತ್ರಿಯವರ ಹೇಳಿಕೆ ಸರ್ಕಾರದ ಕಾರ್ಯಕ್ರಮವಾಗುವುದಿಲ್ಲ. ಸರ್ಕಾರದ ಕ್ರಮಗಳು ಆಡಳಿತಾತ್ಮಕವಾಗಿ ಬರಬೇಕಾಗುತ್ತದೆ. ಮುಖ್ಯವಾಗಿ ಬ್ಯಾಂಕಿಂಗ್ ಕ್ಷೇತ್ರವು ಕೆಳವರ್ಗಕ್ಕೆ ಪ್ರೋತ್ಸಾಹಕಾರಿಯಾಗಿರಬೇಕಾಗುತ್ತದೆ. ಆದರೆ ಆ ರೀತಿಯ ಆಡಳಿತಾತ್ಮಕ ಕ್ರಮಗಳು ಕಾಣಿಸುತ್ತಿಲ್ಲ. ಅದೇಕೊ ಪ್ರಸ್ತುತ ಸರ್ಕಾರ ಆಡಳಿತಾತ್ಮಕವಾಗಿ ನಿಗ್ರಹಿಸಬೇಕಾದ ಭ್ರಷ್ಟಾಚಾರದಂತಹ ಸಮಸ್ಯೆಯನ್ನೂ ನೋಟು ರದ್ದತಿಯಂತಹ ಆರ್ಥಿಕ ಕ್ರಮಗಳ ಮುಖಾಂತರವೇ ನಿಗ್ರಹಿಸಲು ಹೊರಟಿತ್ತು. ಆದರೆ ಆರ್ಥಿಕ ಕ್ರಮಗಳಿಗೆ ಪೂರಕವಾಗಿ ಆಡಳಿತಾತ್ಮಕ ಕ್ರಮಗಳು ಚಾಲನೆಗೆ ಬಾರದಿದ್ದರೆ ಉದ್ದೇಶಿತ ಆರ್ಥಿಕ ರಚನೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ದೇಶೀಯ ಉತ್ಪಾದನೆಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿಸುವ ಇರಾದೆ ಸರ್ಕಾರಕ್ಕಿದ್ದರೆ ಬಹಳ ಪ್ರಶಂಸನೀಯವಾದ ವಿಚಾರ ಅದು.

ಭಾರತದಲ್ಲಿ ಸ್ಥಾಪಿತ ಆರ್ಥಿಕ ರಚನೆಯನ್ನು ಪರಿವರ್ತಿಸಲು ಬಯಸುವ ಯಾವುದೇ ಸರ್ಕಾರ ಎದುರಿಸುವ ಬಹಳ ದೊಡ್ಡ ಸಮಸ್ಯೆ ಬಡವರನ್ನು ಗುರುತಿಸುವುದು. ಯಾರು ಬಡವರು ಎಂದು ಗುರುತಿಸಲು ಇರುವ ಆದಾಯದ ಮಾನದಂಡವು ಸಾರ್ವತ್ರಿಕವಾಗಿ ಸತ್ಯಕ್ಕೆ ದೂರವಾದ ದಾಖಲೆಯನ್ನು ಸೃಷ್ಟಿ ಮಾಡುತ್ತಾ ಹೋಗಿದೆ. ಭಾರತದಲ್ಲಿ ಆಹಾರ ಪಡೆಯುವ ಶಕ್ತಿಯೇ ಇಲ್ಲದ ಪರಿಪೂರ್ಣ ಬಡತನಕ್ಕಿಂತ, ‘ಐದು ಸಾವಿರ ರೂಪಾಯಿ ಸಂಪಾದಿಸುವವನಿಗಿಂತಲೂ ಐನೂರು ರೂಪಾಯಿ ಸಂಪಾದಿಸುವವ ಬಡವನಾಗಿರುತ್ತಾನೆ’ ಎನ್ನುವ ಸಾಪೇಕ್ಷ ಬಡತನ ಜಾಸ್ತಿ ಇದೆ ಎಂದು ಊಹಿಸಬಹುದು.

ಆರ್ಥಿಕ ರಚನೆಯ ಮರು ನಿರೂಪಿಸುವಿಕೆಗೆ ಸಾಮಾಜಿಕ ಸಂಗತಿಗಳ ತೊಡಕು ಇದೆ. ಮೊದಲನೆಯದು ಜಾತಿ-ಧರ್ಮಗಳ ನೆಲೆಯಲ್ಲಿ ಉದ್ಭವಿಸಿರುವ ಆರ್ಥಿಕ ಹಿನ್ನಡೆಯ ಅಂಶಗಳು ರಾಷ್ಟ್ರದಾದ್ಯಂತ ಏಕರೂಪಿಯಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಅವುಗಳ ಪ್ರಭಾವದ ತೀಕ್ಷ್ಣತೆಯಲ್ಲಿ ವ್ಯತ್ಯಾಸವಿದೆ. ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಇದನ್ನು ಅಂದಾಜಿಸಲು ಸಾಧ್ಯ. ಎರಡನೆಯದು ಬಡತನದ ಮೇಲೆ ಪ್ರಭಾವ ಬೀರುವ ಲಿಂಗ ಆಧಾರಿತ ಅಂಶಗಳು. ಕೃಷಿ ಕ್ಷೇತ್ರದಲ್ಲಿ ಇದು ಪ್ರಾದೇಶಿಕ, ಧರ್ಮ ಮತ್ತು ಜಾತಿ ಆಧಾರಿತ ಭಿನ್ನತೆಯನ್ನೂ, ಉಳಿದಂತೆ ವಲಯ ಆಧಾರಿತ ಭಿನ್ನತೆಯನ್ನೂ ಹೊಂದಿದೆ. ಈ ಎಲ್ಲ ಅಂಶಗಳನ್ನು ಆಡಳಿತಾತ್ಮಕವಾಗಿ ಸ್ಪಷ್ಟಪಡಿಸಿಕೊಳ್ಳದೆ ಕೆಳವರ್ಗವನ್ನು ಉತ್ಪಾದನಾ ಪ್ರಕ್ರಿಯೆಯ ಕಡೆಗೆ ಚಲನೆಗೆ ಒಡ್ಡಲು ಆಗುವುದಿಲ್ಲ. ಆದರೆ ಈ ರೀತಿಯ ಆಡಳಿತಾತ್ಮಕ ಪ್ರಯತ್ನವೂ ಕಾಣಿಸುತ್ತಿಲ್ಲ.

ಸ್ಥಾಪಿತ ಆರ್ಥಿಕ ರಚನೆಯನ್ನು ಬದಲಾಯಿಸಬೇಕು ಎಂಬ ತುಡಿತ ಬಜೆಟ್‌ನಲ್ಲಿ ಕಾಣಿಸುತ್ತದೆ. ಆ ತುಡಿತ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸುತ್ತಿಲ್ಲ. ತೆರಿಗೆಯ ಮೂಲಗಳನ್ನು ಸರ್ಕಾರ ಹೆಚ್ಚಿಸಿಕೊಂಡಿದ್ದು ಸರ್ಕಾರದ ಆದಾಯ ಜಾಸ್ತಿಯಾಗುತ್ತದೆ ಎನ್ನಲಾಗುತ್ತಿದೆಯೇ ಹೊರತು ಯಾವುದರಿಂದ ಎಷ್ಟು ಆದಾಯ ಜಾಸ್ತಿಯಾಯಿತು ಮತ್ತು ಜಾಸ್ತಿಯಾದ ಆದಾಯವನ್ನು ಯಾವುದಕ್ಕಾಗಿ ಖರ್ಚು ಮಾಡಲು ಸರ್ಕಾರ ಉದ್ದೇಶಿಸಿದೆ ಎನ್ನುವುದರ ಊಹಾತ್ಮಕ ಚಿತ್ರಣವನ್ನು ಕೂಡ ರಾಷ್ಟ್ರಕ್ಕೆ ಒದಗಿಸಿಲ್ಲ. ಅಂದರೆ ಸರ್ಕಾರ ಆರ್ಥಿಕ ವಿಚಾರದಲ್ಲಿ ಆಯಾ ಸಂದರ್ಭದ ಅಗತ್ಯಕ್ಕನುಗುಣವಾಗಿ ಬೇಕಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವ ಸನ್ನಿವೇಶವನ್ನು ಉಳಿಸಿಕೊಳ್ಳಲು ಬಯಸಿದೆ ಎಂದು ಅರ್ಥ. ‘ಮರ್ಕೆಂಟಾಲಿಸಂ’ ಎಂಬ ಆರ್ಥಿಕ ರಚನೆಯ ವಿನ್ಯಾಸ ಈ ಬಗೆಯದು. ಆದರೆ ಮರ್ಕೆಂಟಾಲಿಸಂನಲ್ಲಿ ಕಾನೂನುಗಳು ಬಹಳ ದುರ್ಬಲವಾಗುತ್ತವೆ. ಮರ್ಕೆಂಟಾಲಿಸಂನಂಥ ವ್ಯವಸ್ಥೆ ಒಂದು ಸಣ್ಣ ದೇಶವನ್ನು ನಿರ್ವಹಿಸಬಲ್ಲುದೇ ಹೊರತು ಭಾರತದಂತಹ ದೊಡ್ಡ ದೇಶವನ್ನಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜಾರಿಯಲ್ಲಿರುವ ಸಂವಿಧಾನವು ಬೇಕಾದಾಗ ಬೇಕಾದ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲು ಸಂಸತ್ತಿಗೂ ಅಧಿಕಾರವನ್ನು ಕೊಡುವುದಿಲ್ಲ.

ಬಜೆಟ್‌ನಲ್ಲಿ ಖಂಡಿತವಾಗಿಯೂ ಕೆಲವು ಆಶಯಗಳು ಕಾಣಿಸುತ್ತವೆ. ಕಳೆದ ಮೂರು ಬಜೆಟ್‌ಗಳಲ್ಲೂ ಅವು ಒಂದೇ ಸ್ವರೂಪದಲ್ಲಿದ್ದು ಯಾರನ್ನೂ ಓಲೈಸುವುದಿಲ್ಲವೆಂಬ ದಿಟ್ಟ ನಿರ್ಧಾರದ ರೂಪದಲ್ಲೇ ಇವೆ ಎನ್ನುವುದು ಸರ್ಕಾರ ಏನೋ ಒಂದಕ್ಕೆ ಬದ್ಧವಿದೆ ಎಂಬುದನ್ನು ಹೇಳುತ್ತದೆ. ಆದರೆ ಆಶಯಗಳ ಈಡೇರಿಕೆಯ ವಿಧಾನಗಳು ಮಾತ್ರ ಕಾಣಿಸುವುದಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.