ADVERTISEMENT

ಚಪಾತಿ, ಮುದ್ದೆಗೆ ‘ಅನ್ನಪೂರ್ಣಿ’

ಮಂಜುಶ್ರೀ ಎಂ.ಕಡಕೋಳ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಚಪಾತಿ, ಮುದ್ದೆಗೆ ‘ಅನ್ನಪೂರ್ಣಿ’
ಚಪಾತಿ, ಮುದ್ದೆಗೆ ‘ಅನ್ನಪೂರ್ಣಿ’   

ಆರಂಭದ ದಿನಗಳಲ್ಲಿ ಎದುರಿಸಿದ ಸಮಸ್ಯೆಗಳೇನು?
ನಾನು ಹೋಟೆಲ್ ನಡೆಸುತ್ತಿರುವ ಇದೇ ಜಾಗದಲ್ಲಿ ಹಿಂದೆ ಎರಡು ಹೋಟೆಲ್‌ಗಳು ಲಾಭವಿಲ್ಲದೇ ಮುಚ್ಚಿಹೋಗಿದ್ದವು. ನಾನು ‘ಅನ್ನಪೂರ್ಣಿ ಗ್ರಾಂಡ್’ ಆರಂಭಿಸಿದಾಗ ನನ್ನ ಕಥೆಯೂ ಅದೇ ಆಗಬಹುದು ಅಂತ ಅನೇಕರು ಅಂದುಕೊಂಡಿದ್ದರು. ನಾನು ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಗೆದ್ದೆ. ಹೋಟೆಲ್ ಉದ್ಯಮ ಮಹಿಳೆಯರಿಗೆ ಕಷ್ಟ ಅಂತ ಅನೇಕರು ಹೇಳ್ತಾ ಇದ್ರು. ಆದರೆ, ವಾಸ್ತವ ಅದಲ್ಲ. ಉದ್ಯಮ ಯಾವುದೇ ಆದರೂ, ಮಹಿಳೆಯರಿಗೆ ಒಳ್ಳೆಯ ಜನಬೆಂಬಲ ಸಿಗುತ್ತದೆ. ಇದು ನನ್ನ ಅನುಭವದ ಮಾತು. ಸಾಮಾನ್ಯವಾಗಿ ಹೋಟೆಲ್ ಆರಂಭಿಸಿದಾಗ ಸಿಬ್ಬಂದಿ ಸಮಸ್ಯೆ ಆಗುತ್ತದೆ. ಅದೃಷ್ಟವಶಾತ್ ನನಗೆ ಅದು ಎದುರಾಗಲಿಲ್ಲ.

ಗ್ರಾಹಕರು ಏನು ಬಯಸುತ್ತಾರೆ ಎಂಬುದನ್ನು ಹೇಗೆ ಕಂಡುಕೊಳ್ತೀರಿ?
ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಸತ್ಕಾರ ಮಾಡುವುದು ಭಾರತೀಯ ಸಂಪ್ರದಾಯ. ಅದನ್ನು ನಾನು ಹೋಟೆಲ್‌ನಲ್ಲೂ ಪಾಲಿಸ್ತೀನಿ. ನನಗೆ ಇದು ಹೋಟೆಲ್ ಅನ್ನುವುದಕ್ಕಿಂತ ನನ್ನ ಪರಿವಾರ ಅನ್ಸುತ್ತೆ. ಗ್ರಾಹಕರು ಯಾರೇ ಆಗಿರಲಿ ಕೆಲವೊಮ್ಮೆ ನಾನೇ ಬಡಿಸ್ತೀನಿ. ಅವರ ಬಳಿ ಉಪ್ಪು, ಹುಳಿ, ಖಾರ ಸರಿಯಾಗಿದೆಯೇ ಎಂದು ಕೇಳುವೆ. ಅವರು ನೀಡಿದ ಸಲಹೆಗಳನ್ನೂ ಅಳವಡಿಸಿಕೊಳ್ತೀನಿ. ನಮ್ಮ ಹೋಟೆಲ್‌ಗೆ ಬರುವ ಗ್ರಾಹಕರು ‘ಬೇರಾವ ಹೋಟೆಲ್‌ನಲ್ಲೂ ಮಾಲೀಕರು ಬಂದು ಬಡಿಸಲ್ಲ. ಫೀಡ್ ಬ್ಯಾಕ್ ಕೇಳಲ್ಲ. ನೀವು ಮಾತ್ರ ಕೇಳ್ತೀರಿ ಮೇಡಂ’ ಅಂತ ಹೇಳ್ತಾರೆ.

ನಿಮ್ಮ ಯಶಸ್ಸಿನ ಗುಟ್ಟೇನು?
ಸಾಮಾನ್ಯವಾಗಿ ಈ ಉದ್ಯಮದಲ್ಲಿ ಯಶಸ್ಸಿನ ಗುಟ್ಟು ಬಿಟ್ಟು ಕೊಡುವವರು ವಿರಳ. ಮಹಿಳೆಯರು ಸ್ವಚ್ಛತೆ ವಿಷಯವನ್ನು ಸರಿಯಾಗಿ ಪರಿಪಾಲಿಸುತ್ತಾರೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಈ ನಂಬಿಕೆಯೇ ನನ್ನ ಯಶಸ್ಸಿನ ಗುಟ್ಟು. ನಮ್ಮ ಹೋಟೆಲ್‌ನಲ್ಲಿ ಮಾಗಡಿಯ ಗಂಗಮ್ಮ ಅವರು ಏಕಕಾಲಕ್ಕೆ 300 ಜನರಿಗೆ ಆಗುವಷ್ಟು ನಾಟಿ ಚಿಕನ್, ಗ್ರೇವಿ, ಮುದ್ದೆ ತಯಾರಿಸುತ್ತಾರೆ. ಅವರೇ ನಮ್ಮ ಶಕ್ತಿ. ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿದ್ದರೆ ರುಚಿ–ಶುಚಿ ತಾನಾಗೇ ಬರುತ್ತೆ.

ADVERTISEMENT

ನಿಮ್ಮ ಹೋಟೆಲ್‌ನ ವೈಶಿಷ್ಟ್ಯವೇನು?
ನಮ್ಮದು ತುಂಬಾ ಸರಳವಾಗಿರುವ ಹೋಟೆಲ್. ರುಚಿ–ಶುಚಿಗೆ ಆದ್ಯತೆ. ಯಾವಾಗಲೂ ಹಿನ್ನೆಲೆಯಲ್ಲಿ ಮಧುರವಾದ ಚಿತ್ರಗೀತೆಗಳನ್ನು ಹಾಕಿರ್ತೀವಿ. ಅದು ಗ್ರಾಹಕರ ಮನಸಿಗೆ ಹಿತ ನೀಡುತ್ತೆ. ಸಂಗೀತ ಕೇಳುತ್ತಾ ಊಟ ಮಾಡುವ ಅವರು ಎಷ್ಟೊಂದು ಖುಷಿ ಪಡ್ತಾರೆ ಗೊತ್ತಾ? ನಮ್ಮಲ್ಲಿ ಒಂದು ಅಡುಗೆಗೆ ಬಳಸಿದ ಎಣ್ಣೆಯನ್ನು ಬೇರೆ ಅಡುಗೆಗೆ ಬಳಸಲ್ಲ. ಬಹಳಷ್ಟು ಜನರು ದೂರದಿಂದ ನಮ್ಮ ಹೋಟೆಲ್‌ನ ಚಪಾತಿ ಮತ್ತು ಮುದ್ದೆ ಊಟಕ್ಕೆಂದೇ ಬರ್ತಾರೆ. ಆಂಧ್ರ ಮತ್ತು ಮರಾಠ ಶೈಲಿಯ ಊಟ ನಮ್ಮ ವಿಶೇಷ. ಯಾವ ಅಡುಗೆಗೂ ಕೃತಕ ಬಣ್ಣ, ಸುಗಂಧ ಬಳಸೋಲ್ಲ. ಒಮ್ಮೆ ಊಟ ಮಾಡಿದವರು ಮತ್ತೆಮತ್ತೆ ಬರ್ತಾರೆ.


ವಿಮಲಾ ಕಿಶೋರ್

ಈಗ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇದೆಯೇ?
ಖಂಡಿತಾ ಇದೆ. ಹೋಟೆಲ್‌ನಿಂದ 30 ಕುಟುಂಬ ಬದುಕುತ್ತಿದೆ. ಅವರು ನನ್ನ ಸಿಬ್ಬಂದಿ ಅನ್ನುವುದಕ್ಕಿಂತ ನಮ್ಮ ಕುಟುಂಬದವರು ಅಂತ ಭಾವಿಸ್ತೀನಿ. ನಿತ್ಯವೂ 300 ಮಂದಿಗೆ ರುಚಿಶುಚಿಯಾದ ಊಟ ಕೊಡ್ತಾ ಇದ್ದೀನಿ ಅನ್ನುವ ತೃಪ್ತಿ ಇದೆ

ನಿಮ್ಮಿಷ್ಟದ ಅಡುಗೆ ಯಾವುದು?
ನಮ್ಮ ಹೋಟೆಲ್‌ನಲ್ಲಿ ನನಗೆ ಚಪಾತಿ ಮತ್ತು ಕಾಳು ಸಾರು ಇಷ್ಟ. ನಿತ್ಯವೂ ನನಗೆ ಪ್ರಿಯವಾದ ಮಟನ್ ಚಾಪ್ಸ್ ತಿನ್ನೋದನ್ನು ತಪ್ಪಿಸಲ್ಲ. ಮನೆಯಲ್ಲಿ ನನಗೋಸ್ಕರ ಅಡುಗೆ ಮಾಡಲ್ಲ. ಗಂಡ ಮಕ್ಕಳಿಗೆ ಇಷ್ಟವಾದ ಅಡುಗೆ ಮಾಡ್ತೀನಿ. ಅದನ್ನೇ ನಾನು ಎಂಜಾಯ್ ಮಾಡ್ತೀನಿ.

ನಿಮ್ಮ ಈ ಸಾಹಸಕ್ಕೆ ಯಾರು ಪ್ರೇರಣೆ?
ನಮ್ಮೆಜಮಾನ್ರು ಕಿಶೋರ್. ಅವರಿಗೆ ನನ್ನ ಅಡುಗೆ ಅಂದ್ರೆ ತುಂಬಾ ಇಷ್ಟ. ಅವರೊಮ್ಮೆ ಇಂಥ ಊಟ ಗಾಂಧಿನಗರದಲ್ಲಿ ಜನಸಾಮಾನ್ಯರಿಗೂ ಸಿಗುವಂತಿದ್ದರೆ ಎಷ್ಟು ಚೆಂದ ಅಂತ ಹೇಳಿದ್ರು. ಅವರ ಈ ಮಾತಿನಿಂದಲೇ ಪ್ರೇರಣೆ ಪಡೆದು ಹೋಟೆಲ್ ಆರಂಭಿಸಿದೆ. ನನ್ನೆಲ್ಲಾ ಕೆಲಸಗಳಿಗೆ ಕಿಶೋರ್ ಮತ್ತು ಮಕ್ಕಳು ಪ್ರೋತ್ಸಾಹ ನೀಡ್ತಾರೆ.

ಸಂಪರ್ಕಕ್ಕೆ: 9449054363
***
ಗೌರವಿಸಿ, ಸಂಭ್ರಮಿಸಿ
ನಾನು ಹೆಣ್ಣಾಗಿರುವ ಬಗ್ಗೆ ನನಗೆ ಪ್ರತಿಕ್ಷಣವೂ ಹೆಮ್ಮೆ ಇದೆ. ಪ್ರತಿಜನ್ಮವೂ ಹೆಣ್ಣಾಗಿಯೇ ಹುಟ್ಟಬೇಕೆಂಬ ಆಸೆ ನನ್ನದು. ನಗರದಲ್ಲಿ ಲಿಂಗ ಸಮಾನತೆ ಇಲ್ಲ ಅಂತ ತುಂಬಾ ಜನ ಹೇಳ್ತಾ ಇರ್ತಾರೆ. ಆದರೆ, ನನಗೆ ಆ ಅನುಭವ ಆಗಿಲ್ಲ. ನನ್ನೊಂದಿಗೆ ತುಂಬಾ ಮಂದಿ ಒಳ್ಳೆಯತನದಿಂದಲೇ ನಡೆದುಕೊಂಡಿದ್ದಾರೆ. ನಮ್ಮ ಹೋಟೆಲಿಗೆ ಬರುವ ಎಷ್ಟೋ ಪುರುಷರು ತಮ್ಮ ಕುಟುಂಬದ ಮಹಿಳೆಯರು ಮತ್ತು ಮಕ್ಕಳನ್ನು ಕರೆದುಕೊಂಡು ಬಂದು ನನಗೆ ಪರಿಚಯಿಸುತ್ತಾರೆ. ನನ್ನ ಯಶಸ್ಸಿನ ಕಥೆ ನೋಡಿ ಕಲಿಯಲು ಹೇಳುತ್ತಾರೆ. ನಮ್ಮ ಸಮಾಜದಲ್ಲಿ ಗಂಡು ಹೆತ್ತವರು ಬಾಲ್ಯದಿಂದಲೇ ತಮ್ಮ ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಕಲಿಸಿಕೊಡಬೇಕು. ಆಗ ತನ್ನಿಂತಾನೇ ಬದಲಾವಣೆಯಾಗುತ್ತೆ.
***
ಕಪ್ಪು ಹೆಣ್ಣು ಅಂತ ನೋಡಲು ಬಂದಿರಲಿಲ್ಲ!
ನಮ್ಮದು ದೊಡ್ಡ ಕುಟಂಬ. ನನ್ನಪ್ಪ ಅಮ್ಮನಿಗೆ ಮೊದಲೆರಡು ಹೆಣ್ಣುಮಕ್ಕಳು. ಮೂರನೆಯದು ಗಂಡಾಗುತ್ತೆ ಅಂತ ಕುಟುಂಬದ ಹಿರಿಯರು ಭಾವಿಸಿದ್ದರು. ಆದರೆ, ಆಗ ನಾನು ಹುಟ್ಟಿದೆ. ನೋಡಲು ಕಪ್ಪಾಗಿದ್ದ ನನ್ನನ್ನು ನೋಡಲು ನಮ್ಮ ತಾತಾ ಬಂದಿರಲ್ಲವಂತೆ!. ಆಗ ನನ್ನಮ್ಮನಿಗೆ ಅಪ್ಪ ‘ನೀನು ಯೋಚಿಸಬೇಡ. ಎಲ್ಲಾ ಮಕ್ಕಳನ್ನೂ ಚೆನ್ನಾಗಿ ಬೆಳೆಸೋಣ’ ಅಂತ ಧೈರ್ಯ ತುಂಬಿದರಂತೆ. ನಿಜ ಹೇಳಬೇಕೆಂದರೆ ಅಪ್ಪ ನನ್ನನ್ನು ಗಂಡುಮಗನಂತೆ ಬೆಳೆಸಿದರು. ಹೆಚ್ಚು ಓದಿರದ ಅವರು ಎಲ್ಲಾ ಹೆಣ್ಣುಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸಿದರು. ಎಲ್ಲೇ ಹೋಗಲಿ ಜತೆಗೆ ನನ್ನನ್ನು ಕರೆದೊಯ್ಯುತ್ತಿದ್ದರು. ಅವರ ವ್ಯಕ್ತಿತ್ವವೇ ನನಗೆ ಸ್ಫೂರ್ತಿ. ನನ್ನ ಯಶಸ್ಸು ನೋಡಿ ಅವರೀಗ ತುಂಬಾ ಸಂತಸ ಪಡ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.