ADVERTISEMENT

‘ಆಶಾ’ ಕಾರ್ಯಕರ್ತರೊಂದಿಗೆ ಒಂದು ದಿನ

ಜಯಸಿಂಹ ಆರ್.
Published 8 ಮಾರ್ಚ್ 2018, 3:23 IST
Last Updated 8 ಮಾರ್ಚ್ 2018, 3:23 IST
‘ಆಶಾ’ ಕಾರ್ಯಕರ್ತರೊಂದಿಗೆ ಒಂದು ದಿನ
‘ಆಶಾ’ ಕಾರ್ಯಕರ್ತರೊಂದಿಗೆ ಒಂದು ದಿನ   

ಹಿಂದಿನ ದಿನವೇ ‘ಆಶಾ’ಳಿಗೆ ಕರೆ ಮಾಡಿದ್ದೆ, ‘ನಾಳೆ ಬರುತ್ತೇನೆ’ ಎಂದು ಹೇಳಲು.

‘ಸರಿ ಸರ್, ಬನ್ನಿ. ನಾಳೆ ಫೀಲ್ಡ್‌ವರ್ಕ್ ಇದೆ. ನೀವೂ ಎಲ್ಲಾ ನೋಡ್ಬೊದು’ ಎಂದು ತಮ್ಮೂರಿನ ವಿಳಾಸ ನೀಡಿದ್ದರು ಆಶಾ.

ಅವರು ಹೇಳಿದ್ದ ಊರಿನ ಹೆಸರನ್ನು ಗೂಗಲ್ ನ್ಯಾವಿಗೇಟರ್‌ನಲ್ಲಿ ಟೈಪಿಸಿ ಹುಡುಕಿದೆ. ನಮ್ಮ ಕಚೇರಿಯಿಂದ 69 ಕಿ.ಮೀ. ದೂರವಿತ್ತು ಆ ಹಳ್ಳಿ. ಮನೆಯಿಂದ ಹೊರಡಬೇಕೆಂದರೆ ಎರಡು ದಾರಿಗಳನ್ನು ಗೂಗಲ್ ನ್ಯಾವಿಗೇಟರ್ ಶಿಫಾರಸು ಮಾಡುತ್ತಿತ್ತು. ಒಂದು ಮನೆಯಿಂದ ಉತ್ತರಕ್ಕೆ ಹೊರಟು ಮಾಗಡಿ ರಸ್ತೆ ಹಿಡಿದು, ಹತ್ತಾರು ಕಿ.ಮೀ. ಕ್ರಮಿಸಿದ ನಂತರ ಮತ್ತೆ ದಕ್ಷಿಣಕ್ಕೆ ತಿರುಗಬೇಕಿತ್ತು. ಮತ್ತೊಂದು ಮನೆಯಿಂದ ದಕ್ಷಿಣಕ್ಕೆ ಹೊರಟು ಮೈಸೂರು ರಸ್ತೆ ಹಿಡಿದು, ಹತ್ತಾರು ಕಿ.ಮೀ. ಕ್ರಮಿಸಿದ ಮೇಲೆ ಉತ್ತರಕ್ಕೆ ತಿರುಗಬೇಕಿತ್ತು. ಎರಡೂ ಮಾರ್ಗಗಳಲ್ಲಿ ಹೋದರೂ ಪ್ರಯಾಣದ ಅವಧಿ ಎರಡು ತಾಸು, ಇಪ್ಪತ್ತು ನಿಮಿಷ ಬೇಕು ಎಂದು ನ್ಯಾವಿಗೇಟರ್ ಹೇಳುತ್ತಿತ್ತು. ನಾನು ಉತ್ತರಕ್ಕೆ ಹೋಗಿ ದಕ್ಷಿಣಕ್ಕೆ ತಿರುಗುವ ಮಾರ್ಗವನ್ನೇ ಹಿಡಿದೆ.

ADVERTISEMENT

ಮಾಗಡಿ ರಸ್ತೆಯಲ್ಲಿ ಕ್ರಮಿಸಿ ದಕ್ಷಿಣಕ್ಕೆ ತಿರುಗಿದಾಗ ಮತ್ತೊಂದು ರಾಜ್ಯ ಹೆದ್ದಾರಿಯತ್ತ ಮುಖ ಮಾಡಿದ್ದೆ. ಆ ಹೆದ್ದಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದುಹೋಗಲಿತ್ತು. ಅಲ್ಲಿಂದ ಸ್ವಲ್ಪ ದೂರ ಮುಂದೋಗುವಷ್ಟರಲ್ಲೇ ನೆಟ್‌ವರ್ಕ್ ಮೊಬೈಲ್‌ಗೆ ಎಟುಕದಂತಾಯಿತು. ನ್ಯಾವಿಗೇಟರ್‌ನಲ್ಲಿ ಮ್ಯಾಪ್ ಲೋಡ್ ಆಗಿದ್ದ ಕಾರಣ ಆ ಹಳ್ಳಿ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಹೆದ್ದಾರಿಯಲ್ಲಿ ಒಂದೆಡೆ ಎಡಕ್ಕೆ ತಿರುಗಬೇಕು ಎಂದು ಅದು ಹೇಳುತ್ತಿತ್ತು. ಅದೊಂದು ಪುಟ್ಟ ಹಳ್ಳಿ. ಆದರೆ ಡಾಂಬರು ರಸ್ತೆ ಇತ್ತು. ಆದರೆ ನಾನು ಹೋಗಬೇಕಿದ್ದ ಹಳ್ಳಿ ಅದಕ್ಕಿಂತಲೂ ಮುಂದಿತ್ತು. ಅಲ್ಲಿಗೆ ಡಾಂಬರು ರಸ್ತೆ ಇರಲಿಲ್ಲ. ಮಣ್ಣಿನ ರಸ್ತೆಯ್ಲೇ ಮುಕ್ಕಾಲು ಕಿ.ಮೀ. ಕ್ರಮಿಸಿದ ಮೇಲೆ ‘ಯು ರೀಚ್ಡ್ ಯುವರ್ ಡೆಸ್ಟಿನೇಷನ್’ ಎಂದು ನ್ಯಾವಿಗೇಟರ್‌ನ ಮಧುರ ಧ್ವನಿ ಉಲಿಯುತ್ತಿತ್ತು.

‘ಇಲ್ಲಿ ‘ಆಶಾ’ ಅವರ ಮನೆ ಎಲ್ಲಿ’ ಎಂದು ಅಲ್ಲೆ ಶಾಲೆಗೆಂದು ನಡೆದು ಬರುತ್ತಿದ್ದ ಹುಡುಗರನ್ನು ಕೇಳಿದೆ. ಹಳ್ಳಿಯ ಇನ್ನೊಂದು ಬದಿಗಿದ್ದ ಮನೆಯೊಂದರತ್ತ ಬೊಟ್ಟು ಮಾಡಿದರು.

‘ಏನುಕ್ಕೆ ಬಂದಿರೋದು’ ಎಂದು ಹುಡುಗರ ಪ್ರಶ್ನೆ.

‘ಇಂಜೆಕ್ಷನ್ ತಗೋಳಕ್ಕೆ’ ಎಂದೆ.

‘ಏsss... ಇಲ್ಲ. ನೀವು ಸುಳ್ಳು ಹೇಳ್ತಿದೀರಾ. ಅವ್ರು ಇಂಜೆಕ್ಷನ್ ಕೊಡೋಲ್ಲ’ ಅಂತ ಆ ಹುಡುಗರ ತಕರಾರು. ಆ ತಕರಾರಿಗೆ ನಗೆ ಮೂಲಕ ಕೊನೆ ಹಾಡಿ ಗಾಡಿಯಿಂದಿಳಿದೆ. ಹುಡುಗರೂ ತಮ್ಮ ದಾರಿ ಹಿಡಿದರು.

ಆ ಹುಡುಗರು ತೋರಿಸಿದ ಮನೆಯತ್ತ ಹೋಗುವಷ್ಟರಲ್ಲೇ ‘ಆಶಾ’ ಇತ್ತ ಬಂದರು. ನಮಸ್ತೆಗಳೆಲ್ಲಾ ಮುಗಿದವು.

‘ಇಷ್ಟು ಬೇಗ ಬಂದಿದೀರಾ. ನಾನಿನ್ನೂ ಹೊರಡೋದು 10 ಗಂಟೆ ಆಗುತ್ತೆ. ಬೇಜಾರ್‌ ಮಾಡ್ಕೊಬೇಡಿ. ಸ್ವಲ್ಪ ವೇಯ್ಟ್ ಮಾಡಿ’ ಅಂದರು ‘ಆಶಾ’.

‘ಹುಂ’ ಎಂದೆ.

ಅಷ್ಟರಲ್ಲೇ 40ರ ವ್ಯಕ್ತಿಯೊಬ್ಬರು ಬಳಿ ಬಂದು, ‘ಅವರು ನಮ್ಮ ಮನೆಯವರು’ ಎಂದು ‘ಆಶಾ‘ರತ್ತ ನೋಡಿದರು.

‘ಹೌದಾ’ ಎಂದೆ.

‘ಅಯ್ಯೊ ಸರ್. ರಾತ್ರಿ 12 ಗಂಟೇಲಿ ನಮ್ಮೂರೋರೆ ಫೋನ್ ಮಾಡಿದ್ರು. 108 ಕರ್ಕೊಂಡ್ಬಂದು .....ಆಸ್ಪಿಟಲ್‌ಗೆ ಹೋಗಿದ್ಳು. ಡೆಲಿವರಿ ಮಾಡ್ಸಿ ಬೆಳಿಗ್ಗೆ ಬಂದ್ಳು. ತರೋ ಮೂರ್ ಸಾವ್ರಕ್ಕೆ ರಾತ್ರಿಯೆಲ್ಲಾ ಎದ್ದೋಗ್ಬೇಕು’ ಎಂದು ಅವರು ತಮ್ಮ ಅಸಮಾಧಾನವನ್ನೆಲ್ಲಾ ಹೊರ ಹಾಕಿದರು.

ಅವರ ಅಸಮಾಧಾನಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೆ ಸುಮ್ಮನಿದ್ದೆ. ಹೀಗಾಗಿ ಅಸಮಾಧಾನದ ಮಾತು ಮುಂದುವರೆಯಲಿಲ್ಲ. ಆದರೆ, ‘ಫೋಟೊ ಎಲ್ಲಾ ಹಾಕ್ತೀರಾ ಪೇಪರ‍್ನಲ್ಲಿ. ಹಾಕ್ಬೇಡಿ. ಪ್ರಾಬ್ಲಂ ಆಗುತ್ತೆ’ ಅಂದರು.

‘ಹೂ’ ಎಂದೆ.

ಅಷ್ಟರಲ್ಲೇ ‘ಆಶಾ’ ಸಿದ್ಧವಾಗಿ ಬಂದರು. ‘ಸರ್ ಇಲ್ಲೇ ....... ಅಂತ ಊರಿದೆ. ಅದೂ ನನ್ ಏರಿಯಾಗೇ ಬರುತ್ತೆ. ಇವತ್ತು ಆ ಊರಲ್ಲಿ ಮನೆ ಭೇಟಿ ಮಾಡ್ಬೇಕು’ ಅಂದರು.

‘ಆಶಾ’ ಪ್ರತಿ ದಿನ ಹೇಗೆ ಕೆಲಸ ಮಾಡುತ್ತಾರೋ ಅದನ್ನೇ ಪ್ರತ್ಯಕ್ಷವಾಗಿ ನೋಡಬೇಕು ಎಂಬುದು ನಮ್ಮ ಉದ್ದೇಶವಾಗಿದ್ದರಿಂದ ಗಾಡಿ ಬಿಟ್ಟು ಅವರೊಂದಿಗೆ ಹೆಜ್ಜೆ ಹಾಕಿದೆ. ಅವರ ಮನೆಯಿಂದ ಮುಂದಕ್ಕೆ ಸಾಗುತ್ತಿದ್ದ ಹಾದಿಯಲ್ಲೇ ಮುಂದುವರೆದೆವು.

‘ಸರ್ ಹೀಗೇ ಒಂದತ್ತು ನಿಮಿಷ’ ನಡೆದರೆ ಮೈನ್‌ರೋಡ್ ಸಿಗುತ್ತೆ. ಅಲ್ಲಿ ಆಟೋನೊ ಬಸ್ಸೊ ಸಿಗುತ್ತೆ’ ಎಂದರು ‘ಆಶಾ’.

‘ನಿಮ್ಮೂರೋರ‍್ದು ಯಾರ‍್ದು ಆಟೊ ಇಲ್ವಾ’ ಎಂದು ಕೇಳಿದೆ. ‘ಯಾರ‍್ದೂ ಇಲ್ಲ. ನೀವು ಮೈನ್‌ರೋಡಿಂದ ನಮ್ಮೂರಿನ ಕಡೆಗೆ ತಿರುಗಿದ್ರಲ್ಲಾ. ಅಲ್ಲಿ ಒಂದು ಊರಿತ್ತಲ್ಲಾ, ಅಲ್ಲಿ ಆಟೊ ಇದೆ. ಆದರೆ ಅಷ್ಟು ದೂರ ಓಗಿ ಬರೋಷ್ಟ್ರಲ್ಲಿ, ಈ ಮೈನ್‌ರೋಡೇ ಬಂದಿರುತ್ತೆ’ ಎಂದು ವಿವರಣೆ ಕೊಟ್ಟರು.

ನಾವು ನಡೆದು ಹೋಗುತ್ತಿದ್ದ ಹಾದಿ ಮೀಸಲು ಅರಣ್ಯದೊಳಗೆ ಸಾಗುತ್ತಿದ್ದರೂ, ಆ ಮೀಸಲು ಅರಣ್ಯ ಕುರುಚಲು ಕಾಡಾಗಿತ್ತು. ಹೀಗಾಗಿ ಅಕ್ಕಪಕ್ಕದಲ್ಲಿ ಲಂಟಾನ ಪೊದೆಗಳು, ಜಾಲಿ ಮರಗಳು, ಸೀಗೆ ಮೆಳೆಗಳು ಮತ್ತು ಅಲ್ಲಲ್ಲಿ ಬಂಡೆಗಳನ್ನು ಬಿಟ್ಟರೆ ನೆರಳು ನೀಡುವಂತಹ ದೊಡ್ಡ ಮರಗಳೇನೂ ಇರಲಿಲ್ಲ. ನಾವು ಇಡುತ್ತಿದ್ದ ಪ್ರತಿ ಹೆಜ್ಜೆಗೂ ನೆಲದಿಂದ ದೂಳು ಏಳುತ್ತಿತ್ತು. ಗಾಳಿ ಹಿಂಬದಿಯಿಂದ ಬೀಸುತ್ತಿದ್ದುದ್ದರಿಂದ ಆಗ್ಗಾಗ್ಗೆ ದೂಳು ಎದ್ದು, ಕೂರುತ್ತಿತ್ತು.

‘ಏನೇನ್ ಕೆಲ್ಸ ಇರುತ್ತೆ ನಿಮಗೆ’ ಎಂದು ನಾನೇ ವಿಷಯಕ್ಕೆ ಬಂದೆ.

‘ಸರ್ ವಾರಕ್ಕೊಂದು ಸಾರಿ ಎಲ್ಲಾ ಹಳ್ಳೀಗೆ ಹೋಗಿ ಮನೆ ಭೇಟಿ ಮಾಡ್ಬೇಕು. ನನ್‌ ಏರಿಯಾದಲ್ಲಿ ಐದು ಹಳ್ಳಿ ಇವೆ. ಅದ್ರಲ್ಲಿ ಮೂರು ಹಳ್ಳಿಗೆ ಒಂದೊಂದು ದಿನ ಬೇಕಾಗುತ್ತೆ. ಇನ್ನೆರಡು ಹಳ್ಳಿಗೆ ಒಂದೇ ದಿನ ಸಾಕು. ಪ್ರತಿ ವಾರ ಹೋಗೇ ಹೋಗ್ತೀವಿ. ಮೀಟಿಂಗ್ ಇದ್ರೆ ಹೋಗೋಕೆ ಆಗಲ್ಲ. 1,000 ಜನಕ್ಕೆ ಒಬ್ರು ಆಶಾ ಇರ್ತಾರೆ. ಜನ ಕಮ್ಮಿ ಇರೋದಕ್ಕೆ ನಂಗೆ ಐದು ಹಳ್ಳಿ. ನಮ್ ಜಿಲ್ಲೇಲೆ ಒಂದೊಂದು ಊರಲ್ಲಿ ಸಾವ್ರುಕ್ಕಿಂತ ಜಾಸ್ತಿ ಜನ ಇದಾರೆ. ಅಲ್ಲಿ ಇಬ್ರಿಬ್ರು ಆಶಾ ಇದಾರೆ. ನಮ್ಮೂರಲ್ಲಿ 300 ಜನ ಇದಾರೆ. ನಾವ್ ಈಗ ಹೋಗ್ತಿರೋ ಊರಲ್ಲಿ 120 ಜನ ಇದಾರೆ. ಪ್ರಗ್ನೆಂಟ್ಟು ಆಮೇಲೆ ಬಾಣಂತೀನ ಫಾಲೊಅಪ್ ಮಾಡ್ತೀವಿ’ ಎಂದು ವಿಷಯ ಮುಂದುವರೆಸಿದರು ‘ಆಶಾ’.

‘ಆ ಊರಲ್ಲಿ ಎಲ್ಲಾ ಮನೇಗೂ ಭೇಟಿ ಮಾಡ್ತೀರಾ? ಯಾರು ಪ್ರಗ್ನೆಂಟ್ ಅಂತ ಹೇಗೆ ಗೊತ್ತಾಗುತ್ತೆ ನಿಮಗೆ’ ಎಂದು ಕೇಳಿದೆ.

‘ನಾವು ಕೆಲಸ ಸ್ಟಾರ್ಟ್ ಮಾಡ್ವಾಗ ಮೊದ್ಲು ಸರ್ವೆ ಮಾಡಿದ್ವಿ. ನಮ್ ಏರಿಯಾದಲ್ಲಿ ನಾವೇ ಸರ್ವೆ ಮಾಡಿರ್ತೀವಿ. ಆಗ ಇ.ಸಿ. ಫಿಲ್ ಮಾಡಿರ್ತೀವಿ. ಅದ್ರಿಂದ ಎಲ್ಲಾ ಗೊತ್ತಾಗುತ್ತೆ...’ ಎನ್ನುತ್ತಿದ್ದಾ ‘ಆಶಾ’ ಅವರ ಮಾತಿಗೆ ತಡೆಯೊಡ್ಡಿ, ‘ಇ.ಸಿ. ಅಂದರೆ’ ಎಂದು ಪ್ರಶ್ನಿಸಿದೆ.

‘ಇ.ಸಿ. ಅಂದ್ರೆ ಗೊತ್ತಿಲ್ಲ... ಅದೇ ಸರ್ ಅರ್ಹ ದಂಪತಿಗಳು’ ಅಂದರು. ‘ಓ. ಎಲಿಜಬಲ್ ಕಪಲ್ಸ್’ ಎಂದೆ.

ಅಷ್ಟರಲ್ಲೇ ಆಶಾ ಹೇಳಿದ್ದ ಮೈನ್‌ರೋಡ್‌ ತಲುಪಿ ಬಸ್ಸಿಗಾಗಿ ಕಾಯಲಾರಂಭಿಸಿದೆವು. ಗಂಟೆ 11 ದಾಟಿತ್ತು. ಮಧ್ಯೆ ಮಾತೂ ಸಾಗಿತ್ತು. 11.15ರಷ್ಟರಲ್ಲಿ ಬಸ್ಸೂ ಬಂತು. ನಾವು ತಲುಪಬೇಕಿದ್ದ ಊರಿಗೆ ಐದು ರೂಪಾಯಿ ಚಾರ್ಜ್. ಬಸ್ಸಿಗದು ಐದು ನಿಮಿಷದ ದಾರಿಯಷ್ಟೆ. ಬಸ್ಸಿಳಿದು, ಆ ಊರಿನ ದಾರಿ ಹಿಡಿದೆವು. ಈ ಊರಿನ ದಾರಿ ಕಾಡಿನತ್ತ ಮುಖ ಮಾಡಿತ್ತು. ಈ ಹಿಂದೆ ವಿವರಿಸಿದ್ದ ಕಾಡಿಗಿಂತ ಈ ಕಾಡು ಸ್ವಲ್ಪದಟ್ಟವಾಗಿತ್ತು. ಮಣ್ಣಿನ ದಾರಿಯ ಎರಡೂ ಬದಿಯಲ್ಲಿ ಮರಗಳಿದ್ದವು. ದೊಡ್ಡ ದೊಡ್ಡ ಬ್ಯಾಲದ ಮರಗಳು, ಮುತ್ತುಗದ ಮರಗಳು, ಭಾರಿ ಬಿದಿರು ಮೆಳೆಗಳು ಈ ಕಾಡಿನ ಮೈತುಂಬಿಸಿದ್ದವು. ನಾವು ಹೋಗಬೇಕಿದ್ದ ಊರು ಕಾಡಿನ ಮಧ್ಯೆ ಇದ್ದ ಸಣ್ಣ ಬೆಟ್ಟಗಳ ತಪ್ಪಲಿನಲ್ಲಿ ಇದ್ದಿರಬೇಕು. ಹೀಗಾಗಿ ದಾರಿ ಏರುಮುಖವಾಗಿತ್ತು. ಕಾಡಿನಿ ಸುಳಿರ್ಗಾಳಿ ಮತ್ತು ದುಂಬಿಗಳ ಝೇಂಕಾರ ಬಿಟ್ಟರೆ ಅಲ್ಲಿ ಬೇರೆ ನರಪಳ್ಳಿಯ ಸುಳಿವೂ ಇರಲಿಲ್ಲ. ನನ್ನ ಯೋಚನಾ ಹರಿವಿಗೆ ತಡೆಹಾಕಿ ‘ಆಶಾ’ ಮಾತು ಮುಂದುವರೆಸಿದರು.

‘ಹೂಂ ಹೌದು. ಆ ಫಾರಂ ಫಿಲಪ್ ಮಾಡಿರ್ತೀವಲ್ಲ. ಹೀಗಾಗಿ ಎಲ್ಲಾ ಗೊತ್ತಿರುತ್ತೆ. 19–49 ವಯಸ್ಸಿನ ಹೆಂಗಸರು, ಮದ್ವೆ ಆಗಿರ್ಬೇಕು ಅವರಿಗೆ. ಅವರನ್ನ ಇ.ಸಿ.ಲಿ ಸೇರ್ಸಿರ್ತೀವಿ. ಅವ್ರಲ್ಲಿ ಯಾರು ಶಾಶ್ವತ ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಂಡಿರ್ತಾರೊ ಅವರದ್ದು, ಮತ್ತು ಕಾಪರ್–ಟಿ ಹಾಕ್ಸಿಕೊಂಡಿರೋರ್ದು, ಟ್ಯಾಬ್ಲೆಟ್ (ಗರ್ಭ ನಿರೋಧಕ ಮಾತ್ರೆಗಳು) ತಗೋಳೋರ್ದು ಎಲ್ಲಾ ಲಿಸ್ಟ್ ಇರುತ್ತೆ ನಮ್ಮತ್ರ. ಹೊಸದಾಗಿ ಮದ್ವೆ ಆದೋರ್ನ ಇ.ಸಿ.ಗೆ ಸೇರುಸ್ತೀವಿ. ಹಾಗಾಗಿ ಯಾರ‍್ಯಾರ್ ಪ್ರಗ್ನೆಂಟ್ ಆಗ್ತಾರೆ ಅಂತ ಗೊತ್ತಾಗುತ್ತೆ’ ಎಂದು ‘ಆಶಾ’ ವಿವರಿಸಿದರು. ‌

ಅಷ್ಟರಲ್ಲೇ ಆ ಊರು ಬಂತು. 37 ಮನೆಗಳಿರುವ ಆ ಊರಿನಲ್ಲಿ ಇರುವವರೆಲ್ಲಾ ಒಂದೇ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬ್ರಿಟಿಷ್ ಆಳ್ವಿಕೆಯಲ್ಲಿ ಈ ಬುಡಕಟ್ಟು ಸಮುದಾಯವನ್ನು ‘ಕ್ರಿಮಿನಲ್ ಟ್ರೈಬ್’ ಎಂದು ಗುರುತಿಸಲಾಗಿತ್ತು. ಸ್ವತಂತ್ರ ಭಾರತದಲ್ಲಿ ‘ಕ್ರಿಮಿನಲ್’ ಹಣೆಪಟ್ಟಿಯನ್ನು ಕಳಚಲಾಗಿದೆ. 120 ಜನಸಂಖ್ಯ ಇರುವ ಆ ಹಳ್ಳಿಯಲ್ಲಿ ಮೂರು ಕೈಪಂಪುಗಳಿವೆ. ವಿದ್ಯುತ್ ಸಂಪರ್ಕವೂ ಇದೆ. ಆ ಊರಿನ ಹೊಸ ತಲೆಮಾರಿನ ಹುಡುಗರ ಕೈಲಿ ಸ್ಮಾರ್ಟ್‌ಫೋನ್‌ಗಳಿವೆ. ಕೆಲವರ ಮನೆಗಳಲ್ಲಿ ಹಸುಗಳಿವೆ. ಹಲವರ ಮನೆಗಳಲ್ಲಿ ಕುರಿ–ಮೇಕೆಗಳಿವೆ. ಕೆಲವರು ಹಳ್ಳಿಯಿಂದ ಆರೇಳು ಕಿ.ಮೀ.ದೂರದಲ್ಲಿರುವ ಕಲ್ಲು ಕ್ರಶಿಂಗ್‌ ಘಟಕವೊಂದರಲ್ಲಿ ಕೆಲಸ ಮಾಡುತ್ತಾರೆ. ನಾವು ಊರು ಮುಟ್ಟುವ ಹೊತ್ತಿಗೆ ಊರಿನ ಬಹುತೇಕ ಮಂದಿ ಅವರವರ ಕೆಲಸಕ್ಕೆ ತೆರಳಿಯಾಗಿತ್ತು.

‘ಇಲ್ಲೀವರ್ಗೂ ಒಬ್ಬರೇ ನಡೆದುಕೊಂಡು ಬರ್ತೀರಾ’ ಎಂದು ಕೇಳಿದೆ.

‘ಒಬ್ರೇ ಬರ್ಬೇಕು ಸರ್. ನಮ್ದೂನು ಹತ್ತಿರದ್ದೇ ಹಳ್ಳಿ ಆಗಿರೋದ್ರಿಂದ ಸ್ವಲ್ಪ ಪರವಾಗಿಲ್ಲ. ಈ ಕಾಡಲ್ಲಿ ಬರೋವಾಗ ಸ್ವಲ್ಪ ಭಯ ಆಗುತ್ತೆ. ಇಂಜೆಕ್ಷನ್ ಎಲ್ಲಾ ಕೊಡೋವಾಗ ಸಿಸ್ಟರ್ ಬರ್ತಾರೆ ಜೊತೆಗೆ. ಆಗ ಸ್ವಲ್ಪ ಪರ್ವಾಗಿಲ್ಲ. ಮನೆಯಿಂದ ಇಲ್ಲಿಗೆ ಆಟೊ ಕರ್ಕೊಂಡ್ ಬಂದ್ರೆ ನೂರ್ ರುಪಾಯ್ ಆಗುತ್ತೆ. ತಿಂಗ್ಳುಗೆ ನಾನೂರುಪಾಯ್ ಆಗುತ್ತೆ. ಬರೋ ಮೂರೂವರೆ ಸಾವ್ರದಲ್ಲಿ ಓಡಾಡಕ್ಕೆ ಅರ್ಧ ಖರ್ಚಾಗ್ಬಿಡುತ್ತೆ. ಅದಕ್ಕೆ ನಡ್ಕೊಂಡೇ ಬರ್ತೀವಿ. ಬಸ್ಸಲ್ಲಾದ್ರೆ ಈ ಊರಿಗೆ ಹೋಗ್ಬರೋಕೆ ಹತ್ತ್ರುಪಾಯ್ ಆಗುತ್ತಷ್ಟೆ. ಆದ್ರೆ ನಾಲ್ಕ್ ಕಿ.ಮೀ. ನಡೀಬೇಕು’ ಎಂದರು.

ಅಷ್ಟರಲ್ಲೇ ಮನೆಯೊಂದರ ಬಳಿ ಬಂದಿದ್ದೆವು. ಆಶಾ ‘ಮಾರಕ್ಕಾ... ಇದ್ಯಾ..?’ ಎಂದು ಆ ಮನೆಯವರನ್ನ ಕೂಗಿ ಕರೆದರು.

‘ಓ.. ಬಂದೆ’ ಎಂದು 35–40ರ ಒಬ್ಬ ಮಹಿಳೆ ಮನೆಯಿಂದ ಹೊರಗೆ ಬಂದರು.

‘ಆಧಾರ್ ಕಾರ್ಡ್ ಕೊಡು. ಅದನ್ನ ಇ.ಸಿ.ಗೆ ಸೇರುಸ್ಬೇಕು’ ಎಂದರು ‘ಆಶಾ‘.

‘ಏ... ನಮ್ಮ ಮನೆಯವರತ್ರ ಐತೆ. ಮುಂದಿನ್‌ವಾರ ಬಾ. ಕೊಡೂಣ’ ಎಂಬುದು ಮಾರಕ್ಕನ ಉತ್ತರ.

‘ವಾದ್ ವಾರಾನೇ ಹೇಳಿರ್ಲಿಲ್ವಾ? ಆಗ್ಲೂ ಮುಂದಿನ್‌ ವಾರ ಅಂದಿದ್ದೆ. ಈಗ್ಲೂ ಅಂಗೇ ಅಂತ್ಯ’ ಎಂದು ‘ಆಶಾ‘ ಅಸಮಾಧಾನ ವ್ಯಕ್ತಪಡಿಸಿದರು.

‘ಓ ಮರ್ತೋಯ್ತು ಕಣ್ಲಾ. ಅದು ಕುರಿ ಒ(ಹೊ)ಡ್ಕೊಂಡು ಗಿಡಕ್ಕೆ (ಕಾಡು) ಓ(ಹೋ)ಗೈತೆ. ಮುಂದಿನ ವಾರ ಕೊಡ್ತೀನಿ ಬಾ’ ಅಂದರು ಮಾರಕ್ಕ.

‘ಸರಿ. ಮರೀಬೇಡ’ ಎಂದು ‘ಆಶಾ’ ಹೊರಟರು. ನಾನೂ ಹಿಂಬಾಲಿಸಿದೆ. ಮುಂದಿನ ನಾಲ್ಕನೇ ಮನೆಯಲ್ಲಿ ನಮ್ಮ ಸವಾರಿ ನಿಂತಿತು. ಮಾರಕ್ಕನ ಮನೆಯಲ್ಲಿನ ಮಾತುಕತೆ ಕೇಳಿಯೇ ಆ ಮನೆಯ ಇಬ್ಬರು ಹೆಂಗಸರು ಹೊರಗೆ ಬಂದಿದ್ದರು. ಹೀಗಾಗಿ ಅಲ್ಲಿ ಅವರನ್ನು ಹೆಸರಿಡಿದು ಕೂಗುವ ಅವಶ್ಯಕತೆ ಬೀಳಲಿಲ್ಲ.

ಆ ಇಬ್ಬರು ಹೆಂಗಸರಲ್ಲಿ ಒಬ್ಬರು ತುಂಬು ಗರ್ಭಿಣಿ. ಈ ತಿಂಗಳ ಅಂತ್ಯಕ್ಕೆ ಹೆರಿಗೆ ದಿನಾಂಕವನ್ನು ನೀಡಲಾಗಿದೆ ಎಂದು ‘ಆಶಾ’ ಮಾಹಿತಿ ನೀಡಿದರು. ‘ಗರ್ಭಿಣಿಯಾದಾಗಿನಿಂದ ಹೆರಿಗೆ ಆಗೋವರೆಗೂ ಕೇಸ್ ಫಾಲೊಅಪ್ ಮಾಡಬೇಕು. ಸರ್ಕಾರಿ ಆಸ್ಪತ್ರೇಲಿ ಹೆರಿಗೆ ಮಾಡಿಸಿದರೆ ನಮಗೆ ಇನ್ಸೆಂಟೀವ್ ಕೊಡ್ತಾರೆ. ಒಂಬತ್ತು ತಿಂಗಳು ಪೂರ್ತಿ ಅವರನ್ನ ಫಾಲೊಅಪ್ ಮಾಡ್ಬೇಕು. ಟೆಸ್ಟ್ ಮಾಡುಸ್ಕೋಬೇಕು ಅಂತ ಅವ್ರಿಗೆ ತಿಳಿಸ್ಬೇಕು. ಪೌಷ್ಟಿಕಾಂಶ ಆಹಾರ ಸೇವಿಸ್ಬೇಕು ಅಂತ ಅರಿವು ಮೂಡಿಸ್ಬೇಕು. ಹೆರಿಗೆ ಮಾಡ್ಸಿದ್ ಮೇಲೆ ಬಾಣಂತೀನ 42 ದಿನ ಫಾಲೊಅಪ್ ಮಾಡ್ಬೇಕು. ಮಗೂನ ಒಂದೂವರೆ ವರ್ಷ ಫಾಲೊಅಪ್ ಮಾಡ್ಬೇಕು. ಇಷ್ಟೆಲ್ಲಾ ಮಾಡ್ಬೇಕು’ ಎಂದು ತಮ್ಮ ಕೆಲಸಗಳ ಪಟ್ಟಿಯನ್ನು ಆಶಾ ಹೆಸರಿಸಿದರು.

‘ನೀವು ಗೌರ್ಮೆಂಟ್ ಆಸ್ಪಿಟಲ್‌ಗೆ ಹೋಗ್ತೀರೋ ಅಥ್ವಾ ಪ್ರೈವೇಟ್ ಆಸ್ಪಿಟಲ್‌ಗೆ ಹೋಗ್ತೀರೋ’ ಎಂದು ಆ ಮಹಿಳೆಯರಲ್ಲಿ ಹಿರಿಯರನ್ನು ‘ಆಶಾ’ ಪ್ರಶ್ನಿಸಿದರು.

‘ಯಾವುದ್ರಲ್ಲಿ ಕಮ್ಮಿ ಖರ್ಚಾಗ್ತದೆ’ ಎಂದು ಆ ಮಹಿಳೆ ಪ್ರಶ್ನಿಸಿದರು.

‘ಗೌರ್ಮೆಂಟ್‌ಗೇ ಹೋಗಿ. ಅಲ್ಲಿ ಎಲ್ಲಾ ಫ್ರೀ. ದುಡ್ಡು ಕೊಡಂಗಿಲ್ಲ. ನಾವೇ ಎಲ್ಲಾ ನೋಡ್ಕೋತೀವಿ’ ಎಂದರು ‘ಆಶಾ‘.

‘ಹೌದಾ. ಹಾಗಿದ್ರೆ ಅಲ್ಗೇ ಓಗಣ’ ಎಂದು ಆ ಮಹಿಳೆ ತಲೆಯಾಡಿಸಿದರು.

‘ಅಂಗಾದ್ರೆ ಹೆರಿಗೆ ನೋವು ಬಂದಾಗ ನಂಗೆ ಫೋನ್‌ ಮಾಡಿ. 108 ಕರ್ಕೊಂಡ್ ಬರ್ತೀನಿ’ ಎಂದು ‘ಆಶಾ’ ಭರವಸೆ ನೀಡಿದರು.

‘ಗೌರ್ಮೆಂಟ್ ಆಸ್ಪತ್ರೇಲೇ ಹೆರಿಗೆ ಮಾಡಿಸ್ಬೇಕು ಅಂತ ಮೀಟಿಂಗ್‌ನಲ್ಲಿ ಹೇಳ್ತಾರೆ. ಇವರತ್ರ ದುಡ್ಡಿಲ್ಲ ಅದುಕ್ಕೆ ಗೌರ್ಮೆಂಟ್ ಆಸ್ಪತ್ರೆಗೆ ಹೋಗಣ ಅಂದ್ರು. ತುಂಬಾ ಜನ ಪ್ರೈವೇಟ್‌ಗೇ ಹೋಗಣ ಅಂತಾರೆ. ಗೌರ್ಮೆಂಟ್ ಆಸ್ಪತ್ರೆ ಅಂದ್ರೆ ತುಂಬಾ ಜನಕ್ಕೆ ಭಯ. ಅಲ್ಲಿಗೇ ಬನ್ನಿ ಅಂದ್ರೆ. ನೀವೇ ಎಲ್ಲಾ ಗ್ಯಾರಂಟಿ ಕೊಡ್ತೀರಾ ಏನೂ ಆಗಲ್ಲ ಅಂತಾ ಕೇಳ್ತಾರೆ. ಅದಕ್ಕೆ ನಾವು ಏನು ಹೇಳೋಕಾಗುತ್ತೆ. ನೆನ್ನೆ ರಾತ್ರಿ ಹೋಗಿದ್ದ ಪೇಷೆಂಟ್ ಪ್ರೈವೇಟ್ ಹಾಸ್ಪಿಟಲ್ಗೆ ಹೋಗಣ ಅಂದ್ರು. ಆಗ ನಾವು ಏನೂ ಹೇಳಕ್ಕಾಗಲ್ಲ’ ಎಂದು ಅವರು ತಮ್ಮ ಅಸಹಾಯಕತೆ ತೋಡಿಕೊಂಡರು.

ಅದೇ ಮನೆಯಲ್ಲಿದ್ದ ವೃದ್ಧರೊಬ್ಬರ ಕಫದ ಮಾದರಿ ಸಂಗ್ರಹಿಸಿದ್ದ ಡಬ್ಬಿಯನ್ನು ಆ ಹಿರಿಯ ಹೆಂಗಸು, ‘ಆಶಾ’ರಿಗೆ ನೀಡಿದರು. ಅದೇಕೆಂಬಂತೆ ನಾನು ಅವರತ್ತ ನೋಡಿದೆ. ಅವರು ಅಲ್ಲೇನು ಹೇಳಲಿಲ್ಲ. ಅಲ್ಲಿಂದ ಸ್ವಲ್ಪ ದೂರ ಹೊರಟ ಮೇಲೆ ಮಾತು ಆರಂಭಿಸಿದರು.

‘ಅವರ ಮನೆಯವ್ರಿಗೆ ತುಂಬಾ ಕೆಮ್ಮು. ತುಂಬಾ ಸಣ್ಣ ಆಗಿದ್ದಾರೆ. ಓದ್‌ ವಾರ ಸಿಸ್ಟರ್ ಬಂದಿದ್ದಾಗ, ಕಫ ಕಲೆಕ್ಟ್ ಮಾಡ್ಕೊಂಡ್ ಬನ್ನಿ ಅಂತ ಸ್ಯಾಂಪಲ್ ಡಬ್ಬಿ ಕೊಟ್ಟಿದ್ದರು. ಕಫ ಕಲೆಕ್ಟ್ ಮಾಡಿಕೊಟ್ಟಿದ್ದಾರೆ. ಇವತ್ತೆ ಇದನ್ನ ಲ್ಯಾಬ್‌ಗೆ ಕೊಟ್ ಬರ್ಬೇಕು’ ಅಂದರು.

‘ಲ್ಯಾಬ್‌’ ಎಲ್ಲಿದೆ ಎಂದು ಕೇಳಿದೆ.

‘.......ರು. ಅಲ್ಲಿಗೆ ಡೈರೆಕ್ಟ್ ಬಸ್ ಇಲ್ಲ. ಎರಡು ಬಸ್ ಹಿಡೀಬೇಕು’ ಎಂದರು.

ಮತ್ತೆ ಈ ಹಿಂದಿನ ‘ಮೈನ್‌ರೋಡ್‌’ಗೆ ನಡೆದುಕೊಂಡು ಬಂದು ಬಸ್ಸಿಗಾಗಿ ಕಾದಿದ್ದಾಯಿತು. 20 ನಿಮಿಷ ಕಾದ ನಂತರ ಬಂದ ಖಾಸಗಿ ಬಸ್ ಹತ್ತಿ, ಅರ್ಧ ಗಂಟೆಯ ನಂತರ ಜಂಕ್ಷನ್‌ ಒಂದರಲ್ಲಿ ಇಳಿಯಲಾಯಿತು. ಅಲ್ಲಿಂದ (ಅದು ರಾಷ್ಟ್ರೀಯ ಹೆದ್ದಾರಿ) ಇನ್ನೂ ಮೂರು ಕಿ.ಮೀ. ದೂರವನ್ನು ಕೆಎಸ್‌ಆರ್‌ಟಿಸಿ ಬಸ್ ಹಿಡಿದು ಕ್ರಮಿಸಲಾಯಿತು. ಬಸ್ ನಿಲ್ದಾಣದ ಸಮೀಪವೇ ಇದ್ದ ಪ್ರಯೋಗಾಲಯಕ್ಕೆ ಹೋಗಿ, ಕಫದ ಮಾದರಿಯನ್ನು ಕೊಟ್ಟು ವಾಪಸ್ ಹೊರಟೆವು. ಆ ಪ್ರಕ್ರಿಯೆಗೆಲ್ಲಾ ಇನ್ನರ್ಧ ಗಂಟೆ ಕಳೆಯಿತು. ಅಲ್ಲಿಂದ ಮತ್ತೆ ಕೆಸ್‌ಆರ್‌ಟಿಸಿ ಬಸ್ ಹಿಡಿದು ಜಂಕ್ಷನ್‌ನಲ್ಲಿ ಇಳಿದು. ಬಸ್‌ಗಾಗಿ ಕಾದೆವು. ಬಸ್‌ ಸಿಗದ ಕಾರಣ ಸೀಟಿನ ಚಾರ್ಜ್ ಲೆಕ್ಕದಲ್ಲಿ ಆಟೊ ಹತ್ತಿದೆವು. ಏಳು ಮಂದಿ ಕೂರಬಹುದಾದ ಆಟೊದಲ್ಲಿ ಒಟ್ಟು ಹತ್ತೊಂಬತ್ತು ಮಂದಿ ಪ್ರಯಾಣಿಸುತ್ತಿದ್ದೆವು. ಪ್ರಯಾಣದ ಜತೆಗೆ ಮಾತೂ ಮುಂದುವರೆಯಿತು.

‘ಟಿ.ಬಿ., ಮಲೇರಿಯ, ಚಿಕುನ್ ಗುನ್ಯಾ ಪೇಷೆಂಟ್‌ಗಳನ್ನೆಲ್ಲಾ ನಾವೇ ಫಾಲೊಅಪ್ ಮಾಡ್ಬೇಕು. ಟಿ.ಬಿ. ಪೇಷೆಂಟ್ ಹೆಸ್ರುನಾ ಯಾರ್ಗೂ ಹೇಳ್ಬಾರ್ದು. ಅವರ ಕೈಗೆ ಮಾತ್ರೆನೂ ಕೊಡ್ಬಾರ್ದು. ನಾವೇ ಮಾತ್ರೆ ತೆಗೆದುಕೊಟ್ಟು, ಅವರು ನುಂಗಿದ ಮೇಲೆ ಹೊರಡ್ಬೇಕು. ನನ್ ಏರಿಯಾದಲ್ಲಿ ಈಗ ಯಾರೂ ಟಿ.ಬಿ.ಪೇಷೆಂಟ್ ಇಲ್ಲ. ಇವತ್ತು ಟೆಸ್ಟ್‌ಗೆ ಕೊಟ್ಟಿದೀವಲ್ಲ, ಅವರಿಗೆ ಟಿ.ಬಿ. ಇದ್ರೆ ಸಿಸ್ಟರ್ ಬಂದು ಟ್ರೀಟ್‌ಮೆಂಟ್ ಶುರು ಮಾಡ್ತಾರೆ’ ಎಂದು ವಿವರಿಸಿದರು.

ಪ್ರಯೋಗಾಲಯ ಇದ್ದ ಊರಿಗೆ ಹೋಗಿ, ವಾಪಸ್ ಆಗುವುದಕ್ಕೆ ಒಬ್ಬರಿಗೆ ₹ 30 ಖರ್ಚಾಗಿತ್ತು. ಹೀಗಾಗಿ ‘ಟೆಸ್ಟ್ ರಿಪೋರ್ಟ್ ತರೋಕೆ ನೀವೇ ಹೋಗ್ಬೇಕಾ’ ಎಂದು ಕೇಳಿದೆ.

ಅದಕ್ಕವರು ‘ಇಲ್ಲ. ಅದನ್ನ ನಮ್ಮ ಹೋಬಳಿ ಆಸ್ಪತ್ರೆಗೇ ಕಳುಸ್ತಾರೆ’ ಎಂದು ಅವರು ವಿವರಿಸಿದರು.

ಅವರ ಊರು ತಲುಪಿ, ನನ್ನ ಗಾಡಿ ಹತ್ತಿ ವಾಪಸ್ ಹೊರಡುವಾಗ ಗಡಿಯಾರ ಸಂಜೆ ಐದು ತೋರಿಸುತ್ತಿತ್ತು. ಬೆಳಿಗ್ಗೆ ತಮ್ಮ ಮನೆಯಲ್ಲಿ ತಿಂಡಿ ತಿಂದು ಹೊರಟಿದ್ದ ‘ಆಶಾ’ರವರ ಬ್ಯಾಗ್‌ನಲ್ಲಿ ಕೆಲಸದ ಡೈರಿ, ಕೆಲವು ಮಾತ್ರೆಗಳು, ಒಂದು ನೀರಿನ ಬಾಟಲಿ ಮತ್ತು ಒಂದು ಕೊಡೆ ಬಿಟ್ಟರೆ ಬೇರೇನೂ ಇದ್ದಂತೆ ಕಾಣಲಿಲ್ಲ. ಸಂಜೆ ಮನೆ ಮುಟ್ಟುವವರೆಗೆ ಅವರು ಬೇರೇನೂ ತಿಂದಿರಲಿಲ್ಲ. ನಾವು ಭೇಟಿ ನೀಡಿದ್ದ ಅವರ ಕಾರ್ಯಕ್ಷೇತ್ರದಲ್ಲಿ ಯಾವ ಹೋಟೆಲೂ ಇರಲಿಲ್ಲ. ಪ್ರಯೋಗಾಲಯಕ್ಕೆಂದು ಭೇಟಿ ನೀಡಿದ್ದ ಊರಿನಲ್ಲಿ ಹೋಟೆಲು ಇತ್ತಾದರೂ, ಊರಿಗೆ ಬಸ್ ಸಿಗುವುದಿಲ್ಲವೆಂದು ಅಲ್ಲಿಂದಲೂ ತರಾತುರಿಯಲ್ಲಿ ಹೊರಟದ್ದಾಯಿತು.

‘ಬರೋ ಮೂರೂವರೆ ಸಾವ್ರದಲ್ಲಿ ಓಡಾಡಕ್ಕೆ ಅರ್ಧ ಖರ್ಚಾಗ್ಬಿಡುತ್ತೆ’ ಎಂದು ಅವರು ಬೆಳಿಗ್ಗೆ ಹೇಳಿದ್ದ ಮಾತು ನಿಜ ಅನಿಸಿತು. ಅವರ ಕಾರ್ಯ ವ್ಯಾಪ್ತಿಯ ಐದು ಹಳ್ಳಿಗಳಲ್ಲಿ ಒಂದಕ್ಕೆ ಭೇಟಿ ನೀಡಿ, ಪ್ರಯೋಗಾಲಯಕ್ಕೆ ಹೋಗಿ ಬಂದದಕ್ಕೆ ದಿನವೊಂದರಲ್ಲೇ ಬಸ್‌ಚಾರ್ಜ್‌ಗೆಂದು ₹ 35 ಖರ್ಚಾಗಿತ್ತು. ತಿಂಗಳಲ್ಲಿ 20 ದಿನ ಓಡಾಡ್ಬೇಕು ಅಂದ್ರೂ ಹತ್ತಿರಹತ್ತಿರ ₹ 700 ಖರ್ಚು ಮಾಡಬೇಕಾಗುತ್ತದೆ. ಹಳ್ಳಿಗಳು ದೂರದ್ದಾದರೆ ಖರ್ಚೂ ದೊಡ್ಡದಾಗುತ್ತೆ.

ನಾನು ಹೊರಡುವಾಗ ‘ಆಶಾ’, ‘ಸರ್, ನನ್ನ ಹೆಸರು, ಊರಿನ ಹೆಸ್ರು ಏನೂ ಹಾಕ್ಬೇಡಿ ಪ್ರಾಬ್ಲಂ ಆಗುತ್ತೆ’ ಎಂದರು. ನಾನೂ ಹೂಂ ಎಂದು ತಲೆಯಾಡಿಸಿ ಹೊರಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.