ADVERTISEMENT

#MeToo: ಈಗ ಇದು ಏಕಾಂಗಿ ಯುದ್ಧವಲ್ಲ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 3:22 IST
Last Updated 8 ಮಾರ್ಚ್ 2018, 3:22 IST
#MeToo: ಈಗ ಇದು ಏಕಾಂಗಿ ಯುದ್ಧವಲ್ಲ
#MeToo: ಈಗ ಇದು ಏಕಾಂಗಿ ಯುದ್ಧವಲ್ಲ   

ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಮಹಿಳೆಯರ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಲಕ್ಷಗಳನ್ನು ದಾಟುತ್ತದೆ. ಇಂತಹ ಕಿರುಕುಳಗಳು ಮಹಿಳೆಯರನ್ನು ಆಘಾತಕ್ಕೆ ದೂಡುವುದಲ್ಲದೆ, ಅವರು ಕೆಲವು ಸಂದರ್ಭಗಳಲ್ಲಿ ಕೆಲಸ ತೊರೆಯುವಂತೆಯೂ ಮಾಡುತ್ತವೆ. ಹೀಗಿದ್ದರೂ, ಲೈಂಗಿಕ ಕಿರುಕುಳಗಳ ವಿರುದ್ಧ ಹೋರಾಟ ನಡೆಸಲು ಮಹಿಳೆಯರಿಗೆ ಅವಕಾಶ ಕಲ್ಪಿಸುವ ಸಾಂಸ್ಥಿಕ ವ್ಯವಸ್ಥೆ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಮಹಿಳೆಯರು ತರಬಹುದಾದ ದೂರುಗಳನ್ನು ಆಲಿಸಲು ಕೆಲವು ಸಂಸ್ಥೆಗಳಲ್ಲಿ ವ್ಯವಸ್ಥೆಯೇ ಇಲ್ಲ. ಕೆಲವು ಸಂದರ್ಭಗಳಲ್ಲಿ, ದೂರು ತಂದ ಮಹಿಳೆಯನ್ನೇ ಅವಮಾನಿಸುವ ಅಥವಾ ಆಕೆಯ ಮಾತುಗಳನ್ನು ನಂಬದ ಸ್ಥಿತಿ ಇದೆ. ಸಾಮಾನ್ಯ ಸಂದರ್ಭಗಳಲ್ಲಿ, ಕಿರುಕುಳಕ್ಕೆ ಒಳಗಾದವಳಿಗಿಂತ ಕಿರುಕುಳ ಕೊಟ್ಟವನೇ ಹೆಚ್ಚು ಶಕ್ತಿವಂತನಾಗಿರುತ್ತಾನೆ. ಇಂತಹ ಹಲವು ಸಂದರ್ಭಗಳಲ್ಲಿ, ಸಂಸ್ಥೆಗಳ ಆಡಳಿತ ಮಂಡಳಿಗಳು ಕಿರುಕುಳ ನೀಡಿದ ವ್ಯಕ್ತಿಗೇ ರಕ್ಷಣೆ ನೀಡುತ್ತವೆ. ಹೀಗೆ, ಕಿರುಕುಳಕ್ಕೆ ಒಳಗಾದ ವ್ಯಕ್ತಿಯನ್ನೇ ಇನ್ನೊಮ್ಮೆ ತೊಂದರೆಗೆ ಸಿಲುಕಿಸುವ ಸಂಸ್ಕೃತಿ ಸಮಾಜದಲ್ಲೂ, ಕಾನೂನು ಸಂಸ್ಥೆಗಳಲ್ಲೂ ಇದೆ.

ಆದರೆ, ಕಳೆದ ವರ್ಷ ನಡೆದ ‘ಮೀ ಟೂ’ ಅಭಿಯಾನದ ನಂತರ ಸಾಕಷ್ಟು ಬದಲಾವಣೆಗಳು ಆಗಿವೆ. 2017ರ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ಒಂದು ಟ್ವಿಟರ್‌ ಹ್ಯಾಷ್‌ಟ್ಯಾಗ್‌ ಮೂಲಕ ಆರಂಭವಾದ ಈ ಅಭಿಯಾನ (#MeToo) ಕೆಲವೇ ದಿನಗಳಲ್ಲಿ ವಿಶ್ವದ ಎಲ್ಲೆಡೆ ಪಸರಿಸಿತು. #MeToo ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಇದುವರೆಗೆ ಅಂದಾಜು 85 ರಾಷ್ಟ್ರಗಳ ಲಕ್ಷಾಂತರ ಮಂದಿ ಟ್ವೀಟ್ ಮಾಡಿದ್ದಾರೆ. ಇದರ ಪರಿಣಾಮವು ಅಂತರ್ಜಾಲ ಜಗತ್ತಿನಿಂದ ಹೊರಗೂ ಕಾಣಿಸಿಕೊಂಡಿತು.

#MeToo ಅಭಿಯಾನ ಶುರುವಾಗುವ ಮೊದಲೇ, ಲೈಂಗಿಕ ಕಿರುಕುಳ ಎಂಬುದು ಅಮೆರಿಕದಲ್ಲಿ ಚರ್ಚೆಯ ಕೇಂದ್ರವಾಗಿತ್ತು. ಜಗತ್ತಿನ ವಿವಿಧೆಡೆಯ ಅಂದಾಜು ಐವತ್ತು ಲಕ್ಷ ಮಹಿಳೆಯರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳದ ಆರೋಪ ಮತ್ತು ಅವರು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಮಾತುಗಳಿಗೆ ಸಂಬಂಧಿಸಿದಂತೆ 2017ರ ಜನವರಿಯಲ್ಲಿ ಪ್ರತಿಭಟನೆ ನಡೆಸಿದರು. ಇದಾದ ನಂತರದ ತಿಂಗಳುಗಳಲ್ಲಿ ಕೆಲವು ಪ್ರಮುಖ ಲೈಂಗಿಕ ಕಿರುಕುಳ ಪ್ರಕರಣಗಳು ಬಯಲಿಗೆ ಬಂದವು. ಆದರೆ, ಹಾಲಿವುಡ್ ನಿರ್ಮಾಪಕ ಹ್ಯಾರ್ವಿ ವೈನ್‌ಸ್ಟೈನ್‌ ಅವರು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿ ಎಂಬ ವರದಿಗಳು ಮಹತ್ವ ಪಡೆದುಕೊಂಡವು.

ADVERTISEMENT

ಹಾಲಿವುಡ್ ನಟಿ ಅಲಿಸ್ಸಾ ಮಿಲಾನೊ ಅವರು ಅಕ್ಟೋಬರ್‌ 15ರಂದು ಒಂದು ಟ್ವೀಟ್‌ ಮಾಡಿ, ಲೈಂಗಿಕ ಕಿರುಕುಳಕ್ಕೆ ಗುರಿಯಾದ ಮಹಿಳೆಯರು #MeToo ಹ್ಯಾಷ್‌ಟ್ಯಾಗ್‌ ಬಳಸಿ ಪ್ರತಿಕ್ರಿಯೆ ನೀಡುವಂತೆ ಕೋರಿದರು. ಲೈಂಗಿಕ ಕಿರುಕುಳ ಎಂಬುದು ಎಷ್ಟರಮಟ್ಟಿಗೆ ವ್ಯಾಪಕವಾಗಿದೆ ಎಂಬುದನ್ನು ಮತ್ತು ಇಂಥ ಕೃತ್ಯಗಳ ವಿರುದ್ಧ ಮಹಿಳೆಯರು ಒಗ್ಗಟ್ಟಾಗಿ ನಿಲ್ಲುತ್ತಾರೆ ಎಂಬುದನ್ನು ತೋರಿಸುವ ಉದ್ದೇಶ ಅವರದ್ದಾಗಿತ್ತು. ಈ ಪದವನ್ನು ಮೊದಲು ಬಳಕೆ ಮಾಡಿದ್ದು ಸಾಮಾಜಿಕ ಕಾರ್ಯಕರ್ತೆ ತರಾನಾ ಬರ್ಕ್‌ ಅವರು. 2006ರಲ್ಲಿ ಅವರು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಯುವತಿಯರ ಬೆಂಬಲಕ್ಕೆ ನಿಲ್ಲುವ ಇರಾದೆಯಿಂದ ಈ ಪದ ಬಳಸಿದ್ದರು.

ಅಲಿಸ್ಸಾ ಅವರು ಟ್ವೀಟ್‌ ಮಾಡಿದ ಕೆಲವೇ ದಿನಗಳಲ್ಲಿ, ವಿಶ್ವದ ವಿವಿಧ ಭಾಗಗಳ ಲಕ್ಷಾಂತರ ಮಹಿಳೆಯರು #MeToo ಹ್ಯಾಷ್‌ಟ್ಯಾಗ್‌ ಬಳಸಿ ತಾವು ಹೇಗೆ ಕಿರುಕುಳಕ್ಕೆ ಗುರಿಯಾಗಿದ್ದೆವು ಎಂಬುದನ್ನು ಹೇಳಿಕೊಂಡರು. ಹೀಗೆ ಹೇಳಿಕೊಂಡವರಲ್ಲಿ ಬೇರೆ ಬೇರೆ ಉದ್ಯೋಗಗಳಲ್ಲಿ ಇದ್ದವರು, ಬೇರೆ ಬೇರೆ ಪ್ರಮಾಣದ ಆದಾಯ ಹೊಂದಿದ್ದವರು ಇದ್ದರು. ಎಂಜಿನಿಯರ್‌ಗಳು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಉದ್ಯಮಿಗಳು, ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು, ತೋಟ–ಗದ್ದೆಗಳಲ್ಲಿ ಕೆಲಸ ಮಾಡುವವರು ಕೂಡ ಇದ್ದರು. ಹೀಗೆ ತಮ್ಮ ಕಥೆಯನ್ನು ಹೇಳಿಕೊಂಡ ಕೆಲವು ಮಹಿಳೆಯರು ತಮಗೆ ಉದ್ಯೋಗ ಕೊಟ್ಟವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಆದರೆ, ಕೆಲವು ದೊಡ್ಡ ಪ್ರಕರಣಗಳಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಿದ ವರದಿಗಳೂ ಬಂದವು. ಉಬರ್ ಕಂಪನಿಯ ಸಿಇಒ (ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ) ಟ್ರಾವಿಸ್ ಕಾಲನಿಕ್, ಟಿ.ವಿ. ಕಾರ್ಯಕ್ರಮವೊಂದರ ನಿರೂಪಕ ಮ್ಯಾಟ್ ಲಾವರ್‌ ಅವರನ್ನು ವಜಾಗೊಳಿಸಿದ್ದೂ ಇವುಗಳಲ್ಲಿ ಸೇರಿವೆ. ಅಮೆರಿಕದ ಜಿಮ್ನಾಸ್ಟಿಕ್‌ ತಂಡದ ಮಾಜಿ ವೈದ್ಯ ಲ್ಯಾರಿ ನಸ್ಸರ್‌ಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಅಡಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಪತ್ರಕರ್ತರೊಬ್ಬರು ಮಾಡಿದ ಆರೋಪವನ್ನು ಒಪ್ಪಿಕೊಂಡು ಬ್ರಿಟನ್ನಿನ ರಕ್ಷಣಾ ಕಾರ್ಯದರ್ಶಿ ಮೈಕೆಲ್ ಫಾಲನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಅಧಿಕಾರಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಾಗ, ಐರೋಪ್ಯ ಸಂಸತ್ತು ಒಂದು ಕಲಾಪ ನಡೆಸಿ ಚರ್ಚಿಸಿತು. ಫ್ರಾನ್ಸ್‌ ಮತ್ತು ಅಮೆರಿಕಗಳಲ್ಲಿ ಮಹಿಳೆಯರು ಬೀದಿ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟಿಸಿದರು.

ಇಡೀ ಚರ್ಚೆಯ ಕೇಂದ್ರಬಿಂದುವನ್ನು ಲೈಂಗಿಕ ಕಿರುಕುಳಕ್ಕೆ ತುತ್ತಾದವರ ಬದಲು, ಕಿರುಕುಳ ನೀಡಿದವರತ್ತ ತಿರುಗಿಸಬೇಕು ಎಂದು ಕೆಲವು ಮಹಿಳೆಯರು ಒಂದು ಹಂತದಲ್ಲಿ ಅಭಿಪ್ರಾಯಪಟ್ಟರು. ಇದರ ಪರಿಣಾಮವಾಗಿ #HimToo ಎಂಬ ಹ್ಯಾಷ್‌ಟ್ಯಾಗ್‌ ಅಭಿಯಾನ ನಡೆಯಿತು. ಇದರಲ್ಲಿ ಮಹಿಳೆಯರು ತಮಗೆ ಕಿರುಕುಳ ನೀಡಿದ ಪುರುಷರ ಹೆಸರು ಬಹಿರಂಗಪಡಿಸಿದರು. ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿದ್ವಾಂಸನೊಬ್ಬ ಸೇರಿದಂತೆ ಹಲವು ಪ್ರಮುಖ ಶಿಕ್ಷಣ ತಜ್ಞರಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಬಗ್ಗೆ ಅಮೆರಿಕದ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದ ಪ್ರೊಫೆಸರ್ ಸಿ. ಕ್ರಿಸ್ಟೀನ್‌ ಫೇರ್‌ ಅವರು ಬರೆದರು. ಕ್ರಿಸ್ಟೀನ್‌ ಅವರು ಹಫಿಂಗ್ಟನ್‌ ಪೋಸ್ಟ್‌ ಪತ್ರಿಕೆಗೆ ಬರೆದ ಲೇಖನವನ್ನು ತೆಗೆದುಹಾಕಲಾಯಿತು. ಆದರೆ, ಬೇರೆಯವರ ಹೆಸರುಗಳು ಬಹಿರಂಗವಾಗುವು ಶುರುವಾಯಿತು.

ಅಮೆರಿಕದಲ್ಲಿ ವಿದ್ಯಾರ್ಥಿಯಾಗಿರುವ 24 ವರ್ಷ ವಯಸ್ಸಿನ ರಾಯಾ ಸರ್ಕಾರ್ ಎನ್ನುವ ಕಾನೂನು ಪದವೀಧರೆ, ಲೈಂಗಿಕ ಕಿರುಕುಳ ನಡೆಸಿದ ಆರೋಪ ಎದುರಿಸುತ್ತಿರುವ ಭಾರತದ 72 ಶಿಕ್ಷಣ ತಜ್ಞರ ಹೆಸರನ್ನು ಫೇಸ್‌ಬುಕ್‌ ಮೂಲಕ ಬಹಿರಂಗಪಡಿಸಿದರು. ಈ ಹೆಸರುಗಳನ್ನು ಅವರು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದರು. ಪ್ರಗತಿಪರ ಎಂದು ಗುರುತಿಸಿಕೊಂಡಿರುವ ಶಿಕ್ಷಣ ತಜ್ಞರ ಹೆಸರುಗಳೂ ಈ ಪಟ್ಟಿಯಲ್ಲಿ ಇದ್ದವು. ಆದರೆ, ಅವರ ವಿರುದ್ಧ ಇರುವ ದೂರುಗಳ ವಿವರ ಅಥವಾ ದೂರುದಾರರ ವಿವರ ಅದರಲ್ಲಿ ಇರಲಿಲ್ಲ. ಹಲವರು ಈ ಪಟ್ಟಿಗೆ ಬೆಂಬಲ ಸೂಚಿಸಿದರು, ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಹಂಚಿಕೊಂಡರು. ಆದರೆ, ಕೆಲವರು ಇದರ ಬಗ್ಗೆ ತಮ್ಮದೇ ಆದ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು, ಪಟ್ಟಿಯು ದುರ್ಬಳಕೆ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ನಿವೇದಿತಾ ಮೆನನ್‌ ಮತ್ತು ಕವಿತಾ ಕೃಷ್ಣನ್ ಸೇರಿದಂತೆ ಹದಿನಾಲ್ಕು ಜನ ಪ್ರಮುಖ ಮಹಿಳಾವಾದಿಗಳು ಒಂದು ಪ್ರಕಟಣೆ ನೀಡಿ, ಈ ಪಟ್ಟಿಯನ್ನು ಹಿಂಪಡೆಯುವಂತೆ ಕೋರಿದರು. ಯಾವ ಗಂಡಸಿನ ವಿರುದ್ಧ ಬೇಕಿದ್ದರೂ ಇಂತಹ ಆರೋಪಗಳನ್ನು ಹೊರಿಸಿಬಿಡಬಹುದು, ಇದರ ಬದಲು ದೂರು ನೀಡುವ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು. ಕ್ರಮ ಕೈಗೊಳ್ಳಲು ಇಂಥದ್ದೊಂದು ವ್ಯವಸ್ಥೆ ಬೇಕು ಎಂದು ಹಿಂದಿನ ತಲೆಮಾರಿನ ಈ ಮಹಿಳಾವಾದಿಗಳು ಹೋರಾಟಗಳನ್ನು ನಡೆಸಿದ್ದವರು. ಆರೋಪಗಳಿಗೆ ಸೂಕ್ತವಾದ ಆಧಾರಗಳು ಇವೆ, ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣಕ್ಕಾಗಿಯೇ ಈ ಒಂದು ಪಟ್ಟಿ ಸಿದ್ಧವಾಗಿದೆ, ಪ್ರೊಫೆಸರ್‌ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶ ಈ ಪಟ್ಟಿಯ ಹಿಂದೆ ಇದೆ ಎಂದು ರಾಯಾ ಪ್ರತಿಕ್ರಿಯೆ ನೀಡಿದರು.

ತಮ್ಮ ಗುಂಪುಗಳಿಗೆ, ಕೂಟಗಳಿಗೆ ಸೇರಿದ ಪುರುಷರನ್ನು ರಕ್ಷಿಸಿಕೊಳ್ಳುವ ‘ಸವರ್ಣ ಸ್ತ್ರೀವಾದ’ವನ್ನು ಹಿರಿಯ ಮಹಿಳಾವಾದಿಗಳು ಅನುಸರಿಸುತ್ತಿದ್ದಾರೆ ಎಂದು ಪಟ್ಟಿ ಬಹಿರಂಗಪಡಿಸಿದ್ದನ್ನು ಬೆಂಬಲಿಸಿದ ಹಲವು ಮಹಿಳಾವಾದಿಗಳು ಹೇಳಿದರು. ಈ ಪಟ್ಟಿಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ಹೆಣ್ಣುಮಕ್ಕಳಿಗೆ ಬೆಂಬಲ ಸೂಚಿಸಿ ಕೋಲ್ಕತ್ತದ ಸಿಎಸ್‌ಎಸ್‌ಎಸ್‌ ಮತ್ತು ಅದರಂತಹ ದೊಡ್ಡ ಸಂಸ್ಥೆಗಳ ವಿದ್ಯಾರ್ಥಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಆದರೆ, ಇಷ್ಟೆಲ್ಲ ಮಾತುಕತೆಗಳು ನಡೆದರೂ, ಆರೋಪ ಎದುರಿಸುತ್ತಿರುವ ವ್ಯಕ್ತಿಗಳನ್ನು ಅವರು ಕೆಲಸ ಮಾಡುತ್ತಿರುವ ಸಂಸ್ಥೆಗಳಾಗಲಿ, ಅವರ ಮೇಲಧಿಕಾರಿಗಳಾಗಲಿ ವಿಚಾರಣೆಗೆ ಒಳಪಡಿಸಲಿಲ್ಲ.

ಬಾಲಿವುಡ್‌ನಲ್ಲಿ ವ್ಯಾಪಕವಾಗಿ ಇರುವ ಲೈಂಗಿಕ ಕಿರುಕುಳದ ಬಗ್ಗೆ ನಟಿ ಸ್ವರಾ ಭಾಸ್ಕರ್ ದನಿ ಎತ್ತಿದರು. ಲೈಂಗಿಕ ಕಿರುಕುಳ ಕೊನೆಗಾಣಿಸಲು ಸಾಮಾಜಿಕ ನಿಯಮಗಳನ್ನು ಬದಲಿಸಬೇಕು ಎಂಬ ಚರ್ಚೆಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುವಂತೆ ಮಾಡಿತು ಈ ಅಭಿಯಾನ. ಜಾಗತಿಕ ಮಟ್ಟದಲ್ಲಿ ಈ ಅಭಿಯಾನಕ್ಕೆ ವಿರೋಧಗಳೂ ವ್ಯಕ್ತವಾಗಿವೆ. ವರದಿಯಾದ ಪ್ರಕರಣಗಳು ತೀರಾ ಸಾಮಾನ್ಯ ಎಂದು ಕೆಲವರು ಹೇಳಿದರು. ಇನ್ನು ಕೆಲವರು ‘ಸಣ್ಣ’ ಪ್ರಕರಣಗಳನ್ನು ಬಹಿರಂಗಪಡಿಸುವುದರಿಂದ ಪುರುಷರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಅಮೆರಿಕದಲ್ಲಿ ಈಗ ಈ ಅಭಿಯಾನವು ಕಾನೂನು ಮತ್ತು ನೀತಿಗಳಲ್ಲಿ ಬದಲಾವಣೆ ತರುವತ್ತ, ಕಿರುಕುಳಕ್ಕೆ ಗುರಿಯಾದವರಿಗೆ ಹಣಕಾಸಿನ ನೆರವು ಒದಗಿಸುವತ್ತ ಗಮನ ಹರಿಸಿದೆ. ಈ ಅಭಿಯಾನದ ಪರಿಣಾಮ ಅಮೆರಿಕದಲ್ಲಿ ಕಾಣುವಷ್ಟರಮಟ್ಟಿಗೆ ನಮ್ಮ ದೇಶದಲ್ಲಿ ಕಾಣುತ್ತಿಲ್ಲವಾದರೂ, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಚರ್ಚೆಗಳು ಮುಂದುವರಿದಿವೆ – ಕಿರುಕುಳಕ್ಕೆ ಸಂಬಂಧಿಸಿದ ಘಟನೆಗಳನ್ನು ದಾಖಲಿಸಲಾಗುತ್ತಿದೆ, ದೌರ್ಜನ್ಯಕ್ಕೆ ಗುರಿಯಾದವರು ಒಗ್ಗಟ್ಟಿನಿಂದ ನಿಂತುಕೊಳ್ಳುತ್ತಿದ್ದಾರೆ. ಹಲವು ಮಹಿಳೆಯರ ಪಾಲಿಗೆ ಈಗ ಇದು ಏಕಾಂಗಿ ಯುದ್ಧ ಅಲ್ಲ.

-ನವ್ಯಾ ಪಿ.ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.