ADVERTISEMENT

ಹೈಕ್ಯಾಲ್‍ ಎನ್ನುವ ಸುಜಯಗಾಥೆ!

ಹರವು ಸ್ಫೂರ್ತಿ
Published 8 ಮಾರ್ಚ್ 2018, 4:04 IST
Last Updated 8 ಮಾರ್ಚ್ 2018, 4:04 IST
ಸುಜಯಾ, ಚಿತ್ರ: ರಂಜು ಪಿ.
ಸುಜಯಾ, ಚಿತ್ರ: ರಂಜು ಪಿ.   

ನೈತಿಕವಾಗಿ ಅಸಮರ್ಪಕ ಮಾರ್ಗದಲ್ಲಿ ಏನನ್ನೂ ಪಡೆಯಬಾರದು. ಕಾನೂನುಗಳನ್ನು ಉಲ್ಲಂಘಿಸಬಾರದು. ಮೋಸ ಮಾಡಬಾರದು - ಇವು ‘ಹೈಕ್ಯಾಲ್‍ ಟೆಕ್ನಾಲಜೀಸ್‍ ಲಿಮಿಟೆಡ್‍'ನ ವ್ಯವಸ್ಥಾಪಕ ನಿರ್ದೇಶಕಿ ಸುಜಯಾ ಅವರು ನೆಚ್ಚಿರುವ ತ್ರಿವಳಿ ಸೂತ್ರಗಳು.

‘ನಮ್ಮೆಲ್ಲ ವ್ಯವಹಾರಗಳು ಪಾರದರ್ಶಕವಾಗಿ ಇರುವುದರಿಂದ ನಮ್ಮೊಳಗೆ ವಿಶೇಷವಾದ ನೈತಿಕ ಧೈರ್ಯವಿದೆ. ಎಲ್ಲಾದರೂ ಧೈರ್ಯವಾಗಿ ನಿಲ್ಲಬಲ್ಲೆ ಎನ್ನುವಂಥ ಶಕ್ತಿಯುತವಾದ ಬದುಕನ್ನು ಕಟ್ಟಿಕೊಂಡಿದ್ದೇನೆ. ಈ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಾ ಇದರೊಂದಿಗೆ ನಾನೂ ಬೆಳೆದಿದ್ದೇನೆ’ ಎನ್ನುವ ಸುಜಯಾ ಅವರ ಮಾತುಗಳು, ಉದ್ಯಮದಲ್ಲಿ ಅಪರೂಪವಾದ, ಆದರೆ ಅಗತ್ಯವಾದ ನೈತಿಕತೆಯನ್ನು ಸೂಚಿಸುವಂತಿವೆ.

‘ಹೈಕ್ಯಾಲ್‍’ ಸಂಸ್ಥೆ ರೂಪುಗೊಂಡಿದ್ದರ ಹಿಂದೆ ಇರುವುದು ಸಣ್ಣದೊಂದು ಸ್ನೇಹಿತರ ಗುಂಪು. ಅದನ್ನು ಸುಜಯಾ ನೆನಪಿಸಿಕೊಳ್ಳು ವುದು ಹೀಗೆ: ‘ನನ್ನ ಪತಿ ಶಶಿಕಿರಣ್ ತಮ್ಮ ಸ್ವಂತ ಉದ್ಯಮದ ಕನಸಿನ ಬೆನ್ನು ಹತ್ತಿ ಬೆಂಗಳೂರಿನ ಕುಮಾರ ಪಾರ್ಕ್‌ನಲ್ಲಿರುವ ಸಂಬಂಧಿಕರ ಔಟ್‍‌ಹೌಸ್‌ನಲ್ಲಿ ಕಂಪನಿ ಆರಂಭಿಸಿದ್ದರು. ಅದಕ್ಕೆ ನಾನು ಮತ್ತು ಇನ್ನಿಬ್ಬರು ಗೆಳೆಯರು ಸೇರಿಕೊಂಡೆವು. ಕನಸು ಬೆಳೆಯಿತು. ಪ್ರತಿದಿನ ಕೂತು ಹೊಸದಾಗಿ ಏನೇನೋ ಯೋಚಿಸುತ್ತಿದ್ದೆವು. ಅಷ್ಟರಲ್ಲಿ ಶಶಿಕಿರಣ್ ಕೆಲಸ ಮಾಡುತ್ತಿದ್ದ ಕಂ‍ಪನಿ ಹಾಗೂ ಬಿಇಎಲ್‌ ಸಂಸ್ಥೆಯಿಂದ ಎಲೆಕ್ಟ್ರಾನಿಕ್‌ ಅಸೆಂಬಲ್‌ ಉತ್ಪನ್ನಗಳನ್ನು ತಯಾರಿಸುವ ಗುತ್ತಿಗೆ ಸಿಕ್ಕಿತು’. ಹೀಗೆ 1988ರಲ್ಲಿ ಆರಂಭವಾದ ಹೈಕ್ಯಾಲ್‌ ಸಂಸ್ಥೆಯ ಹುಟ್ಟನ್ನು ಸುಜಯಾ ವಿವರಿಸುತ್ತಾರೆ.

ADVERTISEMENT

ನಾಲ್ವರು ಗೆಳೆಯರ ಕನಸಿನ ಸಂಸ್ಥೆ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ತಯಾರಿಸುವ ಉದ್ಯಮಕ್ಕೆ ಸರ್ಕಾರದಿಂದ ಪಡೆದ 2.5 ಲಕ್ಷ ರೂಪಾಯಿ ಬಂಡವಾಳವೇ ಮೂಲಧನ. ಫ್ಯಾಕ್ಟರಿ ಶುರುವಾದಾಗ, ಅಕ್ಕಪಕ್ಕದವರು ‘ನಾವೂ ಬರುತ್ತೇವೆ’ ಎಂದು ಸ್ವಯಂ ಪ್ರೇರಣೆಯಿಂದ ಕೆಲಸಕ್ಕೆ ಸೇರಿಕೊಂಡಿದ್ದಾರೆ. ‘ಹತ್ತಾರು ಜನರಿಗೆ ಕಲಿಸಿದೆ, ಕಂಪನಿಯೊಂದಿಗೆ ನಾನೂ ಬೆಳೆದೆ’ ಎನ್ನುವುದು ಅವರ ಅನುಭವ.

ಮಾರುಕಟ್ಟೆಯ ಸವಾಲು: ಸ್ಟಾರ್ಟ್‌ಅಪ್ ಕಂಪನಿಗಳು ಜನಪ್ರಿಯವಾಗಿರುವ ದಿನಗಳಿವು. ಉತ್ಸಾಹ ಇದ್ದರೆ ಪೂರಕವಾದ ಸಂಪನ್ಮೂಲ ಹಾಗೂ ಅವಕಾಶ ದೊರೆಯುವುದು ಅಷ್ಟೇನೂ ಕಷ್ಟವಲ್ಲದ ಸಂದರ್ಭ ಇಂದಿನದು. ಆದರೆ, ಸುಜಯಾ ಮತ್ತು ಶಶಿಕಿರಣ್ ‘ಹೈಕ್ಯಾಲ್’ ಆರಂಭಿಸಿದಾಗ ಒಂದು ಪರವಾನಗಿ ಪಡೆಯಬೇಕೆಂದರೆ ದೆಹಲಿಗೆ ಹೋಗಬೇಕಿತ್ತು. ಆಗ ಭಾರತದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ಗಳಿಗೆ ಪೂರಕ ಮಾರುಕಟ್ಟೆ ಇರಲಿಲ್ಲ. ಹೀಗಾಗಿ ತಮ್ಮ ಉತ್ಪನ್ನ ಗಳನ್ನು ರಫ್ತು ಮಾಡುವ ಆಲೋಚನೆಯಲ್ಲಿದ್ದ ಈ ಜೋಡಿಗೆ, ‘ಭಾರತೀಯರು ಗುಣಮಟ್ಟದ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರು ಮಾಡಬಲ್ಲರು’ ಎನ್ನುವುದನ್ನು ವಿದೇಶಿ ಗ್ರಾಹಕರಿಗೆ ಮನವರಿಕೆ ಮಾಡುವುದೇ ಬಹುದೊಡ್ಡ ಸವಾಲಾಗಿತ್ತು.

‘ಚೀನಾದಲ್ಲಿ ನಮ್ಮಂತಹ ಸಾವಿರಾರು ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕಾ ಸಂಸ್ಥೆಗಳು ಇದ್ದವು. ನಮಗಿಂತಲೂ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ಪೂರೈಸುತ್ತಿದ್ದವು. ಇವರ ನಡುವೆ ನಾವು ಹೇಗೆ ಭಿನ್ನ ಎಂದುಕೊಳ್ಳುವಾಗ, ಹೊಳೆದದ್ದು ಗುಣಮಟ್ಟದ ಮಂತ್ರ. ಅಂದಿನಿಂದ ಇಂದಿನವರೆಗೂ ಗುಣಮಟ್ಟ ಕಾಪಾಡುವುದೇ ನಮ್ಮ ವೃತ್ತಿ ಬದ್ಧತೆಯಾಗಿದೆ. ನಾಳೆಯಿಂದಲೇ ನೂರಾರು ಕೋಟಿ ಆದಾಯ ಮಾಡಬೇಕು ಎಂಬ ಆಲೋಚನೆ ನಮಗಿರಲಿಲ್ಲ’ ಎಂದು ಸುಜಯಾ ನಡೆದುಬಂದ ದಾರಿಯನ್ನು ನೆನಪಿಸಿಕೊಳ್ಳುತ್ತಾರೆ.

ಬೋಯಿಂಗ್ ಸೇರಿದಂತೆ ವಿಮಾನ ತಯಾರಿಕಾ ಕ್ಷೇತ್ರದಲ್ಲಿರುವ ಪ್ರಮುಖ ಸಂಸ್ಥೆಗಳಿಗೆ ಬಿಡಿಭಾಗಗಳನ್ನು ಪೂರೈಸುವ ಭಾರತೀಯ ಸಂಸ್ಥೆಗಳಲ್ಲಿ ಹೈಕ್ಯಾಲ್‌ಗೆ ಅಗ್ರಸ್ಥಾನವಿದೆ. ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಬಿಡಿಭಾಗಗಳನ್ನೂ ಒದಗಿಸುವ ಈ ಸಂಸ್ಥೆ ‘ಜೀರೊ ಡಿಫೆಕ್ಟ್‌’ ಉತ್ಪನ್ನ ನೀಡುವುದನ್ನೇ ತನ್ನ ಧ್ಯೇಯವಾಗಿಸಿಕೊಂಡಿದೆ.

ಶಿಕ್ಷೆ ಮತ್ತು ಶಿಕ್ಷಣ: ‘ನಮ್ಮ ಸಂಸ್ಥೆಯಲ್ಲಿ ‘ಸೈನಿಂಗ್‌ ಐ’ ಎಂಬ ಚಟುವಟಿಕೆಯನ್ನು ಮಾಡುತ್ತಿದ್ದೇವೆ. ಒಬ್ಬರಿಗೊಬ್ಬರು ಸಹಾಯ ಮಾಡುವುದು ಹಾಗೂ ನಾವಿರುವ ಪರಿಸರದಲ್ಲಿ ಸಂತೋಷ ಸೃಷ್ಟಿಸುವ ಬಗ್ಗೆ ಚರ್ಚೆಗಳನ್ನು ನಡೆಸುತ್ತೇವೆ. ಬದಲಾವಣೆ ರಾತ್ರೋರಾತ್ರಿ ಸಂಭವಿಸುವ ಪವಾಡವಲ್ಲ. ನಾವು ಹತ್ತು ಜನರಿಗೆ ಸಾಮಾಜಿಕ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಿದರೆ, ಅವರು ಮತ್ತಷ್ಟು ಜನರಿಗೆ ಈ ಬಗ್ಗೆ ಹೇಳಿಕೊಡುತ್ತಾರೆ ಎನ್ನುವ ಸುಜಯಾ ಅವರಿಗೆ ಸಾಮಾಜಿಕ ಸಂಬಂಧಗಳ ಕುರಿತು ನೆಚ್ಚುಗೆ.

‘ಕೆಲವೊಮ್ಮೆ ಮಾತಿನಿಂದಲೇ ಎಲ್ಲವೂ ಬಗೆಹರಿಯುವುದಿಲ್ಲ,  ಕಾನೂನು ರುಚಿ ತೋರಿಸಬೇಕಾಗುತ್ತದೆ. ಶಿಕ್ಷೆ ಮತ್ತು ಶಿಕ್ಷಣ ಎರಡೂ ಬೇಕು. ಮೋಸ ಮಾಡದೆ ನ್ಯಾಯವಾಗಿ ನಾವು ಬದುಕಬೇಕು, ನಮ್ಮ ಜೊತೆಯವರಿಗೂ ಅಂತೆಯೇ ಬದುಕಲು ಪ್ರೋತ್ಸಾಹಿಸಬೇಕು’ ಎನ್ನುವ ಧೋರಣೆ ಸುಜಯಾ ಅವರದ್ದು.

ಹೈಕ್ಯಾಲ್ ಸಂಸ್ಥೆ ಸಾಮಾಜಿಕ ಕಳಕಳಿಗಾಗಿ ಹಲವು ಚಟುವಟಿಕೆ ಗಳನ್ನು ಮಾಡುತ್ತಿದ್ದು. ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಅಡಿಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತದೆ. ಸ್ಮಾರಕಗಳ ಜೀರ್ಣೋದ್ಧಾರಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೂ ಹಣ ಸಹಾಯ ಮಾಡುತ್ತಿದೆ. ಕುರುಡು ಮಕ್ಕಳ ಶಾಲೆ, ಪರಿಸರ ಸಂರಕ್ಷಣೆಗಾಗಿ ದುಡಿಯುವ ಸಂಸ್ಥೆಗಳಿಗೆ ನೆರವು ನೀಡುತ್ತಿದೆ.

ಸಾಹಿತ್ಯಾಸಕ್ತಿ ಹೊಂದಿರುವ ಶಶಿಕಿರಣ್ ಹಾಗೂ ಸುಜಯಾ ‘ಕೆಂಡಸಂಪಿಗೆ’ ಎನ್ನುವ ಸಾಹಿತ್ಯ ಸಂಬಂಧಿ ವೆಬ್ ಮ್ಯಾಗಜೀನ್ ನಡೆಸುವುದಕ್ಕೆ ಬೆನ್ನೆಲುಬಾಗಿದ್ದಾರೆ.

ಮಹಿಳೆ ಎನ್ನುವುದನ್ನು ಮರೆತುಬಿಡಿ
‘ವಾಣಿಜ್ಯೋದ್ಯಮಿಯಾಗಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಬೆಳೆಯಬೇಕು ಎಂದರೆ ಮಹಿಳೆ ಎನ್ನುವುದನ್ನೇ ಮರೆಯಬೇಕು’ ಎನ್ನುವುದು ಸುಜಯಾ ಅವರ ನಿಲುವು. 'ಮಹಿಳೆ ಎನ್ನುವುದನ್ನು ವಿಶೇಷ ಸವಲತ್ತಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಮಗ ಹುಟ್ಟಿದ ಮೇಲೂ ಸಂಸಾರದ ಜವಾಬ್ದಾರಿ ಇದೆ ಎಂದು ನಾನು ತಲೆಕೆಡಿಸಿಕೊಳ್ಳಲಿಲ್ಲ. ಎರಡು ತಿಂಗಳ ಮಗು ಎತ್ತಿಕೊಂಡು ಕಾರ್ಖಾನೆಗೆ ಬಂದುಬಿಡುತ್ತಿದ್ದೆ' ಎನ್ನುತ್ತಾರೆ.

‘ಇಷ್ಟಪಟ್ಟು ಮಾಡುವ ಕೆಲಸ ಎಂದೂ ಸವಾಲು ಎನಿಸುವುದಿಲ್ಲ. ಮಹಿಳೆ ಎಂಬ ಕಾರಣಕ್ಕೆ ನಿತ್ಯ ಕೆಲಸಗಳನ್ನೆಲ್ಲ ಸವಾಲು ಎಂದುಕೊಳ್ಳಲೂ ಸಾಧ್ಯವಿಲ್ಲ. ಸಮಸ್ಯೆಗಳನ್ನು ನೋಡುವ ರೀತಿ ಬದಲಾಗಬೇಕು. ಪುರುಷರಿಗಿಂತಲೂ ನಮಗೆ ಭಿನ್ನ ಜವಾಬ್ದಾರಿಗಳಿರುತ್ತವೆ. ಅವುಗಳನ್ನು ನಿಭಾಯಿಸುವ ಕೌಶಲ ನಮಗಿರಬೇಕು. ಪುರುಷರನ್ನು ಹೊರಗಿಟ್ಟು ಮಹಿಳಾ ಸಬಲೀಕರಣ ಮಾಡುವುದು ಕ್ಲೀಷೆ ಎನಿಸುತ್ತದೆ. ಶೋಷಣೆಯ ವಿರುದ್ಧ ದನಿ ಎತ್ತುವುದು ಎಂದರೆ ಗಂಡುಕುಲವನ್ನು ದೂಷಿಸುವುದಲ್ಲ. ಸಹಬಾಳ್ವೆ ಸೌಹಾರ್ದತೆಯಿಂದ ಗೌರವಿಸಿ ಪ್ರೀತಿಸಿದರೆ ಸಾಕು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.