ADVERTISEMENT

ರಾಧೆ: ರೂಪ ರೂಪಕಗಳ ದಾಟಿ...

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 4:05 IST
Last Updated 8 ಮಾರ್ಚ್ 2018, 4:05 IST
ಮಂಜುಳಾ ಸುಬ್ರಹ್ಮಣ್ಯ
ಮಂಜುಳಾ ಸುಬ್ರಹ್ಮಣ್ಯ   

ಮಂಜುಳಾ ಸುಬ್ರಹ್ಮಣ್ಯ

ಸಮಾಜದ ಸಿದ್ಧ ಚೌಕಟ್ಟನ್ನು ಮೀರಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳುವ ಹೆಣ್ಣಿನ ಜೀವಂತಿಕೆಯ ಸಂಕೇತವಾಗಿ ರಾಧೆ ನನ್ನನ್ನು ವೈಯಕ್ತಿಕವಾಗಿ ಸದಾ ಕಾಡುತ್ತಾಳೆ. ಈ ಕಾಡುವಿಕೆಯ ಅಭಿವ್ಯಕ್ತಿಯೇ ನನ್ನ ‘ರಾಧಾ’ ಏಕವ್ಯಕ್ತಿ ರಂಗಪ್ರಯೋಗ.

ಡಾ. ಶ್ರೀಪಾದ ಭಟ್‌ ನಿರ್ದೇಶನದ ‘ರಾಧಾ’ ರಂಗ ಪ್ರಯೋಗದಲ್ಲಿ ಭರತನಾಟ್ಯ, ಕಳರಿಪಯಟ್ಟು, ಮತ್ತು ಸಂಭಾಷಣೆ ಸೇರಿದ್ದು ಅಪರೂಪದ ಶೈಲಿಯಲ್ಲಿದೆ. ರಾಜ್ಯದ ವಿವಿಧೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಬಿಳಿಗೂದಲ ಮುದುಕಿ ರಾಧಾ, ನೆನಪುಗಳ ಲೋಕವನ್ನು ಹರಡಿಕೊಳ್ಳುವ ಮೂಲಕ ಈ ಪ್ರದರ್ಶನ ಆರಂಭವಾಗುತ್ತದೆ. ಕೃಷ್ಣನೊಡನೆ ಪ್ರೇಮ, ಅಕ್ರೂರನೊಡನೆ ಅವನು ತೆರಳಿದ ಸಂದರ್ಭದ ನೋವು, ಮದುವೆಯಾಗುವಂತೆ ಚಿಕ್ಕಮ್ಮನ ಒತ್ತಡ, ಕೃಷ್ಣನ ಹುಡುಕುತ್ತ ಮಥುರಾಕ್ಕೆ ತೆರಳಿದ ಸಂದರ್ಭದಲ್ಲಿನ ರಾಸಲೀಲೆ, ಸಾಧ್ಯವಾಗದ ಮದುವೆ ಮತ್ತು ‘ಒಲವೇ ಕೃಷ್ಣ’ ಎಂಬ ಸಾಕ್ಷಾತ್ಕಾರದೊಂದಿಗೆ ಒಲವನ್ನೇ ಬದುಕುವ ಆಕೆಯ ನಿರ್ಧಾರ – ಪ್ರೇಮದ ಸಾಧ್ಯತೆಯನ್ನು ವಿಸ್ತರಿಸುತ್ತ ಹೋಗುವ ಕಥೆಯಿದು.

ADVERTISEMENT

ಈ ಪ್ರಸ್ತುತಿ ವೈಯಕ್ತಿಕವಾಗೂ ಮಹತ್ವದ ಹೊಳಹುಗಳನ್ನು ನೀಡಿದೆ. ‘ಕೃಷ್ಣನೊಡನೆ ಮದುವೆ ಸಾಧ್ಯವಿಲ್ಲ ಎಂದು ಅರಿವಾದ ಬಳಿಕ ರಾಧೆ, ಮನೆ ತೊರೆದು ಬಂದು, ತನ್ನದೇ ಲೋಕವನ್ನು ಕಟ್ಟಿಕೊಳ್ಳುತ್ತಾಳೆ. ಅವಳ ಈ ಪ್ರಯತ್ನದಲ್ಲಿ ಬದುಕಿನ ವಾಸ್ತವದತ್ತ ಆಕ್ರೋಶ, ಹತಾಶೆ ಇಲ್ಲ. ಪ್ರಕೃತಿ ಹೇಗೆ ಚಲನಶೀಲವಾಗಿದೆಯೋ ಅದೇ ಮಾದರಿಯಲ್ಲಿ ಗೋವುಗಳು ಮತ್ತು ನದಿಯ ನಿನಾದದ ನಡುವೆ ಅದಮ್ಯ ಜೀವನಪ್ರೀತಿಯಿಂದ ರಾಧೆ ಬದುಕು ಸಾಗಿಸುತ್ತಾಳೆ. ಮಹಿಳೆಯೊಬ್ಬಳು ಸ್ವತಂತ್ರವಾಗಿ ಘನತೆಯಿಂದ ಬಾಳಬಹುದು ಎಂಬ ಅಂಶವೇ ರಾಧಾ ಪ್ರಸ್ತುತಿಯ ಉದ್ದಕ್ಕೂ ಪ್ರಧಾನವಾಗಿದೆ.

ಯಮುನೆಯು ಒಂಟಿ. ತನ್ನ ತೆಕ್ಕೆಗೆ ಸಿಕ್ಕಿದವರನ್ನು ಬಾಚಿ ತಬ್ಬಿ ನೀರೆರೆದು ಚಿಗುರಿಸಿ ಅರಳಿ ಸುವ ಜೀವದ್ರವ್ಯ ಅವಳದು. ‘ಸಾಗರ ಸೇರಿದೊಡನೆ ಮುಗಿದು ಹೋಗುವ ಅವಳ ಬದುಕು, ಸಾರ್ಥಕ್ಯ ಪಡೆಯುವುದು ಅವಳ ಒಂಟಿಯಾನದಲ್ಲಿಯೇ’ - ಈ ಸಾಲುಗಳನ್ನು ಒಂಟಿ ಪ್ರಯಾಣದ ಸುಖವನ್ನು ಅನುಭವಿಸುವ ಮಾದರಿಯಲ್ಲಿಯೇ ಹೇಳುತ್ತೇನೆಯೇ ಹೊರತು, ವಿಷಾದ ಧ್ವನಿ ಯಿಂದಲ್ಲ. ಯಮುನೆಯೊಡನೆ ಖುಷಿಯಾಗಿ ಇರುವ ರಾಧೆಯ ಲೋಕದ ಘನತೆ ಇಡೀ ಪ್ರಸ್ತುತಿಯ ಆಶಯವೇ ಹೊರತು, ನಿರಾಕರಣೆ, ನೋವಿನ ಮಹಾಪೂರವಲ್ಲ.

*
ಹೆಣ್ಣಾಗಿ ಜನಿಸಿದ್ದಕ್ಕೆ ನಾನು ಬಹಳ ಬಹಳ ಅಭಿಮಾನ ಪಡುತ್ತೇನೆ. ಹೆಣ್ಣಾಗಿ ಜನಿಸದೇ ಇದ್ದಿದ್ದರೆ ಇದುವರೆಗಿನ ಅನುಭವಗಳೆಲ್ಲ ನನ್ನಿಂದ ತಪ್ಪಿ ಹೋಗುತ್ತಿದ್ದವು.
–ವಿದುಷಿ ಮಂಜುಳಾ ಸುಬ್ರಹ್ಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.