ADVERTISEMENT

ನಾನು ಹೀಗೇ...

ಶ್ರುತಿ ಹರಿಹರನ್
Published 8 ಮಾರ್ಚ್ 2018, 4:10 IST
Last Updated 8 ಮಾರ್ಚ್ 2018, 4:10 IST
ಶ್ರುತಿ ಹರಿಹರನ್
ಶ್ರುತಿ ಹರಿಹರನ್   

ಒಬ್ಬ ಮಹಿಳೆಯನ್ನು ಅವಳಷ್ಟಕ್ಕೆ ಅವಳಾಗಿ ಇರಲು ಬಿಡುವುದನ್ನೇ ‘ಸಬಲೀಕರಣ’ ಎನ್ನಬಹುದು. ಅವಳು ಹೀಗೇ ನಡೆದುಕೊಳ್ಳಬೇಕು, ಹಾಗೇ ಬದುಕಬೇಕು ಎಂಬ ಯಾವುದೇ ಒತ್ತಾಯ ಹೇರದೇ, ಅವಳ ಜೀವನದ ಬಗ್ಗೆ ಅವಳೇ ಸ್ವತಂತ್ರವಾಗಿ ಯಾವಾಗ ನಿರ್ಧಾರ ತೆಗೆದುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆಯೋ ಅದನ್ನು ಸಬಲೀಕರಣ ಎಂದು ಭಾವಿಸಬಹುದು.

ನನ್ನ ಪ್ರಕಾರ, ಸಬಲೀಕರಣ ಹಾಗೂ ಸಮಾನತೆ ಎರಡಕ್ಕೂ ಸಣ್ಣ ವ್ಯತ್ಯಾಸವಿದೆ. ಮಹಿಳೆಯರು ಸಮಾನತೆ ಬೇಕು ಎಂದು ಹೋರಾಡುತ್ತಾರೆ. ಆದರೆ ಬೇಕು ಎಂದು ಕೇಳಿಕೊಳ್ಳುವುದಕ್ಕಿಂತ ನಾವೇ ಅದಕ್ಕೆ ದಾರಿಯನ್ನು ಕಂಡುಕೊಳ್ಳಬೇಕಲ್ಲವೇ?

ನಮಗೆ ಸಮಾನತೆ ಕೊಡುವವರು ಯಾರು? ನಮ್ಮನ್ನು ತಡೆಯುತ್ತಿರುವವರು ಯಾರು? ಅದನ್ನು ಯೋಚಿಸುವ ತುರ್ತಿದೆ. ಪ್ರತೀ ಪ್ರಮುಖ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಮುಖ್ಯಭೂಮಿಕೆಯಲ್ಲಿದ್ದಾರೆ. ಯಾರೂ ಅವರಿಗೆ ಕೂರಿಸಿ ಅಧಿಕಾರ ಕೊಟ್ಟಿಲ್ಲ. ಅವರೇ ತಮ್ಮ ಸಾಮರ್ಥ್ಯದಿಂದ ಪಡೆದುಕೊಂಡಿದ್ದು. ಈ ಕಾಲಕ್ಕಷ್ಟೇ ಅಲ್ಲ, ಬಹಳ ಹಿಂದಿನ ಕಾಲವನ್ನೇ ತೆಗೆದುಕೊಳ್ಳೋಣ. ಆಗ ಸೈನ್ಯದಲ್ಲೂ ಮಹಿಳೆಯರಿದ್ದರು. ಉದಾಹರಣೆಗೆ, ಕಿತ್ತೂರು ರಾಣಿ ಚನ್ನಮ್ಮ. ಆಕೆಯ ಶಕ್ತಿ ಶೌರ್ಯದ ಬಗ್ಗೆ ಎಷ್ಟು ಕಥೆಗಳಿಲ್ಲ ಹೇಳಿ?

ADVERTISEMENT

ಮಹಿಳಾ ಸಬಲೀಕರಣ ಎಂದರೆ, ಒಬ್ಬ ಮಹಿಳೆ ತನ್ನತನವನ್ನು ಉಳಿಸಿಕೊಂಡು, ತನ್ನ ಜೀವನದ ಬಗ್ಗೆ ತಾನೇ ನಿರ್ಧಾರ ತೆಗೆದುಕೊಳ್ಳುವುದು ಅಷ್ಟೇ. ಬೇರೆಯವರ ನಿರ್ಧಾರಗಳ ಹೇರಿಕೆಯಿಲ್ಲದೇ, ಆಕೆಯ ಜೀವನದ ಪ್ರತಿ ಪ್ರಮುಖ ಘಟ್ಟಗಳಲ್ಲೂ, ಅಂದರೆ, ಶಿಕ್ಷಣ, ಉದ್ಯೋಗ, ಮದುವೆ, ಭವಿಷ್ಯ ಇವೆಲ್ಲದರಲ್ಲೂ ‘ಇದೇ ನನ್ನ ಜೀವನ, ಇದು ನಾನಂದುಕೊಂಡಂತೆಯೇ ಇರಬೇಕು’ಎಂಬ ಸ್ವಂತ ನಿರ್ಧಾರವೇ ಆಕೆಯನ್ನು ಸಬಲೀಕರಣಗೊಳಿಸುವುದು.

ಪ್ರಸ್ತುತ, ಸಿನಿಮಾ ಕ್ಷೇತ್ರದಲ್ಲಿ ಮಹಿಳೆ ಸ್ವತಂತ್ರ್ಯವಾಗಿರುವ ಪರಿಸ್ಥಿತಿಯೇನೋ ಇದೆ. ಇಲ್ಲಿ ನಾವು ಸಬಲರಾಗಿದ್ದೇವೆ. ಆದರೆ ಪ್ರಬಲರು ಎಂದು ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಆ ಮಟ್ಟಕ್ಕೆ ಮುಟ್ಟಿಲ್ಲ. ಇದ್ದರೂ ಬೆರಳೆಣಿಕೆಯಷ್ಟೆ.

ಇತ್ತೀಚೆಗೆ ಮಹಿಳಾ ಸೌಂಡ್ ಎಂಜಿನಿಯರ್ ಒಬ್ಬರನ್ನು ಭೇಟಿ ಮಾಡಿದ್ದೆ. ಆಕೆಯನ್ನು ನೋಡಿ ಖುಷಿ ಆಯಿತು. ಒಬ್ಬ ಪುರುಷ ಮಾಡುವ ಎಲ್ಲ ಕೆಲಸವನ್ನೂ ಆಕೆ ಮಾಡುತ್ತಾರೆ. ಚಿತ್ರರಂಗದಲ್ಲಿ ಮಹಿಳೆ ಎಂದಾಕ್ಷಣ ನಟಿಯರು, ಫ್ಯಾಷನ್ ಡಿಸೈನರ್‌ಗಳು, ಮೇಕಪ್ ಕಲಾವಿದರು, ಕೇಶ ವಿನ್ಯಾಸಕರು... ಹೀಗೆ ಸೀಮಿತ ವೃತ್ತಿಯಲ್ಲಷ್ಟೇ ಇದ್ದಾರೆ. ಅದರ ಹೊರತಾಗಿಯೂ ತಾಂತ್ರಿಕ, ಇನ್ನಿತರ ಕೌಶಲಗಳಲ್ಲಿ ಮಹಿಳೆಯರ ಅಗತ್ಯ ಖಂಡಿತ ಹೆಚ್ಚಿದೆ.

ಸಮಾಜದ ಮುಖ್ಯ ಕ್ಷೇತ್ರಗಳನ್ನು ಹೊರತುಪಡಿಸಿದರೆ, ನಿಜಕ್ಕೂ ಸಬಲೀಕರಣದ ಅಗತ್ಯ ಇರುವುದು, ಕೆಳಮಧ್ಯಮ ವರ್ಗದ ಮಹಿಳೆಯರಲ್ಲಿ. ಇಲ್ಲಿ, ಮಹಿಳೆ ಜೀವನ ನಡೆಸಲು ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು ಕಡ್ಡಾಯ. ಈ ಹೆಣ್ಣು ಮಕ್ಕಳಿಗೆ ಸ್ವಂತ ಕಾಲ ಮೇಲೆ ನಿಂತು ಮುನ್ನಡೆಯುವ ಪರಿಸ್ಥಿತಿಯೊಂದು ಸಮಾಜದಲ್ಲಿ ಸೃಷ್ಟಿಯಾದರೆ, ನಿಜವಾದ ಅರ್ಥದಲ್ಲಿ ಮಹಿಳಾ ಸಬಲೀಕರಣ ಆದಂತೆ.

ಇನ್ನೂ ಒಂದು ಮಾತಿದೆ. ಮಹಿಳೆ ಎಂದಾಕ್ಷಣ ‘ಸೌಂದರ್ಯ’ದ ದೃಷ್ಟಿಯಲ್ಲಿ ನೋಡುವವರೇ ಹೆಚ್ಚು. ಆದರೆ ಅದರಾಚೆಗೂ ಆಕೆಯ ಸೌಂದರ್ಯವೊಂದಿದೆ. ನನ್ನ ಪ್ರಕಾರ, ಬಟ್ಟೆ, ಮೇಕಪ್ ಈ ಬಾಹ್ಯ ರೂಪದ ಹೊರತಾಗಿ, ಯಾವ ಹೆದರಿಕೆ, ಅಂಜಿಕೆ, ಆತಂಕವಿಲ್ಲದೇ, ‘ನಾನು ಹೀಗೇ’ ಎಂದು ಧೈರ್ಯವಾಗಿ ಹೇಳಿಕೊಳ್ಳುವಂತಾದರೆ ಆಕೆ ನಿಜವಾದ ಸೌಂದರ್ಯವತಿ.

ನಿರೂಪಣೆ: ಪದ್ಮನಾಭ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.