ADVERTISEMENT

ಮೇಡಂ ಕ್ಯೂರಿ ಮತ್ತು ಅವರನ್ನು ತಮ್ಮ ಪುಸ್ತಕದ ಮೂಲಕ ಪರಿಚಯಿಸಿದ ನೇಮಿಚಂದ್ರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 5:16 IST
Last Updated 8 ಮಾರ್ಚ್ 2018, 5:16 IST
ಮೇಡಂ ಕ್ಯೂರಿ ಮತ್ತು ಅವರನ್ನು ತಮ್ಮ ಪುಸ್ತಕದ ಮೂಲಕ ಪರಿಚಯಿಸಿದ ನೇಮಿಚಂದ್ರ
ಮೇಡಂ ಕ್ಯೂರಿ ಮತ್ತು ಅವರನ್ನು ತಮ್ಮ ಪುಸ್ತಕದ ಮೂಲಕ ಪರಿಚಯಿಸಿದ ನೇಮಿಚಂದ್ರ   

ನಾ ಹತ್ತನೇ ತರಗತಿ ಮುಗಿಸಿದ ನಂತರ ನನ್ನಣ್ಣ ಕೊಟ್ಟ ಪುಟಾಣಿ ಪುಸ್ತಕ "ಬೆಳಕಿನೊಂದು ಕಿರಣ ಮೇಡಂ ಕ್ಯೂರಿ". ವಿಜ್ಞಾನದ ಬಗ್ಗೆ ಬೆರಗು ಮೂಡಿಸಿ ಹೆಚ್ಚು ಕಲಿಯಲು ಪ್ರೇರೇಪಿಸಿದ ಬರವಣಿಗೆಯದು. ಬರೆದವರು ನೇಮಿಚಂದ್ರ. ಆ ಪುಸ್ತಕದ ಮೊದಲ ಪುಟದಲ್ಲಿ ಓದಿದ ಅರ್ಪಣೆಯ ಸಾಲುಗಳು ಈ ದಿನಕ್ಕೂ ನೆನಪಿವೆ.

"ಚೆನ್ನಾಗಿ ಓದಮ್ಮ, ರ‍್ಯಾಂಕ್ ಬರಬೇಕು. ಈ ಕಸ ಮುಸುರೆಯಲ್ಲೇನಿದೆ? ಎಂದು ಸದಾ ಹುರಿದುಂಬಿಸಿದ, ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥೆ ನನ್ನಮ್ಮನಿಗೆ"

(ನೇಮಿಚಂದ್ರ)

ADVERTISEMENT

ಪುಸ್ತಕ ಮುಗಿಯೊದರೊಳಗೆ ನನ್ನ ಮುಂದಿನ ಓದಿನ ದಾರಿ ಕಾಣಿಸತೊಡಗಿತ್ತು. ಕೊನೆಯ ಪುಟದಲ್ಲಿ ಇದ್ದ ಲೇಖಕರ ಬಗ್ಗೆ ಓದುತ್ತಾ ಹೋದಂತೆ..ಅನ್ನಿಸತೊಡಗಿತ್ತು... ನೇಮಿಚಂದ್ರ...ಅಬ್ಬಾ!! ಹೆಣ್ಮಗಳೊಬ್ಬಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಬಹುದೇ....ನಾನೂ ಓದಬಾರದೇಕೆ ಅಂತ ಅವತ್ತೇ ಅನ್ನಿಸಿತ್ತು. ನಂತರ ನನ್ನ ಓದಿನ ಆಯ್ಕೆ ಕೂಡಾ ಅದೇ ಆಯ್ತು

ಅಂದಿನಿಂದ ಇಂದಿನವರೆಗೆ ಲೈಫು ಡಲ್ ಅನಿಸಿದಾಗಲೆಲ್ಲಾ "ಬೆಳಕಿನೊಂದು ಕಿರಣ" ಪುಸ್ತಕ ಧೈರ್ಯ ತುಂಬಿ ಹೊಸ ಕನಸುಗಳನ್ನ ಕಾಣಲು ಸ್ಫೂರ್ತಿ ನೀಡುತ್ತಿದೆ.

ಆ ಪುಸ್ತಕದಲ್ಲಿ ಏನಿದೆ?
ಪೋಲೆಂಡಿನಲ್ಲಿ ಕಡು ಬಡತನದಲ್ಲಿ ಹುಟ್ಟಿ, ಎಳೆಯ ವಯಸ್ಸಿನಲೇ ತಾಯಿಯನ್ನು ಕಳೆದುಕೊ೦ಡ ಮೇಡಂ ಕ್ಯೂರಿ, ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ, ಉನ್ನತ ವ್ಯಾಸ೦ಗಕ್ಕಾಗಿ ತಾನೇ ದುಡಿದು ಬೇರೊಂದು ದೇಶಕ್ಕೆ ಹೋಗಿ ಹೊಸ ಭಾಷೆಯೊಂದನ್ನು ಕಲಿತು ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಛಲ, ಎದುರಾದ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳನ್ನ ಮೀರಿ ಆರ್ಥಿಕ ಸಹಾಯವಿಲ್ಲದೆ, ಆಧುನಿಕ ಅನುಕೂಲತೆಗಳಿಲ್ಲದೆ, ಕೊಟ್ಟಿಗೆಯೊಂದರಲ್ಲಿ ಅತ್ಯಂತ ಕಷ್ಟದ ಆವಿಷ್ಕಾರದ ಫಲವಾಗಿ ‘ರೇಡಿಯಂ’ಅನ್ನು ಕಂಡುಹಿಡಿದು ಅದನ್ನ ಪೇಟೆಂಟ್ ಮಾಡದೆ ಮಾನವ ಸೇವೆಗೆ ಮೀಸಲಿಟ್ಟ ಮೇರಿ ಕ್ಯೂರಿ ನನ್ನ ಹೀರೊ!


ಭೌತಶಾಸ್ತ್ರ-ರಸಾಯನಶಾಸ್ತ್ರ ಎರಡರಲ್ಲೂ ನೊಬೆಲ್ ಪಾರಿತೋಷಕ ಪಡೆದ ಈ ಜಗತ್ಪ್ರಸಿದ್ಧ ವಿಜ್ಞಾನಿ “ಮೇಡಂ ಕ್ಯೂರಿ” ಯವರ ಜೀವನದ ಸಾಧನೆಯ ಸಾಹಸಗಾಥೆಯನ್ನ ಚಿಕ್ಕ ಮಕ್ಕಳು, ದೊಡ್ಡವರು ಯಾರೇ ಎಂದೇ ಓದಿದರೂ ರೋಮಾಂಚಗೊಂಡು ಜೀವನದಲ್ಲಿ ನಾನೂ ಕೂಡ ಏನಾದರೂ ಸಾಧಿಸಬೇಕೆಂಬ ಛಲವನ್ನುಂಟು ಮಾಡುವ ಶಕ್ತಿಯನ್ನ ಆ ಈ ಪುಟಾಣಿ ಪುಸ್ತಕದ ಪ್ರತಿ ಸಾಲಿನಲ್ಲಿ ನೇಮಿಚಂದ್ರರು ಕೂಡಿಟ್ಟಿದ್ದಾರೆ.  ಮರೆಯದೆ ಈ ಪುಸ್ತಕವನ್ನ ನೀವೊಮ್ಮೆ ಓದಿ ಮಕ್ಕಳಿಗೂ ಓದಿಸಿ.

-ಸವಿತ ಎಸ್ ಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.