ADVERTISEMENT

ಸಮಾಜಮುಖಿ ಕೆಲಸಗಳನ್ನು ಮಾಡಲು ಸ್ಫೂರ್ತಿಯಾದ ಕವಿತಾರಾವ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 16:12 IST
Last Updated 10 ಮಾರ್ಚ್ 2018, 16:12 IST
ಸಮಾಜಮುಖಿ ಕೆಲಸಗಳನ್ನು ಮಾಡಲು ಸ್ಫೂರ್ತಿಯಾದ ಕವಿತಾರಾವ್
ಸಮಾಜಮುಖಿ ಕೆಲಸಗಳನ್ನು ಮಾಡಲು ಸ್ಫೂರ್ತಿಯಾದ ಕವಿತಾರಾವ್   

ಇವರಿಗೆ 40 ತಾಯಂದಿರು, 6 ತಂದೆಯರು! ಗಾಬರಿ ಆಯಿತೆ? ಅಚ್ಚರಿಗೊಳ್ಳಬೇಡಿ.... ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಇವರಿಗೆ ಬರೋಬ್ಬರಿ 40 ತಾಯಂದಿರು, 6 ತಂದೆಯರು, ಅವರ ಹೆಸರು ಕವಿತಾರಾವ್.
ಅದು ೨೦೦೮. ರಸ್ತೆ ಬದಿಯಲ್ಲಿ ಅನಾಥರಾಗಿ, ಅಸ್ವಸ್ಥರಾಗಿದ್ದ ವಯಸ್ಸಾದವರನ್ನು ನೋಡಿದ ಅವರು ವೃದ್ದಾಶ್ರಮ ಆರಂಭಿಸಬೇಕು ಎಂಬ ಕನಸು ಮೂಡಿತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ನೃತ್ಯಕಲೆಯಲ್ಲಿ ವಿದ್ಯಾಭ್ಯಾಸ ಪಡೆದಿರುವ ಈ ಹೆಣ್ಣು ಮಕ್ಕಳು ಕಾರ್ಯಕ್ರಮಗಳನ್ನು ನೀಡುವುದರಿಂದ ಬರುವ ಹಣದಿಂದ ವೃದ್ದಾಶ್ರಮವನ್ನು ನಡೆಸಲು ಪ್ರಾರಂಭಿಸಿಯೇ ಬಿಟ್ಟರು.

ಮಕ್ಕಳ ಗಳಿಕೆ ಹಣ ಸಾಲದೆ ಹೋದಾಗ ಪತಿ ನಾಗೇಂದ್ರರಾವ್ ಅವರ ಹೋಟೆಲ್ ಸಂಪಾದನೆಯನ್ನು ಆಶ್ರಮದ ನಿರ್ವಹಣೆಗೆ ಬಳಸಿಕೊಂಡರು. ಈಗ ಕೃಷ್ಣಾಪುರದೊಡ್ಡಿಯಲ್ಲಿ ಇರುವ ವೃದ್ದಾಶ್ರಮದಲ್ಲಿ ವಯಸ್ಸಾದ ಮಹಿಳೆಯರು ಹಾಗೂ ಪುರುಷರು ಸೇರಿ ೪೬ ಮಂದಿ ಇದ್ದಾರೆ. ಆಶ್ರಮವಾಸಿಗಳು ಕವಿತಾರಾವ್ ಅವರನ್ನು 'ಅಮ್ಮ' ಎಂದು ಪ್ರೀತಿಯಿಂದ ಕರೆಯುತ್ತಾರೆ.

ತಾಯಿ ಪ್ರೇರಣೆ : ‘ದಾರಿ ದೀಪ’ ವೃದ್ದಾಶ್ರಮವನ್ನು ಸ್ಥಾಪಿಸಲು ನನ್ನ ತಾಯಿ ತಾನಿಬಾಯಿ ಸೇವಾ ಮನೋಭಾವ ಪ್ರೇರಣೆಯಾಗಿದೆ. ಅನಕ್ಷರಸ್ಥೆಯಾಗಿದ್ದ ಅವರು ಹೋಟೆಲ್ ನಡೆಸುತ್ತಿದ್ದರು. ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗಿ, ಹಲವು ಕಾರಣಗಳಿಂದ ನಿರ್ಗತಿಕರಾಗಿ ಹೋಟೆಲ್ ಬಳಿ ಬಂದವರಿಗೆ ನಮ್ಮ ತಾಯಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅವರಿಗೆ ಊಟವನ್ನು ನೀಡುತ್ತಿದ್ದರು ಎನ್ನುತ್ತಾರೆ ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತಾರಾವ್.

ADVERTISEMENT

‘ವೃದ್ಧಾಶ್ರಮದಲ್ಲಿ ಹಲವು ರಾಜ್ಯಗಳ, ಜಿಲ್ಲೆಗಳ ವಯೋವೃದ್ದರಿದ್ದಾರೆ. ಈಗಲೂ ಸಾರ್ವಜನಿಕರು, ಪೊಲೀಸರು ಮಾಹಿತಿ ನೀಡುತ್ತಿರುತ್ತಾರೆ. ನಾವು ಅಲ್ಲಿಗೆ ಹೋಗಿ ವೃದ್ದರನ್ನು ಕರೆತರುತ್ತೇವೆ. ಕೆಲವರು ಪೋಷಕರನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತಮ್ಮ ವಿಳಾಸವನ್ನು ಕೊಟ್ಟು ಹೊರಟು ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ನಮಗೆ ವಿಷಯ ತಿಳಿದರೆ ಅಂತವರನ್ನು ನಾವು ಆಶ್ರಮದಲ್ಲಿ ಇರಿಸಿಕೊಳ್ಳುತ್ತೇವೆ’ ಎನ್ನುತ್ತಾರೆ. ಎಂದು ತಿಳಿಸಿದರು.
ಮಕ್ಕಳಂತೆ ನೋಡಿಕೊಳ್ಳುತ್ತಾರೆ : ‘ಕವಿತಾರಾವ್ ಅವರು ಅಮ್ಮಂದಿರಿಗೆ ಅಮ್ಮನಾಗಿದ್ದಾರೆ. ಪ್ರತಿನಿತ್ಯ ನಮ್ಮ ಯೋಗಕ್ಷೇಮ ವಿಚಾರಿಸುತ್ತಾರೆ. ಸ್ನಾನ ಮಾಡಿಸಿ, ಬಟ್ಟೆ ಹಾಕಿಸುತ್ತಾರೆ. ಸಮಯಕ್ಕೆ ಊಟ ತಿನ್ನಿಸುತ್ತಾರೆ. ಮಕ್ಕಳಿಂದ ತಿರಸ್ಕರಿಸಲ್ಪಟ್ಟಿರುವ ನಮಗೆ ಆ ಭಾವನೆ ಬರದಂತೆ ನೋಡಿಕೊಳ್ಳುತ್ತಾರೆ' ಎಂದು ದಾರಿದೀಪ ವೃದ್ದಾಶ್ರಮದಲ್ಲಿರುವ ವಿಘ್ನೇಶ್ವರಿ, ರಾಜೇಶ್ವರಿ ತಿಳಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಮಕ್ಕಳೆ ಪೋಷಕರನ್ನು ನೋಡಿಕೊಳ್ಳುತ್ತಿಲ್ಲ. ವಯಸ್ಸಾದವರನ್ನು ಕಡೆಗಣಿಸಲಾಗುತ್ತಿದೆ. ಹಿರಿಯ ಜೀವಗಳೆ ಸಮಾಜ ಸಂಪತ್ತು ಎಂದು ನೋಡಿಕೊಳ್ಳುತ್ತಿರುವ ಕವಿತಾರಾವ್ ಅವರು ನನಗೆ ಸ್ಫೂರ್ತಿ ತುಂಬಿದ ಮಹಿಳೆಯಾಗಿದ್ದಾರೆ. ಇದರ ಜೊತೆಗೆ ತನ್ನ ತಂದೆತಾಯಿಯ ಹೆಸರಿನಲ್ಲಿ ‘ತಾನಿನಾ ರಂಗದಂಗಳ’ವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.


-ಡಿ.ಆರ್. ನೀಲಾಂಬಿಕಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.