ADVERTISEMENT

ನನ್ನ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆ ನನ್ನಮ್ಮ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 16:35 IST
Last Updated 10 ಮಾರ್ಚ್ 2018, 16:35 IST
ನನ್ನ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆ ನನ್ನಮ್ಮ
ನನ್ನ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆ ನನ್ನಮ್ಮ   

ನನ್ನ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆ ಎಂದರೆ ಅದು ನನ್ನಮ್ಮ. ಅವಳು ವರ್ಣಿಸಲು ನಿಲುಕದ ಸ್ಫೂರ್ತಿಮಣಿ. ನನ್ನ ತಾಯಿಯ ಹೆಸರು ಸುಶೀಲಾ. ಈಗ ನಾನು ಗಂಡನ ಮನೆಯಲ್ಲಿದ್ದೇನೆ. ನನಗೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾದರೂ ಕೂಡ ದಿನದಲ್ಲಿ ಒಂದು ಸಾರಿಯಾದರೂ ಅವಳ ಜೊತೆ ಮಾತಾಡದಿದ್ದರೆ ನಿದ್ದೇನೇ ಬರಲ್ಲ. ಏನೋ ಕಳಕೊಂಡಿದ್ದಿನೇನೋ ಎನ್ನುವ ಅನುಭವ. ಆ ಧ್ವನಿಯಲ್ಲಿಯೇ  ಮಮತೆ, ಜೀವನ ಸ್ಫೂರ್ತಿ ತುಂಬಿದೆ. ಊರ ಜಾತ್ರೆಗೆ ಹೋಗಿ ಇರೋ ಬರೋ ದುಡ್ಡನ್ನೆಲ್ಲಾ ಖರ್ಚು ಮಾಡಿ ಮನೆಗೆ ಬಂದಾಗ ಎಂದೂ ಹೊಡೆಯದಿದ್ದ ಅವಳು ಅಂದು ಬಾಸುಂಡೆ ಬರುವಂತೆ ಹೊಡೆದಿದ್ದಳು. ಆಗ ನನಗೆ ಹತ್ತು ವರ್ಷ. ಭವಿಷ್ಯಕ್ಕಾಗಿ ಹಣ ಕೂಡಿಡುವ ಮೊದಲನೇ ಪಾಠ ಕೂಡ ಅದೇ ಆಗಿತ್ತು.
 

ಓದುವುದರ ಜೊತೆಗೆ ಹೆಣ್ಣುಮಕ್ಕಳು ಮನೆ ಕೆಲಸಗಳನ್ನು ಕಲಿಯಬೇಕು ಎನ್ನುವ ಅವಳ ಕಿವಿಮಾತು ಈಗಲೂ ನೆನಪಿದೆ. ಅವಳು ಹೊಲಕ್ಕೆ ಹೋಗಿ ಬರುವಷ್ಟರಲ್ಲಿ ಅವಳಿಂದ ಶಹಬ್ಬಾಸ್‌ಗಿರಿ ಪಡೆಯಲು  ಅವಳು ಚಳಿಯಲ್ಲಿ ರ‍್ತಾಳೆ ಅಂತ ಮುಖ ತೊಳೆದುಕೊಳ್ಳಲು ಅವಳಿಗೆ ಬಿಸಿನೀರು ಕಾಯಿಸಿ ಇಡುವುದು, ರಾತ್ರಿ ಊಟಕ್ಕಾಗಿ ಅನ್ನ ಮಾಡಿಡುತ್ತಿದ್ದುದು; ಅವಳು ಬಂದು ಅದನ್ನು ನೋಡಿ “ನನ್ನ ಮಗಳು ಬಂಗಾರ; ನಮ್ಮ ಅವ್ವ ಇದ್ದಂಗ ನೀನು” ಎಂದು ನನ್ನನ್ನಪ್ಪಿಕೊಂಡಾಗ ಇಡೀ ಜಗತ್ತೆಲ್ಲಾ ಅವಳಲ್ಲಿಯೇ ಇದೆಯೇನೋ ಎಂದು ಭಾಸವಾಗುತ್ತಿತ್ತು.
ನಾವು ಕಾಲೇಜಿಗೆ ಹೋಗುವಾಗಲಂತೂ ನಮಗೆ ಮುಂಜಾನೆ ಬಿಸಿ ಬಿಸಿ ರೊಟ್ಟಿ ಮಾಡಿ ಕೊಡುತ್ತ ಹೆಣ್ಣುಮಕ್ಕಳು ಹೊರಗೆ ಹೋದಾಗ ಹೇಗಿರಬೇಕು ಎನ್ನುವ ತಿಳುವಳಿಕೆ ಮಾತುಗಳನ್ನು ಹೇಳುತ್ತ ನಮ್ಮ ವ್ಯಕ್ತಿತ್ವಕ್ಕೆ ಮೆರುಗು ತಂದೆ ನೀನು ಅವ್ವ....
ಮುಂದೆ ನಾನು ಉನ್ನತ ಶಿಕ್ಷಣಕ್ಕಾಗಿ ಹಾಸ್ಟೆಲ್‌ಗೆ ಹೋಗಲೇಬೇಕಾದ ಪ್ರಸಂಗ ಬಂದಾಗ ನಾನು ಪ್ರಯಾಸಪಟ್ಟಿದ್ದು ಅಷ್ಟಿಷ್ಟಲ್ಲ; “ನಿನ್ನ ಕಾಲ ಮೇಲೆ ನೀನು ನಿಲ್ಲಬೇಕಾದರೆ ಹಾಸ್ಟೆಲ್‌ಗೆ ಹೋಗಿ ಕಲಿಯಲೇಬೇಕು” ಎಂದು ಎದೆಯಲ್ಲಿ ದುಃಖ ತುಂಬಿಬಂದರೂ ನನ್ನ ತಲೆ ನೇವರಿಸುತ್ತ  ತಿಳಿಹೇಳಿದ್ದು ಈಗಲೂ ನನ್ನ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಬಸ್ ನಿಲ್ದಾಣಕ್ಕೆ ಅವಳು ಅಪ್ಪಾಜಿ ನನ್ನನ್ನು ಬೀಳ್ಕೊಡಲು ಬಂದಿದ್ದರು. ಜೀವನದಲ್ಲಿ ಮೊದಲ ಬಾರಿ ಮನೆ ಬಿಟ್ಟು ಹೋಗುವ ಸಂದರ್ಭ. ಅಂದು ನನ್ನ ಹುಟ್ಟಿದ ದಿನ ಕೂಡ; ಸಂಭ್ರಮಪಡಬೇಕೋ ದುಃಖಪಡಬೇಕೋ ಒಂದೂ ತಿಳಿಯದಾಗಿತ್ತು. ತಡೆದರೂ ಮತ್ತೆ ಮತ್ತೆ ಕಣ್ಣಲ್ಲಿ ಕಣ್ಣೀರು ಹರಿಯುತ್ತಿದ್ದವು. ಕೊನೆಗೂ ಬಸ್ ಬಂದೇ ಬಿಟ್ಟಿತು. ಕಣ್ಣೀರಿನ ಕಟ್ಟೆ ಒಡೆದು ದುಃಖ ಉಮ್ಮಳಿಸಿ ಬಂತು. “ಅವ್ವಾ ನನ್ನನ್ಯಾಕೆ ಅಷ್ಟು ದೂರ ಕಳಸ್ತಿದ್ದಿÃರಿ? ನಾನೂ ನಿಮ್ಮ ಜೊತೆನೇ ರ‍್ತಿನಿ! ಇಲ್ಲೇ ಬೇರೆ ಏನಾದ್ರೂ ಕಲೀತಿನಿ, ನನ್ನ ಕಳಸಬ್ಯಾಡ್ರಿ” ಅಂತ ನಾನು ಅಳೋಕೆ ಶುರು ಮಾಡಿದೆ. ಆಗ ಕರುಳ ಬಳ್ಳಿಯ ಸಂಕಟ ತಡೆದು ನನ್ನ ತಾಯಿ ನನ್ನನ್ನು ಮಮತೆಯಿಂದ ಆಲಂಗಿಸಿ; “ ಜೀವನ ಬಾಳ ದೊಡ್ಡದೈತಿ, ಶಾಲಿ ಕಲಿತು ಜಾಣ ಆಗಬೇಕು” ಅಂತ ಸಮಾಧಾನ ಮಾಡಿ ಬಸ್ ಹತ್ತಿಸಿದಿರಿ. ಕಿಟಕಿ ಸೀಟ್‌ನಲ್ಲಿ ಕುಳಿತು ನಿನ್ನನ್ನು ಮತ್ತೆ ನೋಡುತ್ತ ಕಾಣದಾದಾಗ ಮನಸ್ಸು ಭಾರವಾದಂತೆ ಎನಿಸಿತು.
 
ಹಾಸ್ಟೆಲ್‌ನಲ್ಲಿರುವಾಗ ಮನೆಯ ಸಮಸ್ಯೆಗಳು ನನಗೆ ಗೊತ್ತಾಗಲೇ ಇಲ್ಲ. ನನ್ನ ಶಿಕ್ಷಣಕ್ಕಾಗಿ ಅವಳು ಹೊಲಕ್ಕೆ ಹೋಗುವುದು, ಅದರಿಂದ ಬಂದ ದುಡ್ಡನ್ನು ನನಗೆ ಕಳಿಸುತ್ತಿರುವುದು ಅದು ಅನಂತರ ಬೇರೆಯವರಿಂದಲೇ ಗೊತ್ತಾದದ್ದು. ಅವಳು ಮಾತ್ರ ನಿನ್ನ ಕಷ್ಟವನ್ನು ಹೇಳಿಕೊಳ್ಳುತ್ತಲೇ ಇರಲಿಲ್ಲ. ಮನೆಗೆ ಬಂದಾಗಲೆಲ್ಲಾ ನನಗೆ ಇಷ್ಟವಾದದ್ದನ್ನೆಲ್ಲಾ ಮಾಡಿಕೊಡುವುದು. ಚೆನ್ನಾಗಿ ಓದಲಿ ಎಂದು ಯಾವ ತೊಂದರೆಯನ್ನೂ ಹೇಳಿಕೊಳ್ಳದೇ ಖುಷಿಯಾಗಿಡುವುದು ಕಾಯಕವಾಗಿತ್ತು.
             ಅವಳಂತೆ ನಾನು ತಾಯಿಯಾಗುವಾಗ, ಅದೆಷ್ಟೊ ಸಂದರ್ಭಗಳಲ್ಲಿ ನನ್ನ ದೇಹಸ್ಥಿತಿ ಹದಗೆಟ್ಟಾಗ ನನ್ನನ್ನು ಚಿಕ್ಕ ಮಗುವಿನಂತೆ ಆರೈಕೆ ಮಾಡಿದ್ದು ಈಗ ಈ ಲೇಖನವನ್ನು ಬರೆಯುತ್ತಿದ್ದರೂ ಇದನ್ನೆಲ್ಲ ನೆನೆಸಿಕೊಂಡು ತಂತಾನೇ ಕಣ್ಣೀರು ಹರಿದು ಬರುತ್ತಿದೆ. ಅದೆಷ್ಟು ಪ್ರೀತಿ ತುಂಬಿದ ಮಮತೆ ಅವಳಲ್ಲಿದೆಯೋ ಗೊತ್ತಿಲ್ಲ? ಮನಸ್ಸು ಗಲಿಬಿಲಿಗೊಂಡಾಗ, ಚಿಂತೆಯಲ್ಲಿ ಮುಳುಗಿರುವಾಗ ಅವಳಿಗೊಂದು ಫೋನ್ ಮಾಡಿದರೆ ಕಷ್ಟವೆಲ್ಲಾ ನೀರಿನಂತೆ ಕರಗಿ ಬಿಡುತ್ತದೆ. ನನ್ನ ಧ್ವನಿ ಕೇಳಿದ ಕೂಡಲೇ ಅವಳು, ನಾನು ದುಃಖದಲ್ಲಿದ್ದೇನೋ, ಖುಷಿಯಾಗಿದ್ದೇನೋ ಅಂತ ತಿಳಿದುಕೊಂಡುಬಿಡುತ್ತಾಳೆ. ಅವಳ ಜೊತೆ ಇದ್ದರೆ ಮನಸ್ಸು ಹಗುರವಾಗಿರುತ್ತದೆ.

ಈಗ ನಾನು ಒಂದು ಉತ್ತಮ ಹುದೆಯಲ್ಲಿದ್ದೇನೆ, ಏನಾದರೂ ಸಾಧಿಸಿದ್ದೇನೆ ಎಂದರೆ ಅದಕ್ಕೆಲ್ಲ ಅವಳೇ ಕಾರಣ. ನನ್ನ ಜೀವನ ರೂಪಿಸಿಕೊಟ್ಟ  ದೇವರು ನೀನಮ್ಮಾ..  ನಾನು ಎಷ್ಟು ಎಷ್ಟು ಜನ್ಮವೆತ್ತಿ ಬಂದು ನಿನ್ನ ಸೇವೆ ಮಾಡಿದರೂ ನಿನ್ನ ಋಣ ತೀರಿಸಲಾಗದಮ್ಮಾ.. ದಿನದಲ್ಲಿ ಎಷ್ಟು ಸಲ ನಿನ್ನ ನೆನೆಸಿಕೊಳ್ತಿನೋ ಗೊತ್ತಿಲ್ಲ? ನಿನ್ನ ನೆನಪೇ ಅನುಪಮ. ನಿನ್ನ ಪಾದಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು. ನಿನ್ನ ನೆನಪೇ ಅನುಪಮ. ಮರು ಜನ್ಮ ಎನ್ನುವದಿದ್ದರೆ ನಿನ್ನ ಮಗಳಾಗಿಯೇ ಹುಟ್ಟಿರ್ತೀನಮ್ಮಾ.. ನಿನ್ನ  ಮಗಳಾಗಿದ್ದಕ್ಕೆ ನಾನು ಹೆಮ್ಮೆಪಡುವೆ.

ADVERTISEMENT

-ವಿಜಯಲಕ್ಷ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.