ADVERTISEMENT

'ಮೇರಿ' ಎಂಬ ಮೇರು ವ್ಯಕ್ತಿತ್ವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 18:34 IST
Last Updated 10 ಮಾರ್ಚ್ 2018, 18:34 IST

ನನಗೆ ಬಹಳ ಇಷ್ಟವಾದ ಹಾಗೂ ನನ್ನ ಮೇಲೆ ವಿಶಿಷ್ಟ ಪ್ರಭಾವ ಬೀರಿರುವ ಮಹಿಳೆ,   ಶ್ರೇಷ್ಠ ಸಂಶೋಧಕಿಯಾದ ಮೇರಿ ಕ್ಯೂರಿ. ತಮ್ಮ ಇಡೀ ಬದುಕನ್ನು ಸಂಶೋಧನೆಗೇ ಮೀಸಲಿರಿಸಿದ ಹಾಗೂ ಆ ಮೂಲಕ ಬದುಕಿನ ಸಾರ್ಥಕ್ಯವನ್ನು ಕಂಡ ಮೇರಿ ಕ್ಯೂರಿ ಇಂದಿನ ಯುವಕ ಯುವತಿಯರಿಗೆ ಸ್ಪೂರ್ತಿಯ ಚಿಲುಮೆ. ತಮ್ಮ ಸಂಶೋಧನೆಗಳಿಗೆ ಪೇಟೆಂಟನ್ನು ನಿರಾಕರಿಸಿ ಅದು ಇಡೀ ಮನುಷ್ಯಕುಲಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿದ ಮೇರಿ ಕ್ಯೂರಿ ಶ್ರೇಷ್ಠ ಮಾನವತಾವಾದಿ ಕೂಡ. ಪ್ರಶಸ್ತಿಗಳ ರೂಪದಲ್ಲಿ ಬಂದ ಹಣವನ್ನು ತಾವೇ ಬಳಸಿಕೊಳ್ಳಲು ನಿರಾಕರಿಸಿ, ಅದನ್ನು ಸಹೋದ್ಯೋಗಿಗಳ ಸಂಶೋಧನೆಗಳಿಗೆ ನೀಡಿದ ಮೇರಿ ಕ್ಯೂರಿ, ಹಣವನ್ನು ಸಂಶೋಧನಾ ಸಂಸ್ಥೆಗಳಿಗೆ ನೀಡಬೇಕೇ ಹೊರತು ಸಂಶೋಧಕರಿಗಲ್ಲ ಎಂದು ನುಡಿದ ನಿಃಸ್ವಾರ್ಥ ಮಹಿಳೆ. ಮಹಿಳೆಯಾಗಿ ಹುಟ್ಟಿದ ಕಾರಣಕ್ಕೆ ಅನೇಕ ಅಡೆತಡೆಗಳನ್ನು ಎದುರಿಸಿದ ಮೇರಿ ಕ್ಯೂರಿ, ಅವುಗಳನ್ನು ಮೆಟ್ಟಿ ನಿಂತು ಶ್ರೇಷ್ಠ ಸಂಶೋಧಕಿಯಾಗಿ ಬೆಳೆದ ಪರಿ ಅನನ್ಯ. ಅವರು ಕೇವಲ ಶ್ರೇಷ್ಠ ಸಂಶೋಧಕಿಯಷ್ಟೇ ಅಲ್ಲ; ಮಾತೃ ಹೃದಯಿ ಕೂಡ. ಮೊದಲನೇ ವಿಶ್ವಯುಧ್ಧದ ಸಮಯದಲ್ಲಿ ಗಾಯಗೊಳ್ಳುತ್ತಿದ್ದ ಯೋಧರಿಗೆ ನೆರವಾಗಬಲ್ಲ ಅನೇಕ ಉಪಕರಣಗಳನ್ನು ಕಂಡುಹಿಡಿದರು. ಅಷ್ಟೇ ಅಲ್ಲ; ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಚಿನ್ನ ಹಾಗೂ ಹಣವನ್ನು ಗಾಯಾಳುಗಳ ಸೇವೆಗೇ ಬಳಸಿದರು. ಸದಾ ಪ್ರಶಸ್ತಿ ಹಾಗೂ ಪಾರಿತೋಷಕಗಳನ್ನು ನಿರಾಕರಿಸುತ್ತಿದ್ದ ಮೇರಿ ಕ್ಯೂರಿ, ಎಂದೆಂದಿಗೂ 'ಕೀರ್ತಿಶನಿ'ಯಿಂದ ದೂರವೇ ಉಳಿದಿದ್ದರು. 

ಸಾಮಾನ್ಯವಾಗಿ ಹೆಂಗಸರನ್ನು ಇತರ ವ್ಯಕ್ತಿ ಹಾಗೂ ಸಂಸಾರಗಳ ಬಗ್ಗೆ ಅನಗತ್ಯ ಕುತೂಹಲ ತಾಳುವವರೆಂದು ಗುರುತಿಸಲಾಗುತ್ತದೆ. ಇದು ಕೇವಲ ಅರ್ಧ ಸತ್ಯವೆಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. 'ವಿಚಾರಗಳ ಬಗ್ಗೆ ಅದಮ್ಯ ಕುತೂಹಲ ತಾಳಬೇಕೇ ಹೊರತು, ವ್ಯಕ್ತಿಗಳ ಬಗ್ಗೆ ಅಲ್ಲ' ಎಂದು ಮೇರಿ ಕ್ಯೂರಿ ಹೇಳುತ್ತಾರೆ. ತಮ್ಮ ಕಾರ್ಯಕ್ಷೇತ್ರವಾದ ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರಗಳ ಕುರಿತು ಅವರಿಗೆ ಇದ್ದ ಕುತೂಹಲ ಹಾಗೂ ಪ್ರೀತಿ ಇಂದಿನ ಸಂಶೋಧಕರಿಗೆ ದಾರಿದೀಪ. ವಿಕಿರಣಗಳ ಕುರಿತ ಮೇರಿ ಕ್ಯೂರಿಯವರ ಸಂಶೋಧನೆಗಳು ಇಂದು ಕ್ಯಾನ್ಸರ್ ಹಾಗೂ ಟ್ಯೂಮರ್ ರೋಗಗಳ ಚಿಕಿತ್ಸೆಗಳಲ್ಲಿ ಉಪಯೋಗವಾಗುತ್ತಿದೆ. ಹೀಗಾಗಿ ಇಡೀ ಮನುಷ್ಯಕುಲ ಮೇರಿ ಕ್ಯೂರಿಯವರಿಗೆ ಚಿರಋಣಿಯಾಗಿರಬೇಕು! 'ಈ ಜಗತಿನಲ್ಲಿ ಭಯ ಪಡಬೇಕಿರುವುದು ಯಾವುದೂ ಇಲ್ಲ; ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕಷ್ಟೇ' ಎಂದು ಹೇಳಿದ ಮೇರಿ ಕ್ಯೂರಿ ಮಾನವ ಜನಾಂಗದ  ಮೇರು ವ್ಯಕ್ತಿಗಳಲ್ಲಿ ಒಬ್ಬರು.

-ವೆಂಕಟೇಶ್ ಬಿ.ಎಂ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.