ADVERTISEMENT

ಬೇಸಿಗೆಗೆ ಹಿತ ಆಹಾರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಕಾರಂಜಿ
ಕಾರಂಜಿ   

ಮಗ್ರಾತ್‌ ರಸ್ತೆಯ ವೆಲ್‌ಕಂ ಹೋಟೆಲ್‌ನಲ್ಲಿ ಮುಖ್ಯ ಬಾಣಸಿಗರಾಗಿರುವ ಧವಲ್ ಅಜ್ಮೆರಾ ಅವರು ಹುಟ್ಟಿದ್ದು ವೈದ್ಯರ ಕುಟುಂಬದಲ್ಲಿ. ಮಗ ವೈದ್ಯ ಆಗ್ಬೇಕು ಅಂತ ಪೋಷಕರ ಆಸೆ ಆಗಿದ್ರೆ, ಮಗ ಅಡುಗೆ ಪ್ರೀತಿ ಬೆಳೆಸಿಕೊಂಡ. ಅಮ್ಮ ವೈದ್ಯೆ ಆಗಿದ್ದರಿಂದ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಹೀಗೆ ಹವ್ಯಾಸವಾದ ಅಡುಗೆ ಈಗ ವೃತ್ತಿಯಾಗಿ ಬದಲಾಗಿದೆ. ಅವರು ಅಹಮದಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್‌ನಿಂದ ಕೇಟರಿಂಗ್‌ ಟೆಕ್ನಾಲಜಿ ಆ್ಯಂಡ್ ಅಪ್ಲೈಡ್ ನ್ಯೂಟ್ರಿಶನ್ ಪದವಿ ಪಡೆದಿದ್ದಾರೆ. ಸದ್ಯ ನಗರದ ವೆಲ್ಕಂ ಹೋಟೆಲ್‌ನಲ್ಲಿ ಎಕ್ಸಿಕ್ಯೂಟಿವ್ ಶೆಫ್ ಆಗಿರುವ ಅವರು ಬೇಸಿಗೆಗೆ ಹಿತವಾದ ರುಚಿಯನ್ನು ವಿವರಿಸಿದ್ದಾರೆ

ಕಾರಂಜಿ (4 ಜನರಿಗೆ. ಸಮಯ– 30 ನಿಮಿಷ)
ಬೇಕಾಗುವ ಸಾಮಾನುಗಳು:
ಮೈದಾ ಹಿಟ್ಟು 300 ಗ್ರಾಂ, ಗೋಧಿ ರವೆ 30ಗ್ರಾಂ, ತುಪ್ಪ 30 ಮಿ ಲೀಟರ್, ಹಾಲು 100 ಮಿಲಿ ಲೀಟರ್. ಸ್ಟಫ್ ಮಾಡಲು: ಒಣಕೊಬ್ಬರಿ 100 ಗ್ರಾಂ, ಗೋಡಂಬಿ, ಎಳ್ಳು, ಗಸಗಸೆ– 100 ಗ್ರಾಂ, ಸಕ್ಕರೆ ಪೌಡರ್ 100 ಗ್ರಾಂ, ಏಲಕ್ಕಿ ಹುಡಿ 10 ಗ್ರಾಂ, ಬಾದಾಮಿ ತುಂಡು ಮಾಡಿರುವುದು

ಮಾಡುವ ವಿಧಾನ: ಮೈದಾ ಹಿಟ್ಟು ಹಾಗು ಗೋಧಿ ರವೆಯನ್ನು ಒಂದು ಬೌಲ್‌ನಲ್ಲಿ ಚೆನ್ನಾಗಿ ಕಲೆಸಬೇಕು. ತುಪ್ಪವನ್ನು ಬಿಸಿ ಮಾಡಿಕೊಂಡು ಈ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈ ಮಿಶ್ರಣ ಮೆದುವಾಗಲು ಹಾಲು ಸೇರಿಸಿ ಮಿಶ್ರ ಮಾಡಬೇಕು. ಒಂದು ಶುಭ್ರ ಬಟ್ಟೆಯಲ್ಲಿ ಈ ಮಿಶ್ರಣವನ್ನು ಕಟ್ಟಿ ಸ್ವಲ್ಪ ಹೊತ್ತು ಇಡಬೇಕು.

ADVERTISEMENT

ಒಣಕೊಬ್ಬರಿ ಹಾಗೂ ಗಸಗಸೆಯನ್ನು ಪ್ರತ್ಯೇಕವಾಗಿ ಹುರಿದು ಇಟ್ಟುಕೊಂಡಿರಬೇಕು. ಬಾದಾಮಿ, ಎಳ್ಳು, ಗೋಡಂಬಿಯನ್ನು ಒಟ್ಟು ಪುಡಿ ಮಾಡಿಟ್ಟುಕೊಳ್ಳಬೇಕು. ಈ ಎಲ್ಲವನ್ನೂ ಸಕ್ಕರೆ ಪೌಡರ್‌ ಹಾಗೂ ಏಲಕ್ಕಿ ಪೌಡರ್‌ ಜೊತೆ ಸೇರಿಸಿ ಮಿಶ್ರ ಮಾಡಬೇಕು.  ಈಗ ಮೈದಾ ಹಾಗೂ ಗೋಧಿ ಮಿಶ್ರಣವನ್ನು ಅಂಗೈಯಗಲ ವೃತ್ತಾಕಾರದಲ್ಲಿ ತಟ್ಟಿ, ಅದರ ಮಧ್ಯದಲ್ಲಿ ಸಿದ್ಧ ಮಾಡಿಕೊಂಡಿರುವ ಮಿಶ್ರಣವನ್ನು ಸ್ವಲ್ಪ ತುಂಬಬೇಕು. ಬಳಿಕ ಅರ್ಧ ಚಂದ್ರಾಕೃತಿಯಲ್ಲಿ ಮಡಚಿ, ಹಾಲನ್ನು ಚಿಮುಕಿಸಿಕೊಂಡು ಮಿಶ್ರಣ ಹೊರಬರದಂತೆ ತುಂಬಬೇಕು. ಬಳಿಕ ಎಣ್ಣೆಯಲ್ಲಿ ಕರಿಯಬೇಕು.

ಕಿಚಡಿ
ಪುಡಿ ಮಾಡಿಕೊಂಡ ಗೋಧಿ– 300 ಗ್ರಾಂ, ತೊಗರಿ ಬೇಳೆ– 100 ಗ್ರಾಂ, ಒಣಖರ್ಜೂರ– 50 ಗ್ರಾಂ, ಸಿಪ್ಪೆ ತೆಗೆದ ಹಸಿ ಶೇಂಗಾ– 30 ಗ್ರಾಂ, ಹಸಿಕೊಬ್ಬರಿ ತುರಿ– 30 ಗ್ರಾಂ, ಗೋಡಂಬಿ– 10 ಗ್ರಾಂ, ಬೀನ್ಸ್‌ –30 ಗ್ರಾಂ, ಬಟಾಣಿ– 30 ಗ್ರಾಂ, ಏಲಕ್ಕಿ ಪುಡಿ– ಸ್ವಲ್ಪ, ಹಸಿಮೆಣಸು ಪೇಸ್ಟ್‌– 20 ಗ್ರಾಂ, ತುಪ್ಪ– 200 ಗ್ರಾಂ, ಇಡಿ ಮೆಣಸು– 2, ಸಾಸಿವೆ– 1 ಟೀ ಚಮಚ, ಅಚ್ಚ ಖಾರದ ಪುಡಿ– ಒಂದು ಟೀ ಸ್ಪೂನ್‌, ಅರಿಶಿನ– ಒಂದು ಟೀ ಸ್ಪೂನ್‌, ಕತ್ತರಿಸಿದ ಕೊತ್ತಂಬರಿ ಎಲೆ– ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸ್ವಲ್ಪ

ಮಾಡುವ ವಿಧಾನ: ಪುಡಿ ಮಾಡಿಕೊಂಡ ಗೋಧಿಯನ್ನು ಎರಡು ಗಂಟೆ ನೀರಿನಲ್ಲಿ ನೆನಸಿಡಬೇಕು. ಬಳಿಕ ಅದರ ನೀರನ್ನು ಸೋಸಬೇಕು. ದಪ್ಪ ತಳವಿರುವ ಪಾತ್ರೆಯಲ್ಲಿ ಒಂದು ಹನಿ ತುಪ್ಪ ಹಾಕಿ ನೀರನ್ನು ಕುದಿಸಬೇಕು. ಬಳಿಕ ಅದಕ್ಕೆ ಗೋಧಿಯನ್ನು ಹಾಕಿ ಬೇಯಿಸಬೇಕು. ಈಗ ಮತ್ತೊಂದು ಪ್ರತ್ಯೇಕ ಪಾತ್ರೆಯಲ್ಲಿ ತೊಗರಿ ಬೇಳೆ, ಶೇಂಗಾ ಬೇಯಿಸಬೇಕು. ಅದಕ್ಕೆ ಬೀನ್ಸ್‌, ಬಟಾಣಿ, ಸೇರಿಸಬೇಕು. ಕೊನೆಯಲ್ಲಿ ಬೇಯಿಸಿದ ಗೋಧಿಯನ್ನು ಸೇರಿಸಬೇಕು. ಈ ಮಿಶ್ರಣಕ್ಕೆ ಎಲ್ಲಾ ಒಣಹಣ್ಣುಗಳನ್ನು ಸೇರಿಸಬೇಕು. ಈಗ ಇದಕ್ಕೆ ಖಾರದ ಪುಡಿ, ಹಸಿಮೆಣಸು ಪೇಸ್ಟ್‌, ಅರಿಶಿನ ಸೇರಿಸಬೇಕು. ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಕ್ಕರೆ ಸೇರಿಸಬೇಕು.

ಈಗ ಮತ್ತೊಂದು ಪಾತ್ರೆಯಲ್ಲಿ ತುಪ್ಪ, ಕೆಂಪು ಮೆಣಸು, ಸಾಸಿವೆ, ಉದ್ದಿನ ಬೇಳೆಯ ಒಗ್ಗರಣೆ ಹಾಕಿ ಅದನ್ನು ಗೋಧಿ ಕಿಚಡಿಕ್ಕೆ ಸೇರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸವಿಯಿರಿ.

ಬ್ರೌನ್‌ ರೈಸ್‌ ಮತ್ತು ತರಕಾರಿ ರೋಲ್ಸ್‌
ಬೇಕಾಗುವ ಸಾಮಾಗ್ರಿ:
ಬ್ರೌನ್‌ ರೈಸ್‌(ಕಂದು ಅಕ್ಕಿ) 200 ಗ್ರಾಂ, ನೀರು– 250 ಮಿ.ಲೀ, ಉಪ್ಪ– ರುಚಿಗೆ ತಕ್ಕಷ್ಟು, ಟೊಮೆಟೊ– 100 ಗ್ರಾಂ (ಸಣ್ಣದಾಗಿ ಕತ್ತರಿಸಿದ್ದು), ಕುಂಬಳಕಾಯಿ– 20 ಗ್ರಾಂ, ದೊಡ್ಡಮೆಣಸಿನಕಾಯಿ– 2,ಈರುಳ್ಳಿ– 10 ಗ್ರಾಂ (ಸಣ್ಣದಾಗಿ ಹಚ್ಚಿದ್ದು), ಮೆಕ್ಕೆಜೋಳ– 10 ಗ್ರಾಂ, ಮೆಣಸಿನ ಪುಡಿ– 10 ಗ್ರಾಂ, ಬೆಳ್ಳುಳ್ಳಿ, ಲವಂಗ– ಐದು ಕಾಳುಗಳು, ಆಲಿವ್‌ ಎಣ್ಣೆ– ಒಂದು ಟೀ ಸ್ಪೂನ್‌.

ಬ್ರೌನ್‌ ರೈಸ್‌ ಅನ್ನು ಸಣ್ಣದಾಗಿ ಪುಡಿ ಮಾಡಿ ಅದಕ್ಕೆ ಉಪ್ಪು, ಸಕ್ಕರೆ ಮತ್ತು ನೀರು ಸೇರಿಸಿ ಅದನ್ನು ಇಡೀ ರಾತ್ರಿ ಇಡಬೇಕು. ಮರುದಿನ ನಾನ್‌ಸ್ಟಿಕ್‌ ತವಾದಲ್ಲಿ ದೋಸೆಯಂತೆ ಹುಯ್ಯಬೇಕು. ಅದರ ಮೇಲೆ ತರಕಾರಿ ಮಿಶ್ರಣವನ್ನು ಹರಡಬೇಕು.(ತರಕಾರಿ ಮಿಶ್ರಣವನ್ನು ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ). ಈಗ ಎಲ್ಲವನ್ನೂ ಸೇರಿಸಿ ನೀಟಾಗಿ ಮಡಚಬೇಕು. ಬಳಿಕ ಸ್ವಲ್ಪ ಆಲಿವ್‌ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಬೇಕು. ಇದನ್ನು ಗ್ರೀನ್‌ ಸಲಾಡ್‌ ಜೊತೆ ತಿಂದರೆ ಚೆನ್ನಾಗಿರುತ್ತದೆ.

ತರಕಾರಿ ಮಿಶ್ರಣ: ಒಂದು ಪಾತ್ರೆಯಲ್ಲಿ ಆಲಿವ್‌ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ, ಟೊಮೆಟೊ, ಉಪ್ಪು, ಸಣ್ಣದಾಗಿ ಕತ್ತರಿಸಿಕೊಂಡ ಕುಂಬಳಕಾಯಿ, ದೊಡ್ಡಮೆಣಸಿನಕಾಯಿಯನ್ನು ಹಾಕಿ ಕುದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.