ADVERTISEMENT

ಆರೋಗ್ಯಕರ ಮೇಲೋಗರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ಆರೋಗ್ಯಕರ ಮೇಲೋಗರ
ಆರೋಗ್ಯಕರ ಮೇಲೋಗರ   

ಸಾಮಾನ್ಯವಾಗಿ ದಿನನಿತ್ಯದ ಅಡುಗೆಯಲ್ಲಿ ನಾವು ಬಗೆಬಗೆಯ ಪಲ್ಯಗಳನ್ನು ಮಾಡುತ್ತಿರುತ್ತೇವೆ. ಅನ್ನ, ಚಪಾತಿ, ದೋಸೆ, ರೊಟ್ಟಿಗೆ ಪಲ್ಯಗಳನ್ನು ತಯಾರಿಸಲೇಬೇಕು. ಪಲ್ಯ ತಿನ್ನುವುದರಿಂದ ಹೆಚ್ಚಿನ ತರಕಾರಿಗಳು ನಮ್ಮ ದೇಹವನ್ನು ಸೇರುತ್ತವೆ. ಹಾಗಾಗಿ ತರಕಾರಿ ಪಲ್ಯಗಳನ್ನು ಆರೋಗ್ಯಕರವಾದ ಮೇಲೋಗರೆಂ ಎಂದರೆ ತಪ್ಪಾಗಲಾರದು.

ಬಾಳೆಕಾಯಿ ಪಲ್ಯ:

ಬೇಕಾಗುವ ಸಾಮಗ್ರಿಗಳು: 2 ಬಾಳೆಕಾಯಿ, 3 ಚಮಚ ಎಣ್ಣೆ, ಸ್ವಲ್ಪ ಹುಣಸೆ ರಸ, ಸ್ವಲ್ಪ ಕರಿಬೇವು, 2 ಚಮಚ ಸಾಂಬಾರು ಪುಡಿ, ಸ್ವಲ್ಪ ಕಾಯಿ ತುರಿ, ಸ್ವಲ್ಪ ಅರಿಶಿನ, ಸ್ವಲ್ಪ ಇಂಗು, ಒಗ್ಗರಣೆಗೆ ಸ್ವಲ್ಪ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ADVERTISEMENT

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ ಹಾಕಿ, ಸಾಸಿವೆ ಸಿಡಿದ ನಂತರ ಇಂಗು ಕರಿಬೇವು ಹಾಕಬೇಕು.

ನಂತರ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಂಡ ಬಾಳೆಕಾಯಿಯನ್ನು ಹಾಕಿ ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಬೇಯಲು ಬಿಡಿ. ಬಾಳೆಕಾಯಿ ಬೇಗ ಬೇಯುತ್ತದೆ. ಬೆಂದ ನಂತರ ಹುಣಸೇರಸ, ಸಾಂಬಾರ್ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಗುಚಿ ಕಾಯಿತುರಿ ಉದುರಿಸಿದರೆ ಬಾಳೆಕಾಯಿ ಪಲ್ಯ ಸವಿಯಲು ಸಿದ್ಧ. ಅನ್ನ ಹಾಗೂ ಚಪಾತಿಯೊಂದಿಗೂ ಇದನ್ನು ಸವಿಯಬಹುದು.

ಆಲೂ ಬಾಜಿ

ಬೇಕಾಗುವ ಸಾಮಗ್ರಿಗಳು: 3 ಬೆಂದ ಆಲೂಗಡ್ಡೆ, 3 ಚಮಚ ಎಣ್ಣೆ, 1 ಚಮಚ ಜೀರಿಗೆ, ಸ್ವಲ್ಪ ಕರಿಬೇವು, ಅರ್ಧ ಚಮಚ ಖಾರದ ಪುಡಿ, ಸ್ವಲ್ಪ ಗರಂ ಮಸಾಲೆ, ಸ್ವಲ್ಪ ಅರಿಷಿಣ, 1 ಚಮಚ ಲಿಂಬೆ ರಸ, 3 ಚಮಚ ಹುರಿದು ಪುಡಿ ಮಾಡಿದ ಶೇಂಗಾ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬೆಂದ ಆಲೂಗಡ್ಡೆಯ ಸಿಪ್ಪೆ ತೆಗೆದು ಆಲೂಗಡ್ಡೆಯನ್ನು ಚೌಕಾಕಾರದಲ್ಲಿ ಹೋಳುಗಳನ್ನಾಗಿ ಹೆಚ್ಚಬೇಕು. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ, ಕರಿಬೇವು ಹಾಕಿ ನಂತರ ಹೆಚ್ಚಿದ ಹೋಳುಗಳನ್ನು ಹಾಕಿ ಮಗುಚಬೇಕು. ನಂತರ ಖಾರದ ಪುಡಿ, ಗರಂ ಮಸಾಲೆಪುಡಿ ಹಾಕಿ ಕಲಸಿ, ಉಪ್ಪು ಮತ್ತು ನಿಂಬೆ ರಸ ಹಾಕಿ ಕಲಸಿ ಕೊನೆಗೆ ಹುರಿದು ಪುಡಿ ಮಾಡಿದ ಶೇಂಗಾವನ್ನು ಹಾಕಿ ಕಲಸಿದರೆ, ಬಟಾಟೆ ಪಲ್ಯ ಸವಿಯಲು ಸಿದ್ಧ. ರುಚಿಕರವಾದ ಈ ಬಾಜಿ ಪೂರಿ, ಚಪಾತಿ, ರೊಟ್ಟಿಯೊಂದಿಗೆ ಸವಿಯಬಹುದು. ಮಹಾರಾಷ್ಟ್ರದಲ್ಲಿ ಹೆಚ್ಚಾಗಿ ಈ ಬಾಜಿ ತಯಾರಿಸುತ್ತಾರೆ. ನಮ್ಮಲ್ಲೂ ಪೂರಿ ಅಥವಾ ಚಪಾತಿಗೆ ಬಾಜಿ ಮಾಡುವುದಿದೆ.

ಮೀನಾಕ್ಷಿ ರಮೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.