ADVERTISEMENT

ಬದುಕಿಗೆ ಸ್ಪೂರ್ತಿನೀಡಿದ ಮಹಿಳೆ ಇವರೇ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 14:52 IST
Last Updated 5 ಏಪ್ರಿಲ್ 2018, 14:52 IST
ಬದುಕಿಗೆ ಸ್ಪೂರ್ತಿನೀಡಿದ ಮಹಿಳೆ ಇವರೇ
ಬದುಕಿಗೆ ಸ್ಪೂರ್ತಿನೀಡಿದ ಮಹಿಳೆ ಇವರೇ   

ನನ್ನ ಶಿಸ್ತುಬದ್ಧ ಜೀವನ, ಸರಳ ಹಾಗು ಸ್ವಾಭಿಮಾನ ಜೀವನಕ್ಕೆ ಸ್ಪೂರ್ತಿಯೆ ದಿ.ಇಂದಿರಮ್ಮ ಮತ್ತು ಶ್ರೀಮತಿ ಸುಂದರಮ್ಮ ಸಹೋದರಿಯರು. ಇವರಿಬ್ಬರನ್ನು ನಾನು ಬಹಳ ಹತ್ತಿರದಿಂದ ನೋಡಿ ಬಲ್ಲೆ. ಅವರ ಕಷ್ಟ ಕಾರ್ಪಣ್ಯಗಳಿಗೆ ಅಂತ್ಯವೇ ಇರದಂತೆ ಒಂದರ ಮೇಲೆ ಒಂದು ಆಘಾತ ಅವರನ್ನು  ಶಿಸ್ತುಬದ್ಧ ಜೀವನ ನಡೆಸಲು ಪ್ರೇರೇಪಿಸಿರಬಹುದು. 
 ಇಂದಿರಮ್ಮ ಮದುವೆಯಾಗಿ ಒಂದು ಮಗುವಿಗೇನೊ ಜನ್ಮಕೊಟ್ಟರು. ಆದರೆ  ಸಂತೋಷಪಡುವ ಮೊದಲೇ ವಿಧಿವಶವಾಯಿತು. ಕಾಲಗತಿಯಲ್ಲಿ ಅವರ ಜೀವನ ಸಂಗಾತಿಯು ಇವರಿಂದ ದೂರವಾದರು. ಚಿಕ್ಕವರಾದ ಸುಂದರಮ್ಮನ ಜೀವನವು ದುರಂತವೆ ಆಯಿತು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವು ದಿನಗಳಲ್ಲೆ ವೈಧವ್ಯ ಪ್ರಾಪ್ತಿಯಾಯಿತು. ಈ ಘಟನೆಯಿಂದ ಹೊರಬಂದು  ಹೆಚ್ಚಿನ ವಿದ್ಯಾಭ್ಯಾಸವಿಲ್ಲದ ಈ ಸಹೋದರಿಯರು ಜೀವನ ನಿರ್ವಹಣೆಗೆ ಆಯ್ದುಕೊಂಡದ್ದು ಮೈಸೂರು ಲ್ಯಾಂಪ್ಸ್ ವರ್ಕ್ಸ್ ಸಂಸ್ಥೆಯಲ್ಲಿ ದಿನಗೂಲಿ ಕೆಲಸ. ಮನೆಯಿಂದ ಬುತ್ತಿಕಟ್ಟಿಕೊಂಡು ಎರಡೂವರೆ  ಕಿಲೊಮೀಟರ್ ನಡೆದು ಕೆಲಸ ಮಾಡಿ ಸಂಜೆ ಅದೆ ರೀತಿ ಮನೆಗೆ ಬರುವುದು. ಆಗಿನ ಕಾಲದಲ್ಲಿ ಅವರ ದಿನದ ಭತ್ಯೆ ಎಂಟಾಣೆ. ಸಂಪಾದನೆಯ ಹಣವನ್ನು ಅತಿ ಜಾಣ್ಮೆಯಿಂದ ಉಳಿಸಿ ಕರ್ನಾಟಕ ಹೌಸಿಂಗ್ ಬೋರ್ಡ್ ಅಡಿಯಲ್ಲಿ ಒಂದು ಮನೆ ಖರೀದಿಸಿದರು. ಇತರರ ಸಹಾಯ ಯಾಚಿಸದೆ ಈ ಸಾಧನೆಯನ್ನು ಮಾಡಿದ ಆ ಸಹೋದರಿಯರನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೆ.

ನಂತರ ಅವರ ವೃದ್ಧಾಪ್ಯದಲ್ಲಿ ಅವರಿಬ್ಬರನ್ನು ನೋಡುವವರಾರು ಎಂಬ ದೂರದೃಷ್ಟಿಯಿಂದ ತಮ್ಮ ಮನೆಯನ್ನು "ಚಿತ್ಪಾವನ ಸೇವಾ ಸಮಾಜ" ಎನ್ನುವ ಸಂಸ್ಥೆಗೆ ದಾನ ನೀಡಿ ಅವರ ಅಂತ್ಯಕಾಲದಲ್ಲಿ ತಮ್ಮನ್ನು ಸಂಸ್ಥೆಯ ಆಯ್ದ ಪದಾಧಿಕಾರಿಗಳು ನೋಡಿಕೊಳ್ಳುವ ಕರಾರು ಪಡೆದರು.
ಸಂಸ್ಥೆಗೆ ತಮ್ಮ ಮನೆಯನ್ನು ನೀಡಿ, ಸಂಸ್ಥೆಯ ಶ್ರೇಯಸ್ಸಿಗು ಮಾರ್ಗದರ್ಶನ ನೀಡಿ ಸದಸ್ಯರಿಗೆ ಪ್ರೋತ್ಸಾಹಿಸುವ ಅವರ ಗುಣ ಶ್ಲಾಘನೀಯ.
         ನಾವೇನೊ ಸಾಧಾರಣ ವಿದ್ಯೆಯಿದ್ದು ಅದರಿಂದ ಮೇಲೆ ಬಂದಾಗ ಬೀಗುತ್ತೇವೆ. ಈ ಸಹೋದರಿಯರ ಸಾಧನೆಯ ಮುಂದೆ ನಮ್ಮ ಸಾಧನೆ ಶೂನ್ಯವೆ.

-ರತ್ನಾ ಪಟ್ವರ್ಧನ್  ,
ಬೆಂಗಳೂರು-560010

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.