ADVERTISEMENT

ಮಂಜಿನ ಪರದೆಯಡಿ ಮುಗುಳ್ನಗುವ ರಾಣಿಜರಿ

ಶಶಾಂಕ ಹೆಗಡೆ
Published 19 ಜೂನ್ 2018, 9:02 IST
Last Updated 19 ಜೂನ್ 2018, 9:02 IST
ಮಂಜಿನ ಪರದೆಯಡಿ ಮುಗುಳ್ನಗುವ ರಾಣಿಜರಿ
ಮಂಜಿನ ಪರದೆಯಡಿ ಮುಗುಳ್ನಗುವ ರಾಣಿಜರಿ   

ಗುಡ್ಡ ಸುತ್ತಬೇಕು. ಬೆಟ್ಟ ಹತ್ತಬೇಕು. ಎಲ್ಲಾದರೂ ಪರಿಸರದ ಮಧ್ಯೆ ಕಳೆದುಹೋಗಬೇಕು. ವಾರಾಂತ್ಯದಲ್ಲಿ ಮನೆಯವರೆಲ್ಲ ಸೇರಿ ಒಂದು ಒಳ್ಳೆಯ ಜಾಗಕ್ಕೆ ಟ್ರೆಕ್ಕಿಂಗ್‌ ಹೋಗಬೇಕು ಅಂತೆಲ್ಲ ಹಂಬಲಿಸುವವರಿಗೆ ‘ರಾಣಿಜರಿ’ ಹೇಳಿಮಾಡಿಸಿದ ತಾಣ.

ಪಶ್ಚಿಮ ಘಟ್ಟದ ಸಹಸ್ರಾರು ಪರ್ವತಶ್ರೇಣಿಗಳ ಪೈಕಿ ಈ ರಾಣಿಜರಿಯೂ ಒಂದು. ಇದರ ಸುತ್ತಲಿನ ಗುಡ್ಡಗಳು ‘ನಾ ನಿನಗಿಂತ ಮೇಲು... ನಾ ನಿನಗಿಂತ ಮೇಲು...’ ಎಂದು ಪೈಪೋಟಿಗೆ ಬಿದ್ದು ಒಂದಕ್ಕಿಂತ ಇನ್ನೊಂದು ಮೇಲಕ್ಕೆ ಬೆಳೆದು ಮುಗಿಲು ಮುಟ್ಟುವ ರೀತಿ ಹಬ್ಬಿಕೊಂಡಿವೆ. ಮಂಜು ಗಿರಿನೆತ್ತಿಯ ಜತೆ ಆಟಕ್ಕಿಳಿದಂತೆ ಸುತ್ತಿ ಸುಳಿದು, ಮುತ್ತಿ ಮುತ್ತಿಕ್ಕಿ ಸಂಭ್ರಮಿಸುವುದನ್ನು ನೋಡುವ ರೋಮಾಂಚನವೇ ಬೇರೆ.

ರಾಣಿಜರಿಯ ತುದಿ ನಿಂತು ನೋಡಿದರೆ ಸುಮಾರು 2,500 ಅಡಿ ಕೆಳಕ್ಕೆ ದಟ್ಟವಾಗಿ ಹಬ್ಬಿರುವ ಹಸಿರು ತುಂಬಿದ ಅರಣ್ಯ ಪ್ರದೇಶದ ರಮಣೀಯ ನೋಟ ಕಾಣಸಿಗುತ್ತದೆ. ಈ ಗುಡ್ಡ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶ. ನಾವು ಕಾಫಿನಾಡಿನಲ್ಲಿ ನಿಂತು ತುಳುನಾಡನ್ನು ವೀಕ್ಷಿಸಬಹುದು. ಅದು ಈ ತಾಣದ ವಿಶೇಷ. ಗುಡ್ಡದ ತುದಿಯಿಂದ ಕಣ್ಣುಹಾಯಿಸಿದರೆ ಚಿಕ್ಕ ಚಿಕ್ಕ ಕಟ್ಟಡಗಳು ರಂಗೋಲಿಯ ಚುಕ್ಕಿಯ ಹಾಗೆ ಕಾಣಿಸುತ್ತವೆ. ಸ್ಥಳೀಯರ ಪ್ರಕಾರ ಅದು ಬೆಳ್ತಂಗಡಿ ತಾಲ್ಲೂಕಿನ ಬಂಗಾಡಿ ಗ್ರಾಮ.

ADVERTISEMENT

ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಕೊಂಡಿರುತ್ತದೆ ಈ ರಾಣಿಜರಿ. ಹಾಗಾಗಿ ಕೆಳಗಿನ ಕಣಿವೆಯನ್ನು ಹಾಗೂ ಸುತ್ತಲಿನ ಗುಡ್ಡಗಳನ್ನು ಕಣ್ಣತುಂಬಿಕೊಳ್ಳಲು ಕಣ್ಣುಗಳಿದ್ದರೆ ಸಾಲದು, ಅದೃಷ್ಟವೂ ಬೇಕು. ಆದರೂ ಮಂಜಿನಿಂದ ಮುತ್ತಿಕೊಂಡಿರುವ ರಾಣಿಜರಿಯನ್ನು ನೋಡುವ ಅನುಭವವು ಬೇರೆಯದ್ದೇ! ನೆತ್ತಿಯ ಮೇಲೆ ಸುಮ್ಮನೆ ನಿಂತು ಕಣ್ಣುಚ್ಚಿ, ಎಲ್ಲೋ ಭೂಮಿಯಿಂದಾಚೆ ನಿಂತು ಮೋಡಗಳ ಮಧ್ಯೆ ವಿಹರಿಸುತ್ತಿರುವ ಅನುಭವವಾಗುತ್ತದೆ. ಏಪ್ರಿಲ್‍ನ ಸುಡು ಬೇಸಿಗೆಯಲ್ಲಿಯೂ ಮಂಜಿನಿಂದ ತುಂಬಿಕೊಂಡು ಚಳಿ ಹುಟ್ಟಿಸುತ್ತದೆ ಈ ಪರ್ವತದ ಒಡಲು.

ರಾಣಿಜರಿಯಲ್ಲಿ ಅಷ್ಟೊಂದು ಕಷ್ಟದ ಚಾರಣ ಹಾದಿಯಿಲ್ಲ. ಸುಲಭವಾಗಿ ಬಹು ಬೇಗನೆ ಗುಡ್ಡದ ತುದಿ ಮುಟ್ಟಬಹುದು. ಬಲ್ಲಾಳರಾಯನದುರ್ಗಕ್ಕೆ ಚಾರಣ ಆರಂಭವಾಗುವುದು ರಾಣಿಜರಿಯಿಂದಲೇ. ಬಲ್ಲರಾಯನದುರ್ಗಕ್ಕೆ ಇಲ್ಲಿಂದ ಸುಮಾರು 7-8 ಕಿ.ಮೀ. ಚಾರಣ ಮಾಡಬೇಕು.

ರಾಣಿಜರಿಗೆ ಸಾಗುವ ದಾರಿಯೂ ಅಷ್ಟೇ ಸೊಗಸಾಗಿದೆ. ಸುತ್ತಲೂ ಹಸಿರಿನಿಂದ ತುಂಬಿರುವ ದಾರಿಯಲ್ಲಿ ಕಾಫಿ ಗಿಡಗಳು ಸೊಬಗು ಹೆಚ್ಚಿಸುತ್ತವೆ. ಕೆಳಗೂರಿನ ಟೀ ಪ್ಲಾಂಟೇಶನ್‍ಗಳು ನೋಡಲು ಕಣ್ಣಿಗೆ ಹಬ್ಬ. ಸಾಗುವ ದಾರಿಯಲ್ಲಿ ಸಿಗುವ ಹಲವು ಚಿಕ್ಕ ಪುಟ್ಟ ಹಳ್ಳಿಯ ಹೆಸರುಗಳು ಪೂರ್ಣಚಂದ್ರ ತೇಜಸ್ವಿಯವರನ್ನು ನೆನಪಿಸುತ್ತವೆ. ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಹಲವಾರು ಹೋಮ್‍ಸ್ಟೇಗಳು ತಲೆ ಎತ್ತಿವೆ.

ಹೀಗೆ ಹಲವಾರು ವೈಶಿಷ್ಠ್ಯಗಳಿಂದ ಕೂಡಿರುವ ರಾಣಿಜರಿ ಒಂದೊಳ್ಳೆ ಚಾರಣಸ್ಥಳ. ವಾರಾಂತ್ಯದ ಲಾಂಗ್ ಡ್ರೈವ್ ಹೋಗಿ ಎಂಜಾಯ್ ಮಾಡಿ ಪಶ್ಚಿಮ ಘಟ್ಟದ ಸುಂದರ ಸೌಂದರ್ಯದ ಸೊಬಗನ್ನು ಸವಿಯಲು ಪ್ರಶಸ್ತ ತಾಣ.

ತಲುಪುವುದು ಹೇಗೆ?
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಿಂದ ಕಳಸ ಮಾರ್ಗದಲ್ಲಿ ಸುಮಾರು 17 ಕಿ.ಮೀ. ಹೋದರೆ ಸುಂಕಸಾಳ ಎಂಬ ಊರು ಸಿಗುತ್ತದೆ. ಸುಂಕಸಾಳದಿಂದ ಮೂರು ಕಿ.ಮೀ. ಚಲಿಸಿದರೆ ರಾಣಿಜರಿ ಸಿಗುತ್ತದೆ. ರಾಣಿಜರಿಯ ಬುಡದವರೆಗೂ ಗಾಡಿಯಲ್ಲಿ ಹೋಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.