ADVERTISEMENT

ನಾ ಮಾಡಿದ ‘ಜಿಗುಟು ಬಿಲ್ಲೆ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಸುಲೋಚನ. ಜೆ. ರಾವ್
ಸುಲೋಚನ. ಜೆ. ರಾವ್   

ನನಗೆ ಸಿಹಿ ತಿಂಡಿಗಳೆಂದರೆ ಪಂಚಪ್ರಾಣ. ಅಪ್ಪನಿಂದ ಹೊಗಳಿಸಿಕೊಳ್ಳಲೂ ಆಸೆ. ಏನಾದರೂ ಮಾಡಿ ಹೊಗಳಿಸಿಕೊಳ್ಳುತ್ತಿದ್ದೆ. ನಮ್ಮನೆಯಲ್ಲಿ ಅಮ್ಮ ಹಾಲುಬಾಯಿ, ಮೈಸೂರು ಪಾಕ್ ಮಾಡಿ, ಅಪ್ಪನಿಂದ ಹೊಗಳಿಸಿಕೊಂಡು ಬೀಗುತ್ತಿದ್ದಳು. ಅಮ್ಮನನ್ನು ನೋಡಿ ನನಗೂ, ನಾನೇ ಸ್ವತಃ ಸಿಹಿ ತಿಂಡಿ ಮಾಡಿ ‘ಭೇಷ್’ ಅನಿಸಿಕೊಳ್ಳಬೇಕೆಂಬ ಮಹದಾಸೆ. ಆ ಸಮಯವೂ ಕೂಡಿ ಬಂದಿತ್ತು.

ಅಂದು ನಮ್ಮ ತಾಯಿಯನ್ನು ಅವರ ಹುಟ್ಟುಹಬ್ಬಕ್ಕೆ ಸೀರೆ ಕೊಡಿಸಲೆಂದು ನಮ್ಮ ತಂದೆ ಕರೆದೊಯ್ದಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಏನಾದರೂ ಒಂದು ಹೊಸ ರುಚಿ ಮಾಡಬೇಕು ಎಂದು ಯೋಚಿಸಿದಾಗ ಹೊಳೆದದ್ದು ಮೈದಾ ಹಲ್ವ.

ಮೈದಾಹಿಟ್ಟು ಮತ್ತು ಸಕ್ಕರೆಯನ್ನು ದೋಸೆಯ ಹದಕ್ಕೆ ಕಲಸಿ, ಒಲೆಯ ಮೇಲಿಟ್ಟು ಕಲಕುತ್ತ ಬಂದಾಗ, ದೋಸೆಯ ಹಿಟ್ಟಿನಂತಿದ್ದ ಮಿಶ್ರಣ ಗಟ್ಟಿಯಾಗಿ ಮಧ್ಯೆ ಸಣ್ಣ ಗಂಟುಗಳಾದವು. ಏನೂ ಮಾಡಲು ತೋಚದೆ, ತಣ್ಣಗಾದ ಮೇಲೆ ಕೈಯಿಂದ ಉಜ್ಜಿ ಗಂಟುಗಳನ್ನು ಒಡೆದೆ.  ಇನ್ನಷ್ಟು ಹಾಲು ಬೆರೆಸಿ, ಕಲಕುತ್ತ ಬಂದಾಗ ಹಲ್ವದ ರೂಪ ಪಡೆಯಿತು. ಅದನ್ನು ತಟ್ಟೆಗೆ ಸುರಿದು ‘ಡೈಮಂಡ್’ ಆಕಾರದಲ್ಲಿ ಕತ್ತರಿಸಿಟ್ಟೆ. ಅಪ್ಪ, ಅಮ್ಮ ಬಂದ ತಕ್ಷಣ ‘ಡ್ಯಾಡಿ... ಮೈದಾ ಹಲ್ವ... ನಾನೇ ಮಾಡಿದ್ದು’ ಎಂದು ಖುಷಿಯಿಂದ ತಟ್ಟೆ ಮುಂದೆ ಹಿಡಿದೆ. ಕತ್ತರಿಸಿದ ಪೀಸ್ ಚಮಚದಿಂದ ತೆಗೆದರೆ, ಅರ್ಧ ಸ್ಪೂನಿಗೆ, ಇನ್ನರ್ಧ ತಟ್ಟೆಗೇ ಅಂಟಿಕೊಳ್ಳುತ್ತಿತ್ತು.

ADVERTISEMENT

ನಮ್ಮ ತಂದೆ ಮುಸಿಮುಸಿ ನಗುತ್ತ, ‘ಕತ್ತರಿಸಬೇಡಮ್ಮಾ, ಹಾಗೇ ಒಂದು ಪ್ಲೇಟಿನಲ್ಲಿ ಹಾಕಿಕೊಡು ಎಂದರು. ಚಮಚಕ್ಕೆ ಅಂಟಿಕೊಳ್ಳುತ್ತಿದ್ದ ‘ಹಲ್ವ’ವನ್ನು ಕಷ್ಟಪಟ್ಟು ಬಾಯಿಗೆ ತಳ್ಳುತ್ತ ‘ಅಹಾ... ತುಂಬಾ ಚೆನ್ನಾಗಿದೆ... ಇದಕ್ಕೆ ‘ಜಿಗುಟುಬಿಲ್ಲೆ’ ಎಂದು ನಾಮಕರಣ ಮಾಡಮ್ಮ..’ ಎಂದು ತುಟಿಯ ಅಂಚಿನಲ್ಲಿ ನಕ್ಕರೆ, ನನ್ನ ತಮ್ಮ, ‘ಅಕ್ಕಾ.. ಇದನ್ನ ನನಗೆ ಕೊಡು, ನನ್ನ ಬುಕ್ಕಿನ ರಟ್ಟು ಹರಿದಿದೆ, ಅಂಟಿಸ್ತೀನಿ ಅಂದ. ನನ್ನ ತಂಗಿ, ‘ಅಮ್ಮಾ ಇಲ್ನೋಡು... ಈ ಅಂಟು ನಾಲಿಗೇಗೂ ಹಲ್ಲಿಗೂ ಅಂಟಿಕೊಂಡು ಬಿಟ್ಟಿದೆ ಎಂದು ರೇಗಿಸಿದಾಗ, ನನಗೆ ಕಣ್ಣಲ್ಲಿ ನೀರು.

ನಾನು ಮಾಡಿದ ಹಲ್ವವನ್ನು ಅಮ್ಮ ಮತ್ತೆ ಬಾಣಲೆಗೆ ಹಾಕಿ, ಹೆಚ್ಚು ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ಕತ್ತರಿಸಿ, ಮೆಲ್ಲನೆ ನನ್ನನ್ನು ಕರೆದರು. ಈಗ ಹೋಗಿ ಅಪ್ಪನಿಗೆ ಕೊಡು ಎಂದಾಗ ನನಗೆ ಖುಷಿಯೋ ಖುಷಿ. ಆದರೆ ಆಗೆಲ್ಲ ತಮಾಷೆ ಮಾಡುತ್ತಿದ್ದ ಅಪ್ಪ ಈಗಿಲ್ಲ. ಆದರೂ ಹಲ್ವದ ನೆನಪು ಮಾಸಿಲ್ಲ.
–ಸುಲೋಚನ. ಜೆ. ರಾವ್, ಮಲ್ಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.