ADVERTISEMENT

ಸಾ, ಒಂದ್ ಸಾರಿ ಬಳೆ ಹಾಕೊಂಡ್ ತೋರ್ಸಿ!

ಪ್ರೀತಿ ನಾಗರಾಜ
Published 24 ಏಪ್ರಿಲ್ 2018, 14:07 IST
Last Updated 24 ಏಪ್ರಿಲ್ 2018, 14:07 IST
ಕೃಪೆ:  commons.wikimedia.org
ಕೃಪೆ: commons.wikimedia.org   

ಯಾವುದೋ ಸಮಸ್ಯೆಯ ಪರಿಹಾರದ ಬಗ್ಗೆ ಮಾತನಾಡುತ್ತಾ, ನಮ್ಮ ರಾಜ್ಯದ ಮಂತ್ರಿ ಮಹೋದಯರೊಬ್ಬರು ’ಹಿಂದಕ್ಕೆ ಸರಿಯಲು ನಾವೇನು ಬಳೆ ತೊಟ್ಟುಕೊಂಡಿಲ್ಲ’ ಅಂತ ಹೇಳಿದರು. ಅವರಿಗೆ ಬಹುಷಃ ಬಾಲ್ಯದಲ್ಲಿ ಅಥವಾ ಹರೆಯದಲ್ಲಿ ಸಿಗಬೇಕಾದ ಪಾಠಗಳು ಮಿಸ್ ಆದವೂಂತ ಕಾಣುತ್ತೆ ಬಲ ಮೊಣಕೈಯ ಬಳೆಯನ್ನು ಎಡಗೈಯ ತೋರು ಹಾಗೂ ಹೆಬ್ಬೆರಳುಗಳಿಂದ ಹಿಂದಕ್ಕೆ ಬಿಗಿ ಮಾಡಿಕೊಂಡು ಹಸ್ತವ ಮೇಲಕ್ಕೆ ಅಭಯದ ಸಂಕೇತದಂತೆ ಎತ್ತಿದ ಹಾಗೆ ತೋರಿದರೂ, ಅದು ಪ್ರೀತಿಯ ವ್ಯಾಖ್ಯೆ ಆಗಿರುತ್ತಿರಲಿಲ್ಲ ಎನ್ನುವುದು ಎಪ್ಪತ್ತು-ಎಂಭತ್ತರ ದಶಕದಲ್ಲಿ ಪುಟ್ಟವರಾಗಿದ್ದ ಎಲ್ಲ ಮಕ್ಕಳಿಗೂ ಗೊತ್ತಿರುವ ವಿಷಯ.

ಹೊಡೆತಕ್ಕೆ ಇನ್ನೊಂದು ಹೆಸರು ಶಿಸ್ತು. ಸಾಮಾನ್ಯವಾಗಿ ಗಂಡಸರು ಮನೆಯಿಂದ  ಹೊರಗುಳಿದು ಕೆಲಸದಲ್ಲಿ ತೊಡಗಿರುತ್ತಿದ್ದಾಗ ಮನೆಯ ಮಕ್ಕಳನ್ನು ಪೆಟ್ಟಿನ ಮೂಲಕ ಹದ್ದುಬಸ್ತಿನಲ್ಲಿ ಇಡುತ್ತಿದ್ದುದು ಈ ಅಭಯದಂತೆ ಕಾಣುತ್ತಿದ್ದ ಆದರೆ ಪೆಟ್ಟು ಕೊಡಲು ಬಳಕೆಯಾಗುತ್ತಿದ್ದ, ಹಾಗಂತಲೇ ಭಯ-ಹುಟ್ಟಿಸುತ್ತಿದ್ದ ಹೆಣ್ಣು ಹಸ್ತ.
ಆ ಪೆಟ್ಟಿಗೆ ಕ್ಯಾರೆಕ್ಟರ್ ಇತ್ತು. ರಪ್ಪಂತ ಬಿದ್ದರೆ ತೂಕ ಕಡಿಮೆ, ಚುರುಕು ಜಾಸ್ತಿ. ಮಾತು ಕಡಿಮೆ, ಪಾಠ ಜಾಸ್ತಿ. ಚೀರಾಟ ಕಡಿಮೆ, ಹೋರಾಟ ಜಾಸ್ತಿ. ಹೊಡೆಸಿಕೊಂಡವರು ಸೈಲೆಂಟಾಗಿ ಹಲ್ಲು ಕಚ್ಚಿ ಪಾಟಿಚೀಲದ ಕಡೆ ಹೋಗುತ್ತಿದ್ದರು. ಅಥವಾ ಮುಂದಿನ ಕೆಲಸ ಏನಿದೆ ಎನ್ನುವುದನ್ನು ನೋಡುತ್ತಿದ್ದರು.
ಹಾಗಂತ ಹೊಡೆತ ಒಳ್ಳೆಯದೇನು? ಖಂಡಿತಾ ಅಲ್ಲ. ಆದರೆ ಹೊಡೆಯುವುದು ತಪ್ಪು ಎಂತಲೂ ಗೊತ್ತಿಲ್ಲದ ಕಾಲವದು. ಹೊಡೆಯದಿದ್ದರೆ ’ಅವ್ರಪ್ಪ ಅಮ್ಮ ತುಊಉಉಉಂಬಾ ಸಲಿಗೆ ಕೊಟ್ಟಿದಾರಪ! ಏನ್ ತಪ್ಪು ಮಾಡಿದ್ರೂ ಸುಮ್ನೇ ಇರ್ತಾರೆ’ ಅಂತ ’ಅಪಾರ್ಥ’ ಮಾಡಿಕೊಳ್ಳುತ್ತಿದ್ದ ಕಾಲವದು. ಈಗಿನ ಹಾಗೆ ಮಕ್ಕಳಿಗೆ ಹೊಡೆದರೆ ಅನ್ಯಾಯ ಕ್ರೌರ್ಯ ಎನ್ನುವಂಥಾ ದೊಡ್ಡ ದೊಡ್ಡ ಎಮೋಷನ್ನುಗಳಿರಲಿಲ್ಲ.

ಅಪ್ಪ – ಅಮ್ಮನ ಕೆಲಸ ಬಹಳ ಸರಳ ಇತ್ತು. ಅಡಿಗೆ ಮಾಡಿ ಹಾಕೋದು. ಶಿಸ್ತು ಕಲಿಸೋದು ಮತ್ತೆ ಸ್ಕೂಲಿಗೆ ಕಳಿಸೋದು. ಅದರಲ್ಲಿ ಬಹುತೇಕ ಕೆಲಸಗಳನ್ನು ಬಳೆ ತೊಟ್ಟ ಕೈಯೇ ಮಾಡುತ್ತಿದ್ದುದು. ಬಳೆ ಇಲ್ಲದ ಕೈ ಸಂಬಳ ಎಣಿಸುತ್ತಿತ್ತು. ಭಾರದ ಕೆಲಸಗಳನ್ನು ತೂಗುತ್ತಿತ್ತು. ಅಕ್ಕಿ-ಬೇಳೆಗೆ ಒದಗಿಸುತ್ತಿತ್ತು ಆಮೇಲೆ ಸಾಧ್ಯವಾದರೆ ಸ್ವಲ್ಪ ತನ್ನ ಮನೋರಂಜನೆಯನ್ನೂ ಹುಡುಕಿಕೊಳ್ಳುತ್ತಿತ್ತು. ಆದರೆ ಬಳೆ ತೊಟ್ಟ ಕೈ ಮಾತ್ರ ಉಳಿದೆಲ್ಲವನ್ನೂ ಸಾಧ್ಯವಾಗಿಸುತ್ತಿತ್ತು. ಮುಂದಿನ ದಿನಗಳ ಬಗ್ಗೆ ಕನಸನ್ನು ಹಂಚುತ್ತಿತ್ತು.
ಆ ಕನಸಿನ ಬಿತ್ತಮೊಳಕೆಯೊಡೆದು ತನ್ನದೇ ನೆಲ ಕಂಡುಕೊಳ್ಳುವ ವರೆಗೂ ಬಳೆ ತೊಟ್ಟ ಕೈ ವಿರಮಿಸುತ್ತಿರಲಿಲ್ಲ.ಆ ಬಿತ್ತಕ್ಕೆ ನೆಲ ಸಿಕ್ಕ ಮೇಲೆ ಬಳೆತೊಟ್ಟ ಕೈ ಮತ್ತೆ ಕೆಲಸಕ್ಕೆ ಹತ್ತುತ್ತಿತ್ತು. ’ಎಲ್ಲರೂ ಅವರವರ ದಾರಿ ನೋಡ್ಕೊಂಡು ಹೊಂಟಿದ್ದಾತು...ಈಗರೆ ನಮಗೆ ಬೇಕಾದ ಕೆಲಸ ಮಾಡನ...’ ಎಂದುಕೊಳ್ಳುತ್ತಾ ಮತ್ತೆ ಹಪಹಪಿಸುತ್ತಿತ್ತು ಬಳೆ ತೊಟ್ಟ ಕೈ.
ಈ ಬಳೆ ತೊಟ್ಟ ಕೈ ತನ್ನ ಮಕ್ಕಳನ್ನಷ್ಟೇ ಆಲ್ಲ, ತನ್ನ ಸಂಪರ್ಕದಲ್ಲಿ ಬಂದ ಎಲ್ಲಾ ಮಕ್ಕಳನ್ನೂ ಸಾಕಿ ಸಲಹಿ ಕನಸು ಬಿತ್ತುತ್ತೆ ಸರ್. ಜೊತೆಗೆ ಕೋಪ ಬಂದಾಗ ಬಾರಿಸಿಯೂ ಬಿಡುತ್ತಲೇ ಹೊಸ ದಾರಿ ತೋರಿಸಿದೆ. ಬಳೆ-ತೊಟ್ಟ ಕೈಯ ಕನಸುಗಳು ಚೀಪ್ ಅಲ್ಲ. ಅವೆಲ್ಲಾ ದುಬಾರಿ...ಆದರೆ ಎಂದೂ ಭಾರವೆನಿಸಲಿಲ್ಲ. ಯಾಕಂದರೆ ಬಳೆ ತೊಟ್ಟ ಕೈಗೆ ನಿರೀಕ್ಷೆಗಳೇ ಕಡಿಮೆ!!
ಹೊತ್ತು, ಹೆತ್ತು, ಸಲಹಿ, ಹಂಚಿ, ಪೊರೆದು, ಮೆರೆದು, ಬಿರಿದು ಸಾರ್ಥಕವಾಗುವ ಬಳೆ ತೊಟ್ಟ ಕೈ, ಕೇವಲ ಗಂಡಸ್ತನಕ್ಕೆ ಹೆಮ್ಮೆ ಪಡಲು ಸಾಧ್ಯವಿಲ್ಲ ಸರ್. ಬಳೆ ಹಾಕಿಕೊಂಡು ಕೂರಬೇಡಿ. ಅದರ ಭಾರಕ್ಕೆ ನಿಮ್ಮ ಕೈ ನುಜ್ಜು-ಗುಜ್ಜಾದೀತು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.