ADVERTISEMENT

ನನ್ನ ಕೈರುಚಿಗೆ ಅಪ್ಪನಿಗೆ ಅಜ್ಜಿ ನೆನಪಾದ್ರು!

​ಪ್ರಜಾವಾಣಿ ವಾರ್ತೆ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ನನ್ನ ಕೈರುಚಿಗೆ ಅಪ್ಪನಿಗೆ ಅಜ್ಜಿ ನೆನಪಾದ್ರು!
ನನ್ನ ಕೈರುಚಿಗೆ ಅಪ್ಪನಿಗೆ ಅಜ್ಜಿ ನೆನಪಾದ್ರು!   

ನಾನು ಅಡುಗೆ ಎಕ್ಸ್‌ಫರ್ಟ್‌ ಅಲ್ವೇ ಅಲ್ಲ. 5–6 ವರ್ಷದ ಹಿಂದೆ ಅಮ್ಮ, ಅಕ್ಕ ಊರಿಗೆ ಹೋಗಿದ್ರು. ಮನೆಯಲ್ಲಿ ನಾನು, ಅಪ್ಪ ಇಬ್ಬರೇ. ಬೆಳಿಗ್ಗೆ ತಿಂಡಿಗೆ ರಾಗಿ ರೊಟ್ಟಿ ಮಾಡಿದ್ದೆ. ಅದನ್ನು ತಿಂದು ಅಪ್ಪ ‘ನಿನ್ನ ಕೈರುಚಿ ರಾಗಿರೊಟ್ಟಿ ತಿಂದು, ನನಗೆ ನನ್ನ ಅಮ್ಮ ನೆನಪಾಗುತ್ತಿದ್ದಾರೆ’ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ರು. ಅಪ್ಪನಿಗೆ ಅದು ರುಚಿಯಾಗಿತ್ತೋ ಏನೋ, ನಾನು ತಿಂದಾಗ ನನಗೆ ಅದು ಇಷ್ಟವಾಗಲಿಲ್ಲ. ಆದರೆ ಅಪ್ಪ ನನ್ನ ಬೇಜಾರು ಮಾಡಬಾರದು, ಮೊದಲ ಅಡುಗೆಯಲ್ಲೇ ಮನಸ್ಸಿಗೆ ಬೇಸರ ಮಾಡಬಾರದು ಎಂದು ಬಹುಶಃ ಹೊಗಳಿರಬೇಕು.

ನಾನು ಯಾವಾಗಲೂ ಚಿತ್ರೀಕರಣದಲ್ಲೇ ಬ್ಯುಸಿಯಾಗಿರುತ್ತೇನೆ. ಹಾಗಾಗಿ ಅಡುಗೆ ಮಾಡಲ್ಲ. ಆದರೆ ಬಿಡುವು ಇದ್ದಾಗ ನಾನು ಸಹಾಯ ಮಾಡುತ್ತೇನೆ. ಆದರೆ ಮನೆಯಲ್ಲಿ ಯಾರೂ ಇಲ್ಲ ಎಂದಾಗ ನಾನೇ ಅಡುಗೆ ಮಾಡಿಕೊಂಡು ತಿನ್ನುತ್ತೇನೆ. ನಮ್ಮ ಕಡೆ ಅಡುಗೆಗಳಾದ ಬಸ್ಸಾರು, ಮೊಸೊಪ್ಪುನಂತಹ ಅಡುಗೆ ಮಾಡೋಕೆ ನನಗೆ ಬರಲ್ಲ. ಆದರೆ ಚಪಾತಿ– ಪಲ್ಯ, ಅನ್ನ– ಸಾರು, ತರಕಾರಿ ಸಾಂಬಾರು ಮಾಡೋಕೆ ನನಗೆ ಗೊತ್ತು.

ನಾನು ಮಾಂಸಾಹಾರ, ಸಸ್ಯಾಹಾರ ಎರಡೂ ಬಗೆಯ ಆಹಾರ ಸೇವಿಸುತ್ತೇನೆ. ಆದರೆ ನನಗೆ ವೆಜ್‌ ಅಡುಗೆ ಮಾಡೋಕೆ ಮಾತ್ರ ಬರುತ್ತೆ. ಈಗ ನಾನು ಆಹಾರ ತಿನ್ನುವುದರಲ್ಲಿ ತುಂಬ ಚೂಸಿ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವುದರಿಂದ ನನಗೆ ವರ್ಕೌಟ್‌ ಮಾಡೋಕೆ ಸಮಯ ಸಿಗಲ್ಲ. ಹಾಗಾಗಿ ಆಹಾರದಲ್ಲಿ ಕಂಟ್ರೋಲ್‌ ಮಾಡಿಕೊಳ್ಳುತ್ತೇನೆ. ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ. ಏನೇ ತಿಂದರೂ ತುಂಬಾ ಕಡಿಮೆ ತಿನ್ನುತ್ತೇನೆ.

ADVERTISEMENT

ಆಹಾರದ ಬಗ್ಗೆ ಮಾತನಾಡಬೇಕು ಎಂದು ನೆನಪಿಸಿಕೊಂಡರೆ ನನಗೆ ಭಾರತೀಯ ಹಾಗೂ ಚೈನೀಸ್‌ ಅಡುಗೆ ವೈವಿಧ್ಯವೇ ಕಣ್ಮುಂದೆ ಬರುತ್ತದೆ. ಮದುವೆಯಾದ ಬಳಿಕ ನಾನು ಗಂಡನ ಜೊತೆಗೆ ಹಾಂಕಾಂಗ್‌ ಹೋಗಿದ್ದೆ. ಅಲ್ಲಿನ ಅಡುಗೆ, ಹೊಸ ರುಚಿ ಸವಿಯಬೇಕು ಎಂದು ಹೆಚ್ಚಾಗಿ ಹೊರಗಡೆ ಊಟಕ್ಕೆ ಹೋಗುತ್ತಿದ್ದೆವು. ಇಲ್ಲಿನ ಅಡುಗೆ, ಅಲ್ಲಿನ ಅಡುಗೆಗೂ ತುಂಬಾನೇ ವ್ಯತ್ಯಾಸ ಇದೆ. ಇಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚು ಬಳಸುತ್ತೇವೆ. ಅಲ್ಲಿ ಬರೀ ಎಣ್ಣೆ, ಉಪ್ಪು ಹಾಕಿ ಬೇಯಿಸ್ತಾರೆ. ಜಾಸ್ತಿ ಖಾರ ಇಲ್ಲ. ಭಾರತದಲ್ಲಿ ಊಟ ಅಂದ್ರೆ ಅನ್ನ, ಅದಕ್ಕೆ ಪಲ್ಯ, ಸಾಂಬಾರು, ಉಪ್ಪಿನಕಾಯಿ ಹೀಗೇ ಇರಬೇಕು. ಆದರೆ ಅಲ್ಲಿ ನೂಡಲ್ಸ್‌ ಆರ್ಡರ್‌ ಮಾಡಿದರೆ, ಮೊದಲು ಅದರಲ್ಲಿರುವ ಸೂಪ್‌ ಕುಡಿಯಬೇಕು. ಅನಂತರ ಅದರಲ್ಲಿರುವ ತರಕಾರಿ ತಿನ್ನಬೇಕು, ಅನಂತರ ಮಾಂಸದ ತುಂಡುಗಳು, ಕೊನೆಯದಾಗಿ ನೂಡಲ್ಸ್‌ ಇರುತ್ತದೆ. ಹೀಗೆ ಎಲ್ಲಾ ಐಟಂಗಳು ಒಂದೇ ಬೌಲ್‌ನಲ್ಲಿರುತ್ತದೆ. ಇಲ್ಲಿ ನಾವು ಚೈನೀಸ್‌ ರೆಸ್ಟೊರೆಂಟ್‌ಗೆ ಹೋಗಿ ಚೈನೀಸ್‌ ಆಹಾರ ತಿನ್ನುತ್ತೇವಲ್ಲಾ ಅದೆಲ್ಲಾ ಪ್ಯೂರ್‌ ಚೈನೀಸ್‌ ಐಟಂಗಳಲ್ಲ. ಮಾಡುವ ವಿಧಾನ, ಪ್ರೆಸೆಂಟೇಷನ್, ರುಚಿ ಹೀಗೆ ಎಲ್ಲದರಲ್ಲೂ ಒಟ್ಟಾರೆ ವ್ಯತ್ಯಾಸ ಇದೆ. 

ಎಳನೀರು ಪಾಯಸ

ಬೇಕಾದ ಸಾಮಗ್ರಿ: ಎಳನೀರು ಒಂದು ಕಪ್, ಎಳೆಯ ತೆಂಗಿನ ತಿರುಳು ಒಂದು ಕಪ್, ಹಾಲು ಎರಡು ಕಪ್, ಸಕ್ಕರೆ ಅರ್ಧ ಕಪ್, ಏಲಕ್ಕಿ ಪುಡಿ ಅರ್ಧ ಟೀ ಚಮಚ, ಗೋಡಂಬಿ ಅಥವಾ ಬಾದಾಮಿ ಬೀಜ ಕಾಲು ಕಪ್.

ಮಾಡುವ ವಿಧಾನ: ಒಂದು ಕಪ್ ಎಳನೀರು ಮತ್ತು ಅರ್ಧ ಕಪ್  ಮತ್ತು ಎಳೆಯ ತೆಂಗಿನ ತಿರುಳನ್ನು ಹದವಾಗಿ ಮಿಶ್ರಣ ಮಾಡಿಕೊಳ್ಳಬೇಕು. ಎರಡು ಕಪ್ ಹಾಲು, ಸಕ್ಕರೆಯನ್ನು ಪ್ಯಾನ್‌ನಲ್ಲಿ ಹಾಕಿ ಬಿಸಿ ಮಾಡಿ, ಇದು ಕುದಿ ಬಂದು ಅರ್ಧ ಪ್ರಮಾಣಕ್ಕೆ ಇಳಿಯುವ ತನಕ ಸಣ್ಣ ಉರಿಯಲ್ಲಿ ಕಾಯಿಸಿ. ನಂತರ ಇದನ್ನು ಕೆಳಗಿಳಿಸಿ ಈ ಮಿಶ್ರಣಕ್ಕೆ ತೆಂಗಿನ ತಿರುಳು ಮತ್ತು ಎಳನೀರಿನ ಮಿಶ್ರಣವನ್ನು ಸೇರಿಸಿ. ‌ಅರ್ಧ ಟೀ ಚಮಚ ಏಲಕ್ಕಿ ಪುಡಿ ಗೋಡಂಬಿ, ಹಾಕಿ ಮಿಶ್ರಣ ಮಾಡಿ. ‌ಎಳನೀರು ಪಾಯಸ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.