ADVERTISEMENT

ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಚಿಕ್ಕಮಗಳೂರು ಕಾಫಿ

ಸುಮನಾ ಕೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಗೀತು
ಗೀತು   

ಕಾ ಫಿ ಉದ್ಯಮದಲ್ಲಿ ಬ್ಯಾರಿಸ್ತ ಚಾಂಪಿಯನ್‌ಶಿಪ್ ಪ್ರಮುಖವಾದದು. ವಿಶ್ವದ ನಾನಾ ದೇಶಗಳ ಪ್ರಮುಖ ಕಾಫಿ ಕಂಪನಿಗಳು ಇದರಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಆಯಾ ಕಂಪನಿಯ ಪ್ರತಿನಿಧಿಗಳು ಕಾಫಿಯಿಂದ ವಿಶಿಷ್ಟ ಪಾನೀಯಗಳನ್ನು ಮಾಡಿ ತೀರ್ಪುಗಾರರಿಂದ ಸೈ ಎನಿಸಿಕೊಳ್ಳಬೇಕು.

ಈ ಬಾರಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಬ್ಯಾರಿಸ್ತ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಥರ್ಡ್‌ವೇವ್‌ ಕಾಫಿ ಕಂಪೆನಿಯ ಗೀತು ಮೊಹ್ನಾನಿ ಪ್ರಥಮ ಸ್ಥಾನ ಪಡೆದು ಪ್ಲಾಟಿನಂ ವಿಜೇತರಾಗಿದ್ದಾರೆ. ಅತ್ಯುತ್ತಮ ಸಿಗ್ನೇಚರ್‌ ಬೆವರೇಜ್‌ ಗೌರವವನ್ನೂ ಇವರು ಪಡೆದುಕೊಂಡಿದ್ದಾರೆ. ಜೂನ್‌ನಲ್ಲಿ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ನಡೆಯುವ ವಿಶ್ವ ಬ್ಯಾರಿಸ್ತ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಗೀತು ಮೊಹ್ನಾನಿ ಭೋಪಾಲ್‌ನವರು. ಗೋವಾದಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮುಗಿಸಿದ ಬಳಿಕ ಕಳೆದ ನಾಲ್ಕು ವರ್ಷಗಳಿಂದ ಕಾಫಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ದೆಹಲಿಯ ಸ್ಟಾರ್ ಬಗ್ಸ್‌ ಕಂಪೆನಿ ಮೂಲಕ ಉದ್ಯೋಗ ಆರಂಭಿಸಿದ ಅವರು ಸದ್ಯ ಥರ್ಡ್‌ವೇವ್‌ ಕಾಫಿ ಕಂಪೆನಿಯ ಮುಖ್ಯ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಗೀತು ಮೊಹ್ನಾನಿ ಅವರು ಚಿಕ್ಕಮಗಳೂರಿನ ಹಲವು ಕಾಫಿ ಎಸ್ಟೇಟ್‌ಗಳಿಂದ ಕಾಫಿ ಬೀಜಗಳನ್ನು ಸಂಗ್ರಹಿಸಿ ಅದರಲ್ಲಿ ವಿಭಿನ್ನ ಪ್ರಯೋಗ ಮಾಡಿ ಸ್ಪರ್ಧೆಯಲ್ಲಿ ಬೆವರೇಜ್‌ ಮಾಡಿದ್ದರು. ‘ಬ್ಯಾರಿಸ್ತ ಅಂದ್ರೆ ಕಾಫಿಶಾಪ್‌ನಲ್ಲಿ ಕಾಫಿಯನ್ನು ಗ್ರಾಹಕರಿಗೆ ನೀಡುವವನು. ಈ ಚಾಂಪಿಯನ್‌ ಶಿಪ್‌ನಲ್ಲಿ ಕಾಫಿಯಲ್ಲೇ ಹೊಸ ಪ್ರಯೋಗ ಮಾಡಬೇಕು. ನಾನು ಈ ಸ್ಪರ್ಧೆಗೆ ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ಗಳಿಂದ ಕಾಫಿ ಬೀಜಗಳನ್ನು ಸಂಗ್ರಹಿಸಿಕೊಂಡಿದ್ದೆ. ಮೂರೂ ಸುತ್ತಿನಲ್ಲೂ ಈ ಬೀಜಗಳಿಂದಲೇ ಬಗೆ ಬಗೆ ಕಾಫಿಗಳನ್ನು ಮಾಡಿದ್ದೆ’ ಎಂದರು ಗೀತು ಮೊಹ್ನಾನಿ.

‘ಸ್ಪರ್ಧೆಯ ಮೊದಲನೇ ಸುತ್ತಿನಲ್ಲಿ ಕಾಫಿ ಎಸ್‌ಪ್ರೆಸ್ಸೊ, 4 ಬಗೆ ಹಾಲು ಹಾಕಿ ಮಾಡುವ ಕಾಫಿ, ಎರಡನೇ ಸುತ್ತಿನಲ್ಲಿ ಹಾಲಿನಿಂದ ತಯಾರಿಸುವ ಕಾಫಿ ಕೆಫಚಿನೋ ಹಾಗೂ ಕೋಲ್ಡ್‌ ಕಾಫಿ ಮಾಡಿದ್ದೆ.  ಮೂರನೇ ಸುತ್ತಿನಲ್ಲಿ ಸ್ಪರ್ಧಿಗಳು ತಮ್ಮದೇ ಸಿಗ್ನೇಚರ್‌ ಪಾನೀಯಗಳನ್ನು ಮಾಡಬೇಕಿತ್ತು. ನಾನು ಅಂತಿಮ ಸುತ್ತಿನಲ್ಲಿ ಮಾಡಿದ್ದು ‘ಕೂಲ್‌ ಆಫ್‌ ದ ವೈಸ್‌’. ಇದರಲ್ಲಿ ಸ್ವಲ್ಪ ಏಲಕ್ಕಿ, ಕಾಫಿ, ಐಸ್‌ ಬಳಸಿ ಮಾಡಿದ್ದೆ. ಅರಬ್‌ ರಾಷ್ಟ್ರಗಳ ಕಾಫಿ ಕುಡಿಯುವ ಅಭ್ಯಾಸದಿಂದ ಪ್ರೇರಣೆ ಪಡೆದು ಈ ಸಿಗ್ನೇಚರ್‌ ಮಾಡಿದ್ದೆ. ಅರಬ್‌ ರಾಷ್ಟ್ರಗಳಲ್ಲಿ ಖರ್ಜೂರದ ಜೊತೆ ಸಪ್ಪೆ ಕಾಫಿ ಕುಡಿಯುತ್ತಾರೆ. ಅವರು ಕಾಫಿಗೆ ಸಿಹಿ ಬಳಸುವುದಿಲ್ಲ. ಇದನ್ನೇ ಪ್ರಯೋಗ ಮಾಡಿದ್ದೆ’ ಎಂದು ಸ್ಪರ್ಧೆಯ ತಮ್ಮ ಅನುಭವ ಹಂಚಿಕೊಂಡರು.

‘ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಜನ ತೀರ್ಪುಗಾರರಿದ್ದರು. ಬರೀ 15 ನಿಮಿಷಗಳಲ್ಲಿ ತೀರ್ಪುಗಾರರಿಗೆ ಕಾಫಿ ಬೆವರೇಜ್‌  ತಯಾರಿಸಬೇಕಿತ್ತು. ಸಿಕ್ಕಿರುವ ಅಲ್ಪ ಸಮಯದಲ್ಲಿ ಎಷ್ಟು ಚೆನ್ನಾಗಿ ಹಾಗೂ ಹೇಗೆ ಅಲಂಕಾರ ಮಾಡಿ ಪ್ರಸೆಂಟ್‌ ಮಾಡುತ್ತೇವೆ ಎಂಬುದೇ ಮುಖ್ಯವಾಗಿತ್ತು. ಇದು ಎಲ್ಲಾ ಸ್ಪರ್ಧಿಗಳಿಗೆ ಸವಾಲಾಗಿತ್ತು’ ಸವಾಲುಗಳನ್ನು ಹಂಚಿಕೊಂಡರು.

ಆ್ಯಮ್‌ಸ್ಟರ್‌ಡ್ಯಾಂನಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶಿ ಕಾಫಿ ರುಚಿಯಲ್ಲೇ ಪ್ರಯೋಗ ಮಾಡುವ ಇರಾದೆ ಗೀತು ಅವರದು. ಅದಕ್ಕಾಗಿ ಹೊಸ ಹೊಸ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಜೂನ್‌ 20ರಿಂದ 23ರವರೆಗೆ ಈ ಸ್ಪರ್ಧೆ ನಡೆಯಲಿದೆ.

ಯುನೈಟೆಡ್‌ ಕಾಫಿ ಅಸೋಸಿಯೇಷನ್‌ ಆಫ್‌ ಇಂಡಿಯಾ ಮತ್ತು ಕಾಫಿ ಬೋರ್ಡ್‌ ಆಫ್‌ ಇಂಡಿಯಾ ಆಯೋಜಿಸಿದ್ದ  ಈ ಸ್ಪರ್ಧೆಯಲ್ಲಿ 34 ಸ್ಪರ್ಧಿಗಳು ಭಾಗವಹಿಸಿದ್ದರು. ಆರು ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಬೆಂಗಳೂರಿನ ಗಿರೀಶ್‌ಚಂದ್ರ ರನ್ನರ್‌ ಅಪ್‌ ಆಗಿ ಚಿನ್ನ ಗಳಿಸಿದರೆ, ಮುಂಬೈನ ಮೇಘಾ ಪಾಂಡವ್‌ ಬೆಳ್ಳಿ ಮತ್ತು ಸಕಲೇಶಪುರದ ಪ್ರಸನ್ನ ಗುಡಿ ಕಂಚು ಗೆದ್ದುಕೊಂಡರು.

ಬ್ಯಾರಿಸ್ತ ಸ್ಪರ್ಧೆಯಲ್ಲಿ ತೀರ್ಪುಗಾರರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಗೀತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.