ADVERTISEMENT

ಗರ್ಭಪಾತ: ಕಠಿಣ ಕಾನೂನು ಬದಲಾವಣೆಗೆ ಸಕಾರಾತ್ಮಕ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಗರ್ಭಪಾತ: ಕಠಿಣ ಕಾನೂನು ಬದಲಾವಣೆಗೆ ಸಕಾರಾತ್ಮಕ ಹೆಜ್ಜೆ
ಗರ್ಭಪಾತ: ಕಠಿಣ ಕಾನೂನು ಬದಲಾವಣೆಗೆ ಸಕಾರಾತ್ಮಕ ಹೆಜ್ಜೆ   

ಐರ್ಲೆಂಡ್‍ನಲ್ಲಿ ಗರ್ಭಪಾತ ನಿಷೇಧ ರದ್ದುಗೊಳಿಸುವುದರ ಪರವಾಗಿ ಜನಮತಗಣನೆಯಲ್ಲಿ ಶೇ 66ಕ್ಕೂ ಹೆಚ್ಚು ಮಂದಿ ಮತ ನೀಡಿದ್ದಾರೆ. ‘ಸದ್ದಿಲ್ಲದ ಕ್ರಾಂತಿ’ ಇದು ಎಂದು ಸ್ವತಃ ವೈದ್ಯರೂ ಆಗಿರುವ ಐರ್ಲೆಂಡ್ ಪ್ರಧಾನಿ ಲಿಯೊ ವಾರಾಡ್ಕರ್ ಸರಿಯಾಗಿಯೇ ಹೇಳಿದ್ದಾರೆ. ಗರ್ಭಪಾತಕ್ಕೆ ಸಂಬಂಧಿಸಿದಂತೆ ಈ ರಾಷ್ಟ್ರ ಹೊಂದಿರುವ ಅತ್ಯಂತ ಕಠಿಣ ಕಾನೂನುಗಳು ರದ್ದಾಗಲಿರುವುದು ಸ್ವಾಗತಾರ್ಹ. ಈ ವರ್ಷದ ಕೊನೆಯೊಳಗೇ ಹೊಸ ಗರ್ಭಪಾತ ಕಾನೂನು ಜಾರಿಯಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕಾಗಿ ಐರಿಷ್ ಸಂವಿಧಾನದ ಎಂಟನೇ ತಿದ್ದುಪಡಿ ರದ್ದಾಗಲಿದೆ. 1983ರಲ್ಲಿ ಈ ಎಂಟನೇ ತಿದ್ದುಪಡಿ, ಐರಿಷ್ ಸಂವಿಧಾನದ ಭಾಗವಾಯಿತು. ಈ ತಿದ್ದುಪಡಿಯು ಇನ್ನೂ ಹುಟ್ಟಲಿರುವ ಶಿಶುವಿನದೂ ಬದುಕುವ ಹಕ್ಕನ್ನು ಗುರುತಿಸುತ್ತದೆ. ಎಂದರೆ ಗರ್ಭಿಣಿ ಮಹಿಳೆಯ ಬದುಕುವಹಕ್ಕಿನ ಜೊತೆಗೇ ಭ್ರೂಣದ ಹಕ್ಕೂ ಸೇರುತ್ತದೆ. ಹೀಗಾಗಿ ಗರ್ಭಪಾತ ಕ್ರಿಮಿನಲ್ ಅಪರಾಧ. ಉಲ್ಲಂಘಿಸಿದಲ್ಲಿ ಸೆರೆವಾಸದ ಶಿಕ್ಷೆ. ಅತ್ಯಾಚಾರ, ಸಂಬಂಧಿಗಳ ಲೈಂಗಿಕ ದುರಾಚಾರಗಳಿಂದಾದ ಬಸಿರು, ಭ್ರೂಣದ ಆರೋಗ್ಯದ ಸಮಸ್ಯೆ ಅಥವಾ ಸ್ವತಃ ಗರ್ಭಿಣಿ ಮಹಿಳೆಯ ಆರೋಗ್ಯಕ್ಕೆ ಅಪಾಯ ಇದ್ದಂತಹ ಸನ್ನಿವೇಶಗಳಲ್ಲೂ ಗರ್ಭಪಾತಕ್ಕೆ ಅವಕಾಶ ಇಲ್ಲದ ಕಠಿಣ ನಿರ್ಬಂಧಗಳು ಈ ಎಂಟನೇ ತಿದ್ದುಪಡಿಯಲ್ಲಿವೆ. ಗರ್ಭಪಾತವನ್ನು ಪೂರ್ಣ ನಿಷೇಧಿಸುವ ಈ ಓಬೀರಾಯನ ಕಾಲದ ಕಾನೂನು ರದ್ದತಿಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯು ಹಿಂದಿನಿಂದಲೂ ಕರೆ ನೀಡುತ್ತಲೇ ಇತ್ತು. 2012ರಲ್ಲಿ ಬೆಳಗಾವಿಯ ಸವಿತಾ ಹಾಲಪ್ಪನವರ್ ಅವರು ಐರ್ಲೆಂಡ್‌ನಲ್ಲಿ ದುರಂತ ಸಾವಿಗೀಡಾದ ಪ್ರಕರಣವು ಈ ಕಠಿಣ ಗರ್ಭಪಾತ ಕಾನೂನಿನ ಕ್ರೌರ್ಯವನ್ನು ಜಗತ್ತಿನ ಎದುರು ತೆರೆದಿಟ್ಟಿತು. ತೀವ್ರ ನೋವಿನಿಂದ ಆಸ್ಪತ್ರೆಗೆ ಹೋದ ಸವಿತಾ ಅವರಿಗೆ, ‘ಗರ್ಭಪಾತವಾಗಲಿದೆ’ ಎಂದು ವೈದ್ಯರು ಹೇಳಿದರಾದರೂ ವೈದ್ಯಕೀಯ ನೆರವು ನೀಡಲು ನಿರಾಕರಿಸಿದರು. ವೈದ್ಯಕೀಯ ಗರ್ಭಪಾತ ನಡೆಸುವುದು ‘ಕಾನೂನಿಗೆ ವಿರುದ್ಧ’ ಎಂದು ತಿರಸ್ಕರಿಸಿದರು. ಹೀಗಾಗಿ, ಸಮರ್ಪಕ ಚಿಕಿತ್ಸೆ ಸಿಗದೆ ದಂತ ವೈದ್ಯೆ ಸವಿತಾ ಸಾವನ್ನಪ್ಪಬೇಕಾದದ್ದು ಆಘಾತಕಾರಿಯಾದುದಾಗಿತ್ತಲ್ಲದೆ ಜನರ ಪ್ರಜ್ಞೆಯನ್ನು ಕಲಕಿತ್ತು. ವೈದ್ಯಕೀಯ ನೆರವಿನ ಗರ್ಭಪಾತವಾಗಿದ್ದರೆ ಸವಿತಾ ಬದುಕುಳಿದಿರಬಹುದಿತ್ತು ಎಂಬ ಅಂಶ, ಈ ಕಾನೂನಿನ ಅಮಾನವೀಯ ಮುಖವನ್ನು ಅನಾವರಣಗೊಳಿಸಿತ್ತು. ಈ ಪ್ರಕರಣ, ಐರ್ಲೆಂಡ್‌ನಲ್ಲಿ ವ್ಯಾಪಕ ಪ್ರತಿಭಟನೆಗಳಿಗೂ ಕಾರಣವಾಯಿತು. ಕಡೆಗೆ 2013ರಲ್ಲಿ, ತಾಯಿಯ ಜೀವಕ್ಕೆ ತೀರಾ ಅಪಾಯವಿದ್ದಾಗ ಗರ್ಭಪಾತಕ್ಕೆ ಅವಕಾಶ ನೀಡುವಂತಹ ಕಾಯ್ದೆಯನ್ನು ಐರಿಷ್ ಸರ್ಕಾರ ಜಾರಿ ಮಾಡಿತು. ಆದರೆ ಇದು ಏನೇನೂ ಸಾಲದು; ಐರ್ಲೆಂಡ್‌ನಲ್ಲಿ ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳುವುದು ಕ್ಲಿಷ್ಟಕರವಾಗಿಯೇ ಉಳಿಯಲಿದೆ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಕಡೆಗೆ ಈ ಬಗ್ಗೆ 2018ರಲ್ಲಿ ಜನಮತಗಣನೆ ನಡೆಸುವುದಾಗಿ ಐರಿಷ್ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿತ್ತು ಎಂಬುದನ್ನು ಸ್ಮರಿಸಿಕೊಳ್ಳಬಹುದು.

ಕಠಿಣ ಕಾನೂನಿದ್ದರೂ ಐರ್ಲೆಂಡ್‌ನಲ್ಲಿ ಗರ್ಭಪಾತಗಳನ್ನು ತಡೆಯುವುದು ಸಾಧ್ಯವೇನೂ ಆಗಿಲ್ಲ ಎಂಬುದು ವಿಪರ್ಯಾಸ. ಏಕೆಂದರೆ, ಪ್ರತಿವರ್ಷ ಐರ್ಲೆಂಡ್‌ನ ಸುಮಾರು 5000 ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳುತ್ತಲೇ ಇದ್ದಾರೆ. ಇದಕ್ಕಾಗಿ ಈ ಮಹಿಳೆಯರು ಅಪಾರ ಹಣ ವ್ಯಯಿಸಿ ಬ್ರಿಟನ್‌ ಸೇರಿದಂತೆ ಬೇರೆ ದೇಶಗಳಿಗೆ ಹೋಗುತ್ತಾರೆ ಎಂಬುದು ಗರ್ಭಪಾತಕ್ಕಾಗಿ ಮಹಿಳೆಯರು ಪಡಬೇಕಾದ ಪಾಡನ್ನು ವಿವರಿಸುತ್ತದೆ. ಅನೇಕ ಮಹಿಳೆಯರು, ಆಮದು ಮಾಡಿಕೊಂಡ ಗರ್ಭಪಾತ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ನುಂಗುತ್ತಾ ಅಪಾಯಗಳಿಗೆ ಸಿಲುಕುವುದೂ ನಡೆದಿದೆ. ಈಗ, ರಚನೆಯಾಗಲಿರುವ ಹೊಸ ಕಾನೂನಿನಿಂದಾಗಿ ಬೇರೆ ದೇಶಗಳಿಗೆ ಪ್ರಯಾಣ ಮಾಡಬೇಕಾದ ಪ್ರಯಾಸ, ಸಂಕಟ ಹಾಗೂ ದುಬಾರಿ ವೆಚ್ಚಗಳಿಗೆ ಕಡಿವಾಣ ಬೀಳಲಿದೆ ಎಂಬುದು ಸಕಾರಾತ್ಮಕ. ಜನ ಬದಲಾವಣೆ ಬಯಸಿದ್ದಾರೆ ಎಂಬುದು ಸ್ಪಷ್ಟ. ಸಲಿಂಗ ಮದುವೆಗೂ ಅವಕಾಶ ನೀಡುವ ಕಾನೂನು ಇತ್ತೀಚೆಗೆ ಐರ್ಲೆಂಡ್‌ನಲ್ಲಿ ಜಾರಿಯಾಗಿದೆ ಎಂಬುದು ಇದಕ್ಕೆ ಮತ್ತೊಂದು ನಿದರ್ಶನ. ಸಾಮಾಜಿಕ ಜೀವನದಲ್ಲಿ ಕ್ಯಾಥೊಲಿಕ್ ಚರ್ಚ್‌ ಪ್ರತಿಪಾದಿಸುತ್ತಿದ್ದ ಮೌಲ್ಯಗಳ ಬಿಗಿಹಿಡಿತ ಸಡಿಲವಾಗುತ್ತಿರುವ ಸೂಚನೆ ಇದು. ಉದಾರವಾದದೆಡೆಗೆ ಸಾಗುವ ಸಾಮಾಜಿಕ ಬದಲಾವಣೆಗಳಿಗೆ ಇದು ದಿಕ್ಸೂಚಿಯಾಗಿದೆ. ಧಾರ್ಮಿಕ ಸಂಪ್ರದಾಯವಾದಿಗಳು ಹೇರಿರುವಂತಹ ಗರ್ಭಪಾತ ಹಕ್ಕುಗಳ ನಿರ್ಬಂಧಗಳ ವಿರುದ್ಧ ಹಲವು ದೇಶಗಳಲ್ಲಿ ಈಗಲೂ ಹೋರಾಟ ನಡೆದಿದೆ. ಈಗ ಐರ್ಲೆಂಡ್‌ನಲ್ಲಿ ಮಹಿಳೆಯರ ಪ್ರಜನನ ಹಕ್ಕುಗಳ ಹೋರಾಟಕ್ಕೆ ಸಂದಿರುವ ಜಯ ಹೊಸ ಭರವಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT