ADVERTISEMENT

ಪ್ರಕೃತಿಯಿಂದ ತಂತ್ರಜ್ಞಾನ ಪಾಠ!

ಪೃಥ್ವಿರಾಜ್ ಎಂ ಎಚ್
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಮಿಂಚು ಹುಳು
ಮಿಂಚು ಹುಳು   

ನಾ ವು ಅಧ್ಯಯನ ಮಾಡುತ್ತಿರುವ ಕಾಲೇಜುಗಳಲ್ಲಿ ಇರುವಂತೆ ಇಲ್ಲಿ ಪ್ರಾಧ್ಯಾಪಕರು, ಪುಸ್ತಕಗಳು, ಪ್ರಯೋಗಾಲಯಗಳ ಅಗತ್ಯವೇ ಇಲ್ಲ. ನಮಗೆ ಇಷ್ಟವಾದಾಗ ಮತ್ತು ಬಿಡುವಿನ ವೇಳೆಯಲ್ಲಿ ಕಲಿಯಬಹುದಾದ ಬಯೊ ಮಿಮಿಕ್ರಿ (ಪ್ರಕೃತಿ ಅನುಕರಣೆ) ತಂತ್ರಜ್ಞಾನ ಆಧುನಿಕ ತಂತ್ರಜ್ಞಾನಕ್ಕಿಂತ ಯಾವ ರೀತಿಯಲ್ಲೂ ಕಡಿಮೆ ಇಲ್ಲ ಎಂಬಂತೆ ಹಲವು ಗುಟ್ಟುಗಳನ್ನು ಬಿಚ್ಚಿಟ್ಟಿದೆ.

ವಿದ್ಯುತ್ ಉಳಿಸಲು ಏರೋಪ್ಲೇನ್ ಚಿಟ್ಟೆ
ಮಳೆ ಬರುವ ಮುನ್ನ ಗುಂಪಾಗಿ ಹಾರುವ ಡ್ರ್ಯಾಗನ್ ಫ್ಲೈಗಳನ್ನು ನೋಡುವುದೇ ಚೆಂದ. ಇವು ತಮ್ಮ ತೆಳುವಾದ ರೆಕ್ಕೆಗಳ ನೆರವಿನಿಂದ ಸಮುದ್ರ, ಭೂಖಂಡಗಳನ್ನೂ ದಾಟುತ್ತವೆ. ಇದರ ಸ್ಫೂರ್ತಿಯಿಂದಲೇ ಅಮೆರಿಕ ವಿಜ್ಞಾನಿಗಳು ಅತೀ ತೆಳುವಾದ ‘ಏರೋಜೆಲ್’ ಎಂಬ ಘನ ವಸ್ತುವೊಂದನ್ನು ತಯಾರಿಸಿದ್ದಾರೆ.

ಸೂಕ್ಷ್ಮ ರಂಧ್ರಗಳೊಂದಿಗೆ ಸ್ಪಂಜ್‌ ರೀತಿ ಇರುವ ಈ ಸಿಲಿಕಾನ್ ವಸ್ತು, ಗಾಜಿಗಿಂತ 1,000 ಪಟ್ಟು ಕಡಿಮೆ ಸಾಂದ್ರತೆ ಇದೆ. ಇದರಿಂದ ಕಾರು ತಯಾರಿಸಿದರೆ 1 ಕೆ.ಜಿಗಿಂತ ಹೆಚ್ಚು ತೂಕ ಇರದು! ಆದರೆ  ಇದರ ಒಳಗೆ ಸೇರುವ ನೀರಿನ ಅಣುಗಳನ್ನು ತೊಲಗಿಸುವುದು ಪ್ರಯಾಸಕರ ಮತ್ತು ಖರ್ಚಿನಿಂದ ಕೂಡಿದ ಕೆಲಸ ಎಂಬುದು ವಿಜ್ಞಾನಿಗಳಿಗೆ ಮನದಟ್ಟಾಯಿತು.

ADVERTISEMENT

ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ವಿಜ್ಞಾನಿಗಳು, ಈ ಕೀಟದಿಂದಲೇ ಪರಿಹಾರ ಕಂಡುಕೊಂಡರು. ಇದರ ರೆಕ್ಕೆಗಳು ಸೂಕ್ಷ್ಮ ರಂಧ್ರಗಳಿಂದ ಕೂಡಿದ ಏರೊಜೆಲ್ ಮಾದರಿಯ ನಿರ್ಮಾಣವನ್ನೇ ಹೋಲುತ್ತವೆ. ಇದು ಲಾರ್ವಾ ಹಂತದಲ್ಲಿ ಇರುವಾಗ ಇದರ ರೆಕ್ಕೆಗಳು ಜೆಲ್‌ ರೀತಿಯಲ್ಲೇ ಮೃದುವಾಗಿ ಇದ್ದು, ನಂತರ ಗಟ್ಟಿಯಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಇದರ ದೇಹದಿಂದ ಹೊರಹೊಮ್ಮುವ, ಬೈಕಾರ್ಬೊನೇಟ್ ಪರಮಾಣುಗಳು ಬಿಡುಗಡೆ ಮಾಡುವ ಕಾರ್ಬನ್ ಡೈಆಕ್ಸೈಡ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ಕೀಟದ ರೆಕ್ಕೆಗಳಲ್ಲಿನ ನೀರನ್ನು ಹೊರಹಾಕಿ, ಶುಷ್ಕಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ರೆಕ್ಕೆಗಳು ತೆಳುವಾಗಿ ಮತ್ತು ದೃಢವಾಗಿರುತ್ತವೆ.

ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಸೋಡಿಯಂ ಬೈಕಾರ್ಬೊನೇಟ್‌ ಬಳಸಿ ಸಿಲಿಕಾನ್‌ದಲ್ಲಿರುವ ನೀರಿನ ಅಣುಗಳನ್ನು ಯಶಸ್ವಿಯಾಗಿ ಹೊರ ಹಾಕಿದರು. ಮುಂದೆ ಇದನ್ನೇ ಶಾಖ ತಡೆದುಕೊಳ್ಳುವಂತೆ ಅತಿ ತೆಳುವಾಗಿ ತಯಾರಿಸಲು ಉದ್ದೇಶಿಸಿದ್ದಾರೆ. ಇದನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿದರೆ ವಿದ್ಯುತ್‌ ಬಳಕೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಮಿಂಚು ಹುಳುಗಳ ಎಲ್‌ಇಡಿಗಳು
ರಾತ್ರಿಯಲ್ಲಿ ಮಿನುಗುವ ಮಿಂಚು ಹುಳುಗಳಾದರೂ ಹೊಸ ಮಾದರಿಯ ಎಲ್‌ಇಡಿ ದೀಪಗಳ ತಯಾರಿಗೆ ಸ್ಫೂರ್ತಿ ತುಂಬಿವೆ. ಮಿಂಚು ಹುಳುಗಳ ಉದರ ಭಾಗದಲ್ಲಿ ವಿಶೇಷ ಪೊರೆಗಳು ಇರುವುದನ್ನು ಮತ್ತು ಈ ಪೊರೆಗಳು ಹುಳುವಿನ ದೇಹದಿಂದ ಹೊರಹೊಮ್ಮುವ ಬೆಳಕು ಮತ್ತಷ್ಟು ಪ್ರಕಾಶಿಸುವಂತೆ ಮಾಡುತ್ತಿವೆ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದರು. ಇದರ ಸ್ಫೂರ್ತಿಯಿಂದಲೇ ಹೊಸ ಮಾದರಿಯ ಪೊರೆಗಳನ್ನು ತಯಾರಿಸಿ ಎಲ್‌ಇಡಿ ಬಲ್ಬ್‌ಗಳಿಗೆ ಹೊದಿಸಿದರು. ಇದರಿಂದ ಪ್ರಕಾಶ ಶೇ 55ರಷ್ಟು ಹೆಚ್ಚಾಯಿತು. ಇದರಿಂದ ಕಡಿಮೆ ಖರ್ಚಿನಲ್ಲೇ ಹೆಚ್ಚು ಬೆಳಕು ಪಡೆಯಲು ಸಾಧ್ಯವಾಯಿತು.

ವಿಮಾನ ಪ್ರಯಾಣಕ್ಕೆ ತಂತ್ರಾಂಶ
ಗುಂಪಾಗಿ ಈಜುವ ಕೆಲವು ಮೀನಿನ ಪ್ರಭೇದಗಳು, ಗಾಳಿಯಲ್ಲಿ ಗುಂಪು ಗುಂಪಾಗಿ ಹಾರುವ ಜೇನು ನೊಣಗಳು ಒಂದಕ್ಕೊಂದು ತಾಕದಂತೆ ಹೇಗೆ ಚಲಿಸುತ್ತಿವೆ? ಈ ಆಲೋಚನೆ, ಪೋಲೆಂಡ್ ಮತ್ತು ಕೊಲಂಬಿಯಾ ಸಂಶೋಧಕರು ಹೊಸ ತಂತ್ರಾಂಶ ಸಿದ್ಧಪಡಿಸಲು ನೆರವಾಯಿತು. ವಿಮಾನ ಪ್ರಯಾಣಕ್ಕೆ ನೆರವಾಗುವ ಈ ತಂತ್ರಾಂಶಕ್ಕೆ ಮೀನು ಮತ್ತು ಜೇನುನೊಣಗಳೇ ಸ್ಫೂರ್ತಿ. ಈ ತಂತ್ರಾಂಶದಲ್ಲಿನ ಒಂದು ಅಲ್ಗಾರಿಥಮ್‌ ಮೀನು ಮತ್ತು ಜೇನುನೊಣಗಳನ್ನು ಅನುಕರಣೆ ಮಾಡಿದರೆ, ಮತ್ತೊಂದು ಕೋಗಿಲೆ ಧ್ವನಿಯ ಸಂಕೇತಗಳನ್ನು ಅನುಸರಿಸುತ್ತದೆ.

ಹಕ್ಕಿಗಳಿಗೆ ಜೇಡನ ರಕ್ಷಣೆ
ಗಗನಚುಂಬಿ ಕಟ್ಟಡಗಳಿಗೆ ಅಳವಡಿಸುವ ಗಾಜುಗಳು ಹಕ್ಕಿಗಳ ಪ್ರಯಾಣಕ್ಕೆ ಅಡ್ಡಿಯಾಗುತ್ತಿರುವುದಷ್ಟೇ ಅಲ್ಲ, ಅವುಗಳ ಜೀವಕ್ಕೂ ಕುತ್ತು ತರುತ್ತಿವೆ. ಇಂತಹ ಗಾಜುಗಳಿಗೆ ಡಿಕ್ಕಿಯಾಗಿ ವರ್ಷಕ್ಕೆ ಅಸಂಖ್ಯ ಹಕ್ಕಿಗಳು ಸಾಯುತ್ತಿವೆ. ಈ ಸಮಸ್ಯೆಗೆ ಆರ್ಬ್ ವೀವರ್ ಜೇಡ ಪರಿಹಾರ ಸೂಚಿಸಿತು. ಈ ಕೀಟ ಬಲೆ ಹೆಣೆಯಲು ಬಿಡುಗಡೆ ಮಾಡುವ ದಾರಗಳಿಗೆ ನೇರಳಾತೀತ ಕಿರಣಗಳನ್ನು ಪ್ರತಿಬಿಂಬಿಸುವ ಗುಣವಿದೆ.

ಇದರ ಸ್ಫೂರ್ತಿಯಿಂದಲೇ, ಗಾಜಿನ ಮೇಲ್ಮೈ ಮೇಲೆ ಜೇಡರ ಬಲೆಯಂತೆ ಗೆರೆಗಳನ್ನು ರಚಿಸಿ ಹೊಸ ಮಾದರಿಯ ಗಾಜನ್ನು ತಯಾರಿಸಿದ್ದಾರೆ ಸಂಶೋಧಕರು. ಗಾಜಿನ ಮೇಲೆ ದಾರಗಳಿದ್ದರೆ ಕಟ್ಟಡದ ಅಂದ ಕೆಡಬಹುದು ಎಂಬ ಆತಂಕ ಬೇಡ. ಕಾರಣ ಈ ಗೆರೆಗಳು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಆದರೆ ಪಕ್ಷಿಗಳ ಕಣ್ಣಿಗೆ ಕಾಣುತ್ತವೆ. ಇವನ್ನು ಬ್ರಿಟನ್‌ನಲ್ಲಿ ಅಳವಡಿಸಿದ ನಂತರ, ಕಟ್ಟಡಗಳಿಗೆ ಡಿಕ್ಕಿಹೊಡೆದು ಸಾಯುತ್ತಿರುವ ಹಕ್ಕಿಗಳ ಮರಣ ಪ್ರಮಾಣ ಶೇ 60 ರಷ್ಟು ಕಡಿಮೆ ಆಗಿದೆ.

ಪಕ್ಷಿ ಬುಲೆಟ್
ಜಪಾನ್ ಸಂಶೋಧಕರು, ಅತ್ಯಂತ ವೇಗವಾಗಿ ಚಲಿಸುವ ಷಿಂಕಾನ್‌ಸೆನ್ ಬುಲೆಟ್ ರೈಲನ್ನು ತಯಾರಿಸುವ ಸಂದರ್ಭದಲ್ಲಿ ಒಂದು ಸವಾಲು ಎದುರಾಯಿತು. ರೈಲು ಗಾಳಿಯನ್ನು ಸೀಳಿಕೊಂಡು ವೇಗವಾಗಿ ಹೋಗುವಾಗ ಉಂಟಾಗುವ ಶಬ್ದವನ್ನು ಕಡಿಮೆ ಮಾಡುವುದು ಹೇಗೆ ಎಂಬುದು ದೊಡ್ಡ ಸಮಸ್ಯೆಯಾಗಿ ಕಾಡಿತು.

ರೈಲು ಈ ಮಹಾವೇಗದಲ್ಲಿ ಸುರಂಗಮಾರ್ಗ ಪ್ರವೇಶಿಸಿದಾಗ ಭಾರೀ ಪ್ರಕಂಪನ ತರಂಗ (ಟನೆಲ್ ಬೂಮ್‌) ಸೃಷ್ಟಿಯಾಗುತ್ತದೆ. ಇದರಿಂದ ಸುರಂಗಗಳಿಗೆ ಹಾನಿಯಾಗುತ್ತದೆ. ರೈಲಿನ ಮುಂಭಾಗ ಚಪ್ಪಟೆಯಾಕಾರದ ಬದಲಿಗೆ, ನೀಳವಾಗಿ ಇದ್ದರೆ ಸ್ವಲ್ಪಮಟ್ಟಿಗಾದರೂ ಗಾಳಿಯ ಪ್ರಭಾವ ಕಡಿಮೆ ಆಗಬಹುದು ಎಂದು ಅವರು ಭಾವಿಸಿದರು. ಹೀಗೆ ಯೋಚಿಸುತ್ತಿರುವಾಗ ಕಿಂಗ್‌ಫಿಷರ್‌  ಹಕ್ಕಿ ಕಣ್ಣಿಗೆ ಬಿತ್ತು. ಈ ಹಕ್ಕಿಯು ಮೀನುಗಳನ್ನು ಬೇಟೆಯಾಡಲು ಗಾಳಿಯಿಂದ ಹಾರಿ ನೀರನ್ನು ಮುಟ್ಟುವಾಗ ಹೆಚ್ಚು ಶಬ್ದವಾಗದಂತೆ ಎಚ್ಚರಿಕೆ ವಹಿಸುತ್ತದೆ. ಇದಕ್ಕೆ ಕಾರಣ ಹಕ್ಕಿಯ ಕೊಕ್ಕು. ಇದರ ಸ್ಫೂರ್ತಿಯಿಂದಲೇ ಬುಲೆಟ್ ರೈಲಿನ ಮುಂದಿನ ಭಾಗವನ್ನು 50 ಮೀಟರ್ ಉದ್ದ ಇರುವಂತೆ ತಯಾರಿಸಿದರು. ಈಗ ಇವು ಶೇ 15ರಷ್ಟು ಕಡಿಮೆ ವಿದ್ಯುತ್ ಬಳಕೆ ಮಾಡುತ್ತಾ, ಶೇ 10ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸಲು ಕಿಂಗ್‌ಫಿಷರ್ನ ಕೊಕ್ಕು ಸ್ಫೂರ್ತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.