ADVERTISEMENT

ನಮ್ಮೂರಲ್ಲಿ ಲೆಬನಾನ್ ರುಚಿ

ಹೇಮಾ ವೆಂಕಟ್
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಲೆಬನಾನಿ ಬಾಣಸಿಗ ಅಹಮದ್‌ ಅಮೌರಿ
ಲೆಬನಾನಿ ಬಾಣಸಿಗ ಅಹಮದ್‌ ಅಮೌರಿ   

ಲೆಬನಾನ್‌ನಿಂದ ಬಂದು ಬೆಂಗಳೂರಿನ ಪಂಚತಾರಾ ಹೊಟೇಲಿನಲ್ಲಿ ಮುಖ್ಯ ಬಾಣಸಿಗರಾಗಿರುವ ಅಹಮದ್‌ ಅಮೌರಿ ಅವರಿಗೆ ಭಾರತೀಯ ಖಾದ್ಯಗಳೆಂದರೆ ಅಚ್ಚುಮೆಚ್ಚು. ದೇಶದ ಎಲ್ಲಾ ಭಾಗಗಳ ಖಾದ್ಯಗಳನ್ನು ಬಲ್ಲವರಾಗಿರುವ ಇವರಿಗೆ ಚಿಕನ್‌ ಟಿಕ್ಕ ಅಂದ್ರೆ ಪಂಚಪ್ರಾಣ ಅಂತೆ.

ಒಮ್ಮೆ ಲೆಬನಾನ್‌ನಿಂದ ಚೆನ್ನೈಗೆ ಬಂದಿಳಿದ ಅಮೌರಿ ಬೆಳಗಿನ ಜಾವ ನಾಲ್ಕು ಗಂಟೆಗೆ ಹೋಟೆಲೊಂದರ ಬಾಗಿಲು ಬಡಿದು ‘ಇಲ್ಲಿ ಚಿಕನ್‌ ಟಿಕ್ಕ ಸಿಗುತ್ತಾ’ ಎಂದು ಕೇಳಿದ್ದರಂತೆ.

ವಿಶೇಷವೆಂದರೆ ಭಾರತಕ್ಕೆ ಬಾಣಸಿಗರಾಗಿ ಬಂದಿರುವ ಮೊದಲ ಲೆಬನಾನ್‌ ಪ್ರಜೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ಮುಖ್ಯ ಬಾಣಸಿಗರಾಗಿರುವ ಇವರ ಮುಂದಾಳತ್ವದಲ್ಲಿ ಪ್ರಮುಖ ನಗರಗಳಲ್ಲಿ ಲೆಬನಾನಿ ವಿಶೇಷ ಆಹಾರೋತ್ಸವವನ್ನು ಆಯೋಜಿಸಲಾಗುತ್ತಿದೆ. ಶಾಂಗ್ರಿ–ಲಾದಲ್ಲಿ ಸದ್ಯ ನಡೆಯುತ್ತಿರುವ ಲೆಬನಾನಿ ಆಹಾರೋತ್ಸವದ ನಡುವೆ ತಮ್ಮ ಆಹಾರ ಪ್ರೀತಿಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ADVERTISEMENT

ಎಲ್ಲಿಯ ಲೆಬನಾನ್‌, ಎಲ್ಲಿಯ ಬೆಂಗಳೂರು!‌
ಹೌದು, ನನಗೂ ಭಾರತಕ್ಕೂ ಬಹಳ ನಂಟಿದೆ. 2001ರಲ್ಲಿಯೇ ನಾನು ಮೊದಲ ಬಾರಿಗೆ ಭಾರತಕ್ಕೆ ಬಂದೆ. ಮುಂಬೈನ ಇಂಡಿಯಾ ಗೇಟ್‌ ಬಳಿಯ ‘ದಿ ತಾಜ್‌ ಮಹಲ್’ ಹೋಟೆಲಿನಲ್ಲಿ ಶೆಫ್‌ ಆಗಿ ಸೇರಿದೆ. 2004ರಲ್ಲಿ ಬೆಂಗಳೂರಿನ ‘ದಿ ತಾಜ್‌ ವೆಸ್ಟ್‌ಎಂಡ್‌’ ನಲ್ಲಿ ಸೇರಿದೆ. ನಂತರ ನನ್ನ ಪ್ರಯಾಣ ಹೈದರಾಬಾದ್‌, ಲಖನೌ, ಉದಯಪುರ, ದೆಹಲಿ ಹೀಗೆ ಎಲ್ಲೆಡೆ ಸಂಚರಿಸಿದೆ ಮತ್ತೆ ಬೆಂಗಳೂರಿಗೆ ಬಂದೆ.

ಭಾರತದ ಯಾವ ಆಹಾರ ನಿಮಗಿಷ್ಟ? 
ಭಾರತೀಯ ಆಹಾರಗಳ ದೊಡ್ಡ ಫ್ಯಾನ್‌ ನಾನು. ನನಗೆ ಚಿಕನ್‌ ಟಿಕ್ಕ ಬಹಳ ಇಷ್ಟ. ಒಮ್ಮೆ ಮುಂಜಾನೆ ನಾಲ್ಕು ಗಂಟೆಗೆ ಚೆನ್ನೈನ ಹೋಟೆಲಿನ ಬಾಗಿಲು ಬಡಿದು ಚಿಕನ್‌ ಟಿಕ್ಕ ಸಿಗುತ್ತಾ ಎಂದು ಕೇಳಿದ್ದೆ. ಇಲ್ಲೆಲ್ಲ ಅಂಥಾ ಹೊತ್ತಲ್ಲಿ ಮಾಂಸಾಹಾರ ಸಿಗಲ್ಲ ಎಂಬುದು ಗೊತ್ತಿರಲಿಲ್ಲ.

ಭಾರತೀಯ ಆಹಾರ ಶೈಲಿ ಮತ್ತು ಲೆಬನಾನ್‌ ಶೈಲಿಗೂ ಏನು ವ್ಯತ್ಯಾಸ? 
ಲೆಬನಾನ್ ಆಹಾರದಲ್ಲಿ ಬೀಜಗಳು ಮತ್ತು ಆಲಿವ್‌ ಆಯಿಲ್‌ ಹೆಚ್ಚಾಗಿ ಬಳಸುತ್ತೇವೆ. ಗ್ರಿಲ್ಡ್‌ ಮತ್ತು ಬೇಕ್‌ ಮಾಡುವುದೇ ಹೆಚ್ಚು. ಅನ್ನಕ್ಕಿಂತ ಬ್ರೆಡ್‌ ಹೆಚ್ಚು ಬಳಸುತ್ತೇವೆ. ಇದು ಆರೋಗ್ಯಪೂರ್ಣವೂ ಹೌದು. ಮಾಂಸ ಹೆಚ್ಚು ಬಳಸುತ್ತೇವೆ. ಆದರೆ ಎಣ್ಣೆಯಲ್ಲಿ ಕರಿಯುವುದಿಲ್ಲ. ಏಲಕ್ಕಿ, ಸ್ವೀಟ್‌ ಸ್ಪೈಸ್‌, ಸೆವೆನ್‌ ಸ್ಪೈಸ್ ಬಳಸುತ್ತೇವೆ. ಭಾರತೀಯರು ಹೆಚ್ಚಾಗಿ ಸಾಂಬಾರ ಪುಡಿ, ಮೆಣಸಿನ ಪುಡಿ, ಹಸಿಮೆಣಸು, ಕಾಳುಮೆಣಸು ಬಳಸುತ್ತೀರಿ. ನಾವು ಇವುಗಳನ್ನು ಹೆಚ್ಚು ಬಳಸಲ್ಲ.

ಲೆಬನಾನ್‌ ಊಟದಲ್ಲಿ ಮುಖ್ಯವಾದ ಖಾದ್ಯ ಏನು? 
ನಮ್ಮ ಆಹಾರದಲ್ಲಿ ಮೊದಲ ಸ್ಥಾನದಲ್ಲಿ ಸಲಾಡ್‌ ಇದೆ. ಹಣ್ಣು, ತರಕಾರಿ, ಮಾಂಸ, ಬೀಜಗಳನ್ನು ಬಳಸಿ ಸಲಾಡ್‌ ಮತ್ತು ಡಿಪ್‌ಗಳನ್ನು ತಯಾರಿಸುತ್ತೇವೆ. ಕಲ್ಲಿನ ಅವನ್‌ನಲ್ಲಿ ಬೇಕ್‌ ಮಾಡುವ ಮೈದಾದಿಂದ ತಯಾರಿಸಿದ ಪೀಟಾ ಬ್ರೆಡ್‌ ನಮ್ಮ ಮುಖ್ಯ ಆಹಾರ.

ಲೆಬನಾನ್‌ ಮತ್ತು ಭಾರತದ ಆಹಾರ ಮಾರುಕಟ್ಟೆ ಹೇಗೆ ಭಿನ್ನವಾಗಿದೆ? 
ಅಯ್ಯೋ.. ಲೆಬನಾನ್‌ ಬಹಳ ದುಬಾರಿ ದೇಶ. ಅಲ್ಲಿನ ಸ್ಟಾರ್‌ ಹೋಟೆಲಿನಲ್ಲಿ ಒಂದು ಊಟಕ್ಕೆ ಕನಿಷ್ಠ ₹7000 ಬೇಕಾಗುತ್ತದೆ. ಒಂದು ತುಂಡು ಮೀನಿಗೆ ಒಂದೂವರೆ ಸಾವಿರ ತೆರಬೇಕಾಗುತ್ತದೆ. ಹೊಟ್ಟೆಯೂ ತುಂಬದು, ಆಸೆಯೂ ತೀರದು. ಭಾರತದಲ್ಲಿ ಮೀನು, ತರಕಾರಿ,  ಮಾಂಸ ಎಲ್ಲವೂ ಬಹಳ ಕಡಿಮೆ ದರದಲ್ಲಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.