ADVERTISEMENT

ಭಜಿಸುವುದಾದರೆ... ‘ಭಜಿ’ಸುವೆನು

ಎಸ್.ರಶ್ಮಿ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಭಜಿಸುವುದಾದರೆ... ‘ಭಜಿ’ಸುವೆನು
ಭಜಿಸುವುದಾದರೆ... ‘ಭಜಿ’ಸುವೆನು   

ಕಣ್ಮುಚ್ಚಿ, ದೇವರ ನೆನೆಯುತ್ತ ವಾತಾಪಿ ಗಣಪತಿಂ ಭಜೇಮು... ಹಾಡು ಬಂದ ಕೂಡಲೇ ನಮ್ಮ ಭಕ್ತಿ ಭ್ರೂಮಧ್ಯ ಕೇಂದ್ರದಿಂದ ಮೂಗಿಗೆ ಸಾಗಿ ಬರುತ್ತಿತ್ತು. ಇದ್ದಕ್ಕಿದ್ದಂತೆ ಮೂಗಿನ ಹೊರಳೆಗಳು ಅರಳಿ, ಕಣ್ಣುಸಣ್ಣವಾಗಿ ರುಚಿಮೊಗ್ಗುಗಳು ಕೆರಳಿ ಗಣಪತಿಯ ಗುಡಾಣದಂಥ ಹೊಟ್ಟೆ ನಮ್ಮ ಹೊಟ್ಟೆಯಲ್ಲಿಯೇ ಬಾಯ್ದೆರೆದಂತೆ ಆಗುತ್ತಿತ್ತು. ಆ ಪದವೇ ಹಂಗೆ..! ಭಜೇಮು... ಇಡೀ ಉತ್ತರ ಕರ್ನಾಟವನ್ನು ಒಂದೆಡೆ ಕಟ್ಟಿಡುವ ಪದ ಇದು.

ಬೀದರ್‌ನ ಕಟ್‌ ಮಿರ್ಚಿಯಿಂದ ದಾವಣಗೆರೆ ಮಿರ್ಚಿ ಭಜಿವರೆಗೂ ಬೆಂಗಳೂರು ಮೈಸೂರಿಗರ ಬಜ್ಜಿವರೆಗೂ... ಎಷ್ಟೆಲ್ಲ ರೂಪಾಂತರವಾಗುತ್ತದೆ. ಅದೇ ಕಡಲೇಹಿಟ್ಟು, ಅದೇ ಜೀರಿಗೆ, ಅದೇ ಅಜ್ವಾಯಿನ್‌ ಕಾಳು (ಓಂ ಕಾಳು) ಇದೇ ಭಜಿ ತಯಾರಿಗೆ ಓಂಕಾರ ಹಾಕುವ ಕಾಳು. ಹಲ್ಲಿಲ್ಲದ ಅಜ್ಜಂದಿರೂ ಇನ್‌ ಆಗುವಂಥ ಸುವಾಸನೆ ಬೀರುವ ಪುಟ್ಟ ಕಣ. ನಮ್ಮ ಭಜಿ ಸೃಷ್ಟಿಯ ದೇವಕಣವೆಂದೇ ಹೇಳಬಹುದು.

ಕಡಲೇಹಿಟ್ಟಿನ ಹದವೂ ಹದವೇ! ಹಿಟ್ಟು ನೆನೆಸುವ ಕೈಗಳಿಗೆ ಮುದ್ದುಮಾಡುವ ಈ ಗುಣವೆಂದರೇ ನನಗೂ ಇಷ್ಟವೇ. ಎಲ್ಲ ಮುಗಿದ ಮೇಲೆ ಕೈ ತೊಳೆದಾಗ ಕೈ ಮೃದುಕೋಮಲವಾಗುವುದರಿಂದ ಭಜಿ ಹಾಕುವವರಿಗೂ ಖುಷಿಯೇ.

ADVERTISEMENT

ಬೀದರ್‌ನಲ್ಲಿ ಎರಡು ಮಿರ್ಚಿ ಅಡ್ಡಾಗಳು. ಒಂದು ಉಸ್ಮಾನ್‌ ಗಂಜ್‌ ಬಳಿಯ ಚಿತ್ರಾ ಟಾಕೀಸ್‌ ಬಳಿಯದ್ದು. (ಈಗ ಆ ಟಾಕೀಸ್‌ ಇದೆಯೋ ಇಲ್ಲವೋ) ಇನ್ನೊಂದು ಗುರುದ್ವಾರ ಬಳಿ ಇರುವ ಧಾಬಾಗಳು. ಮಿರ್ಚಿಯಲ್ಲೂ ಮಸಾಲಾ ಮಿರ್ಚಿ, ಸಾದಾ ಮಿರ್ಚಿ ಮತ್ತು ಕಟ್‌ ಮಿರ್ಚಿ ಎಂಬ ವಿಧಗಳು. ರಾಯಚೂರಿನಲ್ಲಿಯೂ ಕಲ್ಬುರ್ಗಿಯಲ್ಲಿಯೂ. ಸಾದಾ ಮಿರ್ಚಿ ಎಂದರೆ ಎಳೆಯ ಹಸಿಮೆಣಸಿನ ಸುತ್ತ ಕಡಲೇಹಿಟ್ಟಿನ ಡ್ರಮ್‌ಗಳನ್ನು ಸುತ್ತಿಟ್ಟಂಥ ಮಿರ್ಚಿ. ಇವಕ್ಕೆ ಬೇಕಿದ್ದರೆ ಮೇಲೊಂದಷ್ಟು ಜೀರಿಗೆ ಪುಡಿ ಉದುರಿಸಿ, ಹೆಚ್ಚಿದ ಈರುಳ್ಳಿ ಕೊತ್ತಂಬರಿ ಸುರಿದು ನಿಂಬೆ ಹಣ್ಣು ಹಿಂಡಿ ಕೊಡುತ್ತಾರೆ.

ಬಿಸಿಬಿಸಿ ಭಜಿ ಬಾಯಿಗೆ ಹಿತವಾದರೆ ಅದರೊಳಗಿನ ಎಳೆಮೆಣಸಿನ ಕಾಯಿ ಗಂಟಲು, ಕಿವಿಯವರೆಗೂ ಖಾರದ ಬಿಸಿಯನ್ನು ಹಿತವಾಗಿ ಹರಡುತ್ತದೆ. ಮಸಾಲಾ ಭಜಿ ಎಂದರೆ ಎಳೆಮೆಣಸಿನ ಕಾಯಿಯನ್ನು ಉದ್ದುದ್ದ ಸೀಳಿ ಅದರೊಳಗೆ ಜೀರಿಗೆ ಪುಡಿ ತುಂಬಿ, ಆ ಭಾಗ ತೆರೆದಿರುವಂತೆ ಹಿಟ್ಟಿನೊಳಗದ್ದಿ, ಭಜಿಯನ್ನು ಕರಿಯುವುದು.

ಕಟ್‌ ಮಿರ್ಚಿ ಎಂದಾಗಲೆಲ್ಲ ಗುರುದ್ವಾರಾ ಬಳಿಯ ಹನಿ ಧಾಬಾದ ಆಂಟಿ ನೆನಪಾಗದೇ ಇರರು. ಕರಿದ ಭಜಿಯನ್ನು ಮತ್ತೆ ಕತ್ತರಿಸಿ, ಗರಿಗರಿಯಾಗುವಂತೆ ಮರಳಿ ಬಿಸಿ ಎಣ್ಣೆಗೆ ಬಿಡುತ್ತಿದ್ದರು. ಈ ಕುರುಂಕುರುಂ ಕಟ್‌ ಮಿರ್ಚಿ ಜೊತೆಗೆ ಖಟ್ಟಾ ಚಟ್ನಿ, ಮೀಠಾ ಚಟ್ನಿ ಇದ್ದರೆ ಆ ಸೊಗಸೇ ಬೇರೆ. ಹುಣಸೇಹುಳಿ ನೀರಿಗೆ ಜೀರಿಗೆ ಪುಡಿ ಸೇರಿಸಿ, ಬಿಳಿ ಎಳ್ಳುಗಳನ್ನು ಹಾಕಿದರೆ ಖಟ್ಟಾ ಚಟ್ನಿ ಈ ಖಾರದ ಮಿರ್ಚಿಗೆ ಮತ್ತೊಂದು ರುಚಿಯನ್ನೇ ತಂದು ಕೊಡುತ್ತದೆ.

ನಿಮ್ಮ ಬಾಯೊಳು ನೀರೂರಿದ್ದರೆ ಬೇರೆ ನೀರು ಬೇಕೆನಿಸದಷ್ಟು ರುಚಿ ಇದು. ಇನ್ನು ಖಾರ ಆಗದು. ಆದರೂ ಮಿರ್ಚಿ ಬೇಕು ಎನ್ನುವವರಿಗಾಗಿಯೇ ಮೀಠಾ ಚಟ್ನಿ. ಖರ್ಜೂರವನ್ನು ಅರೆದು ಮಾಡುವ ಈ ಸಿಹಿ ಚಟ್ನಿಗೆ ಮಿರ್ಚಿ ಅದ್ದು ತಿಂದರೆ ಸಿಹಿ ಖಾರ ಬದುಕಿನ ಖುಷಿಯನ್ನೇ ಒಟ್ಟೊಟ್ಟಿಗೆ ನೀಡುತ್ತದೆ.

ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ ಧಾರವಾಡ, ದಾವಣಗೆರೆಯಲ್ಲಂತೂ ಮೆಣಸಿನಕಾಯಿ ಭಜಿ ತಿನ್ನುವುದೆಂದರೆ ದುಂಡುದುಂಡನೆಯ ಮೃದುಕೋಮಲ ಮಿರ್ಚಿಯನ್ನು ತುಟಿಯಿಂದಲೇ ಕಡಿಯಬೇಕೆನಿಸುವ ಆಸೆ ಹುಟ್ಟದೇ ಇರದು. ಮಹಾರಾಷ್ಟ್ರದಲ್ಲಿ ಮಾಡುವ ಮಿರ್ಚಿ ಭಜಿಯ ರುಚಿಯಂತೂ ಇನ್ನೂ ಒಂದು ಕೈ ಮೇಲೆ. ದಪ್ಪನೆಯ ಮೆಣಸಿನಕಾಯಿಯೊಳಗೆ ಆಲೂಗಡ್ಡೆ, ಉಪ್ಪು, ಜೀರಿಗೆ ಪುಡಿ, ಧನಿಯಾಪುಡಿ, ಕೊಚ್ಚಿದ ಈರುಳ್ಳಿ ಎಲ್ಲವನ್ನೂ ಬೆರೆಸಿ ಆ ಮಿಶ್ರಣವನ್ನು ಮೆಣಸಿನಕಾಯಿಯ ಹೊಟ್ಟೆ ತುಂಬಿಸಲಾಗುತ್ತದೆ. ನಂತರ ಹಿಟ್ಟಿನೊಳಗದ್ದಿ ಎಣ್ಣೆಯೊಳಗೆ ಬಿಟ್ಟರೆ ಈ ಸ್ಪೆಷಲ್‌ ಮಸಾಲಾ ಭಜಿ ತಯಾರು.

ಇವೆಲ್ಲವೂ ಭಜಿಯ ವಿಧಗಳಾದವು. ಇವನ್ನು ತಯಾರಿಸುವುದಿದೆಯಲ್ಲ ಅದೊಂದು ಕಲೆ ಮತ್ತು ವಿಜ್ಞಾನ. ಮೆಣಸಿನ ಕಾಯಿಯ ಒಂದೇ ಬದಿಗೆ ಅಂಟಿಸುವುದು... ತುಂಬು ಮಾತ್ರ ಆಚೆ ಉಳಿಯುವಂತೆ ಅದ್ದುವುದು, ಒಳಗೆ ಹಿಟ್ಟು ಹಿಟ್ಟಾಗಿರದಂತೆ ನೋಡಿಕೊಳ್ಳುವುದೂ ಎಲ್ಲವೂ ಕಲೆಯೇ. ಇನ್ನು ಹಿಟ್ಟು ಒಳಗೂ ಅರಳಿಕೊಳ್ಳುವಂತಿರಬೇಕಾದರೆ ಸಾಮಾನ್ಯವಾಗಿ ಬೇಕಿಂಗ್ ಸೋಡ ಬಳಸುತ್ತಾರೆ. 

ನಮ್ಮನೆಯಲ್ಲಿ ಮಾತ್ರ ಸೋಡ ಬಳಸುವುದೇ ಇಲ್ಲ. ಹಾಗಾದರೆ ಪರಿಹಾರ ನಮ್ಮ ಇಂಡಿ ಅಮ್ಮನ ವಿಜ್ಞಾನವೇ ಇದಕ್ಕೆ ಉತ್ತರ. ಇಂಡಿ ಅಮ್ಮ ಅಂದ್ರೆ ನನ್ನ ಅಮ್ಮನ ಅಮ್ಮ. ಅವರು ಇಂಡಿಯೊಳಗೆ ಶಿಕ್ಷಕಿಯಾಗಿದ್ದರು. ಆ ಕಾಲದಲ್ಲಿ ವಸ್ತ್ರದ್‌ ಅಕ್ಕೋರು ಎಂದು ಹೆಸರು ಮಾಡಿದವರು. ಅವರ ಸೂತ್ರ ಹಿಟ್ಟಿಗೆ ಹುಳಿ ಹಿಂಡಿ, ಬೆಲ್ಲ ಕಲಿಸಿ. ಚಂದದ ಬಣ್ಣ ಬೇಕೆಂದರೆ ಲಿಂಬೆ ಹಣ್ಣು ಹಿಂಡಿ, ಸಕ್ಕರೆ ಬೆರೆಸಿ. ಇದು ಹಿಟ್ಟನ್ನು ಒಳಗೆ ಹೂವಿನಂತೆ ಅರಳಿಸುತ್ತದೆ. ರುಚಿಯೂ ಮತ್ತೆಲ್ಲೂ ಸಿಗದಂಥದ್ದು.

ಗೋಲಿ ಭಜಿ ಮಾಡೋರಿಗಂತೂ ಅದೆಷ್ಟು ಚಂದ ಕಾಣಿಸುವುದೆಂದರೆ ತಿಳಿ ಹಳದಿ ಬಣ್ಣದಲಿ, ಹಸಿರು ಕೊತ್ತಂಬರಿ ಸೊಪ್ಪು, ಎಣ್ಣೆಗೆ ಬಿಟ್ಟಾಗ ಬರುವ ಕೆಂಬಣ್ಣ, ಕಚ್ಚಿದಾಗಲಂತೂ ಕೆಂಪಂಚಿನ ಹಳದಿ ಸೀರೆಯ ಸೊಬಗು ಆ ಭಜಿಗೆ.

ಈ ಭಜಿ ಹಿಟ್ಟಿನ ಸರ್ವಾಂತರ್ಯಾಮಿಯ ಹದವೇ ಅದರ ಸಂಜೆ ತಿಂಡಿಯ ಜನಪ್ರಿಯತೆ ಹೆಚ್ಚಿಸಿರಬಹುದು. ಮೆಣಸಿನಕಾಯಿ ಬಿಟ್ರೆ ಮಿರ್ಚಿ ಭಜಿ. ಬಾಳೆಕಾಯಿ, ಬೆಂಡೆಕಾಯಿ, ಬದನೆಕಾಯಿ, ಆಲೂಗಡ್ಡೆ, ಡೊಣ್ಣಮೆಣಸಿನಕಾಯಿ, ಬೆಂದ ಮೊಟ್ಟೆ ಇಟ್ಟರೆ ಅದೂ ಅಷ್ಟೇ ಪ್ರೀತಿಯಿಂದ ಯಾವುದೇ ಭೇದವಿಲ್ಲದೇ ಅಪ್ಪಿ, ಬಳಸಿ ಅವುಗಳೊಂದಿಗೆ ಬೆರೆತು ಬಿಡುತ್ತದೆ. ಈ ಬೆರೆತು,ಹಿಡಿದಿಡುವ ಬಾಂಧವ್ಯ ಕೇವಲ ಭಜಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವನ್ನು ಸೇವಿಸುವವರಿಗೂ ಈ ಬಾಂಧವ್ಯದ ರುಚಿ ಹಚ್ಚುತ್ತದೆ.

ನಮ್ಮ ಕಲಬುರ್ಗಿಯ ಕಚೇರಿಯಲ್ಲಿ ಚಹಾದ ಬಿಡುವಿಗೆ ಎಲ್ಲರೂ ಹೋಗುತ್ತಿದ್ದುದ್ದೇ ಇಂಥ ಭಜಿ ಬಂಡಿಗಳಿಗೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಮನೆಯ ಬಳಿಯೊಂದು ಒಮ್ನಿ ಬಂದು ನಿಲ್ಲುತ್ತಿತ್ತು. ಆ ರಾಜಸ್ತಾನಿ ಮೂಲದ ಇಬ್ಬರು ಮಿರ್ಚಿ ಕರಿಯುತ್ತಿದ್ದರು. ಅಲ್ಲಿ ಮಿರ್ಚಿ ತಿನ್ನುವುದೆಂದರೆ ಕಾಲಡಿಯಿಂದ ಭುವಿಯ ತಾಪ, ತಲೆಯ ಮೇಲೆ ಸುಡು ಬಿಸಿಲಿನ ಕೋಪ. ಈ ಮಿರ್ಚಿ ಸವಿಯುತ್ತಿದ್ದರೆ ಅದೊಂಥರ ಬಿಸಿಬಿಸಿ ಗಂಟಲಿನಿಂದ ಹೊಟ್ಟೆಗಿಳಿದು, ಎಲ್ಲವೂ ಬೆಚ್ಚನೆಯ ಬಿಸುಪು ಮೂಡಿಸುತ್ತಿತ್ತು.

ಚರ್ಚೆ ಭಿನ್ನಾಭಿಪ್ರಾಯದಿಂದ ವಾದ ವಿವಾದಗಳ ಹಂತಕ್ಕೆ ಹೋಗಿದ್ದರೂ ಇಡೀ ಗುಂಪನ್ನು ಮೌನವಾಗಿಸುವಲ್ಲಿ ಈ ಮಿರ್ಚಿಭಜಿಯ ಪಾತ್ರ ಅಷ್ಟಿಷ್ಟಲ್ಲ. ಎಲ್ಲ ತಿಂದು ಕೈ ತೊಳೆದು ಹೋಗುವಾಗ ಒಂದು ಲೋಟ ಕಬ್ಬಿನ ಹಾಲು ಹೊಟ್ಟೆಗಿಳಿಸಿದರೆ ಆ ಚರ್ಚೆಯ ಸಿಹಿ ನೆನಪು ಮಾತ್ರ ಉಳಿಯುತ್ತದೆ. ಕೋಪ ತಾಪವನ್ನೆಲ್ಲ ಮಿರ್ಚಿಯೊಂದಿಗೇ ನುಂಗುವುದನ್ನು ಕಲಿತಿದ್ದು ಅಲ್ಲಿಯೇ!

ಮಿರ್ಚಿ ಖಾರದ ನೆನಪಾದರೂ ಮನಸು ಹಸಿಹಸಿರಾಗುವುದು ನಮ್ಮ ದುರ್ಗದ ಬೈಲಿನ ಮಿರ್ಚಿ ಭಜಿ, ವಡಿ, ವಡಾ ಪಾವ್‌ ಸಾಲಾಗಿ ಒಂದಾದ ಮೇಲೆ ಒಂದು ನುಂಗುವುದನ್ನು ನೆನಪಿಸಿಕೊಂಡಾಗಲೇ. ಹದಿಹರೆಯದಲ್ಲಿ ಭಜಿಯೊಳಗಿನ ಮೆಣಸಿನಕಾಯಿಯಂತೆ ಇದ್ದೋರು, ಕಾಲ ಕಳೆದಂಗೆ ಮಿರ್ಚಿ ಭಜಿಯಾಗಿಯೇ ಪರಿವರ್ತನೆ ಆದೆವು.

ಬರೀ ಗುಂಡುಗುಂಡನೆಯ ಭಜಿಗಳಾಗಲ್ಲ. ತಾಪದಲ್ಲಿ ಬೆಂದರೂ, ಕಷ್ಟಗಳ ಎಣ್ಣೆಯಲ್ಲಿ ಬಿದ್ದರೂ, ಉರುಳುರುಳಿ ಹೊರಳಿಹೊರಳಿ ಜೀವನಪ್ರೀತಿಯ ಮೃದುತ್ವವನ್ನು ಒಳಗೊಂಡೆವು. ಹಗುರಾಗುವುದು... ಹಗುರಾಗುವುದು ಅಂದ್ರೆ ಇಲ್ಲೊಂದು ಮಾತು ನೆನಪಾಗುತ್ತದೆ... ಅದು ಹೇಳಿದ್ರೇನೆ ಮನಸು ಪೂರಾ ಹಗುರಾಗುವುದು.

ಧಾರವಾಡದಲ್ಲಿ ತೀರ ಪ್ರಚಲಿತದಲ್ಲಿದ್ದ ಕಥೆಯಿದು. ಹೃದ್ರೋಗದಿಂದ ಬಳಲುತ್ತಿದ್ದ ಒಬ್ಬರಿಗೆ ಮಿರ್ಚಿ ಭಜಿ ಅಂದ್ರ ಅದ್ರೊಳಗೇ ಅವರ ಜೀವವಿದ್ದಂತೆ! ಹೃದಯದಲ್ಲಲ್ಲ. ವೈದ್ಯರು ಕರೆದಿದ್ದನ್ನು ತಿನ್ನ ಬೇಡವೆಂದು ತಾಕೀತು ಮಾಡಿದ ಮೇಲೆ ಭಜಿ ತಿನ್ನುವುದು ಹೇಗೆ? ಆದರೂ ಮನಸು ತಡೀಲಿಲ್ಲ. ತಮ್ಮ ಸ್ನೇಹಿತರಿಗೆ ಕರೆದು ತಮ್ಮ ಮನದಿಂಗಿತ ತಿಳಿಸಿದರು.

‘ಹೆಂಗಿದ್ರೂ ಸಾಯ್ತೀವಿ. ಸಾಯೂತನ ಉಣ್ಣೂದು, ತಿನ್ನೂದು ಹೆಂಗ ಬಾಯ್ಕಟ್ಟೂದು? ಇಷ್ಟೆಲ್ಲ ಬಾಯ್ಕಟ್ಟಿದ ಮ್ಯಾಲೆ ಜೀವಂತ ಇದ್ರರೆ ಏನುಪಯೋಗ? ತಿಂದ್ರ ಬಹುಶಃ ಸಾಯಬಹುದು. ತಿನ್ನಲಿಕ್ರ ಸತ್ತೇ ಬಿಡ್ತೀನಿ’ ಅಂತೆಲ್ಲ ತಮ್ಮ ವಾದ ಮಂಡಿಸಿ, ಹೃದ್ರೋಗಿಗೆ ಮಾತನಾಡಿಸಲು ಬಂದವರ ಹೃದಯ ಕರಗುವಂತೆ ಮಾಡಿದರು.

ಮರುದಿನ ಸ್ನೇಹಿತರು ಭಜಿ ಕಟ್ಟಿಸಿಕೊಂಡೇ ಮಾತನಾಡಿಸಲು ಬಂದರು. ಇಬ್ಬರೂ ಒಂದೊಂದು ತುತ್ತು ಬಾಯಿಗಿಡುವುದಕ್ಕೂ ವೈದ್ಯರು ಅವರ ಕೋಣೆಗೆ ಕಾಲಿಡುವುದಕ್ಕೂ ಸರಿಹೋಯಿತು. ಸ್ನೇಹಿತರಿಗಂತೂ ಅವರ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಆದರೆ ಇವರು ಎಲ್ಲದಕ್ಕೂ ಸಿದ್ಧರಾಗಿದ್ದರು. ನೀವು ಲೈಟಗೆ ಏನರೆ ತಿನ್ನು ಅಂದಿದ್ರಿ. ನೀರು ಭಾಳ ಹಗುರ. ನೀರಾಗ ಎಣ್ಣಿ ತೇಲ್ತದ... ಅದು ನೀರಿಗಿಂತಲೂ ಹಗುರ. ಎಣ್ಣ್ಯಾಗ ಭಜಿ ತೇಲ್ತಾವ... ಲಾಜಿಕಲ್ಲಿ ಭಜಿ ಭಾಳ ಲೈಟ್‌ ಆತು ನೋಡ್ರಿ... ಹಂಗಾಗಿ ಅದನ್ನೇ ತಿಂತಿದ್ದೆ... ಲೈಟಾಗಿ...’ ಇಷ್ಟು ಹೇಳಿದವರೇ ಉಳಿದಿದ್ದನ್ನೂ ವೈದ್ಯರ ಮುಂದೆಯೇ ಮೆಲ್ಲುತ್ತ ಕಾಲು ಚಾಚಿ ಮಲಗಿದ್ರಂತೆ!

ಭಜಿ ತಿನ್ನೂದಂದ್ರೆ ಹಗುರಾಗುವುದು. ಎಲ್ಲ ಕಷ್ಟಗಳಲ್ಲಿ ಬೆಂದರೂ, ಬೇಸರದ ಬಿಸಿಎಣ್ಣೆಯಲ್ಲಿ ಉರುಳಾಡಿದರೂ ಮಳೆ ಬರುವ ಸಂಜೆ ಬೇಕಾದವರಷ್ಟೇ ಅಲ್ಲ, ಬೇಡವಾದವರೊಂದಿಗೆ ಭಜಿ ಮೆಲ್ಲುತ್ತಿದ್ದರೂ ಬೇಡದ ಭಾವಗಳೆಲ್ಲ ಮಟಾಮಾಯ... ಅದಕ್ಕೇ ಭಜಿಸುವುದಾದರೆ ಭಜಿಯನ್ನೇ ಭಜಿಸಿ. ಜೀವನದೊಂದಿಗೆ ಬೇಯುತ್ತಲೇ ಅರಳುತ್ತೇವೆ. ಅರಳುತ್ತಲೇ ಹೊರಳುತ್ತೇವೆ. ಹೊಸತನದತ್ತ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.