ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಇಂಡೊನೇಷ್ಯಾ ಬಾಂಧವ್ಯಕ್ಕೆ ಹೊಸ ಸ್ಪರ್ಶ

ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರಗಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ
Last Updated 7 ಜೂನ್ 2018, 8:47 IST
ಅಕ್ಷರ ಗಾತ್ರ

ಇಂಡೊನೇಷ್ಯಾ, ಮಲೇಷ್ಯಾ ಹಾಗೂ ಸಿಂಗಪುರಗಳಿಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಪ್ರವಾಸಗಳ ಪೈಕಿ ಇಂಡೊನೇಷ್ಯಾದ ಭೇಟಿ ಹೆಚ್ಚು ಫಲಪ್ರದವಾದದ್ದು. ಇಂಡೊನೇಷ್ಯಾಕ್ಕೆ ನರೇಂದ್ರ ಮೋದಿ ಅವರು ನೀಡಿದ ಮೊದಲ ಭೇಟಿ ಇದು. ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರ ಇಂಡೊನೇಷ್ಯಾ. ಹಾಗೆಯೇ ವಿಶ್ವದ ಅತಿ ದೊಡ್ಡ ದ್ವೀಪ ರಾಷ್ಟ್ರವೂ ಆಗಿರುವ ಇಂಡೊನೇಷ್ಯಾದಲ್ಲಿ ರಾಮಾಯಣದ ಜನಪ್ರಿಯತೆ, ಭಾರತ ಹಾಗೂ ಇಂಡೊನೇಷ್ಯಾದ ನಡುವಿನ ಪುರಾತನ ಬಾಂಧವ್ಯದ ಎಳೆಗಳಿಗೆ ಸೂಚಕ. ಉಭಯ ರಾಷ್ಟ್ರಗಳ ಮಧ್ಯೆ ಈ ಬಗೆಯ ಸಾಂಸ್ಕೃತಿಕ, ಐತಿಹಾಸಿಕ ಸಾಮ್ಯದ ಎಳೆಗಳಿದ್ದರೂ ಪರಸ್ಪರರ ಬಾಂಧವ್ಯ ಈವರೆಗೆ ಅಷ್ಟೇನೂ ಆದ್ಯತೆಯ ಸಂಗತಿಯಾಗಿರಲಿಲ್ಲ. ಹೀಗಾಗಿ, ಎರಡೂ ರಾಷ್ಟ್ರಗಳ ಮಧ್ಯೆ ಇದ್ದ ಪರಸ್ಪರ ಉದಾಸೀನ ಭಾವವನ್ನು ಅಂತ್ಯಗೊಳಿಸಿದ ಮೋದಿ ಹಾಗೂ ಇಂಡೊನೇಷ್ಯಾದ ಅಧ್ಯಕ್ಷ ಜೋಕೊ ವಿಡೊಡೊ ಶ್ಲಾಘನೆಗೆ ಅರ್ಹರು. ಉಭಯ ರಾಷ್ಟ್ರಗಳ ಮಧ್ಯದ ದ್ವಿಪಕ್ಷೀಯ ಬಾಂಧವ್ಯವನ್ನು ಈಗ ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವವಾಗಿ ಎತ್ತರಿಸುವುದಾಗಿ ಮೋದಿ ಪ್ರಕಟಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ಪಾಲುದಾರಿಕೆಗೆ ಹೊಸ ಸ್ಪರ್ಶ ನೀಡಲು ಪ್ರಯತ್ನಗಳನ್ನು ನಡೆಸಲಾಗಿದೆ. ಈ ಪ್ರಯತ್ನಗಳ ಫಲ ಕಳೆದ ವಾರ ಗೋಚರಿಸಿತ್ತು. ಭಾರತ– ಇಂಡೊನೇಷ್ಯಾ ಗಾಳಿಪಟ ಪ್ರದರ್ಶನದ ವೇಳೆ ಈ ಇಬ್ಬರು ನಾಯಕರೂ ಗಾಳಿಪಟ ಹಾರಿಸಿ ಸ್ನೇಹ ಸಮ್ಮಿಲನದ ಸಂದೇಶ ಸಾರಿದರು. ಜೊತೆಗೆ ತಮ್ಮ ಪುಟ್ಟ ಮೊಮ್ಮಗನ ಹೆಸರೂ ಶ್ರೀನರೇಂದ್ರ (ಜನ್ ಎಥೆಸ್ ಶ್ರೀನರೇಂದ್ರ) ಎಂದು ನರೇಂದ್ರ ಮೋದಿಯವರಿಗೆ ಹೇಳುವ ಮೂಲಕ ವಿಡೊಡೊ ಅವರು ಪ್ರದರ್ಶಿಸಿದ ಆಪ್ತತೆ ವಿಶೇಷವಾಗಿತ್ತು.

ದ್ವಿಪಕ್ಷೀಯ ಬಾಂಧವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ಇಂಡೊನೇಷ್ಯಾ ಇಟ್ಟಿರುವ ಹೆಜ್ಜೆ ಮಹತ್ವದ್ದು. ಸೇನಾ ಸಹಕಾರ ಮತ್ತು ಸಾಗರ ಗಡಿ ಸುರಕ್ಷತೆ ಸೇರಿದಂತೆ 15 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇಂಡೊ–ಪೆಸಿಫಿಕ್‌ ಸಾಗರದಲ್ಲಿ ಸಂಚಾರಕ್ಕೆ ಪರಸ್ಪರರ ಜಲಗಡಿಗಳನ್ನು ಮುಕ್ತವಾಗಿಡುವ ಮಹತ್ವದ ನಿರ್ಧಾರವೂ ಇದರಲ್ಲಿ ಸೇರಿದೆ. ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ, ರೈಲ್ವೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡಲು ಒಪ್ಪಿಗೆ ಸೂಚಿಸಿರುವುದು ಮುಖ್ಯವಾದದ್ದು. ಇಂಡೊ– ಪೆಸಿಫಿಕ್‌ ಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಪ್ರಾದೇಶಿಕ ಸ್ಥಿರತೆ, ಸುಸ್ಥಿರ ಆರ್ಥಿಕ ಅಭಿವೃದ್ಧಿ, ಮುಕ್ತ ವಾಣಿಜ್ಯ ವಹಿವಾಟು ಮತ್ತು ಹೂಡಿಕೆ ಕುರಿತೂ ಮೋದಿ ಮತ್ತು ವಿಡೊಡೊ ಚರ್ಚಿಸಿದ್ದಾರೆ. ಇಂಡೊನೇಷ್ಯಾ ಜಲಗಡಿ ಹಂಚಿಕೊಂಡಿರುವ ಮಲಾಕ್ಕಾ ಜಲಸಂಧಿ, ವಿಶ್ವದ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ವಾಣಿಜ್ಯ ಜಲಮಾರ್ಗ. ತೈಲ, ಅನಿಲ ಸೇರಿದಂತೆ ವಿಶ್ವದ ವಹಿವಾಟಿನ ಕಾಲು ಭಾಗದಷ್ಟು ವಸ್ತುಗಳು ಈ ಜಲಮಾರ್ಗದಿಂದಲೇ ತೆರಳುತ್ತವೆ. ಈಗ, ಮಲಾಕ್ಕಾ ಜಲಸಂಧಿಯಿಂದ 500 ಕಿ.ಮೀ.ಗೂ ಕಡಿಮೆ ದೂರ ಹಾಗೂ ಅಂಡಮಾನ್‍ನಿಂದ 710 ಕಿ.ಮೀ. ದೂರದಲ್ಲಿರುವ ಸಬಂಗ್ ಬಂದರನ್ನು ಅಭಿವೃದ್ಧಿಪಡಿಸುವ ಜಂಟಿ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿರುವುದು ಮಹತ್ವದ್ದು. ಸಹಜವಾಗಿಯೇ ಇದು ಚೀನಾದ ಆತಂಕಕ್ಕೆ ಕಾರಣವಾಗಿದೆ. ಆದರೆ, ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನದೇ ಪ್ರಾಬಲ್ಯ ಸಾಧಿಸಲು ಚೀನಾ ಹವಣಿಸುತ್ತಿರುವಾಗಲೇ ಭಾರತ– ಜಕಾರ್ತಾ ಬಾಂಧವ್ಯ ಮೇಲ್ದರ್ಜೆಗೇರಿಸುವ ಉಪಕ್ರಮ ಕೈಗೊಳ್ಳಲಾಗಿರುವುದು ಮಹತ್ವದ್ದು. ಚೀನಾ ಬೆದರಿಕೆಗಳಿಗೆ ಭಾರತ ಮಣಿಯಬಾರದು, ತನಗೆ ಸರಿ ಎನಿಸಿದ ರಾಷ್ಟ್ರಗಳ ಜೊತೆ ಮಿಲಿಟರಿ ಪಾಲುದಾರಿಕೆ ಹೊಂದುವ ಹಕ್ಕನ್ನು ಭಾರತ ಪ್ರತಿಪಾದಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT