ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯಕಾವ್ಯ ಬರೆಯುತ್ತಿದೆ ಸಾತೊಡ್ಡಿ ಜಲಪಾತ

ಉತ್ತರ ಕನ್ನಡದ ‘ನಯಾಗರ’ ಎಂದೇ ಪ್ರಸಿದ್ಧಿ; ಪ್ರವಾಸಿಗರ ನೆಚ್ಚಿನ ಪ್ರಮುಖ ತಾಣ
Last Updated 18 ಜೂನ್ 2018, 13:17 IST
ಅಕ್ಷರ ಗಾತ್ರ

ಯಲ್ಲಾಪುರ:ಜಿಲ್ಲೆಯ ‘ನಯಾಗರ’ ಎಂದೇ ಪ್ರಸಿದ್ಧವಾಗಿರುವ ಸಾತೊಡ್ಡಿ ಜಲಪಾತವು ಉತ್ತಮವಾಗಿ ಬೀಳುತ್ತಿರುವ ಮುಂಗಾರು ಮಳೆಯಿಂದಾಗಿ ಜೀವಕಳೆ ಪಡೆದಿದೆ. ಗುಡ್ಡಗಳ ಸಾಲುಗಳ ಮಧ್ಯೆ, ಹಸಿರು ಗೋಡೆಯ ನಡುವೆ ಹರಿಯುವ ಜಲಧಾರೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಈ ಜಲಪಾತವು ತಾಲ್ಲೂಕು ಕೇಂದ್ರದಿಂದ 28 ಕಿ.ಮೀ ದೂರದಲ್ಲಿದೆ. ಯಲ್ಲಾಪುರ ಪಟ್ಟಣದ ಸಮೀಪ ಜೋಗನ ಜಡ್ಡಿಯ ಹಳ್ಳದಿಂದ ಪ್ರಾರಂಭವಾಗುವ ಚಿಕ್ಕ ತೊರೆಯೇ ಮುಂದುವರಿದು ಸುಂದರ ದೃಶ್ಯಕಾವ್ಯವಾಗಿ ಹರಿಯುತ್ತದೆ. ದೋಣಗಾರ, ತೆಲಂಗಾರ್, ತೋಟ್ಮನೆ ಮೂಲಕ ಅನೇಕ ಸಣ್ಣ ಸಣ್ಣ ತೊರೆಗಳನ್ನು ತನ್ನ ಮಡಿಲಲ್ಲಿ ಸೇರಿಸಿಕೊಂಡು ಹೋಗುತ್ತದೆ. ದಬ್ಬೆಸಾಲಿನ ಮೂಲಕ ಸಾತೊಡ್ಡಿ ಜಲಪಾತವಾಗಿ ಕಾಳಿ ನದಿಯನ್ನು ಸೇರಿಕೊಳ್ಳುತ್ತದೆ. ಅಲ್ಲಿಂದ ಕೊಡಸಳ್ಳಿ ಅಣೆಕಟ್ಟೆಯ ಹಿನ್ನೀರು ಪ್ರದೇಶಕ್ಕೆ ತಲು‍ಪುತ್ತದೆ.

ಜಲಪಾತದ ಎರಡೂ ಬದಿಗಳಲ್ಲಿ ಬೃಹತ್ ಗುಡ್ಡಗಳ ನಡುವೆ 15 ಮೀಟರ್ ಎತ್ತರದಿಂದ ಜಲಧಾರೆ ಧುಮ್ಮಿಕುತ್ತದೆ. ಈ ಸ್ಥಳ ಜಲಕ್ರೀಡೆಗೂ ಪ್ರಸಿದ್ಧವಾಗಿದೆ. ಸಿನಿಮಾದವರಿಗಂತೂ ಪ್ರಕೃತಿಯನ್ನು ಪರಿಚಯಿಸುವ ಸುಂದರ ತಾಣ ಇದಾಗಿದೆ.

‘ನಾಗಮಂಡಲ’, ‘ನಮ್ಮೂರ ಮಂದಾರ ಹೂವೆ’, ‘ರಾಟೆ’, ‘ಕಿಲ್ಲಿಂಗ್ ವೀರಪ್ಪನ್’ ಮುಂತಾದ ಚಲನಚಿತ್ರಗಳು ಹಾಗೂ ಅನೇಕ ಧಾರವಾಹಿಳಿಗಾಗಿ ಸಾತೊಡ್ಡಿ ಜಲಪಾತ ಹಾಗೂ ಅದರ ಸುತ್ತಮುತ್ತಲಿನ ನಿಸರ್ಗ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ.

ವರ್ಷವಿಡೀ ತನ್ನ ವೈಯಾರದಿಂದ ಈ ಜಲಪಾತ ಶೋಭಿಸುತ್ತದೆ. ಆದರೆ, ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ರಾಜ್ಯದ ಮೂಲೆಮೂಲೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ.

ಬಂಡೆಗಳಲ್ಲಿ ಎಚ್ಚರಿಕೆ ಅಗತ್ಯ

ಜಲಪಾತದ ಬಳಿ ತೀರಾ ಅಪಾಯಕಾರಿ ಗುಂಡಿ ಹಾಗೂ ಕಲ್ಲುಬಂಡೆಗಳಿವೆ. ಇವು ಪಾಚಿಗಟ್ಟಿ ನುಣುಪಾಗಿದ್ದು, ಕಾಲಿಟ್ಟರೆ ಜಾರುತ್ತವೆ. ಆದ್ದರಿಂದ ಪ್ರವಾಸಿಗರು ಕಲ್ಲುಗಳ ಮೇಲೆ ಕಾಲಿಡುವಾಗ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಜಲ‍‍ಪಾತದ ಸಮೀಪಕ್ಕೆ ಹೋಗುವ ರಸ್ತೆಯನ್ನು ದುರಸ್ತಿ ಮಾಡಬೇಕು. ಅದರಿಂದ ಮತ್ತಷ್ಟು ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುತ್ತದೆ ಎನ್ನುವುದು ಪ್ರವಾಸಿಗರ ಒತ್ತಾಯವಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಈಜಲಧಾರೆಯ ವೀಕ್ಷಣೆಗೆ ಬರುತ್ತೇನೆ. ರಸ್ತೆಯ ಸುಧಾರಣೆ ಸಾಕಷ್ಟು ಆಗಿದೆ. ಆದರೆ,ಇನ್ನೂ ಕೆಲವು ಕಿ.ಮೀ ಸುಧಾರಣೆ ಆಗಬೇಕಿದೆ.
-ಪ್ರಸನ್ನ ಜೋಶಿ,ಹುಬ್ಬಳ್ಳಿಯ ಪ್ರವಾಸಿಗ

– ನಾಗರಾಜ ಮದ್ಗುಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT