ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ| ಬುಧವಾರ, 4–11–1970

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 16:18 IST
Last Updated 3 ನವೆಂಬರ್ 2020, 16:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನಿಂತು ನಿರೀಕ್ಷೆ

ಬೆಂಗಳೂರು, ನ. 3– ಕಬ್ಬನ್‌ ರಸ್ತೆಯ ವಾಯುಪಡೆಯ ರಿಕ್ರೂಟಿಂಗ್‌ ಕಚೇರಿ ಮುಂದೆ ಹನುಮಂತನ ಬಾಲದಂತೆ ಬೆಳೆದು ನಿಂತಿದ್ದ ಕ್ಯೂ. ರೇಡಿಯೊ, ಪತ್ರಿಕೆಗಳಲ್ಲಿ ಬಂದ ಏರ್‌ಮನ್‌ ಹುದ್ದೆಗಳ ಭರ್ತಿ ಸುದ್ದಿಯನ್ನು ಕೇಳಿ, ಓದಿ ಬಂದ ವಿದ್ಯಾವಂತ ನಿರುದ್ಯೋಗಿಗಳು ತಮ್ಮ ಅರ್ಹತೆಯನ್ನು ಸಾಬೀತು ಮಾಡಲು ಪರೀಕ್ಷೆಯಲ್ಲಿ ಪಡೆದ ಮಾರ್ಕ್ಸ್‌ ಕಾರ್ಡ್‌, ವಯಸ್ಸಿನ ದಾಖಲೆ, ಶಿಫಾರಸು ಪತ್ರಗಳನ್ನೂ ತಂದಿದ್ದರು.

ನಿನ್ನೆ, ಮೊನ್ನೆ ದೂರದ ಊರುಗಳಿಂದ ನಗರಕ್ಕೆ ಆಗಮಿಸಿದ ಇವರ ವಾಸ ಹೋಟೆಲ್‌ ಅಥವಾ ಸಂಬಂಧಿಕರ ಮನೆಗಳಲ್ಲಿ. ಭರ್ತಿ ಕಾರ್ಯ ಸಂಬಂಧದ ಸಂದರ್ಶನ ಬೆಳಿಗ್ಗೆ 9 ಗಂಟೆಗೆ ಆರಂಭ ಆದರೂ, 7 ಗಂಟೆಗೇ ಕಚೇರಿ ಮುಂದೆ ಹಾಜರು.

ADVERTISEMENT

ತೆರಿಗೆ ಕದ್ದ ತಾರೆಯರು

ಮದರಾಸು, ನ. 3– ಮದರಾಸು ನಗರದಲ್ಲಿರುವ ಹಲವು ಖ್ಯಾತ ಚಲನಚಿತ್ರ ನಟನಟಿಯರ ನಿವಾಸಗಳನ್ನು ಆದಾಯ ತೆರಿಗೆ ಇಲಾಖೆಯ ಗೂಢಚರ್ಯೆ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಶೋಧನೆ ಮಾಡಿದರು. ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳು ನಟನಟಿಯರ ತೆರಿಗೆ ಕಳ್ಳತನವನ್ನು ಬೆಳಕಿಗೆ ತರುವ ನಿರೀಕ್ಷೆಯಿದೆ.

ಅವರಲ್ಲಿ ಒಬ್ಬರ ಮನೆಯಲ್ಲಿ ಅಘೋಷಿತ ಕಪ್ಪುಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಸ್ಥಳೀಯ ಚಿತ್ರ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ನಡೆಸಿದ ದಾಳಿಯನ್ನು ಅನುಸರಿಸಿ ಈ ಶೋಧನೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.