ADVERTISEMENT

ಟಿ.ಆರ್.ಅನಂತರಾಮು ಬರಹ: ತಿಮಿಂಗಿಲದ ವಾಂತಿ ಮತ್ತು ಭ್ರಾಂತಿ

ಜಗತ್ತಿನ ಸುಗಂಧ ದ್ರವ್ಯದ ವ್ಯಾಪಾರವೆಲ್ಲ ಇದರ ಮೇಲೇ ನಿಂತಿದೆಯೇ?

ಟಿ.ಆರ್.ಅನಂತರಾಮು
Published 2 ಸೆಪ್ಟೆಂಬರ್ 2021, 20:17 IST
Last Updated 2 ಸೆಪ್ಟೆಂಬರ್ 2021, 20:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕದ್ದ ಮಾಲನ್ನು ಮಾರಿದರೆ ಹಣ ಬರುತ್ತದೆಂದರೆ ಕಳ್ಳರು ಯಾಕೆ ಕದಿಯಲು ಹಿಂದುಮುಂದು ನೋಡುತ್ತಾರೆ? ಕದಿಯಲು ನಗ ನಾಣ್ಯವೇ ಆಗಬೇಕೆಂದಿಲ್ಲ. ಕಳೆದ ಎರಡು ತಿಂಗಳಲ್ಲಿ ಸುದ್ದಿ ಮಾಡಿರುವ ತಿಮಿಂಗಿಲದ ವಾಂತಿ ಇದನ್ನೇ ಖಚಿತಪಡಿಸುತ್ತದೆ. ಒಂದು ಕಿಲೊ ಗ್ರಾಂ ಗಟ್ಟಿ ವಾಂತಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿ.

ತಿಮಿಂಗಿಲದ 80 ಕಿಲೊ ಗ್ರಾಂ ಗಟ್ಟಿ ವಾಂತಿಯನ್ನು ಕದ್ದೊಯ್ಯುತ್ತಿದ್ದವರನ್ನು ಇದೇ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿತು. ಜುಲೈ ತಿಂಗಳಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ಚೆಟ್ಟುವ ಎಂಬಲ್ಲಿ ಅರಣ್ಯ ಇಲಾಖೆಯು ಕಳ್ಳರನ್ನು ಬೆನ್ನಟ್ಟಿ ತಿಮಿಂಗಿಲದ 19 ಕಿಲೊ ಗ್ರಾಂ ವಾಂತಿಯನ್ನು ವಶಮಾಡಿಕೊಂಡು ಪ್ರಕರಣ ದಾಖಲಿಸಿತು. ಗುಜರಾತಿನಲ್ಲಂತೂ ಇಂಥ ಪ್ರಸಂಗಗಳು ಲಾಗಾಯ್ತಿನಿಂದ ಇವೆ. ಪ್ರಚಾರ ಮಾತ್ರ ಇತ್ತೀಚಿನದು. ತಮಿಳುನಾಡಿನ ರೆವಿನ್ಯೂ ಇಂಟಲಿಜೆನ್ಸ್ ಪಡೆ ಒಂದು ತಂಡವನ್ನು ರಚಿಸಿ, ತೂತ್ತುಕುಡಿ ಬೀಚಿನಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಬಂಧಿಸಿದಾಗ, ಸಿಕ್ಕಿದ್ದು ₹ 23 ಕೋಟಿ ಬೆಲೆಯ ತಿಮಿಂಗಿಲದ ವಾಂತಿ. ಇತ್ತೀಚೆಗೆ ‘ವಾಂತಿಕೋರರು’ ಹೆಚ್ಚಾಗುತ್ತಿದ್ದಾರೆ ಎನ್ನುವುದು ಕೂಡ ಸರ್ವೆ ಮಾಡಿದ ಮೇಲೆ ಬಂದ ವರದಿ.

ಈಗ ಪೊಲೀಸಿನವರು ಅಕ್ಷರಶಃ ವನ್ಯಜೀವಿ ಕಾನೂನನ್ನು ಓದಬೇಕಾಗಿದೆ. ತಿಮಿಂಗಿಲದ ವಾಂತಿಯನ್ನು ಸಂಗ್ರಹಿಸುವುದೇ ಅಪರಾಧ, ಮಾರುವುದು ಮತ್ತೊಂದು ಅಪರಾಧ ಎಂದು ಹೇಳುತ್ತಾ ಅವರೇ ಕಾನೂನು ತಜ್ಞರಾಗುತ್ತಿದ್ದಾರೆ. ಭಾರತದಲ್ಲಿ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಎರಡನೆಯ ಷೆಡ್ಯೂಲ್‍ನಲ್ಲಿ ಇದನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ADVERTISEMENT

ತಿಮಿಂಗಿಲದ ವಾಂತಿ ಎನ್ನುವ ಪದವೇ ಅಸಹ್ಯ ಹುಟ್ಟಿಸಬಹುದು. ಇಂಗ್ಲಿಷ್‍ನಲ್ಲಿ ಅಂಬರ್ಗ್ರಿಸ್ ಎಂದಾಗ, ಅರ್ಥವಾಗದಿದ್ದರೂ ಅದು ಸಹ್ಯ ಎನಿಸಿಬಿಡುತ್ತದೆ. ಉಚ್ಚೆ ಬದಲು ಯೂರಿನ್ ಎಂದಾಗ ಉಂಟಾಗುವ ಭಾವನೆಯಂತೆ. ಅಂಬರ್ಗ್ರಿಸ್ ಎನ್ನುವುದು ಹಳೆಯ ಫ್ರೆಂಚ್ ಪದ. ಅಂಬರ-ಮೇಣದಂಥ ಪದಾರ್ಥ ಎನ್ನುವುದು ಇದರ ಅರ್ಥ. ಎಲ್ಲ ತಿಮಿಂಗಿಲಗಳೂ ಹೊಟ್ಟೆಬಿರಿಯ ತಿಂದಾಗ ವಾಂತಿ ಮಾಡುವುದರಲ್ಲಿ ವಿಶೇಷವೇನಿಲ್ಲ. ಆದರೆ ಅಂಬರ್ಗ್ರಿಸ್ ಎಂದು ಕರೆಯುವ ಪದಾರ್ಥ ಸ್ಪರ್ಮ್ ವೇಲ್ ಮೂಲದ್ದು. ಹಾಗೆ ನೋಡಿದರೆ ಸ್ಪರ್ಮ್ ವೇಲ್ ಎನ್ನುವುದೇ ಒಂದು ಅಬದ್ಧ ಹೆಸರು. ತಲೆ ಸೀಳಿದಾಗ ಭಗ್ಗನೆ ಅದರಿಂದ ವೀರ್ಯಾಣು ಹೊರಬರುತ್ತದೆಂಬ ತಪ್ಪು ತಿಳಿವಳಿಕೆಯಿಂದ ಕೊಟ್ಟ ಹೆಸರು. ವಾಸ್ತವವಾಗಿ ಈ ತಿಮಿಂಗಿಲದ ತಲೆಯಲ್ಲಿ ಅರೆ ದ್ರವರೂಪದ ಮೇಣದಂಥ ಪದಾರ್ಥ ಶೇಖರಣೆಯಾಗಿರುತ್ತದೆ ಎಂದು ತಿಳಿದದ್ದು ಆಮೇಲೆ. ಆದರೆ ಹೆಸರು ಕೊಟ್ಟಾಗಿತ್ತಲ್ಲ! ಬದಲಾಗಲಿಲ್ಲ. ಸಮುದ್ರವಾಸಿ ದಂತಜೀವಿಗಳಲ್ಲಿ ಸ್ಪರ್ಮ್ ತಿಮಿಂಗಿಲಗಳೇ ಚಕ್ರವರ್ತಿಗಳು. ಹದಿನಾರು ಮೀಟರ್ ಉದ್ದ ಬೆಳೆಯಬಲ್ಲವು. ಎಲ್ಲ ಸಾಗರಗಳೂ ಅವುಗಳ ತವರೇ. ಅವಕ್ಕೆ ಕಂಟಕ ಒದಗಿರುವುದು ಕಿಲ್ಲರ್ ವೇಲ್‍ಗಳು ಮತ್ತು ಮನುಷ್ಯನಿಂದ.

ಕಾಡ್ ಮೀನುಗಳ ಯಕೃತ್ತನ್ನು ಬಗೆದು ತೈಲ ತೆಗೆದು ವಿಟಮಿನ್ ‘ಎ’ ಮತ್ತು ‘ಡಿ’ ಕೊರತೆಯನ್ನು ತುಂಬಿಕೊಳ್ಳುವುದು ತಲತಲಾಂತರದಿಂದ ಬಂದ ಹಲವು ಕೋಟಿ ರೂಪಾಯಿ ಉದ್ಯಮ. ತಮ್ಮ ತೂಕವನ್ನು ನೀರಿನಲ್ಲಿ ಸಮತೋಲವಾಗಿಸಲು ಶಾರ್ಕ್‌ಗಳು ತೈಲಭರಿತ ಯಕೃತ್ತನ್ನು ಬಳಸುತ್ತವೆ. ಅದನ್ನು ಬಗೆದು ತೈಲವನ್ನು ಬಾಚಿಕೊಳ್ಳುವುದುಂಟು. ಆ ತೈಲಕ್ಕೆ ವಿಶೇಷ ಜಾಹೀರು. ಗಾಯ ವಾಸಿ ಮಾಡುತ್ತದೆ, ಉಸಿರಾಟ ಮಾರ್ಗವನ್ನು ಸ್ವಚ್ಛಗೊಳಿಸುತ್ತದೆ ಎಂಬ ನಂಬಿಕೆ.

ಈಗ ಸ್ಪರ್ಮ್ ವೇಲ್ ಸರದಿ. ಅದರಲ್ಲೂ ಸೀಮೆಎಣ್ಣೆ ಬಳಕೆಗೆ ಬರುವ ಮೊದಲು ನಾವಿಕರು ಸ್ಪರ್ಮ್ ವೇಲ್ ಬೇಟೆಯಾಡಿ, ಅದರ ತಲೆಯಲ್ಲಿ ಕೊಬ್ಬರಿ ಎಣ್ಣೆಯಂತಿರುವ ದ್ರವ ರೂಪದ ತೈಲ ತೆಗೆದು ದೀಪಕ್ಕಾಗಿ ಬಳಸುತ್ತಿದ್ದುದು ಲಾಗಾಯ್ತಿನಿಂದ ಬಂದ ಚಾಳಿ. ಮಾಂಸಕ್ಕಿಂತ ಅದರ ಎಣ್ಣೆಯೇ ಜನರಿಗೆ ಮುಖ್ಯವಾಗಿತ್ತು. ಈಗ ಹೊಸತೊಂದು ನಿಧಿಯನ್ನು ಸ್ಪರ್ಮ್ ವೇಲ್‍ಗಳು ತೋರಿಸಿಕೊಟ್ಟಿವೆ. ಈ ನಿಧಿ ಅವುಗಳ ಬದುಕಿಗೇ ಮಾರಕವಾಗಿದೆ. ಅದೇ ತಿಮಿಂಗಿಲದ ವಾಂತಿ ಎಂದು ಭ್ರಮಿಸುವ ಅಂಬರ್ಗ್ರಿಸ್.

ಈ ಪದಾರ್ಥದ ಬಗ್ಗೆ ತಪ್ಪು ತಿಳಿವಳಿಕೆಯೇ ಹೆಚ್ಚು. ಸ್ಪರ್ಮ್ ವೇಲ್‍ಗಳು ಎಲ್ಲ ತಿಮಿಂಗಿಲಗಳಂತೆ ಬಕಾಸುರ ವಂಶದವು. ಆಕ್ಟೋಪಸ್‍ನಿಂದ ಹಿಡಿದು ಅದೇ ಜಾತಿಯ ಸ್ಕ್ವಿಡ್‍ಗಳವರೆಗೆ ಅವುಗಳ ಭಕ್ಷ್ಯ ಸೇರಿದೆ. ಮೀನುಗಳನ್ನು ಗುಳುಂ ಮಾಡಲು ಸಾಗರದಲ್ಲಿ ಎರಡು ಕಿಲೊ ಮೀಟರ್ ಆಳಕ್ಕೂ ಡೈವ್ ಮಾಡಬಲ್ಲವು. ವರ್ಷಕ್ಕೆ ಸ್ಪರ್ಮ್ ವೇಲ್‍ಗಳ ಗುಂಪು ಒಂಬತ್ತು ಕೋಟಿ ಟನ್ ಆಹಾರವನ್ನು ಸ್ವಾಹ ಮಾಡುತ್ತದೆಂಬುದು ಕಡಲಜೀವಿ ವಿಜ್ಞಾನಿಗಳ ಅಂದಾಜು. ಸ್ವಾಹ ಮಾಡುವ ಜೀವಿಗಳಲ್ಲಿ ಮೂಳೆಗಳಿದ್ದರೆ ಅವಕ್ಕೆ ಫಜೀತಿ. ತಕ್ಷಣವೇ ಮೂಳೆಗಳು ಒತ್ತುವುದನ್ನು ಶಮನ ಮಾಡಲು ಪಿತ್ತರಸ ಸ್ರವಿಸುವುದುಂಟು. ತಿಂದ ಅಜೀರ್ಣ ಪದಾರ್ಥ ಉಂಡೆಯಾಗುತ್ತದೆ. ಒಂದುವೇಳೆ ಆ ಪದಾರ್ಥವನ್ನು ತೆಗೆಯದೆ, ಸತ್ತ ಸ್ಪರ್ಮ್ ವೇಲನ್ನು ಕತ್ತರಿಸಿದರೆ ದುರ್ಗಂಧ ಸೂಸುತ್ತದೆ, ಥೇಟ್ ಮಲದ ವಾಸನೆ, ಮೀನುಗಾರರಿಗೂ ವಾಂತಿಯಾಗುವಂಥ ಗಬ್ಬುವಾಸನೆ. ಆಗ ಅದು ಬಿಳಿ ಪದಾರ್ಥ. ಆದರೆ ತಿಮಿಂಗಿಲ ಹೊರಹಾಕಿದರೆ ಕಿಮ್ಮತ್ತು ಬರುತ್ತದೆ. ಕಳ್ಳರ ಭಾಷೆಯಲ್ಲಿ ‘ತೇಲುವ ಬಂಗಾರ’. ಹೊರಗೆ ಹಾಕುವುದೆಂದರೆ ಜನ ಭಾವಿಸಿದಂತೆ ಬಾಯಿಯಿಂದ ಕಕ್ಕುವುದಲ್ಲ. ಗುದದ್ವಾರದ ಮೂಲಕ ಮಲ ವಿಸರ್ಜನೆಯಾದಂತೆ ಇದೂ ವಿಸರ್ಜನೆಯಾಗುತ್ತದೆ. ಎಷ್ಟೋ ವೇಳೆ ತಿಮಿಂಗಿಲ ಈ ಪದಾರ್ಥವನ್ನು ವಿಸರ್ಜನೆ ಮಾಡುವಾಗ ಗುದದ್ವಾರ ಹರಿದುಹೋಗುವುದೂ ಉಂಟು.

ಅಂಬರ್ಗ್ರಿಸ್ ಎಂಬ ಹೆಸರು ಆಗಲೂ ಇದಕ್ಕೆ ಸಲ್ಲುವುದಿಲ್ಲ. ಆ ವಿಸರ್ಜನೆಯು ಸಾಗರದ ಅಲೆಗಳಲ್ಲಿ ಕರಗದೆ, ಕೊಚ್ಚಿಹೋಗದೆ ಬಚಾವಾದರೆ ಸೂರ್ಯಕಿರಣಗಳಿಗೆ ತೆರೆದು ಗಟ್ಟಿಯಾಗುತ್ತ ಹೋಗುತ್ತದೆ. ಕೆಲವೊಮ್ಮೆ ತಿಂಗಳುಗಳು, ವರ್ಷಗಳೂ ಆಗಬಹುದು. ಅಂಥ ಉಂಡೆ ಬೂದುಬಣ್ಣ ತಳೆದು ತೇಲುತ್ತದೆ. ನಿಧಾನವಾಗಿ ದುರ್ವಾಸನೆ ಹೋಗಿ ಪರಿಮಳ ಮೂಡುತ್ತದೆ. ಒಂದು ರೀತಿಯ ಮದ್ಯಸಾರ ಎನ್ನಿ. ವೈಜ್ಞಾನಿಕವಾಗಿ ಇದನ್ನು ಟರ್ಪೀನ್ ಮತ್ತು ಅಂಬ್ರೀನ್ ರಾಸಾಯನಿಕ ಎಂದು ಗುರುತಿಸಲಾಗಿದೆ. ಅಲೆಯಲ್ಲಿ ತೇಲುತ್ತ ಬಂದಾಗ ಸಿಕ್ಕಿದವರಿಗೆ ಸೀರುಂಡೆ. 15 ಗ್ರಾಂ ಇರಬಹುದು, 50 ಕೆ.ಜಿ. ಇರಬಹುದು. ಗಾತ್ರ ದೊಡ್ಡದಾದಷ್ಟೂ ಬೆಲೆ ಕೋಟಿ ರೂಪಾಯಿಗಳನ್ನು ಮುಟ್ಟುತ್ತದೆ. ಏಕೆ ಇದಕ್ಕೆ ಇಷ್ಟೊಂದು ಕಿಮ್ಮತ್ತು? ಸುಗಂಧದ್ರವ್ಯ ವ್ಯಾಪಾರದಲ್ಲಿ ಇದರ ಬಳಕೆ ಇದೆ. ಪರಿಮಳ ಹೊರಹೋಗದಂತೆ ಇದು ಕಾಪಿಡುತ್ತದೆ ಎಂಬುದನ್ನು ಕಂಡುಕೊಂಡುಬಿಟ್ಟಿದ್ದಾರೆ. ಇದು ಕಸ್ತೂರಿಯಂತೆ ಬಳಸುವ ಸುಗಂಧ ದ್ರವ್ಯವಲ್ಲ. ಒಂದರ್ಥದಲ್ಲಿ ಪ್ರಿಸರ್ವೇಟಿವ್.

-ಟಿ.ಆರ್.ಅನಂತರಾಮು

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಜಗತ್ತಿನ ಸುಗಂಧ ದ್ರವ್ಯದ ವ್ಯಾಪಾರವೆಲ್ಲ ತಿಮಿಂಗಿಲದ ಈ ವಾಂತಿಯ ಮೇಲೇ ನಿಂತಿದೆಯೇ? ಇಲ್ಲ, ಹಾಗಿದ್ದರೆ ಇರುವ ಎಲ್ಲ ಕಾನೂನನ್ನೂ ಮುರಿದು ಈ ಹೊತ್ತಿಗೆ ಸಾಗರದ ಎಲ್ಲ ಸ್ಪರ್ಮ್ ವೇಲ್‍ಗಳ ಮಾರಣಹೋಮವಾಗ
ಬೇಕಾಗಿತ್ತು. ಕ್ರಿ.ಶ. 1800ರ ಆಜುಬಾಜು ಸ್ಪರ್ಮ್ ವೇಲ್‍ಗಳೂ ಸೇರಿದಂತೆ ತೈಲಕ್ಕಾಗಿ, ಮೂಳೆಗಾಗಿ ಈ ಅಂಬರ್ಗ್ರಿಸ್‌ಗಾಗಿ 50,000 ತಿಮಿಂಗಿಲಗಳು ವಾರ್ಷಿಕ ವಧೆಯಾಗುತ್ತಿದ್ದವೆಂದು ಒಂದು ಅಂದಾಜು. ಈಗ ಅಂತರರಾಷ್ಟ್ರೀಯ ಕಾನೂನು ಜಾರಿಯಲ್ಲಿದೆ (1986), ತಿಮಿಂಗಿಲಗಳನ್ನು ಕೊಲ್ಲುವಂತಿಲ್ಲ. ಆದರೆ ಅದರ ವಿಸರ್ಜನೆಯನ್ನು ಸಂಗ್ರಹಿಸಲು ಕಾನೂನೇಕೆ ಅಡ್ಡ ಬರಬೇಕು ಎಂದು ಕೇಳುವ ಹಲವು ದೇಶಗಳಿವೆ. ಬ್ರಿಟನ್, ಫ್ರಾನ್ಸ್, ಸ್ವಿಟ್ಜರ್ಲೆಂಡ್ ಇಂಥ ವಾದ ಮಂಡಿಸುತ್ತಿವೆ.

ಭಾರತದಲ್ಲಿ ಅಂಬರ್ಗ್ರಿಸ್ ಕೂಡ ಸಂಗ್ರಹಿಸುವಂತಿಲ್ಲ, ಮಾರುವಂತಿಲ್ಲ. ವಾಸ್ತವವಾಗಿ ಸುಗಂಧ ದ್ರವ್ಯವನ್ನು ಕಾಪಿಡಲು ಅಂಬರ್ಗ್ರಿಸ್ ಬೇಕಾಗುವುದಿಲ್ಲ. ರಾಸಾಯನಿಕ ಕೈಗಾರಿಕೆಗಳು ಈಗ ಅಂಬ್ರಾಕ್ಸೈಡ್ ಎಂಬ ಸಂಶ್ಲೇಷಿತ ರಾಸಾಯನಿಕವನ್ನು ಉತ್ಪಾದಿಸುತ್ತಿವೆ. ಜಗತ್ತು ನೆಚ್ಚಿರುವುದು ಇದನ್ನೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.