ADVERTISEMENT

ವಿಶ್ಲೇಷಣೆ: ರಾಷ್ಟ್ರೀಯತೆ ಮತ್ತು ಜಾತ್ಯತೀತತೆ ಪ್ರತ್ಯೇಕವೇ?

ಈ ಪ್ರಬುದ್ಧ ಪರಿಕಲ್ಪನೆಗಳ ನಡುವಿನ ಕಂದಕ ಹೆಚ್ಚುತ್ತಿರುವ ಬಗ್ಗೆ ಮರುಪರಿಶೀಲನೆ ಆಗಬೇಕಿದೆ

ಪ್ರೊ.ಬರಗೂರು ರಾಮಚಂದ್ರಪ್ಪ
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST
ರಾಷ್ಟ್ರೀಯತೆ ಮತ್ತು ಜಾತ್ಯತೀತತೆ
ರಾಷ್ಟ್ರೀಯತೆ ಮತ್ತು ಜಾತ್ಯತೀತತೆ    

ಜಾತ್ಯತೀತತೆಯು ರಾಷ್ಟ್ರೀಯತೆಗೆ ವಿರುದ್ಧವಾದ ನೆಲೆ ಎಂಬ ನಂಬಿಕೆಯನ್ನು ಇತ್ತೀಚಿನ ವರ್ಷಗಳಲ್ಲಿ ಬಿತ್ತಲಾ ಗುತ್ತಿದೆ. ಮೂಲಭೂತವಾದಿ ನೆಲೆಯಿಂದ ಜಾತ್ಯತೀತ ನಿಲುವನ್ನು ಹಂಗಿಸಲಾಗುತ್ತಿದೆ; ಇದರ ಫಲವಾಗಿ ಈ ಎರಡು ಪ್ರಬುದ್ಧ ಪರಿಕಲ್ಪನೆಗಳ ನಡುವಿನ ಕಂದಕ ಹೆಚ್ಚಾಗುತ್ತಿದೆ; ರಾಷ್ಟ್ರೀಯತೆಯನ್ನು ಬಹುಸಂಖ್ಯಾತರ ನೆಲೆಯಿಂದಲೂ ಜಾತ್ಯತೀತತೆಯನ್ನು ಅಲ್ಪಸಂಖ್ಯಾತರ ನೆಲೆಯಿಂದಲೂ ನಿರ್ವಚಿಸುವ ಹುಸಿ ನೋಟ ವಿಜೃಂಭಿಸುತ್ತಿದೆ. ಇದು ಸರಿಯೆ? ಈ ಎರಡು ಪರಿಕಲ್ಪನೆಗಳು ಮೂಲತಃ ಪರಸ್ಪರ ವಿರುದ್ಧವೆ? ಮರುಪರಿಶೀಲನೆ ಮಾಡಿಕೊಳ್ಳದಿದ್ದರೆ ದೇಶವನ್ನು ಹಾದಿ ತಪ್ಪಿಸುವ ಕುಟಿಲೋಪಾಯಗಳಿಗೆ ಪಾಯ ತೋಡಿದಂತಾಗುತ್ತದೆ.

ಮೊದಲಿಗೆ ನಾವು ಅರ್ಥ ಮಾಡಿಕೊಳ್ಳಬೇಕು: ದೇಶದ ಬಹುಸಂಖ್ಯಾತರ ಪರವಾಗಿದ್ದರೆ ಮಾತ್ರ ರಾಷ್ಟ್ರೀಯತೆಯಾಗುವುದಿಲ್ಲ; ಅಂತೆಯೇ ಅಲ್ಪಸಂಖ್ಯಾ ತರ ಪರವಾಗಿದ್ದರೆ ಮಾತ್ರ ಜಾತ್ಯತೀತವಾಗುವುದಿಲ್ಲ. ಆದರೆ ಯಾವುದೇ ದೇಶದಲ್ಲಿ ಬಹುಸಂಖ್ಯಾತರ ಎದುರು ಅಲ್ಪಸಂಖ್ಯಾತರು, ಸವರ್ಣೀಯರ ಎದುರು ಅಸ್ಪೃಶ್ಯರು, ಪುರುಷರ ಎದುರು ಮಹಿಳೆಯರು, ಬಂಡವಾಳಗಾರರ ಎದುರು ಬಡವರು ತಮ್ಮದೇ ವಿಶಿಷ್ಟ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಾರೆ. ಹೀಗಾಗಿ ಈ ಜನ ವರ್ಗಗಳ ಪರವಾಗಿರುವುದು ಸಾಮಾಜಿಕ-ಆರ್ಥಿಕ ಸಮತೋಲನದ ಒಂದು ಸೈದ್ಧಾಂತಿಕ ನಡೆಯಾಗುತ್ತದೆ. ಈ ನಡೆಯು ರಾಷ್ಟ್ರೀಯತೆಯ ವಿರೋಧಿ ಎಂದು ಭಾವಿಸ ಬೇಕಾಗಿಲ್ಲ.

ನಿಜ; ಜಾತ್ಯತೀತವಾದಿಗಳು ಎನ್ನಿಸಿಕೊಂಡ ಕೆಲವರು ಜಾತಿವಾದಿಗಳೂ ಸ್ವಜಾತಿ ಸ್ವಾರ್ಥರೂ ಆಗಿರಬಹುದು; ಅಂತೆಯೇ ರಾಷ್ಟ್ರೀಯವಾದಿಗಳು ಎನ್ನಿಸಿಕೊಂಡವರಲ್ಲಿ ಧಾರ್ಮಿಕ ಮೂಲಭೂತವಾದಿಗಳೂ ಇದ್ದಾರಲ್ಲವೆ? ಹಾಗೆಂದು ಈ ಎರಡು ಪರಿಕಲ್ಪನೆಗಳ ನಿಜದ ನೆಲೆಗಳನ್ನು ನಿರಾಕರಿಸುವುದು ಸರಿಯಾಗಲಾರದು. ಜಾತಿ ಮತ್ತು ಧಾರ್ಮಿಕ ದ್ವೇಷಕ್ಕೆ ಇವರಲ್ಲಿ ಯಾರೂ ಕಾರಣರಾಗ
ಬಾರದು.

ADVERTISEMENT

ಈಗ ಜಾಗತಿಕವಾಗಿ ಒಪ್ಪಿಕೊಂಡಿರುವ ನಿರ್ವಚನವನ್ನು ಗಮನಿಸಬಹುದು. ನಿರ್ದಿಷ್ಟ ದೇಶದ ಹಿತಾಸಕ್ತಿಯ ರಕ್ಷಣೆ, ಏಕತೆ, ಸಾರ್ವಭೌಮತೆಗಳನ್ನು ಕಾಪಾಡಿಕೊಳ್ಳುತ್ತ ಹೊರಗಿನ ಹಸ್ತಕ್ಷೇಪಕ್ಕೆ ಅವಕಾಶವಾಗದಂತೆ ಸ್ವಯಂ ಆಡಳಿತಕ್ಕೆ ಒಳಪಡಿಸಿಕೊಳ್ಳುವುದು ರಾಷ್ಟ್ರೀಯತೆಯ ಸಿದ್ಧಾಂತ ಎಂದು ನಿರ್ವಚಿಸಲಾಗಿದ್ದು, ಇದು ಜಗತ್ತಿನ ಎಲ್ಲ ದೇಶಗಳಿಗೂ ಅನ್ವಯಿಸುವ ಸಾಮಾನ್ಯೀಕೃತ ವಿವರಣೆ ಯಾಗಿದೆ. ಆನಂತರ ದೇಶಪ್ರೇಮವು ರಾಷ್ಟ್ರೀಯತೆಯ ಭಾಗವಾಯಿತು. ಜೊತೆಗೆ ದೇಶದೊಳಗಿನ ಸ್ಥಳೀಯ ಅಸ್ಮಿತೆ ಗಳಿಗೂ ರಾಷ್ಟ್ರೀಯತೆಯ ಆಯಾಮ ಒದಗಿಬಂದಿತು.

ಅಂತೆಯೇ ಸೆಕ್ಯುಲರಿಸಂ ಪರಿಕಲ್ಪನೆಯನ್ನು 1851ರಲ್ಲಿ ಮೊದಲಿಗೆ ಪ್ರತಿಪಾದಿಸಲಾಯಿತು. ಜಾತ್ಯತೀತತೆಯೆಂಬ ಪರಿಕಲ್ಪನೆಯು ಮೊದಲಿಗೆ ಬಂದಾಗ ‘ದೇಶದ ಆಡಳಿತವು ಯಾವುದೇ ಧರ್ಮದೊಂದಿಗೆ ಸಂಬಂಧ ಇಟ್ಟುಕೊಂಡಿರಬಾರದೆಂದೂ ಧರ್ಮದೂರ ನೀತಿಯೇ ಜಾತ್ಯತೀತತೆಯೆಂದೂ ಹೇಳಲಾಗಿತ್ತು. ಆದರೆ ಈ ನೀತಿಯನ್ನು ಅಮೆರಿಕ, ಫ್ರಾನ್ಸ್ ಮುಂತಾದ ದೇಶಗಳ ಮೂಲಭೂತವಾದಿ ಕ್ರಿಶ್ಚಿಯನ್ನರೂ ಕೆಲವು ವಿದ್ವಜ್ಜನರೂ ವಿರೋಧಿಸಿದರು. ಮುಂದಿನ ದಿನಗಳಲ್ಲಿ ‘ಸೆಕ್ಯುಲರಿಸಂ’ ಎನ್ನುವುದು ‘ನಿರ್ದಿಷ್ಟ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಯಾರನ್ನಾಗಲಿ ಅಸಮತೆ, ಅಸಹನೆಗಳಿಂದ ಕಾಣಬಾರದ ತತ್ವ’ವಾಗಿ ರೂಪಾಂತರಗೊಂಡಿತು. ಭಾರತದಲ್ಲಿ ಇದೇ ತತ್ವವನ್ನು ‘ಜಾತ್ಯತೀತತೆ’ ಎಂಬ ಹೆಸರಿನಲ್ಲಿ ಬಳಸಲಾಗು‌ತ್ತಿದೆ.

ಡಾ. ಅಂಬೇಡ್ಕರ್ ರಚಿತ ಭಾರತದ ಸಂವಿಧಾನದಲ್ಲಿ ಜಾತ್ಯತೀತ ತತ್ವವು ಅಂತರ್ಗತವಾಗಿದ್ದರಿಂದ ಅದನ್ನು ಅದೇ ಪದದ ಮೂಲಕ ಪ್ರತ್ಯೇಕವಾಗಿ ನಮೂದಿಸುವ ಅಗತ್ಯವಿಲ್ಲವೆಂದು ಭಾವಿಸಲಾಗಿತ್ತು. ಈ ಭಾವನೆಗೆ ಪುಷ್ಟಿ ಕೊಡುವಂತೆ ರಾಷ್ಟ್ರೀಯ ಹೋರಾಟಗಳಿಂದ ಬೆಳೆದು ಬಂದಿದ್ದ ಜಾತ್ಯತೀತವಾದಿ ಪ್ರಧಾನಿ ನೆಹರೂ ಅವರು ‘ಪ್ರಬುದ್ಧ ವಿಚಾರವಂತರೂ ವೈಜ್ಞಾನಿಕ ಮನೋಭಾವ ಉಳ್ಳವರೂ ಘನ ವಿದ್ವಾಂಸರೂ ಆದ ಡಾ. ಅಂಬೇಡ್ಕರ್, ಜಾತ್ಯತೀತ ಅಖಂಡ ನವಭಾರತ ನಿರ್ಮಿಸಲು ಈ ಸಂವಿಧಾನದಲ್ಲಿ ಭದ್ರ ಬುನಾದಿ ಹಾಕಿದ್ದಾರೆ’– ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ನೆಹರೂ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು, ಪೀಠಿಕಾ ಭಾಗದಲ್ಲಿ ಜಾತ್ಯತೀತತೆ ಮತ್ತು ಸಮಾಜವಾದಿ ಎಂಬ ಪದಗಳನ್ನು ಸೇರಿಸಿ ಸ್ಪಷ್ಟಪಡಿಸ ಲಾಯಿತು. ಹಾಗೆ ನೋಡಿದರೆ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆಗಳು ಸ್ವಾತಂತ್ರ್ಯಪೂರ್ವದ ಹೋರಾಟಗಳ ಭಾಗವಾಗಿ ಬೆಳೆದು ಬಂದಿರುವುದನ್ನು ಗಮನಿಸಬಹುದು. ಸ್ವಾಮಿ ವಿವೇಕಾನಂದ, ಗಾಂಧಿ, ಅಂಬೇಡ್ಕರ್, ಸುಭಾಷ್‍ಚಂದ್ರ ಬೋಸ್, ಭಗತ್‍ಸಿಂಗ್ ಮುಂತಾದವರು ರಾಷ್ಟ್ರೀಯತೆಯನ್ನು ಮನಗೂಡಿಸಿಕೊಂಡೇ ಬದುಕನ್ನು ರೂಪಿಸಿಕೊಂಡವರು; ತಮ್ಮದೇ ಆದ ವಿಭಿನ್ನ ಮಾರ್ಗಗಳ ಮೂಲಕ ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯ ಹೋರಾಟಗಳನ್ನು ಬೆಳೆಸಿದವರು.

ಬರಗೂರು ರಾಮಚಂದ್ರಪ್ಪ

ಈಗ ವಿವೇಕಾನಂದರ ವಿಚಾರಧಾರೆಯನ್ನು ಗಮನಿಸೋಣ; ವಿದೇಶದಲ್ಲಿ ನಮ್ಮ ದೇಶ ಮತ್ತು ಹಿಂದೂ ಧರ್ಮದ ಹಿರಿಮೆಯನ್ನು ಒಟ್ಟಿಗೇ ಸಾರಿದ ವಿವೇಕಾನಂದರು ನಮ್ಮ ದೇಶದಲ್ಲಿರುವ ಜಾತಿ ಮತ್ತು ಧರ್ಮಗಳ ತಾರತಮ್ಯವನ್ನು ನಮ್ಮ ನೆಲದಲ್ಲೇ ನಿಂತು ಖಂಡಿಸಿದರು. ‘ಜಾತಿಯ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿ ಹೋಗಿದೆ’ (ಕೃತಿ ಶ್ರೇಣಿ ಸಂಪುಟ-6) ಎಂದರು. 1893ರ ಸೆಪ್ಟೆಂಬರ್ 11ರಂದು ಷಿಕಾಗೊದಲ್ಲಿ ಮಾಡಿದ ಭಾಷಣದಲ್ಲಿ ‘ಸ್ವಮತಾಭಿಮಾನ, ಧಾರ್ಮಿಕ ದುರಭಿಮಾನ, ಅನ್ಯಮತ ದ್ವೇಷ’ಗಳನ್ನು ವಿರೋಧಿಸಿದರು. ಮುಂದೊಮ್ಮೆ ‘ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮ ಗಳೆರಡೂ ಮಿಲನವಾಗಬೇಕು’ (ಕೃತಿ ಶ್ರೇಣಿ ಸಂ.7) ಎಂದು ಸಾರಿದರು. ವಿವೇಕಾನಂದರಲ್ಲಿ ಜಾತ್ಯತೀತತೆ ಮತ್ತು ರಾಷ್ಟ್ರೀಯತೆಯ ಭಾವಗಳೆರಡೂ ಒಂದಾಗಿ ಪ್ರಕಟಗೊಂಡಿರುವುದಕ್ಕೆ ಇವು ಸಾಂಕೇತಿಕ ಸಾಕ್ಷಿಗಳು.

ಗಾಂಧೀಜಿ ತಮ್ಮ ಹೋರಾಟದಲ್ಲಿ ಯಾವತ್ತೂ ಜಾತಿ, ಧರ್ಮ, ದೇವರುಗಳನ್ನು ಸಾಧನವಾಗಿ ಬಳಸಲಿಲ್ಲ. ಜನಸಾಮಾನ್ಯರ ಜಾತ್ಯತೀತ ಸಂಕೇತಗಳಾದ ಉಪ್ಪು, ಖಾದಿ, ಚರಕಗಳನ್ನು ಬಳಸಿದರು. ಹಿಂದೂ ಧರ್ಮದಲ್ಲಿನ ನಂಬಿಕೆಯಿಂದ ಅವರು ‘ರಾಷ್ಟ್ರೀಯತೆ ಹಾಗೂ ಅಖಂಡ ಮಾನವಪ್ರೀತಿ ಪ್ರತ್ಯೇಕವಲ್ಲ. ಜನಾಂಗಗಳ ದ್ವೇಷಕ್ಕೆ ಇಲ್ಲಿ ಆಸ್ಪದವಿಲ್ಲ’... ‘ಧರ್ಮವು ರಾಷ್ಟ್ರೀಯತೆಗೆ ಮಾನದಂಡವಲ್ಲ’... ‘ನಮ್ಮ ರಾಷ್ಟ್ರವು ಯಾವುದೇ ಬಹುಸಂಖ್ಯಾತ ಧರ್ಮ, ಪಂಗಡ, ಸಮುದಾಯಗಳನ್ನು ಆಧರಿಸಿರುವುದಿಲ್ಲ. ಇದು ಧಾರ್ಮಿಕ ವ್ಯತ್ಯಾಸವಿಲ್ಲದ ಎಲ್ಲರ ಪ್ರಾತಿನಿಧಿಕ ರಾಷ್ಟ್ರವಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಚರ್ಚೆಯಲ್ಲಿ, ಹಿಂದೂ ಧರ್ಮನಿಷ್ಠರಾದ ಡಾ.ಎಸ್.ರಾಧಾಕೃಷ್ಣನ್ ಮತ್ತು ಹಿಂದೂ ಧರ್ಮವನ್ನು ಒಪ್ಪದ ಡಾ. ಅಂಬೇಡ್ಕರ್ ಅವರು ಒಟ್ಟಿಗೇ ಸರ್ವಧರ್ಮ ಸಮಾನತೆಯನ್ನು ಪ್ರತಿಪಾದಿಸಿದ್ದು ಜಾತ್ಯತೀತತೆಯ ಒಂದು ವ್ಯಾಖ್ಯಾನವಾಗಿ ಮಹತ್ವ ಪಡೆಯುತ್ತದೆ. ಜಾತ್ಯತೀತ ತತ್ವದ ಅಂಬೇಡ್ಕರ್ ಅವರು ‘ನಾನೊಬ್ಬ ಭಾರತೀಯ ರಾಷ್ಟ್ರೀಯತೆಯ ಪ್ರತಿಪಾದಕ’ ಎಂದು ಹೇಳಿದ್ದಲ್ಲದೆ ‘ರಾಷ್ಟ್ರೀಯತೆಯೆನ್ನುವುದು ವಿವಿಧ ಪ್ರಭೇದಗಳ ಪ್ರಜ್ಞೆ’ ಎನ್ನುವ ಮೂಲಕ ಬಹುತ್ವದ ಆಯಾಮವನ್ನು ತಿಳಿಸಿದರು. ‘ರಾಷ್ಟ್ರೀಯ ಭಾವನೆ ಎಂದರೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಂಧು ಬಾಂಧವರಂತೆ ಬದುಕಬೇಕೆಂಬ ಆಶಯ’ ಎಂದು ಸ್ಪಷ್ಟಪಡಿಸಿದರು.

ಪ್ರಖರ ರಾಷ್ಟ್ರೀಯವಾದಿಯಾದ ಸುಭಾಷ್‍ಚಂದ್ರ ಬೋಸ್ ಅವರು ಸಮತಾವಾದಿ ಆಶಯವುಳ್ಳ ‘ಫಾರ್ವರ್ಡ್ ಬ್ಲಾಕ್’ ಪಕ್ಷ ಸ್ಥಾಪನೆ ಮಾಡಿದ್ದರಲ್ಲೇ ಜಾತ್ಯತೀತ ತತ್ವ ಅಂತರ್ಗತವಾಗಿದೆ. ಧೀಮಂತ ರಾಷ್ಟ್ರೀಯ ಹೋರಾಟಗಾರ ಭಗತ್‍ಸಿಂಗ್ ಜಾತ್ಯತೀತ ಸಮತಾವಾದಿ ಸಿದ್ಧಾಂತಕ್ಕೆ ಬದ್ಧರಾಗಿದ್ದು ಇಲ್ಲಿ ಉಲ್ಲೇಖ ನೀಯ. ಮೌಲಾನ ಆಜಾದ್ ಅವರು ರಾಷ್ಟ್ರೀಯತೆಯ ಭಾವದೊಂದಿಗೆ ಜಾತ್ಯತೀತತೆಯನ್ನು ಬೆಸೆದು ಬದುಕಿ ದ್ದರು. ವಿಭಿನ್ನ ಧರ್ಮಗಳಿಗೆ ಸೇರಿದ್ದ ರಾಂಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಖುಲ್ಲಾಖಾನ್ ಅವರು ಸೋದರರಂತೆ ಬದುಕಿ ಸ್ವಾತಂತ್ರ್ಯ ಹೋರಾಟ ನಡೆಸಿದ್ದು ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯ ಒಂದು ಅದ್ಭುತ ಆದರ್ಶ ಮಾದರಿಯಾಗಿದೆ. ವಾಜಪೇಯಿಯವರು ಜಾತ್ಯತೀತತೆಯನ್ನು ‘ಸರ್ವಧರ್ಮ ಸಮಭಾವ’ವೆಂದು ಹೇಳಿದ್ದು ಒಂದು ಮುಖ್ಯವಾದ ಮಾತು.

ಈ ಎಲ್ಲ ನಿದರ್ಶನಗಳ ಸತ್ಯ ಸಾರ ಏನು? ಇತ್ತಂಡದ ಕೆಲವರು ತಮ್ಮ ಹುಸಿ ವೈಪರೀತ್ಯಗಳ ಅರೆಗಣ್ಣ ನೋಟ ಬಿಟ್ಟರೆ, ರಾಷ್ಟ್ರೀಯತೆ ಮತ್ತು ಜಾತ್ಯತೀತತೆಗಳೊಂದಾದ ಪರಿಕಲ್ಪನೆ ಅರ್ಥವಾಗುತ್ತದೆ; ಅರ್ಥಪೂರ್ಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.