ADVERTISEMENT

ಜೀವಿಪರಿಸ್ಥಿತಿ: ಕರಗಿದ ನಿಧಿ, ‘ಸಾಲ’ದ ಹೊರೆ

ಭೂಮಿಯ ಜೈವಿಕ ಸಂಪನ್ಮೂಲದ ಈ ವರ್ಷದ ಪುನರುತ್ಪಾದನಾ ಬಜೆಟ್ ಈಗಾಗಲೇ ಮುಗಿದುಹೋಗಿದೆ!

ಡಾ.ಎಚ್.ಆರ್.ಕೃಷ್ಣಮೂರ್ತಿ
Published 5 ಆಗಸ್ಟ್ 2021, 18:01 IST
Last Updated 5 ಆಗಸ್ಟ್ 2021, 18:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವರ್ಷದ ಎಲ್ಲ ತಿಂಗಳಿನಂತೆ ಆಗಸ್ಟ್‌ ಮಾಸದಲ್ಲೂ ಬರುವ ಸಂಭ್ರಮಭರಿತ ರಾಷ್ಟ್ರೀಯ ದಿನಾಚರಣೆಗಳತ್ತ ಒಮ್ಮೆ ಗಮನಹರಿಸಿ. ಆಗಸ್ಟ್ 8– ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾದ ದಿನ, ಆಗಸ್ಟ್ 12– ವಿಶ್ವ ಯುವ ದಿನಾಚರಣೆ, ಆಗಸ್ಟ್ 15– ಸ್ವಾತಂತ್ರ್ಯೋತ್ಸವ, ಆಗಸ್ಟ್ 20– ಸದ್ಭಾವನಾ ದಿವಸ, ಆಗಸ್ಟ್‌ 22– ರಕ್ಷಾ ಬಂಧನ. ಈ ಪ್ರತಿಯೊಂದು ದಿನವೂ ವರ್ಷದ ಆಯಾ ತಿಂಗಳಿನಲ್ಲಿ ನಿಗದಿತ ದಿನಾಂಕದಂದೇ ಬರುತ್ತದೆ. ಆದರೆ ಈ ಎಲ್ಲವು ಗಳಿಗಿಂತ ಸಂಪೂರ್ಣವಾಗಿ ಭಿನ್ನವಾದ ದಿನವೆಂದರೆ ‘ಭೂಮಿಯ ಸಂಪನ್ಮೂಲಗಳ ಬಳಕೆ ಮಿತಿಮೀರಿದ ದಿನ’ (ಅರ್ತ್ ಓವರ್‌ಶೂಟ್ ಡೇ) ಅಥವಾ ‘ಜೀವಿಪರಿಸ್ಥಿತಿ ಸಾಲದ ದಿನ’ (ಇಕೊಲಾಜಿಕಲ್ ಡೆಟ್ ಡೇ).

ಈ ದಿನ ಪ್ರತಿವರ್ಷ ಬರುತ್ತದಾದರೂ ನಿರ್ದಿಷ್ಟ ದಿನಾಂಕದಂದೇ ಬರುವುದಿಲ್ಲ. ಮೊದಲ ಬಾರಿ ಬಂದದ್ದು 1970ರ ಡಿಸೆಂಬರ್ 30ರಂದು. ಆನಂತರ ಈ ದಿನ 1980ರಲ್ಲಿ ನವೆಂಬರ್ 4, 1990ರಲ್ಲಿ ಅಕ್ಟೋಬರ್ 10, 2000ದಲ್ಲಿ ಸೆಪ್ಟೆಂಬರ್ 22, 2010ರಲ್ಲಿ ಆಗಸ್ಟ್ 6, 2020ರಲ್ಲಿ ಆಗಸ್ಟ್ 22ರಂದು ಬಂದಿದೆ. ಇದೀಗ 2021ರಲ್ಲಿ ಜುಲೈ 29ರಂದು ಬಂದಾಗಿದೆ. ಅಂದಹಾಗೆ ಇದು ಸಂಭ್ರಮಾಚರಣೆಯ ದಿನವಲ್ಲ. ನಮ್ಮ ಅವಿವೇಕವನ್ನು ಎತ್ತಿ ತೋರಿ, ಎಚ್ಚರಿಸುವ ದಿನ.

ಮನುಷ್ಯನೂ ಸೇರಿದಂತೆ ಈ ಜಗತ್ತಿನ ಎಲ್ಲ ಜೀವಿ ಪ್ರಭೇದಗಳಿಗೆ ಆಹಾರ, ನೆಲೆ, ರಕ್ಷಣೆಗಳನ್ನು ಒದಗಿಸುವುದು ನಮ್ಮ ಭೂಮಿ. ನಮ್ಮ ಬದುಕಿಗೆ ಬೇಕಾದ ಸರ್ವಸಮಸ್ತ ವಸ್ತುಗಳೂ ದೊರೆಯುವುದು ಪ್ರಕೃತಿಯಿಂದ. ಮರಗಿಡಗಳು, ಜಲಚರಗಳು, ವನ್ಯಜೀವಿಗಳು, ಸಾಕುಪ್ರಾಣಿಗಳು, ಕೃಷಿ ಉತ್ಪನ್ನಗಳೆಲ್ಲವೂ ಸೇರಿ ಜೈವಿಕ ಸಂಪನ್ಮೂಲ ಎನ್ನಿಸಿಕೊಳ್ಳುತ್ತವೆ. ಜೈವಿಕ ಸಂಪನ್ಮೂಲದ ಪ್ರಮುಖ ಲಕ್ಷಣವೆಂದರೆ ಅದರ ಪುನರುತ್ಪಾದನಾ ಸಾಮರ್ಥ್ಯ. ಹೀಗಾಗಿಯೇ ಇದು ನವೀಕರಿಸಬಹುದಾದ ಸಂಪನ್ಮೂಲ.

ADVERTISEMENT

1961ರಲ್ಲಿ ಪ್ರಪಂಚದ ಒಟ್ಟು ಜನಸಂಖ್ಯೆ ಸುಮಾರು 308 ಕೋಟಿ. ಆ ಜನಸಂಖ್ಯೆ ಆ ವರ್ಷ ಬಳಸಿಕೊಂಡ ಒಟ್ಟು ಜೈವಿಕ ಸಂಪನ್ಮೂಲದ ಪ್ರಮಾಣ, ಆ ವರ್ಷ ಭೂಮಿಯ ನಿಸರ್ಗ ವ್ಯವಸ್ಥೆ ಉತ್ಪಾದಿಸಿದ ಒಟ್ಟು ಸಂಪನ್ಮೂಲದ ಶೇ 66ರಷ್ಟು ಮಾತ್ರ. ಉಳಿದ ಶೇ 34ರಷ್ಟು ಭಾಗ ಸಂಪನ್ಮೂಲ ‘ಜೀವಿಪರಿಸ್ಥಿತಿ ನಿಧಿ’ಯಾಗಿ (ಇಕೊಲಾಜಿಕಲ್ ರಿಸರ್ವ್) ಪ್ರಕೃತಿಯಲ್ಲೇ ಉಳಿದಿತ್ತು. 1962ರ ಅಂತ್ಯದ ವೇಳೆಗೆ ಜನಸಂಖ್ಯೆ 314 ಕೋಟಿಗಳಿಗೇರಿತು. ಆ ವರ್ಷ ಭೂಮಿ ಉತ್ಪಾದಿಸಿದ ಒಟ್ಟು ಸಂಪನ್ಮೂಲದ ಶೇ 70ರಷ್ಟು ಭಾಗ ಬಳಕೆಯಾಗಿ, ಶೇ 30ರಷ್ಟು ಭಾಗ ಕಷ್ಟಕಾಲಕ್ಕೆ ಬೇಕಾದ ಜೀವಿಪರಿಸ್ಥಿತಿ ನಿಧಿಯಾಗಿ ಪ್ರಕೃತಿಯಲ್ಲಿ ಉಳಿಯಿತು.

‘ಹೆಚ್ಚುವ ಜನಸಂಖ್ಯೆ, ಹೆಚ್ಚಿನ ಸಂಪನ್ಮೂಲದ ಬಳಕೆ, ಜೀವಿಪರಿಸ್ಥಿತಿ ನಿಧಿಯಾಗಿ ಪ್ರಕೃತಿಯಲ್ಲೇ ಉಳಿಯುವ ನೈಸರ್ಗಿಕ ಸಂಪನ್ಮೂಲದ ಪ್ರಮಾಣದಲ್ಲಿ ಇಳಿಕೆ’- ಈ ಪ್ರವೃತ್ತಿ ವರ್ಷ ವರ್ಷವೂ ಮುಂದುವರಿಯಿತು. 1970ರ ಅಂತ್ಯದ ವೇಳೆಗೆ ಪ್ರಪಂಚದ ಜನಸಂಖ್ಯೆ 354 ಕೋಟಿಯನ್ನು ಮುಟ್ಟಿದಾಗ, ಪ್ರಕೃತಿ ಆ ವರ್ಷ ಉತ್ಪಾದಿಸಿದ ಅಷ್ಟೂ ಸಂಪನ್ಮೂಲ ಆ ವರ್ಷವೇ ಬಳಕೆಯಾಗಿ, ಪ್ರತಿವರ್ಷವೂ ಜೀವಿಪರಿಸ್ಥಿತಿ ನಿಧಿಗೆ ಸೇರುತ್ತಿದ್ದ ಉಳಿತಾಯವಾದ ಸಂಪನ್ಮೂಲದ ಪ್ರಮಾಣ ಶೂನ್ಯಕ್ಕಿಳಿಯಿತು. 1971ರಿಂದ ಮುಂದೆ ನಮ್ಮ ಭೂಮಿ ಪ್ರತಿವರ್ಷ ಉತ್ಪಾದಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾವು ಜೈವಿಕ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. 2021ರಲ್ಲಿ ನಮ್ಮ ಭೂಮಿ ಉತ್ಪಾದಿಸುವುದಕ್ಕಿಂತ ಶೇ 74ರಷ್ಟು ಹೆಚ್ಚಿನ ಸಂಪನ್ಮೂಲವನ್ನು ನಾವು ಬಳಸಲಿದ್ದೇವೆ. ಈ ಹೆಚ್ಚಿನ ಭಾಗ ನಮಗೆ ದೊರೆಯುತ್ತಿರುವುದು ಜೀವಿಪರಿಸ್ಥಿತಿ ನಿಧಿಯಿಂದ. ಹೀಗಾಗಿ, ಆಪತ್ಕಾಲಕ್ಕೆಂದು ರಕ್ಷಿಸಿ ಟ್ಟಿದ್ದ ಈ ಅಮೂಲ್ಯ ನಿಧಿ ತ್ವರಿತಗತಿಯಲ್ಲಿ ಕರಗುತ್ತಿದೆ.

ಆಧುನಿಕ ಜೀವನಶೈಲಿಯಿಂದ ನಾವು ಪ್ರಕೃತಿಗೆ ಹೊರೆಯಾಗುತ್ತಿದ್ದೇವೆ. ಪ್ರಕೃತಿಯ ಮೇಲೆ ಭಾರ ಹೊರಿಸು ತ್ತಿದ್ದೇವೆ. ಪ್ರಕೃತಿ, ಪರಿಸರಗಳ ಮೇಲೆ ನಮ್ಮ ಹೆಜ್ಜೆಯ ಗುರುತು ಮೂಡಿಸುತ್ತಿದ್ದೇವೆ. ಈ ಹೆಜ್ಜೆಯ ಗುರುತು ಕಾಣಿಸುವುದಿಲ್ಲ. ಆದರೆ ಅದನ್ನು ಲೆಕ್ಕಹಾಕಬಹುದು. ಇದೇ ‘ಜೀವಿಪರಿಸ್ಥಿತಿ ಹೆಜ್ಜೆ ಗುರುತು’ (ಇಕೊಲಾಜಿಕಲ್ ಫುಟ್‌ಪ್ರಿಂಟ್). ಪ್ರಕೃತಿಯ ಯಾವ ಸಂಪನ್ಮೂಲಗಳನ್ನು ಯಾವ ಪ್ರಮಾಣದಲ್ಲಿ ಬಳಸಿಕೊಳ್ಳುತ್ತೇವೆ, ಯಾವ ಪ್ರಮಾಣದಲ್ಲಿ ತಾಜ್ಯವಸ್ತುಗಳನ್ನು ಪ್ರಕೃತಿಗೆ ಸೇರಿಸುತ್ತೇವೆ ಮುಂತಾದವುಗಳನ್ನೂ ಆಧರಿಸಿ ಒಬ್ಬ ವ್ಯಕ್ತಿಯ, ಒಂದು ಕುಟುಂಬದ, ಒಂದು ಸಮುದಾಯದ, ಒಂದು ನಗರ, ದೇಶ, ಕಡೆಗೆ ಇಡೀ ಪ್ರಪಂಚದ ಒಟ್ಟು ಜನಸಂಖ್ಯೆಯ ಜೀವಿಪರಿಸ್ಥಿತಿ ಹೆಜ್ಜೆ ಗುರುತನ್ನು ಗಣನೆ ಮಾಡಬಹುದು. ಇದನ್ನು ‘ಗ್ಲೋಬಲ್ ಹೆಕ್ಟೇರ್ ಪರ್‌ ಕ್ಯಾಪಿಟಾ’ ಎಂಬ ಮಾನದಿಂದ ಅಳೆಯಲಾಗುತ್ತದೆ (ಜಿಎಚ್‍ಎ/ ಕ್ಯಾಪಿಟಾ) ವ್ಯಕ್ತಿಯೊಬ್ಬನ ಒಂದು ವರ್ಷದ ಎಲ್ಲ ಸಂಪನ್ಮೂಲಗಳ ಅಗತ್ಯವನ್ನೂ ಪೂರೈಸಲು ಬೇಕಾದ ಜೈವಿಕ ಉತ್ಪಾದನೆಯ ಸಾಮರ್ಥ್ಯವಿರುವ ನೆಲ ಮತ್ತು ನೀರಿನ ಪ್ರಮಾಣವನ್ನು ಇದು ಅಳೆಯುತ್ತದೆ. ಉದಾಹರಣೆಗೆ, ಅಮೆರಿಕದ ಪ್ರಜೆಯ ಜೀವಿಪರಿಸ್ಥಿತಿ ಹೆಜ್ಜೆ ಗುರುತಿನ ಪ್ರಮಾಣ 8 ಜಿಎಚ್‍ಎ/ ಕ್ಯಾಪಿಟಾ. ಜಪಾನ್ 5.1, ಬ್ರೆಜಿಲ್ 2.9, ಚೀನಾ 2.2, ಭಾರತ 0.9.

ಜಗತ್ತಿನ ಎಲ್ಲ ಜನರೂ ಅಮೆರಿಕದ ಪ್ರಜೆಗಳ ಜೀವನಶೈಲಿಯನ್ನೇ ಅನುಸರಿಸಿದರೆ, ಎಲ್ಲರ ಜೈವಿಕ ಸಂಪನ್ಮೂಲಗಳ ಬೇಡಿಕೆಯನ್ನು ಪೂರೈಸಲು ನಾಲ್ಕು ಭೂಮಿಗಳು ಬೇಕಾಗುತ್ತವೆ. ಆದರೆ ನಮಗಿರುವುದು ಒಂದೇ ಭೂಮಿ!

ಇಡೀ ಮಾನವ ಜನಾಂಗದ ಜೀವಿಪರಿಸ್ಥಿತಿ ಹೆಜ್ಜೆ ಗುರುತನ್ನು ಲೆಕ್ಕಹಾಕುವ ಕೆಲಸವನ್ನು ‘ಗ್ಲೋಬಲ್ ಫುಟ್‍ಪ್ರಿಂಟ್ ನೆಟ್‍ವರ್ಕ್’ ಎಂಬ ಸ್ವಯಂಸೇವಾ ಸಂಸ್ಥೆ ಮಾಡುತ್ತದೆ. ಜಗತ್ತಿನ 50 ದೇಶಗಳು, 30 ಬೃಹತ್ ನಗರಗಳು ಮತ್ತು 70 ಜಾಗತಿಕ ಸಂಸ್ಥೆಗಳ ವಿಜ್ಞಾನಿಗಳು, ತಂತ್ರಜ್ಞರು, ಅರ್ಥಶಾಸ್ತ್ರಜ್ಞರು ಮುಂತಾದವರ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಈ ಸಂಸ್ಥೆ, ಪ್ರತಿವರ್ಷವೂ ಇಡೀ ಪ್ರಕೃತಿ ಒಟ್ಟಾಗಿ ಉತ್ಪಾದಿಸುವ ಸಂಪನ್ಮೂಲದ ಪ್ರಮಾಣ, ಪ್ರಕೃತಿಗೆ ಸೇರುವ ವ್ಯರ್ಥವಸ್ತುಗಳ ಪ್ರಮಾಣ ಮುಂತಾದ ವುಗಳನ್ನು ಲೆಕ್ಕಹಾಕಿ, ಇಡೀ ಮಾನವ ಜನಾಂಗದ ಜೀವಿಪರಿಸ್ಥಿತಿ ಹೆಜ್ಜೆ ಗುರುತನ್ನು ಗಣನೆ ಮಾಡಿ ಕಡೆಗೆ ‘ಅರ್ತ್ ಓವರ್ ಶೂಟ್ ಡೇ’ ದಿನಾಂಕವನ್ನು ನಿರ್ಧರಿಸಿ, ಜಾಗತಿಕ ಮಟ್ಟದಲ್ಲಿ ಪ್ರಕಟಿಸುತ್ತದೆ.

2021ರ ಈ ವರ್ಷದಲ್ಲಿ ‘ಅರ್ತ್ ಓವರ್‌ಶೂಟ್ ಡೇ’ ಜುಲೈ 29ರಂದು ಬಂದಾಗಿದೆ. ಹಾಗಾದರೆ ಏನಿದರ ಅರ್ಥ ಮತ್ತು ಮಹತ್ವ? 2021ರ ವರ್ಷದಲ್ಲಿ ಭೂಮಿ ಉತ್ಪಾದಿಸಲಿರುವ ಅಷ್ಟೂ ಜೈವಿಕ ಸಂಪನ್ಮೂಲವನ್ನು ಜುಲೈ 29ರಂದೇ, ಅಂದರೆ ವರ್ಷದ ಮೊದಲ 214 ದಿನಗಳಲ್ಲೇ ಮಾನವಜನಾಂಗ ಬಳಸಿ ಮುಗಿಸಿದೆ. ಅದು, ಭೂಮಿಯ ಜೈವಿಕ ಸಂಪನ್ಮೂಲದ ಪುನರುತ್ಪಾದನಾ ಬಜೆಟ್ ಸಂಪೂರ್ಣವಾಗಿ ಮುಗಿದ ದಿನ. ಅಲ್ಲಿಂದ ಮುಂದೆ, ಅಂದರೆ ಜುಲೈ 30ರಿಂದ ನಾವು ಬಳಸುತ್ತಿರುವ ಸಂಪನ್ಮೂಲವು ಜೀವಿಪರಿಸ್ಥಿತಿ ನಿಧಿಯಿಂದ ಎರವಲು ಪಡೆದದ್ದು! ಈ ಸಾಲಕ್ಕೆ ನಾವು ಅರಣ್ಯ ನಾಶ, ಮಣ್ಣಿನ ಸವೆತ, ಅತಿವೃಷ್ಟಿ, ಅನಾವೃಷ್ಟಿ, ಜಾಗತಿಕ ತಾಪಮಾನದ ಏರಿಕೆ, ವಾಯುಗುಣ ಬದಲಾವಣೆ ಮುಂತಾದವುಗಳ ರೂಪದಲ್ಲಿ ಬಹಳ ದುಬಾರಿ ಬಡ್ಡಿಯನ್ನು ಕಟ್ಟುತ್ತಿದ್ದೇವೆ!

ನಿಸರ್ಗ ಸಂಪನ್ಮೂಲಗಳ ಬಳಕೆ ಒಂದೇ ಸಮನೆ ಏರುತ್ತಿರುವುದರಿಂದ, ಮುಂದಿನ ವರ್ಷದ ‘ಅರ್ತ್ ಓವರ್ ಶೂಟ್ ಡೇ’ ಜುಲೈ 29ಕ್ಕಿಂತ ಮುಂಚೆಯೇ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಕಟ್ಟಕಡೆಗೊಮ್ಮೆ ಜನವರಿಯಲ್ಲೇ ಬರಬಹುದು! ನಮ್ಮ ಇಂದಿನ ಪರಿಸ್ಥಿತಿ ಗಾಬರಿಯಾಗುವಂತಿದೆ. ಅನೇಕ ಸಂಪನ್ಮೂಲಗಳು ಮುಗಿದುಹೋಗುವ ಸೂಚನೆಗಳು ಸ್ಪಷ್ಟವಾಗಿ ಕಂಡುಬರುತ್ತಿವೆ.

ಹಾಗೆ ಮುಗಿದುಹೋದರೆ ಮುಂದೇನು ಗತಿ? ಅಂಥ ಅಪಾಯವನ್ನು ತಪ್ಪಿಸಲು ನಮ್ಮ ಮುಂದಿರುವ ಏಕೈಕ ಮಾರ್ಗವೆಂದರೆ ನಿಸರ್ಗ ಸಂಪನ್ಮೂಲಗಳ ವಿವೇಕಯುತ ಬಳಕೆ. ನಮ್ಮ ಭೂಮಿಯ ವಾರ್ಷಿಕ ಉತ್ಪಾದನೆಯ ಮಿತಿಯೊಳಗೇ ನಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಜಾಣ್ಮೆ. ಇಂತಹ ಮನೋಭಾವವನ್ನು ನಾವು ಪ್ರದರ್ಶಿಸದಿದ್ದಾಗ ಪ್ರಕೃತಿಯೇ ನಮ್ಮ ವಿರುದ್ಧ ತಿರುಗಿ ಬೀಳುತ್ತದೆ. 2020ರಲ್ಲಿ ಕೋವಿಡ್ ತೀವ್ರವಾಗಿದ್ದ ಸಂದರ್ಭದಲ್ಲಿ ಸಂಪನ್ಮೂಲದ ಬಳಕೆ ಎದ್ದುಕಾಣುವಂತೆ ಕಡಿಮೆಯಾಗಿ, ಪ್ರಕೃತಿ ಚೇತರಿಸಿಕೊಂಡಿದ್ದು ಇದಕ್ಕೊಂದು ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.