ADVERTISEMENT

ಟಿ.ಆರ್‌.ಅನಂತರಾಮು ಬರಹ | ಮೇಘಸ್ಫೋಟ: ನಿಸರ್ಗದ ಜಲಬಾಂಬ್‌

ಈ ಅವಘಡದಿಂದ ಜನರನ್ನು ರಕ್ಷಿಸಲು ಸರ್ಕಾರ ರಾಜಿರಹಿತ ಕ್ರಮಕ್ಕೆ ಮುಂದಾಗಬೇಕು

ಟಿ.ಆರ್.ಅನಂತರಾಮು
Published 2 ಆಗಸ್ಟ್ 2021, 19:30 IST
Last Updated 2 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನೈಸರ್ಗಿಕ ವಿಕೋಪಗಳ ಪಟ್ಟಿಗೆ ಹೊಸ ಆತಂಕವಾದಿಯ ಹೆಸರು ಸೇರ್ಪಡೆಯಾಗಿದೆ. ಅದು ಮೇಘಸ್ಫೋಟ. ಪ್ರವಾಹ, ಭೂಕಂಪನ, ಬರ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ನೈಸರ್ಗಿಕ ಅವಘಡಗಳಿಗೆ ಜನ ಹೊಂದಿ ಕೊಂಡಿದ್ದಾರೆ. ಮೇಘಸ್ಫೋಟಕ್ಕೆ ಇನ್ನೂ ಹೊಂದಿಕೊಳ್ಳಬೇಕಾಗಿದೆ; ಸರ್ಕಾರಗಳೂ ಇಂಥ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸದಾ ಸಜ್ಜಾಗಿರಬೇಕು.

ಇಂಥ ಪ್ರಕರಣಗಳಲ್ಲಿ ಪ್ರಾಣಹಾನಿಯಾದವರ ಕಥೆ ಒಂದಾದರೆ, ಜೀವವನ್ನು ಪಣಕ್ಕೊಡ್ಡಿ ಅಂಥ ದುರ್ಗಮ ಪ್ರದೇಶಗಳಿಗೆ ಹೋಗಿ ಜನ, ಜಾನುವಾರುಗಳನ್ನು ಉಳಿಸುವ ರಕ್ಷಣಾ ಪಡೆಗಳ ಕಥೆ ಇನ್ನೊಂದು. ಮಾಧ್ಯಮಗಳು ಈ ವಿಚಾರದಲ್ಲಿ ಚುರುಕಾಗಿವೆ. ಹೆಚ್ಚು ಕಡಿಮೆ ಪ್ರತಿವರ್ಷವೂ ಮಳೆಗಾಲದಲ್ಲಿ ಉತ್ತರ- ದಕ್ಷಿಣ ಎಂಬ ಭೇದವಿಲ್ಲದೆ ಭಾರತದ ನದಿಗಳು ಉಕ್ಕಿ ಹರಿಯುತ್ತವೆ. ಆಡಳಿತ ಮತ್ತು ನಿರ್ವಹಣೆಯ ತಾಕತ್ತನ್ನು ಪ್ರಶ್ನಿಸುವಷ್ಟು ಸವಾಲೊಡ್ಡುತ್ತವೆ. ವಿಕೋಪ ನಿರ್ವಹಣೆಗೆಂದೇ ಕೇಂದ್ರ ಸರ್ಕಾರ ಭಾರಿ ಮೊತ್ತವನ್ನು ಎತ್ತಿಟ್ಟಿದೆ, ‘ರಾಷ್ಟ್ರೀಯ ವಿಕೋಪ ನಿಧಿ’ಯನ್ನು ಸೃಷ್ಟಿಸಿದೆ.

ರಾಜ್ಯ ಮಟ್ಟದಲ್ಲೂ 2005ರಿಂದ ಇದು ಕೆಲಸ ಮಾಡುತ್ತಿದೆ. ಕಳೆದ ವರ್ಷವಷ್ಟೇ ಕೇಂದ್ರ ವಿಕೋಪ ನಿರ್ವಹಣೆಗೆಂದೇ ಈ ನಿಧಿಯಿಂದ ರಾಜ್ಯಗಳಿಗೆ ₹ 30,000 ಕೋಟಿ ಬಿಡುಗಡೆ ಮಾಡಿತ್ತು. ರಾಜ್ಯದ ಪಾಲೂ ಸೇರಿದಂತೆ ₹ 1,400 ಕೋಟಿ ಸಿಕ್ಕಿತ್ತು ನಮಗೆ.

ADVERTISEMENT

ನೈಸರ್ಗಿಕ ವಿಕೋಪಗಳನ್ನು ತಡೆಯುವುದು ಆಗದು, ನಿರ್ವಹಿಸಬೇಕು ಅಷ್ಟೇ. ಇದೊಂದು ಶಾಶ್ವತ ಪೀಡೆ. ಸರ್ಕಾರಗಳಿಗೂ ಗೊತ್ತು. ಆದ್ದರಿಂದಲೇ ಪರಿಹಾರ ನಿಧಿ ಎನ್ನುವುದಕ್ಕೆ ಕಾಯಂ ಜೀವ ಇರುತ್ತದೆ. ವಿಕೋಪದ ಪಟ್ಟಿಯಲ್ಲಿ ನುಸುಳಿ ಮೇಘಸ್ಫೋಟ ಹಿಂದಿಗಿಂತ ಈಗ ಹೆಚ್ಚಿನ ಪಾಲು ಕೇಳುತ್ತಿದೆ. ವಿಶೇಷವಾಗಿ ಹಿಮಾಲಯ ಪರ್ವತಗಳ ತಪ್ಪಲಲ್ಲಿರುವ ರಾಜ್ಯಗಳಿಗೆ ಕಳೆದ 15 ವರ್ಷಗಳಿಂದ ಮೇಘಸ್ಫೋಟ ಹೊಸ ಶತ್ರುವಾಗಿದೆ. ಪ್ರವಾಹದ ಜೊತೆಗೆ ಇದನ್ನೂ ನಿಭಾಯಿಸಬೇಕಾಗಿದೆ.

ಸದ್ಯದಲ್ಲಿ ಹಿಮಾಲಯ ಪ್ರದೇಶದ ಲಡಾಕ್, ಕಾಶ್ಮೀರ, ಹಿಮಾಚಲ ಪ್ರದೇಶಗಳು ಕಳೆದ ವಾರದ ಮೇಘಸ್ಫೋಟದಿಂದಾಗಿ ತತ್ತರಿಸಿಹೋಗಿವೆ. ಇದು ನಿಸರ್ಗವೇ ರೂಪಿಸಿರುವ ಜಲಬಾಂಬು ದಾಳಿ. ದಿಢೀರ್ ಪ್ರವಾಹವನ್ನು ನಿಭಾಯಿಸುವುದು ಸವಾಲಿನ ಕೆಲಸ. ಏಕೆಂದರೆ, ಹವಾಮಾನ ಅಧ್ಯಯನ ಮಾಡಿ ಚಂಡಮಾರುತಗಳ ಮುನ್ಸೂಚನೆ ಪಡೆಯಬಹುದು. ಮೇಘಸ್ಫೋಟ ಹಾಗಲ್ಲ. ದಿಢೀರೆಂದು ಸಂಭವಿಸಿ ಕೆಲವೇ ನಿಮಿಷಗಳಲ್ಲಿ ಜಲಪ್ರಳಯ ಉಂಟು ಮಾಡುತ್ತದೆ. ತಯಾರಿ ಮಾಡಿಕೊಂಡರೂ ಪ್ರಯೋಜನವಿಲ್ಲ. ಎಲ್ಲಿ, ಯಾವಾಗ ಎಂದು ಊಹಿಸಲೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಮೇಘಸ್ಫೋಟ 20 ಚದರ ಕಿಲೊ ಮೀಟರ್ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಈ ಸಲ ಅದು ಏಕಕಾಲಕ್ಕೆ ಹಲವು ರಾಜ್ಯಗಳ ಮೇಲೆ ದಾಳಿ ಮಾಡಿದೆ.

ಭಾರತದಲ್ಲಿ 1908ರಲ್ಲೇ ಕೃಷ್ಣಾ ನದಿಯ ಉಪ ನದಿಯಾದ ಮೂಸಿ ನದಿ ಹೊರಳಿ ಹೈದರಾಬಾದ್ ಸೇರಿದಂತೆ ಸುತ್ತಮುತ್ತ 50,000 ಮಂದಿ ಸತ್ತದ್ದು ಭಾರತದಲ್ಲಿ ಘಟಿಸಿದ ಮೊದಲ ಮೇಘಸ್ಫೋಟ ದುರಂತ. ಈಗ ಅದರ ಸಾಕ್ಷಿಯಾಗಿ ಯಾರೂ ಉಳಿದಿಲ್ಲ. ಆದರೆ 2013ರಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಾದ ಮೇಘಸ್ಫೋಟದಿಂದ 5,000 ಜನ ಪ್ರವಾಹಕ್ಕೆ ಸಿಕ್ಕಿ ಸತ್ತಮೇಲೆ ಮೇಘಸ್ಫೋಟವೆಂದರೇನು ಎಂದು ತಿಳಿದದ್ದು ಆಗ. ಇದಕ್ಕಿಂತ ಜನರಿಗೆ ಹೆಚ್ಚು ಆಘಾತ ಮತ್ತು ಆತಂಕ ತಂದದ್ದು ಕೇವಲ 8ರಿಂದ 10 ಗಂಟೆಯೊಳಗೆ 2005ರಲ್ಲಿ ಮುಂಬೈನಲ್ಲಿ 950 ಮಿಲಿ ಮೀಟರ್ ಮಳೆ ಬಿದ್ದದ್ದು. ಪರ್ವತ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಅವಘಡ ಅರಬ್ಬಿ ಸಮುದ್ರವನ್ನು ಕಾಡಿದ್ದು ಹೇಗೆ ಎಂಬುದು ಹವಾಗುಣ ವಿಜ್ಞಾನಿಗಳಿಗೂ ಗೊಂದಲ ತಂದಿತ್ತು. ಇದರ ನಂತರ ಮೇಘಸ್ಫೋಟ ಹಿಮಾಲಯದ ಬುಡದಲ್ಲಿರುವ ರಾಜ್ಯಗಳನ್ನು ಪದೇ ಪದೇ ಕಾಡುತ್ತಲೇ ಇದೆ.

ಮೇಘಸ್ಫೋಟದ ಹಿಂದಿನ ಕಾರಣ ಈಗ ಗುಟ್ಟಾಗಿ ಉಳಿದಿಲ್ಲ. ಹವಾಮಾನ ತಜ್ಞರು ಇದರ ಎಲ್ಲ ಮಗ್ಗುಲನ್ನೂ ಅಳೆದಿದ್ದಾರೆ. ಸೀಮಿತ ಪ್ರದೇಶದಲ್ಲಿ ದಿಢೀರೆಂದು ಗಂಟೆಗೆ 100 ಮಿಲಿ ಮೀಟರ್ ಮಳೆಯಾದಾಗ ಆ ಪ್ರದೇಶದಲ್ಲಿ ಪ್ರವಾಹ ಉಂಟಾಗುತ್ತದೆ. ಇದಕ್ಕೂ ಒಂದು ಹಿನ್ನೆಲೆ ಬೇಕು. 1,000ದಿಂದ 2,500 ಮೀಟರ್ ಎತ್ತರದ ಪರ್ವತ ಪ್ರದೇಶಗಳಲ್ಲಿ ವಾಯುಭಾರ ಕುಸಿತವಾಗಿ, ಅತಿ ಒತ್ತಡದಲ್ಲಿ ಕಣಿವೆಯಲ್ಲಿದ್ದ ಮಳೆ ಮೋಡ ಅತಿ ವೇಗದಲ್ಲಿ ಮೇಲಕ್ಕೆ ನುಗ್ಗುತ್ತದೆ, ಶೃಂಗಗಳಿಗೆ ಬಡಿಯುತ್ತದೆ. ನೀರು ಬಿಡುಗಡೆಯಾಗಿ ಕುಂಭದ್ರೋಣ ಮಳೆಯಾಗುತ್ತದೆ. ವೇಟ್ ಲಿಫ್ಟಿಂಗ್ ಕ್ರೀಡಾಪಟು 100 ಕಿಲೊ ಗ್ರಾಂ ಭಾರವನ್ನು ಎತ್ತಿ ಆನಂತರ ದಿಢೀರೆಂದು ಕೆಳಗೆ ಬಿಸುಟ ಹಾಗೆ ಈ ಮೇಘಸ್ಫೋಟ. ಜೀವನದಿಗಳ ತವರಾಗಿ ಹಿಮಾಲಯ ಪರ್ವತಗಳ ಕಣಿವೆಗಳು ಈ ಹೆಚ್ಚುವರಿ ನೀರನ್ನು ತಡೆಯುವ ಶಕ್ತಿ ಕಳೆದುಕೊಂಡಿವೆ. ಕೆಳ ಹರಿವಿನಲ್ಲಿರುವ ವಸಾಹತುಗಳನ್ನು ಇದು ಅನಿರೀಕ್ಷಿತ ಅಪಾಯಕ್ಕೆ ಒಡ್ಡುತ್ತದೆ. ಸದ್ಯದಲ್ಲಿ ಉತ್ತರಾಖಂಡ, ಜಮ್ಮು, ಕಾಶ್ಮೀರ, ಲಡಾಕ್ ಪ್ರದೇಶಗಳು ಮೇಘಸ್ಫೋಟವೆಂಬ ಆತಂಕವಾದಿಯ ಜೊತೆಯಲ್ಲೇ ಬದುಕಬೇಕಾದ ಪರಿಸ್ಥಿತಿ ಇದೆ.

ಇದರಿಂದ ಕಲಿತ ಪಾಠವೇನು? ಯಾವ ಶಕ್ತಿ ಯಿಂದಲೂ ಇದನ್ನು ನಿಯಂತ್ರಿಸಲು ಆಗುವುದಿಲ್ಲ. ಈ ಸಂದರ್ಭದಲ್ಲಿ ಒಂದು ಸಂಗತಿಯನ್ನು ನೆನಪಿಸಿಕೊಳ್ಳಬಹುದು. ಇದೇ ಫೆಬ್ರುವರಿಯಲ್ಲಿ ನಂದಾದೇವಿಯ ಹಿಮನದಿಯೊಂದರ ತುದಿ ಕಳಚಿಬಿದ್ದು ಅಲಕಾನಂದ ನದಿ ಉಕ್ಕಿ ಹರಿದು 150ಕ್ಕೂ ಹೆಚ್ಚು ಮಂದಿ ಸತ್ತರು. ನ್ಯಾಷನಲ್ ಥರ್ಮಲ್ ಪವರ್‌ನ ನಾಲ್ಕು ಜಲವಿದ್ಯುತ್ ಯೋಜನೆಗಳು ಕೊಚ್ಚಿಹೋದವು. ಶ್ರೀನಗರ ಅಣೆಕಟ್ಟನ್ನು ಖಾಲಿ ಮಾಡಬೇಕಾಯಿತು, ಅಷ್ಟು ಪ್ರವಾಹ ಹರಿದುಬಂದಿತ್ತು. ಪೊಲೀಸ್, ರಕ್ಷಣಾ ಪಡೆ, ಟಿಬೆಟ್‍ನ ಗಡಿ ಪಡೆ, ರಾಜ್ಯದ ವಿಕೋಪ ನಿರ್ವಹಣಾ ತಂಡ ಜನರ ಸಂರಕ್ಷಣೆಗಾಗಿ ಪ್ರಾಣವನ್ನು ಪಣಕ್ಕಿಟ್ಟಿದ್ದವು. ಆನಂತರ ಗಂಗಾ ನದಿಯ ಉಪನದಿಗಳ ಪಾತ್ರದಲ್ಲಿ ಹೊಸತಾಗಿ ಯಾವ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನೂ ಸ್ಥಾಪಿಸಬಾರದೆಂದು ಕೇಂದ್ರ ಸರ್ಕಾರ ಆದೇಶ ನೀಡುವ ಪರಿಸ್ಥಿತಿ ಎದುರಾಯಿತು. ವಾಸ್ತವವಾಗಿ 2015ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಪೀಠವು ಅಲಕಾ ನದಿ ಪಾತ್ರ ಕುರಿತಂತೆ ಆಚೀಚೆ 100 ಮೀಟರ್‌ವರೆಗೆ ಜನವಸತಿ ಅಥವಾ ಯಾವುದೇ ಹೊಸ ಕಟ್ಟಡಗಳನ್ನು ಕಟ್ಟಬಾರದೆಂದು ಕಟ್ಟಲೆ ಹೊರಡಿಸಿತ್ತು. ನದಿ ಉಕ್ಕಿ ಹರಿದಾಗ ಅಪಾಯವಾಗದಿರಲೆಂಬುದು ಇದರ ಉದ್ದೇಶ. ಕಟ್ಟಲೆಗಳು ಇವೆ, ಅವಕ್ಕೆ ಹಲ್ಲೂ ಇದೆ, ಆದರೆ ಕಚ್ಚುವುದಿಲ್ಲ. ಅದೇ ಒಂದು ದುರಂತ.

ಮೇಘಸ್ಫೋಟ ತರುವ ಸ್ಥಿತಿಯೂ ಇದಕ್ಕಿಂತ ಬೇರೆಯಲ್ಲ. ಭಾರಿ ಇಳಿಜಾರಿದ್ದರೆ ಅಪಾಯವಿಲ್ಲ. ಬಿದ್ದ ಮಳೆ ಹರಿದುಹೋಗುತ್ತದೆ. ಆದರೆ ಕಣಿವೆಯಲ್ಲಿ ಇಂಥ ಸ್ಥಿತಿ ಇರುವುದಿಲ್ಲ. ಅಲ್ಲಿನ ನದಿಗಳು ಉಕ್ಕಲೇಬೇಕು. ಮೇಘಸ್ಫೋಟವನ್ನು ನಿಭಾಯಿಸಲು ಕೂಡ ಕೇಂದ್ರ ಸರ್ಕಾರ ಅದೇ ನೀತಿಯನ್ನು ಅನುಸರಿಸಬೇಕು. ಒಂದೆರಡು ಬದಲಾವಣೆಗಳ ಸಹಿತ. ಅದೆಂದರೆ ಹಿಮಾಲಯದಲ್ಲಿ ಪದೇ ಪದೇ ಕಾಡುವ, ಪ್ರವಾಹ ಎಬ್ಬಿಸುವ ನದಿಗಳ ಆಚೀಚೆ ಎರಡು ಕಿಲೊ ಮೀಟರ್ ದೂರದವರೆಗೆ ಜನವಸತಿಗೆ ಅವಕಾಶ ಕೊಡಬಾರದು. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಆಗ ಪ್ರವಾಹದ ಪರಿಣಾಮದಿಂದ ಪ್ರಾಣ, ಆಸ್ತಿಯನ್ನು ಬಚಾವು ಮಾಡಬಹುದು. ಇದಕ್ಕಾಗಿ ಸಹಜ ವಾಗಿಯೇ ದೊಡ್ಡ ಮೊತ್ತದ ಹಣವನ್ನು ತೊಡಗಿಸಬೇಕು. ಜನರನ್ನು ಸ್ಥಳಾಂತರಿಸುವುದು ಸುಲಭವಲ್ಲ. ಆದರೆ ಪ್ರವಾಹ ನಿರ್ವಹಣೆಗಾಗಿ ಖರ್ಚು ಮಾಡುತ್ತಿರುವ ಹಣವನ್ನು ಪರಿಗಣಿಸಿದರೆ ಪುನರ್ವಸತೀಕರಣಕ್ಕೆ ವಿನಿಯೋಗಿಸುವುದು ಸದ್ಯಕ್ಕೆ ದುಬಾರಿ ಎನ್ನಿಸಿದರೂ ತಾರ್ಕಿಕವಾಗಿ ಸ್ವಾಗತಿಸಬೇಕಾದ ವಿಚಾರ.

ಇನ್ನು ಧಾರ್ಮಿಕ ಕ್ಷೇತ್ರಗಳು ಬಹುತೇಕ ನದಿ ದಡಗಳಲ್ಲೇ ಹೆಚ್ಚಾಗಿ ಸ್ಥಾಪನೆಯಾಗಿವೆ. ಅಲ್ಲಿಯೂ ಸರ್ಕಾರ ಒಂದು ನಿರ್ಣಯ ತೆಗೆದುಕೊಳ್ಳಬೇಕು. ಹಿಮಾ ಲಯದ ತಪ್ಪಲಿನಲ್ಲಿರುವ ಅಥವಾ ಉನ್ನತ ಪ್ರದೇಶ ದಲ್ಲಿರುವ ಧಾರ್ಮಿಕ ಕ್ಷೇತ್ರಗಳನ್ನು ಮಳೆಗಾಲದ ಮಟ್ಟಿಗೆ ಮುಚ್ಚಬೇಕು. ಇದು ರಾಜಕೀಯವಾಗದಂತೆ ನಿರ್ವಹಿಸ ಬೇಕು. ಏಕೆಂದರೆ ಅಂತಿಮವಾಗಿ ಜನರ ರಕ್ಷಣೆ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.