ADVERTISEMENT

ವಿಶ್ಲೇಷಣೆ: ಅಭಿವೃದ್ಧಿ; ಹಿತಕರವಾಗಿಸುವ ಸವಾಲು

ಸರ್ಕಾರದ ವರಮಾನದ ಮೂಲಗಳು ಕಡಿಮೆಯಾದಾಗ ಜನಕಲ್ಯಾಣ ಕಾರ್ಯಕ್ರಮ ಸಾಧ್ಯವಾಗದು

ಅರವಿಂದ ಚೊಕ್ಕಾಡಿ
Published 23 ಸೆಪ್ಟೆಂಬರ್ 2021, 20:18 IST
Last Updated 23 ಸೆಪ್ಟೆಂಬರ್ 2021, 20:18 IST
   

ಅಭಿವೃದ್ಧಿ ಎಂಬ ಬಹುದೊಡ್ಡ ಪರಿಕಲ್ಪನೆಯ ಪ್ರಮುಖ ಭಾಗವೇ ಆರ್ಥಿಕ ಅಭಿವೃದ್ಧಿ. ಆರ್ಥಿಕ ಅಭಿವೃದ್ಧಿಯ ಅರ್ಥಶಾಸ್ತ್ರೀಯ ಲೆಕ್ಕಾಚಾರಗಳೂ ಜನರ ಅನುಭವದ ಲೆಕ್ಕಾಚಾರಗಳೂ ಒಂದೇ ಆಗುವುದಿಲ್ಲ. ಅಂತರರಾಷ್ಟ್ರೀಯ ಆರ್ಥಿಕ ಒತ್ತಡಗಳು, ಅಂಕಿ-ಅಂಶಗಳ ಆಧಾರಗಳು, ಸಕಾರಣಗಳು ಎಲ್ಲವೂ ಏನೇ ಇರಬಹುದು; ಜನರ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಏನಾಗಿರುತ್ತದೆ? ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಅದು ಹೆಚ್ಚಿನ ಬೆಲೆಗೆ ಮಾರಾಟವಾಗಬೇಕು. ತಾವು ಖರೀದಿ ಮಾಡುವ ವಸ್ತುಗಳು ಕಡಿಮೆ ಬೆಲೆಗೆ ದೊರೆಯಬೇಕು ಮತ್ತು ಬೇಕಾದ್ದನ್ನು ಕೊಂಡುಕೊಳ್ಳಲು ಆದಾಯ ಇರಬೇಕು. ಇದನ್ನು ಜನ ಬಯಸುತ್ತಾರೆ.

ಅಭಿವೃದ್ಧಿಗೆ ಸಂಬಂಧಿಸಿದಂತೆ ಜನರು ಬಯಸುವ ಹಿತಕರ ಪರಿಣಾಮ ಉಂಟಾಗಬೇಕಾದರೆ ಆರ್ಥಿಕತೆಯಲ್ಲಿ ಸರ್ಕಾರದ ಮಧ್ಯಪ್ರವೇಶ ಇರಲೇಬೇಕಾಗುತ್ತದೆ. ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು ಹಾಗೂ ಸೇವೆಗಳಿಗೆ ಬೆಲೆ ಜಾಸ್ತಿ ಬರಬೇಕಾದರೆ ಬೆಂಬಲ ಬೆಲೆ, ಸಬ್ಸಿಡಿ ಮತ್ತಿತರೇ ಸೌಲಭ್ಯ ಒದಗಣೆಯ ಕ್ಷೇತ್ರಕ್ಕೆ ಸರ್ಕಾರ ಹೂಡಿಕೆ ಮಾಡಬೇಕು. ಜನಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಬೇಕಾದರೆ ಅಧಿಕ ಉತ್ಪಾದನೆಯನ್ನು ಸಾಧ್ಯವಾಗಿಸಿ ಉತ್ಪಾದಕನಿಗೆ ನಷ್ಟವಾಗದ ಮಟ್ಟದಲ್ಲಿ ಬೆಲೆ ಇಡಬೇಕು ಅಥವಾ ಅಲ್ಲಿಯೂ ಸಬ್ಸಿಡಿಯನ್ನು ಕೊಡಬೇಕು.

ಆದರೆ, 1991ರ ನಂತರದ ಸರ್ಕಾರದ ನೀತಿಗಳು ಸರ್ಕಾರದ ಮಧ್ಯಪ್ರವೇಶವನ್ನು ಕಡಿಮೆ ಮಾಡುತ್ತಾ ಹೋದವು. ಪ್ರಾರಂಭದ ಹಂತದಲ್ಲಿ ಅಥವಾ ಮನಮೋಹನ್ ಸಿಂಗ್ ಅಧಿಕಾರ ಅವಧಿಯ ತನಕ ಜಾಗತೀಕರಣದ ಒಡಂಬಡಿಕೆಯಲ್ಲೇ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೆಲವು ರಿಯಾಯಿತಿಗಳು ಇದ್ದುದರಿಂದ ಬಂದ ವಿದೇಶಿ ಹೂಡಿಕೆಗಳು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ನಿರ್ಮಿಸಿ ಕೆಲವು ವಲಯಗಳ ಉತ್ಪನ್ನಗಳಿಗೆ ಬೆಲೆಯನ್ನು ಕಡಿಮೆ ಮಾಡಿದವು. ಜನೋಪಯೋಗಿ ಕ್ಷೇತ್ರಕ್ಕೆ ಸರ್ಕಾರ ಮಾಡುತ್ತಿದ್ದ ಹೂಡಿಕೆಯನ್ನು ನಿಲ್ಲಿಸಲಿಲ್ಲ. ಆದ್ದರಿಂದ ಸಮಸ್ಯೆಯ ಕಾವು ಜನರನ್ನು ತಟ್ಟಲಿಲ್ಲ.‌

ADVERTISEMENT

ಆದರೆ ವರ್ತಮಾನದ ಅನುಭವ ಅದಲ್ಲ. ಜಾಗತೀಕರಣದ ಒಡಂಬಡಿಕೆಯ ಪ್ರಕಾರ, ಅಭಿವೃದ್ಧಿಶೀಲ ರಾಷ್ಟ್ರಗಳು ಜನರಿಗೆ ಕೊಡಬಹುದಾದ ರಿಯಾಯಿತಿಗಳ ಅವಧಿ ಮುಗಿದಿದೆ. ಸರ್ಕಾರ ತನ್ನ ಹೂಡಿಕೆಯನ್ನು ಬಹಳಷ್ಟು ಮಟ್ಟಿಗೆ ಹಿಂದೆಗೆದುಕೊಳ್ಳುತ್ತ ಹೋಗುತ್ತಿದೆ. ಇದರಿಂದ ಜನರಿಗೆ ಬರುವ ಆದಾಯ ಕಡಿಮೆಯಾಗುವುದಷ್ಟೇ ಅಲ್ಲದೆ, ಇರುವ ಆದಾಯವೂ ಹೀರಲ್ಪಡುತ್ತದೆ. ಬೆಲೆ ಏರಿಕೆಯ ಮೂಲಕ ಅದು ಆಗುತ್ತಿದೆ. ಈಗಿನ ಬೆಲೆ ಏರಿಕೆಯು ಇಂಧನ ಮತ್ತು ಶಕ್ತಿ ಸಂಪನ್ಮೂಲದ ಬೆಲೆ ಏರಿಕೆಯ ಮೂಲಕ ಆಗಿದೆ. ಇಂಧನ ಮತ್ತು ಶಕ್ತಿ ಸಂಪನ್ಮೂಲಗಳು ಆರ್ಥಿಕತೆಯ ನರಮಂಡಲದ ಹಾಗೆ. ಅಲ್ಲಿ ಬೆಲೆ ಏರಿಕೆಯಾದರೆ ಎಲ್ಲ ವಲಯಗಳಿಗೂ ಅದರ ಪರಿಣಾಮ ಉಂಟಾಗುತ್ತದೆ. ಜನ ಬಹಳ ತೊಂದರೆಗೆ ಒಳಗಾಗುತ್ತಾರೆ. ಕಷ್ಟಗಳಿಗೆ ಕಾರಣ ಏನು ಎನ್ನುವುದು ಯಾರಿಗೂ ಮುಖ್ಯವಾಗುವುದಿಲ್ಲ. ಕಷ್ಟವಾಗಬಾರದೆಂಬ ಅಪೇಕ್ಷೆ ಮಾತ್ರ ಇರುತ್ತದೆ.

ಖಾಸಗೀಕರಣದಲ್ಲಿ ಜನರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಬಂದು, ಜನರ ಖರೀದಿಗಳಿಗೆ ಕಡಿಮೆ ಬೆಲೆಯಾಗುವ ಸ್ಥಿತಿ ಇರುವುದಿಲ್ಲವೆಂದಲ್ಲ. ಆದರೆ ಆ ಸ್ಥಿತಿಯನ್ನು ಈಗ ಅರ್ಥೈಸುವುದು ಕಷ್ಟ. ಏಕೆಂದರೆ ಇಂದು ಭಾರತದ ಆರ್ಥಿಕತೆ ಅಂತರರಾಷ್ಟ್ರೀಯ ಆರ್ಥಿಕತೆಯ ಒಂದು ಭಾಗವೇ ವಿನಾ ಸ್ವತಂತ್ರ ಆರ್ಥಿಕತೆಯಲ್ಲ. ಬೇರೆ ರಾಷ್ಟ್ರಗಳ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಆ ವಸ್ತುಗಳಿಗೆ ಬೆಲೆ ಇಳಿಕೆಯಾಗುವ ಅನುಭವ ಈಗಾಗಲೇ ಆಗಿದೆ. ಭಾರತದ ಉತ್ಪನ್ನಗಳು ಬೇರೆ ರಾಷ್ಟ್ರಗಳ ಮಾರುಕಟ್ಟೆಯನ್ನು ಪ್ರವೇಶಿಸಿದಾಗಲೂ ಬೆಲೆ ಇಳಿಕೆಯಾಗಲು ಅವಕಾಶ ಇದೆ.ಆದರೆ ಅದು ಯಾವ ವಿಧಾನದಲ್ಲಿ ಬೇರೆ ರಾಷ್ಟ್ರಗಳ ಮಾರುಕಟ್ಟೆಗೆ ಪ್ರವೇಶಿಸುತ್ತದೆ ಎಂಬುದೂ ಮುಖ್ಯವಾಗುತ್ತದೆ. ಭಾರತೀಯ ಉತ್ಪಾದಕರೇ ತಮ್ಮ ವಸ್ತುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಒಯ್ದಾಗ ಬೆಲೆ ಇಳಿಕೆ ಆಗಬಹುದು. ಆದರೆ ವಿದೇಶಿ ಹೂಡಿಕೆದಾರರಿಗೆ ವಿಪುಲವಾಗಿ ಭಾರತದಲ್ಲಿ ಹೂಡಿಕೆ ಮಾಡಲು ಅವಕಾಶ ಇರುವುದರಿಂದ ಮಧ್ಯವರ್ತಿಗಳಾಗಿ ಅವರು ಇರುತ್ತಾರೆ. ಲಾಭಾಂಶವನ್ನು ಅವರು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಆಗ ಭಾರತೀಯ ಉತ್ಪನ್ನಗಳೇ ವಿದೇಶಗಳಿಗೆ ಹೆಚ್ಚು ರಫ್ತಾದರೂ ಬೆಲೆ ಇಳಿಕೆ ಆಗುವುದಿಲ್ಲ.

ಆಗ ಖಾಸಗಿ ಘಟಕಗಳೊಂದಿಗೆ ಹೋರಾಟಕ್ಕಿಳಿದು ಲಾಭಾಂಶವನ್ನು ತಮ್ಮ ಕಡೆಗೆ ಸೆಳೆದು ತರುವ ಚೌಕಾಸಿಯ ಸಾಮರ್ಥ್ಯ ಭಾರತೀಯರಿಗೆ ಇರಬೇಕಾಗುತ್ತದೆ. ಇದು ಸರ್ಕಾರದೊಂದಿಗೆ ಹೋರಾಟ ಮಾಡಿದಷ್ಟು ಸುಲಭವಾಗುವುದಿಲ್ಲ. ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ಬಹುತೇಕ ಈ ರೀತಿಯ ಸನ್ನಿವೇಶವಿತ್ತು. ಕಂಪನಿಯ ವಿರುದ್ಧ ನಡೆದ ಬಹಳಷ್ಟು ಹೋರಾಟಗಳು ಈ ಆರ್ಥಿಕ ಕಾರಣಗಳಿಂದಾಗಿಯೇ ನಡೆದವುಗಳಾಗಿದ್ದವು. 1858ರಲ್ಲಿ ಬ್ರಿಟಿಷ್ ಸರ್ಕಾರವೇ ಭಾರತದ ಆಡಳಿತವನ್ನು ತೆಗೆದುಕೊಂಡ ನಂತರ ಸರ್ಕಾರದ ಮಧ್ಯಪ್ರವೇಶ ಪ್ರಾರಂಭವಾಗಿ ಹಂತ ಹಂತವಾಗಿ ಆರ್ಥಿಕ ಅಭಿವೃದ್ಧಿಯ ಅನುಭವಗಳು ಜನರಿಗೆ ಆಗತೊಡಗಿದವು. ಜವಾಹರಲಾಲ್ ನೆಹರೂ ಅವರು ಅಳವಡಿಸಿಕೊಂಡ ಮಿಶ್ರ ಆರ್ಥಿಕ ನೀತಿಯು ಇಂದಿರಾ ಗಾಂಧಿಯವರ ಕಾಲದಲ್ಲಿ ಸ್ಪಷ್ಟವಾಗಿ ದುರ್ಬಲ ವರ್ಗಕ್ಕೆ ಅನುಕೂಲಕಾರಿಯಾಯಿತು.

ಈಗ ಆ ಹಂತವನ್ನು ದಾಟಿ ಬಂದಿದ್ದೇವೆ. ಒಂದೇ ವ್ಯತ್ಯಾಸವೆಂದರೆ, ಭಾರತೀಯರಿಗೆ ರಾಜಕೀಯ ಸ್ವಾತಂತ್ರ್ಯ ಇರುತ್ತದೆ. ಆದರೆ ಆರ್ಥಿಕ ಸ್ವಾತಂತ್ರ್ಯ ಬಹಳಷ್ಟು ಕಡಿಮೆಯಾಗುತ್ತದೆ. ಭಾರತೀಯರ ಬಳಿಯೇ ಇರುವ ಘಟಕಗಳು ಕೂಡ ಸಣ್ಣವು. ಅವುಗಳನ್ನು ಅಂತರರಾಷ್ಟ್ರೀಯ ಬಂಡವಾಳಿಗರು ನುಂಗಬಲ್ಲರು. ಈ ಸ್ಥಿತಿಯನ್ನು ನಿಭಾಯಿಸುವ ಸವಾಲು ಇದೆ. ಅದರಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ, ಭೂ ಒಡೆತನ ಯಾವುದೇ ಕಂಪನಿಗಳ ಸುಪರ್ದಿಗೂ ಹೋಗದ ಹಾಗೆ ನೋಡಿಕೊಳ್ಳಬೇಕು. ಭೂ ಒಡೆತನ ಭಾರತೀಯರ ಕೈಯಲ್ಲಿರುವ ತನಕ ಆರ್ಥಿಕತೆಯನ್ನು ಬಾಹ್ಯ ಶಕ್ತಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದು. ಚರಕದಿಂದ ನೂಲು ತೆಗೆದು ಬಟ್ಟೆ ಮಾಡುವ ಮೂಲಕ ಬ್ರಿಟಿಷರ ಬಟ್ಟೆ ಗಿರಣಿಯ ಉತ್ಪಾದನೆಗಳು ಭಾರತದಲ್ಲಿ ಮಾರಾಟವಾಗದೆ ಬ್ರಿಟಿಷ್ ಆರ್ಥಿಕತೆಯನ್ನು ಸುಸ್ತು ಹೊಡೆಸಿದ ಗಾಂಧೀಜಿಯವರ ತಂತ್ರಗಾರಿಕೆಯ ಅರಿವಿರಬೇಕು. ರಾಜಕೀಯ ಸ್ವಾತಂತ್ರ್ಯ ಇರುವುದರಿಂದ ಜಾಗತೀಕರಣದ ಒಡಂಬಡಿಕೆಯ ಒಳಗೆಯೇ ಭಾರತೀಯ ಆರ್ಥಿಕತೆಯನ್ನು ಪೋಷಿಸುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲು ಅವಕಾಶವಿದೆ. ಆದರೆ ಜನರಿಗೆ ಹಿತಕಾರಿಯಾದ ಆರ್ಥಿಕತೆಯ ಅನುಭವ ಆಗಬೇಕಾದರೆ ಸರ್ಕಾರದ ಮಧ್ಯಪ್ರವೇಶದ ಅಗತ್ಯ ಇದ್ದೇ ಇದೆ.

ನಮ್ಮ ಸರ್ಕಾರಗಳು, ಸುಮಾರು 38 ಕೋಟಿ ಜನರ ಆರ್ಥಿಕತೆಯಾದ ಅಮೆರಿಕದ ಆರ್ಥಿಕತೆಯ ಮಾದರಿಯಲ್ಲಿ ಬರೀ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಿದರೆ 130 ಕೋಟಿ ಜನರ ಭಾರತದ ಆರ್ಥಿಕತೆಯ ನಿರ್ವಹಣೆ ಆಗುವುದಿಲ್ಲ. ಸರ್ಕಾರವು ಉದ್ಯಮಗಳನ್ನು ನಡೆಸದೇ ಇದ್ದರೆ ಅದಕ್ಕೆ ಬರುವ ವರಮಾನದ ಪ್ರಧಾನ ಭಾಗ ಸಾರ್ವಜನಿಕ ತೆರಿಗೆ ಮಾತ್ರ. ಭಾರತ ಈಗಾಗಲೇ ಜಗತ್ತಿನಲ್ಲಿ ಅತಿ ಹೆಚ್ಚು ತೆರಿಗೆ ಇರುವ ರಾಷ್ಟ್ರಗಳಲ್ಲಿ ಒಂದು. ಇನ್ನಷ್ಟು ತೆರಿಗೆ ಏರಿಸಬೇಕಾದರೆ ಜನರ ಆದಾಯ ಏರಿಕೆ ಆಗಬೇಕು. ಆದಾಯ ಹೆಚ್ಚಳವಾಗಲು ಉದ್ಯೋಗ ಸೃಷ್ಟಿಯಾಗಬೇಕು. ಉದ್ಯೋಗ ಹೆಚ್ಚಬೇಕಾದರೆ ಉತ್ಪಾದನೆ ಜಾಸ್ತಿಯಾಗಬೇಕು. ಉತ್ಪಾದನೆ ಜಾಸ್ತಿಯಾಗಬೇಕಾದರೆ ಪರಿಣಾಮಕಾರಿ ಬೇಡಿಕೆ ಸೃಷ್ಟಿಯಾಗಬೇಕು. ಬೇಡಿಕೆ ಸೃಷ್ಟಿಯಾಗಬೇಕಾದರೆ ಜನರ ಬಳಿ ಆದಾಯ ಸಂಚಯವಾಗಬೇಕು. ಜನರ ಬಳಿ ಹಣ ಹೆಚ್ಚಳವಾಗುವಂತಹ ಯಾವುದೇ ಯೋಜನೆಗಳೂ ಡಿಮಾನಿಟೈಸೇಷನ್‌ನ ನಂತರ ಬಂದಿಲ್ಲ. ಅಂದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ತೆರಿಗೆ ಹೆಚ್ಚಳ ಮಾಡಲು ಆಗುವುದಿಲ್ಲ. ಸರ್ಕಾರದ ವರಮಾನದ ಮೂಲಗಳೇ ಕಡಿಮೆಯಾದಾಗ ಜನಕಲ್ಯಾಣ ಕಾರ್ಯಕ್ರಮವೂ ಸಾಧ್ಯವಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ, ರಾಮಕೃಷ್ಣ ಹೆಗಡೆಯವರು ಬಹಳ ಹಿಂದೆ ಪ್ರಸ್ತಾಪಿಸಿದ್ದ, ‘ಬಲಿಷ್ಠ ರಾಜ್ಯ- ಸಶಕ್ತ ಕೇಂದ್ರ’ ಪರಿಕಲ್ಪನೆಯ ಆಡಳಿತ ಹೆಚ್ಚು ಉಪಯುಕ್ತವಾಗಬಹುದು. ಒಕ್ಕೂಟ ಸರ್ಕಾರವು ವಿದೇಶಾಂಗ, ರಕ್ಷಣೆ, ಸಂಪರ್ಕದಂತಹ ಕೆಲವು ವಿಷಯಗಳನ್ನು ಇರಿಸಿಕೊಂಡು ಉಳಿದವನ್ನು ರಾಜ್ಯಗಳಿಗೆ ಬಿಡುತ್ತಾ ಹೋದರೆ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ರಾಜ್ಯಗಳು ಆರ್ಥಿಕತೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಲು ಆಗುತ್ತದೆ. ಆಗ ಆರ್ಥಿಕ ಅಭಿವೃದ್ಧಿಯ ಹಿತಕರ ಅನುಭವಗಳು ಜನರಿಗೆ ಆಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.