ADVERTISEMENT

ಟಿ.ಎನ್‌.ವಾಸುದೇವಮೂರ್ತಿ ಲೇಖನ: ಇನ್ನು ಕೊಂದವರು ಉಳಿವರೇ...?

ಮನುಷ್ಯ ಬದುಕು ಧರ್ಮಾಂಧರ ಸೀಮಿತ ಗ್ರಹಿಕೆಗೆ ನಿಲುಕುವಷ್ಟು ಸರಳವಾದುದಲ್ಲ

ಡಾ.ಟಿ.ಎನ್‌.ವಾಸುದೇವ ಮೂರ್ತಿ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
   

ಧರ್ಮ, ಸಿದ್ಧಾಂತ, ಸಂಕೇತಗಳ ಹೆಸರಿನಲ್ಲಿ ನಡೆಯುವ ಹಿಂಸೆಗೆ ಮನುಷ್ಯ ನಾಗರಿಕತೆಯಷ್ಟೇ ಪ್ರಾಚೀನ ಇತಿಹಾಸವಿದೆ. ಯಾವುದೇ ಒಂದು ಮತ- ಸಿದ್ಧಾಂತ, ಐಡಿಯಾಲಜಿಯು ದಬ್ಬಾಳಿಕೆಗೆ, ಹಿಂಸಾಚಾರಕ್ಕೆ ಇಳಿದಾಗ ಉಳಿದ ಮತ-ಸಿದ್ಧಾಂತ, ಐಡಿಯಾಲಜಿಗಳೂ ಅದರಿಂದ ಪ್ರೇರಣೆಗೊಂಡು ಅದೇ ಹಾದಿ ಹಿಡಿಯುವುದು ಲೋಕಾರೂಢಿ.

ಸುದ್ದಿ ಮಾಹಿತಿಗಳು ಬಹಳ ತ್ವರಿತವಾಗಿ ಹರಡುವ ಇಂದಿನ ಯುಗದಲ್ಲಂತೂ ಹಿಂಸೆ, ಅಸಹಿಷ್ಣುತೆಯು ಬಹುಸುಲಭವಾಗಿ ವ್ಯಾಪಿಸುತ್ತವೆ. ‘ಪ್ರಪಂಚದಲ್ಲಿ ಮತ್ತೊಬ್ಬನನ್ನು ಕೊಂದು ರಕ್ಷಿಸಿಕೊಳ್ಳಬೇಕಾದ ಧರ್ಮ ಇರುತ್ತದೆಯೇ?’ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪ್ರಶ್ನಿಸಿದ್ದರು.

ಮೊದಲಿಗೆ ‘ನಾವು’ ಮತ್ತು ‘ಅವರು’ ಎಂಬ ಪ್ರತ್ಯೇಕತಾ ಭಾವನೆಯು ಹಿಂಸೆಯ ಬೀಜವಾಗಿದೆ. ಇದು ಮನೆಯವರು, ಕುಟುಂಬದವರು ಕಲಿಸುವ ಮೊದಲ ಪಾಠವಾಗಿದೆ. ‘ನಮ್ಮದು ಇಂತಹ ಜಾತಿ, ಧರ್ಮ, ಪಂಗಡ’ ಎಂದು ಹೇಳಿಕೊಡುವ ಪ್ರತಿಯೊಬ್ಬ ತಾಯ್ತಂದೆಯೂ ‘ನಾವು ಬೇರೆ, ಹೊರಗಿನ ಸಮಾಜದ ಜನ ಬೇರೆ’ ಎಂಬ ಪ್ರತ್ಯೇಕತಾ ಭಾವವನ್ನು ಮಗುವಿನೊಳಗೆ ತುಂಬುತ್ತಿರುತ್ತಾರೆ. ‘ಈ ಸಮಾಜ ಬೇರೆಯಲ್ಲ, ನಾವು ಹೋದ ಮೇಲೆ ಈ ಸಮಾಜವೇ ನಿನ್ನನ್ನು ಸಾಕುವುದು. ಆದ್ದರಿಂದ ತಾಯ್ತಂದೆಯರ ಬಗ್ಗೆ ಇರುವಷ್ಟೇ ಆದರ ಸಮಾಜದ ಬಗೆಗೂ ಇರಬೇಕು’ ಎಂಬ ಶಿಕ್ಷಣವನ್ನು ಮಕ್ಕಳಿಗೆ ಹಿರಿಯರೆನಿಸಿದವರು ನೀಡಬೇಕಾಗುತ್ತದೆ.

ADVERTISEMENT

ಎರಡನೆಯದಾಗಿ, ನಮ್ಮ ಧರ್ಮ, ಸಿದ್ಧಾಂತಗಳು ಸಾಧ್ಯವಾದಷ್ಟೂ ಅನ್ಯರ ಟೀಕೆ, ವಿಮರ್ಶೆಗೆ ಒಡ್ಡಿಕೊಳ್ಳಲಿ ಎಂಬ ಮನೋಧರ್ಮ ಇಂದಿನ ಅಗತ್ಯವಾಗಿದೆ. ಭಾರತ ಸಾವಿರಾರು ವರ್ಷಗಳ ವಿದೇಶಿ ದಾಳಿ, ಆಕ್ರಮಣಗಳಿಗೆ ತುತ್ತಾದರೂ ಭಾರತೀಯತೆಗೆ ಅದರಿಂದ ಹಾನಿಯಾಗಲಿಲ್ಲ. ಇಲ್ಲಿ ಬಹಳಷ್ಟು ದಬ್ಬಾಳಿಕೆ, ವಿಧ್ವಂಸಕತೆ ನಡೆದಿವೆ, ಇಲ್ಲವೆಂದಲ್ಲ. ಆದರೆ ಅದರಿಂದ ಬೇರೆ ಭೂಭಾಗಗಳ ಸಂಸ್ಕೃತಿ, ಜನಾಂಗಗಳು ಪೂರ್ತಿಯಾಗಿ ನಾಶವಾದ ಹಾಗೆ ನಮ್ಮಲ್ಲಿ ಆಗಲಿಲ್ಲ. ಅದಕ್ಕೆ ಭಾರತೀಯತೆಯಲ್ಲಿರುವ ಬಹುತ್ವ ಮತ್ತು ಅಂತರ್‌ವೈರುಧ್ಯ ಕಾರಣವಾಗಿದೆ.

ಭಾರತೀಯತೆಯಲ್ಲಿ ವೇದಗಳನ್ನು ಒಪ್ಪುವ ಧಾರೆಗಳೂ ಉಂಟು, ಒಪ್ಪದ ಧಾರೆಗಳೂ ಉಂಟು. ದೇವರನ್ನು ಸಗುಣ-ನಿರ್ಗುಣ ಎರಡೂ ರೂಪಗಳಲ್ಲಿ ಪೂಜಿಸುವ ಪಂಥಗಳುಂಟು. ದೇವರನ್ನೇ ನಿರಾಕರಿಸುವ ಶ್ರಮಣ ಪರಂಪರೆಗಳುಂಟು. ಎಲ್ಲವೂ ಪರಸ್ಪರ ಟೀಕಿಸುತ್ತಲೇ, ಒಂದನ್ನೊಂದು ವಿಮರ್ಶಿಸುತ್ತಲೇ ಸಾವಿರಾರು ವರ್ಷಗಳಿಂದ ಸಹಬಾಳ್ವೆ ಮಾಡಿಕೊಂಡು ಬಂದಿವೆ. ಆದರಿಂದು ಆಕ್ರಮಣಕಾರಿ ಬಲಪಂಥೀಯ ವಿಚಾರಗಳ ಪ್ರಚಾರದಿಂದಾಗಿ ಭಾರತೀಯತೆಯ ಈ ಮೂಲ ಗುಣದೊಂದಿಗೆ ನಾವು ಸಂಪರ್ಕ ಕಳೆದುಕೊಳ್ಳುವ ಆತಂಕದ ಸನ್ನಿವೇಶದಲ್ಲಿದ್ದೇವೆ.

ಮೂರನೆಯದಾಗಿ, ಅನ್ಯಕೋಮಿನವರನ್ನು ಅವರು ಮನುಷ್ಯರೇ ಅಲ್ಲ ಎಂಬಂತೆ ಬಿಂಬಿಸುವ ಪ್ರವೃತ್ತಿ ಹಿಂಸೆಗೆ ಮತ್ತೊಂದು ಮೂಲವಾಗಿದೆ. ಇದು, ಮುಖ್ಯವಾಗಿ ಸಾಮಾಜಿಕ ಜಾಲತಾಣಗಳ ಕೆಲವು ಕಿಡಿಗೇಡಿಗಳಿಂದ ಮತ್ತು ಸ್ವಾರ್ಥಿಗಳಾದ ಕೆಲವು ಧಾರ್ಮಿಕ ನಾಯಕರಿಂದ ನಡೆಯುತ್ತದೆ. ಮೊನ್ನೆ ಉತ್ತರಪ್ರದೇಶದಲ್ಲಿ ಒಂದು ಕೋಮಿನ ಜನ ಅನ್ಯಕೋಮಿನ ಬಗ್ಗೆ ಅವಹೇಳನಕಾರಿ ಪೋಸ್ಟರುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನ ಮಾಡಿದಾಗ ತಕ್ಷಣವೇ ಪೊಲೀಸರು ಕ್ರಿಯಾಶೀಲರಾಗಿ ಆ ಪೋಸ್ಟರುಗಳನ್ನು ತೆರವುಗೊಳಿಸಿದರು. ಯಾವುದೇ ಸಮುದಾಯದ ಜನ, ಅಮಾನವೀಯವಾಗಿ ವರ್ತಿಸಿದಾಗ ಅದನ್ನು ನಮ್ಮ ಕಾನೂನು ಕಟ್ಟಲೆಗಳು ಸಮರ್ಥವಾಗಿ ತಹಬಂದಿಗೆ ತರಬಲ್ಲವು. ಅದನ್ನು ನಿಯಂತ್ರಿಸಲು ಮತ್ತೊಂದು ಕೋಮಿನವರು ಅದೇ ರಾಕ್ಷಸತ್ವವನ್ನು ಪ್ರದರ್ಶಿಸಬೇಕಾದ ಅಗತ್ಯವಿಲ್ಲ. ಅಲ್ಲದೆ ಯಾವುದೇ ಒಂದು ಗುಂಪು ಅಥವಾ ಘಟನೆ ಒಂದು ಇಡೀ ಸಮುದಾಯವನ್ನು ಪ್ರತಿನಿಧಿಸಲಾರದು.

ಅಲ್ಲೆಲ್ಲೋ ಕೆಲವು ಧೂರ್ತರು ಬಂದೂಕು ಹಿಡಿದು ಬೆದರಿಸಬಹುದು, ಇಲ್ಲಿಯೂ ಕೆಲವರು ತ್ರಿಶೂಲ ಝಳಪಿಸಬಹುದು. ಹಾಗೆಂದು ಇಂಥ ಹಿಂಸಾ ಲೋಲುಪರೇ ಯಾವುದೇ ಧರ್ಮ ಅಥವಾ ಸಮಸ್ತ ಸಮುದಾಯದ ಪ್ರತಿನಿಧಿಗಳೆಂದು ಭಾವಿಸಲಾಗದು.

ಮನುಷ್ಯನು ಗುಣ-ದೋಷಗಳೆರಡರ ಸಮುಚ್ಚಯವಾದ ಕಾರಣ, ಪ್ರಾಚೀನ ಧರ್ಮಗ್ರಂಥಗಳು ಪ್ರಾಚೀನ ಮನುಷ್ಯ ಕುಲಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಆದ್ದರಿಂದಲೇ ಪ್ರಾಚೀನ ಧರ್ಮಗ್ರಂಥಗಳಲ್ಲಿ ಉದಾತ್ತ ವಿಚಾರಗಳೂ ಕಾಣಿಸುತ್ತವೆ, ಹಾಗೆಯೇ ಅಮಾನವೀಯವಾದ ವಿಚಾರಗಳೂ ಸೇರಿಕೊಂಡಿರುತ್ತವೆ. ಉದಾಹರಣೆಗೆ, ಜಗತ್ತಿನ ಎಲ್ಲ ಧರ್ಮಗ್ರಂಥಗಳೂ ಒಂದಲ್ಲ ಒಂದು ರೂಪದಲ್ಲಿ ಯುದ್ಧವನ್ನು, ಹಿಂಸಾಚಾರವನ್ನು ಅನುಮೋದಿಸುತ್ತವೆ, ಹೆಣ್ಣನ್ನು ಮತ್ತು ಜಾತಿ-ಜನಾಂಗ ವ್ಯವಸ್ಥೆಯನ್ನು ಪವಿತ್ರವಾಗಿ ಇರಿಸಿಕೊಳ್ಳಬೇಕು ಎಂದು ಆದೇಶಿಸುತ್ತವೆ. ಜೊತೆಗೆ ಅಹಿಂಸೆ, ಸಮಾನತೆ, ಶಾಂತಿ ಪ್ರೀತಿಗಳನ್ನೂ ಬೋಧಿಸುತ್ತವೆ. ಮನುಷ್ಯ ಮನಸ್ಸಿನ ವೈರುಧ್ಯಗಳು ಧರ್ಮಗ್ರಂಥಗಳಲ್ಲೂ ಅಡಕಗೊಂಡಿರುತ್ತವೆ. ಹಾಗಾಗಿ ಯಾವುದೇ ಧರ್ಮಗ್ರಂಥವನ್ನು ಪ್ರಮಾಣ ಗ್ರಂಥದಂತೆ ಪರಿಭಾವಿಸುವ ಬದಲಾಗಿ ಪ್ರಾಚೀನ ಜನಪದರ ಮನೋವೃತ್ತಿಗಳ ಒಂದು ಸಮಗ್ರ ದಾಖಲೆಯಂತೆ ಪರಿಭಾವಿಸುವುದು ಸೂಕ್ತವೆನಿಸುತ್ತದೆ. ಅಷ್ಟಕ್ಕೂ ಮತ್ತೊಬ್ಬನನ್ನು ಹತ್ಯೆ ಮಾಡಬಾರದು ಎಂಬ ಸರಳವಾದ ತಿಳಿವಳಿಕೆಯನ್ನು ಹೊಂದಲು ಧರ್ಮಗ್ರಂಥಗಳನ್ನು ಆಶ್ರಯಿಸಬೇಕೇ?

ಸಮಾಜದ ಎಲ್ಲ ಸಮಸ್ಯೆಗಳಿಗೂ ಧರ್ಮದಲ್ಲಿ ಪರಿಹಾರವಿದೆ ಎಂಬ ಅಪಕಲ್ಪನೆಯೂ ಹಿಂಸೆಗೆ ಮತ್ತೊಂದು ಕಾರಣವಾಗಿದೆ. ದೇಶಭಕ್ತಿ, ಸಾಮಾಜಿಕ ನ್ಯಾಯ, ನೈತಿಕತೆ, ವಿಜ್ಞಾನ ಹೀಗೆ ಎಲ್ಲದಕ್ಕೂ ಧರ್ಮದ ಲೇಪನ ಮಾಡಲಾಗುತ್ತದೆ. ಧರ್ಮದ ಮೇಲೆ ಅಷ್ಟೆಲ್ಲ ಹೊರೆ ಹೊರಿಸುವುದು ತರವಲ್ಲ. ಸಂಸಾರ ಭಾರದಿಂದ ಬಳಲಿರುವ ಮನುಷ್ಯನಿಗೆ ಧರ್ಮ ಹಗುರವಾಗಿ ಬದುಕುವ ಮಾರ್ಗಗಳನ್ನು ತೋರಿಸಬಲ್ಲುದೇ ವಿನಾ ಲೋಕದ ಎಲ್ಲ ಸಮಸ್ಯೆಗಳಿಗೂ ಧರ್ಮದಲ್ಲಿ ಪರಿಹಾರ ಹುಡುಕುವುದು ಜಾಣ್ಮೆಯಲ್ಲ. ಆಗ ಶಾಲೆಗೆ ಹೋಗುವ ಹೆಣ್ಣುಮಕ್ಕಳ ಮೇಲೆ ನಿಷೇಧ ಹೇರುವುದೂ ಧಾರ್ಮಿಕತೆಯಾಗುತ್ತದೆ. ಮತ್ತೊಬ್ಬನನ್ನು ಕೊಂದು ದೇವರ ಪ್ರೀತಿ ಗಳಿಸಬೇಕೆಂಬ ಹುಚ್ಚುತನವೂ ಧಾರ್ಮಿಕತೆಯಾಗುತ್ತದೆ.

ಧರ್ಮದಲ್ಲಿ ನಿಜವಾಗಿಯೂ ಯೋಗ್ಯವಾದ ಪರಿಹಾರ ಗಳು ಇದ್ದಿದ್ದರೆ ದೇಶ ವಿಭಜನೆಯ ಸಂದರ್ಭದಲ್ಲಿ ಅಷ್ಟು ಘೋರವಾದ ಕೋಮು ಹಿಂಸಾಚಾರ ನಡೆಯುತ್ತಿರಲಿಲ್ಲ. ಪರಿಹಾರವಿದೆ ಎಂಬ ತಪ್ಪು ಕಲ್ಪನೆಯೇ ಅಂದಿನ ಕೋಮು ಹಿಂಸಾಚಾರದ ಹಾಗೂ ಇಂದಿಗೂ ಮುಂದುವರಿಯುತ್ತಿರುವ ವೈಷಮ್ಯದ ಮೂಲವಾಗಿದೆ.

ಧರ್ಮಾಂಧನೊಬ್ಬನು ತಾನು ದೇವರಿಗಾಗಿ ಹಿಂಸಾಚಾರಕ್ಕೆ ಇಳಿದಿದ್ದೇನೆ ಎಂದು ಹೇಳಿಕೊಳ್ಳಬಹುದು. ಆದರೆ ಒಳಹೊಕ್ಕು ನೋಡಿದಾಗ ಅವನ ಶೈಕ್ಷಣಿಕ ಮಟ್ಟ, ಸಾಮಾಜಿಕ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಬೌದ್ಧಿಕ ಪೂರ್ವಗ್ರಹಗಳು ಅವನನ್ನು ಅಂತಹ ಹಿಂಸಾ
ಚಾರದಲ್ಲಿ ತೊಡಗಿಸಿವೆ ಎಂಬುದು ತಿಳಿಯದಿರದು. ಮನುಷ್ಯ ಬದುಕು ಧರ್ಮಾಂಧರ ಸೀಮಿತ ಗ್ರಹಿಕೆ, ತೀರ್ಮಾನಗಳಿಗೆ ನಿಲುಕುವಷ್ಟು ಸರಳವಾದುದಲ್ಲ.

ಸಾಮಾಜಿಕ ಮಾಧ್ಯಮಗಳಲ್ಲೇ ವ್ಯವಹರಿಸುವ ಇಂದಿನ ಆಧುನಿಕ ಯುಗದಲ್ಲಿ ಹತ್ಯೆಗೆ ಹರಿತವಾದ ಖಡ್ಗವೇ ಬೇಕಿಲ್ಲ, ವ್ಯಕ್ತಿಯ ಚಾರಿತ್ರ್ಯ ಹನನಕ್ಕೆ ಹರಿತವಾದ ನಾಲಗೆ, ಲೇಖನಿಯೂ ಸಾಕಾಗುತ್ತದೆ. ಇದಕ್ಕೆ ಅಂತರ್ಜಾಲದ ಭಾಷೆಯಲ್ಲಿ ‘ಟ್ರೋಲಿಂಗ್‌’ ಎಂಬ ಹೊಸ ಪದವನ್ನೇ ಟಂಕಿಸಲಾಗಿದೆ. ಬಂದೂಕು, ತ್ರಿಶೂಲಗಳನ್ನು ಹಿರಿವ ಕಿರಾತಕರನ್ನು ಬದಲಾಯಿಸಬಹುದು. ಆದರೆ ಟ್ರೋಲಿಂಗ್‌ ಮಾಡಿ ಹಣಿಯಲೆತ್ನಿಸುವ ಬುದ್ಧಿವಂತರನ್ನು ತಿದ್ದಲಾಗದು. ಮಾತುಕತೆಗಿಂತ ತನ್ನ ನಿಲುವನ್ನು ವಿಜೃಂಭಿಸುವುದೊಂದೇ ಉದ್ದೇಶವಾಗಿಬಿಟ್ಟರೆ ಇವರಿಗೂ, ಮೂಲಭೂತವಾದಿಗಳಿಗೂ ಯಾವ ವ್ಯತ್ಯಾಸವಿರುತ್ತದೆ?

ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರನ್ನು ಮೇಯುತ್ತಿದ್ದ ದೃಶ್ಯವನ್ನು ಕಂಡ ಬಸವಣ್ಣ ‘ಕೊಂದವರು ಉಳಿಯಬಲ್ಲರೇ, ಕೂಡಲಸಂಗಮದೇವ?’ ಎಂದು ಕೇಳುತ್ತಾನೆ. ಮತ್ತೊಬ್ಬನನ್ನು ಇಲ್ಲವಾಗಿಸಿ ಜಯಶಾಲಿಯಾಗುವೆನೆಂದು ಬೀಗುವ ವ್ಯಕ್ತಿಗೆ ತನ್ನ ಹೆಡೆದಲೆಯ ಹಿಂದೆಯೂ ವಿಧಾತನ ಹರಿತವಾದ ಖಡ್ಗ ಸಿದ್ಧವಾಗಿದೆ. ಈ ನಶ್ವರ ಬದುಕಿನಲ್ಲಿ ಯಾವ ಕ್ಷಣದಲ್ಲಾದರೂ ತನ್ನ ತಲೆದಂಡವಾಗಬಹುದು ಎಂಬ ಅರಿವು ಇರಬೇಕಾಗುತ್ತದೆ. ಆಗ ಮಾತ್ರ ಈ ಲೋಕದಲ್ಲಿ ವಿನಯಶೀಲರಾಗಿ ಬಾಳಲು ಸಾಧ್ಯ.

–ಡಾ. ಟಿ.ಎನ್‌.ವಾಸುದೇವಮೂರ್ತಿ

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿ ನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.