ADVERTISEMENT

ವಿಶ್ಲೇಷಣೆ: ಪರೀಕ್ಷೆ ಹಾಗೂ ಸಾಮಾಜಿಕ ನ್ಯಾಯ

ಮಕ್ಕಳಿಗೆ ಕಲಿಕೆಯಲ್ಲಿ ಉಂಟಾಗಿರುವ ನಷ್ಟ ತುಂಬಿಕೊಡಲು ಹೊಸ ಬಗೆಯ ಕಾರ್ಯತಂತ್ರ ರೂಪಿಸಬೇಕಿದೆ

ಡಾ.ನಿರಂಜನಾರಾಧ್ಯ ವಿ.ಪಿ
Published 9 ಜುಲೈ 2021, 19:31 IST
Last Updated 9 ಜುಲೈ 2021, 19:31 IST
   

ರಾಜ್ಯ ಸರ್ಕಾರವು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದುಗೊಳಿಸಿ ಹತ್ತನೇ ತರಗತಿ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಗಳನ್ನು ನಡೆಸುತ್ತಿರುವುದರ ಔಚಿತ್ಯ, ತೀರ್ಮಾನದ ಹಿಂದಿರುವ ತರ್ಕ ಏನೆಂಬುದರ ಬಗ್ಗೆ ರಾಜ್ಯದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ಈ ತೀರ್ಮಾನವನ್ನು ಸಾಂವಿಧಾನಿಕ, ಶಿಕ್ಷಣಶಾಸ್ತ್ರ ಹಾಗೂ ಕಲಿಕಾ ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯವಿದೆ.

ಭಾರತದ ಸಂವಿಧಾನವು ಸಮಾನ ಅವಕಾಶ ಮತ್ತು ತಾರತಮ್ಯರಹಿತ ಕಾನೂನು, ನೀತಿ ಹಾಗೂ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸುವ ಘನ ಉದ್ದೇಶವನ್ನು ಹೊಂದಿದೆ. ಅದರ ಭಾಗವಾಗಿ ಶಿಕ್ಷಣ ಹಕ್ಕು ಕಾಯ್ದೆಯು ಒಂದು ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 220 ಕಲಿಕಾ ದಿನಗಳು ಹಾಗೂ 1,000 ಗಂಟೆಗಳ ಬೋಧನಾ ಅವಧಿಗಳು ಇರಬೇಕೆಂದು ನಿಗದಿಗೊಳಿಸಿದೆ. ನಮಗೆ ತಿಳಿದಿರುವಂತೆ 2020– 21ನೇ ಶೈಕ್ಷಣಿಕ ವರ್ಷದಲ್ಲಿ ಇದು ಸಾಧ್ಯವಾಗಿಲ್ಲ.

ಒಂದೆಡೆ, ಸಮಾಜದಶೇಕಡ 10-15ರಷ್ಟು ಅನುಕೂಲಸ್ಥರ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಮತ್ತು ತಮ್ಮ ವೈಯಕ್ತಿಕ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯ ಹಿನ್ನೆಲೆಯಲ್ಲಿ ಕಲಿಕಾ ಏರ್ಪಾಡುಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿದೆ. ಮತ್ತೊಂದೆಡೆ, ಸಾಮಾಜಿಕವಾಗಿ, ಆರ್ಥಿಕ ವಾಗಿ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಶೇಕಡ 85ರಷ್ಟು ಮಕ್ಕಳು ಸೂಕ್ತ ಕಲಿಕಾ ಏರ್ಪಾಡುಗಳಿಲ್ಲದೆ ಕಲಿಕೆಯಿಂದ ವಂಚಿತರಾದರು ಎಂಬುದು ಕಟುಸತ್ಯ. ಪರಿಸ್ಥಿತಿ ಹೀಗಿರುವಾಗ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಹಟ ತೊಟ್ಟಿರು ವುದು ಅಸಾಂವಿಧಾನಿಕ ಮಾತ್ರವಲ್ಲದೆ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಕೊಡಲಿ ಪೆಟ್ಟು.

ADVERTISEMENT

ನೋಮ್‌ ಚಾಮ್ಸ್ಕಿ ಹೇಳುವಂತೆ, ಪರೀಕ್ಷೆಗಾಗಿ ಕಲಿಸುವುದು ಒಂದು ಕೆಟ್ಟ ಶೈಕ್ಷಣಿಕ ಸಂಪ್ರದಾಯ. ಅದನ್ನು ಕೊಂಚ ವಿಸ್ತರಿಸಿ ಹೇಳುವುದಾದರೆ, ಕಲಿಸದೇ ಪರೀಕ್ಷೆ ನಡೆಸುವುದು ಅವಿವೇಕತನ. ಸತ್ಯ ಹೀಗಿದ್ದಾಗ್ಯೂ, ‘ಪರೀಕ್ಷೆ ನಡೆಸದಿದ್ದರೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹೇಗೆ? ಪರೀಕ್ಷಾ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಪರೀಕ್ಷೆಯನ್ನು ನಡೆಸಬೇಕು’ ಎಂಬ ವಾದವನ್ನು ಸರ್ಕಾರ ಹಾಗೂ ಕೆಲವು ಶಿಕ್ಷಣ ತಜ್ಞರು ಮುಂದಿಟ್ಟಿದ್ದಾರೆ. ಪರೀಕ್ಷಾ ಪಾವಿತ್ರ್ಯದ ಬಗ್ಗೆ ಬಲವಾಗಿ ಪ್ರತಿಪಾದಿಸುವ ಇವರು, ಕಲಿಕಾ ಪಾವಿತ್ರ್ಯ ಹಾಗೂ ಎಲ್ಲರಿಗೂ ಸಮಾನವಾಗಿ ಕಲಿಸಬೇಕೆಂಬ ಪಾವಿತ್ರ್ಯದ ಬಗ್ಗೆ ಮಾತನಾಡುವುದಿಲ್ಲ. ಎಲ್ಲಾ ಮಕ್ಕಳು ಕಲಿಯಲು ಸಮಾನವಾಗಿ ಶಕ್ತರಿದ್ದು, ನಾವು ಒದಗಿಸಿಕೊಡುವ ಅವಕಾಶಗಳು ಹಾಗೂ ಬೆಂಬಲಿತ ವ್ಯವಸ್ಥೆ ಅದರ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದವನ್ನು ಸಹ ಅವರು ಒಪ್ಪುವುದಿಲ್ಲ. ಅವರ ಈ ವಾದ ಹೊಸದೇನೂ ಅಲ್ಲ. ಎಷ್ಟೇ ಆದರೂ ನಮ್ಮ ಇಂದಿನ ಈ ಚಿಂತನೆಯ ಪಳೆಯುಳಿಕೆಯ ಮೂಲ ವರ್ಣಾಶ್ರಮವಲ್ಲವೇ!

ಅಸಮಾನತೆ ಹಾಗೂ ತಾರತಮ್ಯದ ತವರಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಪ್ರತಿಭೆಗಳನ್ನು ಪ್ರೋತ್ಸಾ ಹಿಸಲು ಹೊರಟಿರುವುದರ ಹಿಂದೆ ಒಂದು ಗೋಪ್ಯ ಕಾರ್ಯಸೂಚಿ ಅಡಗಿದೆ. ಹೀಗಾಗಿ, ಉದ್ದೇಶಿತ ಪರೀಕ್ಷೆಯು ಸಾಮಾಜಿಕ ನ್ಯಾಯ ಒದಗಿಸುವ ಬದಲು ಉಳ್ಳವರು ಹಾಗೂ ಇಲ್ಲದವರ, ಮೇಲ್ವರ್ಗ ಹಾಗೂ ಕಡು ಬಡವರ ನಡುವಿನ ಕಂದರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ, ಈಗಾಗಲೇ ಆರ್ಥಿಕ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇಕಡ 10ರಷ್ಟು ಜನರು ಶೇಕಡ 90ರಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡಿರುವ ಹಾಗೂ ಶೇಕಡ 90ರಷ್ಟು ಜನರು ಶೇಕಡ 10ರಷ್ಟು ಅವಕಾಶಗಳಿಗೆ ಪರಿತಪಿಸುತ್ತಿರುವ ಸಾಮಾಜಿಕ- ಆರ್ಥಿಕ ವ್ಯವಸ್ಥೆಯನ್ನು ಮುಂದುವರಿಸುವ ಮೂಲಕ ಕೆಲವೇ ಜನರ ಹಿತಾಸಕ್ತಿ ಯನ್ನು ಕಾಪಾಡುವ ಕಾರ್ಯತಂತ್ರ ಇದರ ಹಿಂದಿದೆ. ಎಲ್ಲರನ್ನೂ ಪಾಸ್‌ ಎಂದು ಹೇಳುತ್ತಲೇ, ಕೆಲವರು ಮಾತ್ರ ಹೆಚ್ಚು ಪ್ರತಿಭಾವಂತರು ಎನ್ನುವುದರ ಹಿಂದೆ ಒಂದು ಮನೋಧರ್ಮ ಅಡಗಿದೆ. ಹೀಗಾಗಿ, ಇದು ಯಾರ ಪರವಾದ ಪರೀಕ್ಷೆ, ಇದರ ಹಿಂದಿರುವ ಮನೋಧರ್ಮ ಏನೆಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಈ ಸಂಕಷ್ಟದ ಕಾಲದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಗೌರವಿಸಿ, ಪರೀಕ್ಷೆ ನಡೆಸದೆ ಮಕ್ಕಳನ್ನು ತೇರ್ಗಡೆಗೊಳಿಸಲು ಉತ್ತಮ ಅವಕಾಶವಿತ್ತು. ಅದೆಂದರೆ, 10ನೇ ತರಗತಿಯಲ್ಲಿರುವ ಮಕ್ಕಳ ಸಂಚಿತ (ಕ್ಯುಮ್ಯುಲೇಟಿವ್‌) ಸಾಧನೆಯನ್ನು ಪರಿಗಣಿಸಿ ಹೆಚ್ಚು ವಸ್ತುನಿಷ್ಠವಾಗಿ ಹಾಗೂ ವೈಜ್ಞಾನಿಕವಾಗಿ ತೇರ್ಗಡೆಗೊಳಿಸಲು ಹೆಚ್ಚಿನ ಸಾಧ್ಯತೆಗಳಿದ್ದವು. ಸಾಮಾನ್ಯವಾಗಿ 10ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು 1ರಿಂದ 10ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲಿತಿರುತ್ತಾರೆ ಅಥವಾ ಕನಿಷ್ಠ ಮೂರು ವರ್ಷಗಳಾದರೂ ಒಂದು ಶಾಲೆಯಲ್ಲಿ (8, 9 ಮತ್ತು 10ನೇ ತರಗತಿ) ಕಲಿತಿರುತ್ತಾರೆ.

ಮಕ್ಕಳ 10 ವರ್ಷದ ಅಥವಾ ಮೂರು ವರ್ಷದ ಸಂಚಿತ ಸಾಧನೆ ಹೆಚ್ಚು ವಸ್ತುನಿಷ್ಠವಾಗಿರುವುದಲ್ಲದೆ ಕಲಿಕೆಯ ಹಲವು ಆಯಾಮಗಳನ್ನು ಪರಿಗಣಿಸಿ ಮಕ್ಕಳನ್ನು ತೇರ್ಗಡೆಗೊಳಿಸುವ ವಿಪುಲ ಅವಕಾಶಗಳನ್ನು ಒದಗಿಸುತ್ತದೆ. ಆದರೆ, ಉದ್ದೇಶಿತ ಬಹುಆಯ್ಕೆ ಪರೀಕ್ಷಾ ವಿಧಾನವು ಶಿಕ್ಷಣದಲ್ಲಿ ಕೇವಲ ಸ್ಮರಿಸುವ ಹಾಗೂ ಗುರುತಿಸುವ ಸಾಮರ್ಥ್ಯಗಳನ್ನು ಅಳೆಯುತ್ತದೆ. ಉಳಿದ ಮಹತ್ವದ ಮಜಲುಗಳಾದ ಅರ್ಥೈಸಿಕೊಂಡು ವ್ಯಾಖ್ಯಾನಿಸುವ, ಉದಾಹರಿಸುವ, ವರ್ಗೀಕರಿಸುವ, ಸಂಕ್ಷಿಪ್ತಗೊಳಿಸುವ, ಹೋಲಿಸುವ, ವಿವರಿಸುವ ಅಥವಾ ಅನ್ವಯಿಸಿ ಕಾರ್ಯಗತಗೊಳಿಸುವ ಮೂಲಕ ವಿಶ್ಲೇಷಿಸುವ, ತಾರ್ಕಿಕವಾಗಿ ಯೋಚಿಸುವ, ಪರಿಶೀಲಿಸುವ, ಕಾರಣ ನೀಡುವ, ವಿಮರ್ಶಿಸುವ, ತೀರ್ಮಾನಿಸುವ, ಹೊಸದನ್ನು ಸೃಷ್ಟಿಸುವ, ಪರಿವರ್ತಿಸು ವಂತಹ ಯಾವ ಮಜಲುಗಳನ್ನೂ ಪರೀಕ್ಷಿಸುವುದಿಲ್ಲ. ಹಾಗಾದರೆ, ನಾವು ಘೀಳಿಡುತ್ತಿರುವ ಪ್ರತಿಭೆ ಯಾವುದು?

ಕಂಠಪಾಠ ಆಧರಿಸಿದ ಕಾಟಾಚಾರದ ಪರೀಕ್ಷೆಗಳು ಅಂಕ, ಗ್ರೇಡ್‌ಗಳ ಮೂಲಕ ಅನುಕೂಲಸ್ಥ ಕುಟುಂಬಗಳ ಕೆಲವೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರುಕಟ್ಟೆ ಜಗತ್ತಿನ ಶಾಲಾ-ಕಾಲೇಜುಗಳಲ್ಲಿ ಸೀಟನ್ನು ದೊರಕಿಸುವುದೇ ಪ್ರತಿಭೆಯೆಂದು ಬಿಂಬಿಸುತ್ತಿವೆ. ನಿಜವಾದ ಪ್ರತಿಭೆಯೆಂದರೆ ವಿದ್ಯಾರ್ಥಿಗಳ ಕಲಿಕೆಯನ್ನು ಹಲವು ಆಯಾಮಗಳಿಂದ ವೈಜ್ಞಾನಿಕವಾಗಿ ಮೌಲ್ಯಾಂಕನ ಮಾಡಿ, ಕಲಿಕೆಯಲ್ಲಿರುವ ಅಂತರ ಮತ್ತು ತೊಡಕುಗಳನ್ನು ನಿವಾರಿಸಿ ಎಲ್ಲಾ ವರ್ಗದ ಮಕ್ಕಳ ಕಲಿಕೆಯನ್ನು ಗುಣಾತ್ಮಕವಾಗಿ ಸುಧಾರಿಸುವ ಹೊಸ ಪ್ರಕ್ರಿಯೆ- ಹೊಸ ಚಿಂತನೆ. ಇದಾವುದೂ ಈ ಉದ್ದೇಶಿತ ಪರೀಕ್ಷೆಯಲ್ಲಿಲ್ಲ. ಬದಲಾಗಿ, ಪರೀಕ್ಷೆ ನಂತರ 35ರಿಂದ 45ರ ಅಂಕವ್ಯಾಪ್ತಿಯ ಬಹುತೇಕ ಮಕ್ಕಳು ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಬಡಮಕ್ಕಳಾಗಿದ್ದು ಅವರು ಶಿಕ್ಷಣವನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವಾಗದ ಕಾರಣ, ಶಿಕ್ಷಣ ಸಚಿವರು ಹೇಳಿದಂತೆ ಅವರು ಡ್ರೈವಿಂಗ್‌ ಲೈಸೆನ್ಸ್‌ ಪಡೆಯಲು ಮಾತ್ರ ಅರ್ಹರಾಗುತ್ತಾರೆ. ಬಹುತೇಕ ಈ ಮಕ್ಕಳು ಪರಿಶಿಷ್ಟ ಜಾತಿ– ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮುಸ್ಲಿಂ ವರ್ಗದವರಾಗಿರುತ್ತಾರೆ. ಪರೀಕ್ಷೆಗಳು ಪರೋಕ್ಷವಾಗಿ ಈ ಮಕ್ಕಳನ್ನು ವ್ಯವಸ್ಥೆಯಿಂದ ಹೊರನೂಕಲು ಬಳಸಲಾಗು ತ್ತಿರುವ ಆಧುನಿಕ ಅಸ್ತ್ರಗಳು ಎಂಬುದನ್ನು ನಾವು ಮನ ಗಾಣಬೇಕಿದೆ.

ಪ್ರತೀ ವಿದ್ಯಾರ್ಥಿಯು ತರಗತಿಯಿಂದ ತರಗತಿಗೆ ದಾಟುವ ಮುನ್ನ, ಆಯಾ ತರಗತಿ ಮತ್ತು ಆಯಾ ವಯಸ್ಸಿನ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಪರಿಪೂರ್ಣವಾಗಿ ಅರಳಿಸುವ ಮತ್ತು ಜ್ಞಾನವನ್ನು ಕಟ್ಟಿಕೊಡುವ ಹೊಸ ಸಾಧನಗಳ ಬಗ್ಗೆ ಸರ್ಕಾರ ಆಲೋಚಿಸಬೇಕು. ಈ 15 ತಿಂಗಳಲ್ಲಿ ಕಲಿಕೆಯಲ್ಲಿ ಉಂಟಾಗಿರುವ ನಷ್ಟವನ್ನು ತುಂಬಿಕೊಡಲು ಹೊಸ ಬಗೆಯ ಕಾರ್ಯತಂತ್ರಗಳನ್ನು ರೂಪಿಸಬೇಕು.

ನಮ್ಮ ಎಲ್ಲಾ ಶಕ್ತಿ, ಸಾಮರ್ಥ್ಯ ಹಾಗೂ ಸಂಪನ್ಮೂಲ ಗಳನ್ನು ಸಾಧುವಲ್ಲದ ಪರೀಕ್ಷೆಗಳಿಗೆ ವ್ಯಯಿಸುವ ಬದಲು, 10 ಅಥವಾ 12ನೇ ತರಗತಿಯ ಮಕ್ಕಳಾಗಲೀ ಅಥವಾ ಇತರ ಯಾವುದೇ ತರಗತಿಯ ಮಕ್ಕಳ ಕಲಿಕೆ 15 ತಿಂಗಳುಗಳಿಂದ ಸಮರ್ಪಕವಾಗಿ ನಡೆದಿಲ್ಲವೆಂಬ ಸತ್ಯವನ್ನು ಒಪ್ಪಿ, 2021- 22ನೇ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಅವರಿಗೆ ಮೂರು ತಿಂಗಳ ವೇಗವರ್ಧಿತ ಕಲಿಕಾ ಸೇತುಬಂಧ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿನ ನಷ್ಟವನ್ನು ತುಂಬಿಕೊಡುವುದು ಹಾಗೂ ಬುನಾದಿ ಜ್ಞಾನವನ್ನು ಕಟ್ಟಿಕೊಡುವ ಬಗ್ಗೆ ಯೋಚಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಮತ್ತು ಆದ್ಯತೆ. ಮಂಡಳಿ ಪರೀಕ್ಷೆಗಳ ರದ್ದತಿಯನ್ನು
ನಕಾರಾತ್ಮಕವಾಗಿ ನೋಡುವ ಬದಲು, ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸುವ ಸದವಕಾಶವೆಂದು ಭಾವಿಸಿ ಮುಂದೆ ಹೋಗಬೇಕು. ಈ ದಿಸೆಯಲ್ಲಿ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ತನ್ನ ನಿರ್ಧಾರದ ಕುರಿತು ಪುನರ್‌ಯೋಚಿಸಲಿ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.