ADVERTISEMENT

ವಿಶ್ಲೇಷಣೆ | ಏಕದಿನ ಕ್ರಿಕೆಟ್‌ಗೆ ‘ಚುಟುಕು’ ಕುಟುಕು

ಟಿ20 ಭರಾಟೆಯಲ್ಲಿ ಫಿಫ್ಟಿ–50 ಮಾದರಿ ಜನಪ್ರಿಯತೆ ಇಳಿಮುಖ?

ಗಿರೀಶದೊಡ್ಡಮನಿ
Published 19 ಆಗಸ್ಟ್ 2022, 21:34 IST
Last Updated 19 ಆಗಸ್ಟ್ 2022, 21:34 IST
ಕಪಿಲ್ ದೇವ್
ಕಪಿಲ್ ದೇವ್   

ಟೆಸ್ಟ್, ಏಕದಿನ, ಟಿ20, ಟಿ10 ಮತ್ತು ಹಂಡ್ರಡ್‌ ಬಾಲ್ ಕ್ರಿಕೆಟ್‌...

ಈ ಎಲ್ಲ ಮಾದರಿಗಳು ಬೇಕು. ಎಲ್ಲವೂ ಜನಪ್ರಿಯವಾಗಬೇಕು. ಕ್ರಿಕೆಟ್ ಸಂಸ್ಥೆಗಳಿಗೆ ಹಣದ ಹೊಳೆ ಹರಿದುಬರಬೇಕು. ಪ್ರಾಯೋಜಕರಿಗೆ ತಮ್ಮ ಮಾರುಕಟ್ಟೆ ವಿಸ್ತರಣೆಯಾಗಬೇಕು ಹಾಗೂ ಪ್ರಸಾರಕರ ಬೊಕ್ಕಸ ತುಂಬಬೇಕು. ಆದರೆ ಈ ‘ಅತಿಯಾಸೆ’ಯೇ ಸಭ್ಯರ ಆಟಕ್ಕೆ ಮುಳುವಾಗುತ್ತಿದೆಯೇ?

ಕೆಲವೇ ವರ್ಷ ಹಿಂದಿನವರೆಗೂ ಕ್ರಿಕೆಟ್‌ ಜನಪ್ರಿಯತೆ ಮತ್ತು ಶ್ರೀಮಂತಿಕೆಯು ಉತ್ತುಂಗಕ್ಕೇರಲು ಕಾರಣವಾದ ಏಕದಿನ (ಫಿಫ್ಟಿ–50) ಮಾದರಿ ಇತ್ತೀಚಿನ ದಿನಗಳಲ್ಲಿ ಅಸ್ತಿತ್ವಕ್ಕೆ ಪರದಾಡುವಂತಾಗಿದೆ. ಮೂರು ಮಾದರಿಗಳಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ವೇಳಾಪಟ್ಟಿ ಕಿಕ್ಕಿರಿದು ತುಂಬಿದೆ. ಈ ನಡುವೆ ತಮಗೆ ಮನರಂಜನೆ ನೀಡುವಂತಹದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದನ್ನು ಪ್ರೇಕ್ಷಕರು ಕಲಿತುಕೊಂಡಿದ್ದಾರೆ. ಅದಕ್ಕಾಗಿಯೇ ಮೂರು ತಾಸಿನಲ್ಲಿ ಮುಗಿದುಹೋಗುವ ಹಾಗೂ ಭರಪೂರ ಮನರಂಜನೆ ನೀಡುವ ಟಿ20 ಕ್ರಿಕೆಟ್‌ ಎಂದರೆ ಯುವಸಮೂಹಕ್ಕೆ ಅಚ್ಚುಮೆಚ್ಚು. ಚುಟುಕು ಅಬ್ಬರದಲ್ಲಿ ಟೆಸ್ಟ್ ಉಳಿಸಲು ವಿಶ್ವ ಚಾಂಪಿಯನ್‌ಷಿಪ್ ಆರಂಭಿಸಿದ್ದು ಸಿಹಿಫಲ ದೊರೆತಿದೆ. ದೀರ್ಘ ಮಾದರಿಯಲ್ಲಿಯೂ ಫಲಿತಾಂಶಗಳು ಹೊರಹೊಮ್ಮುತ್ತಿರುವುದರಿಂದಾಗಿ ಹೊಸದೊಂದು ಪ್ರೇಕ್ಷಕರ ವರ್ಗ ಸೃಷ್ಟಿಯಾಗುತ್ತಿದೆ. ಆದರೆ ಇವೆರಡರ ನಡುವೆ ಏಕದಿನ ಕ್ರಿಕೆಟ್ ಜನಪ್ರಿಯತೆ ಸೊರಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.

ADVERTISEMENT

ಏಕದಿನ ಕ್ರಿಕೆಟ್ ಅಸ್ತಿತ್ವಕ್ಕೆ ಅಪಾಯ ಎದುರಾಗು ತ್ತಿರುವುದರ ಬಗ್ಗೆ ಹೋದ ತಿಂಗಳಷ್ಟೇ, ಭಾರತದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಚ್ಚರಿಕೆಯ ಮಾತುಗಳನ್ನಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಹಲವು ದಿಗ್ಗಜರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮಾದರಿಯಲ್ಲಿ ಸುಧಾರಣೆ ತಂದು ಆಕರ್ಷಕಗೊಳಿಸಬೇಕು. ಫ್ರ್ಯಾಂಚೈಸಿ ಲೀಗ್ ಟೂರ್ನಿಗಳ ಹೆಚ್ಚಳದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಸಂಖ್ಯೆಯೇ ಕಡಿಮೆಯಾಗಿ ದೀರ್ಘ ಮಾದರಿ ನೇಪಥ್ಯಕ್ಕೆ ಸರಿಯುವ ಆತಂಕವಿದೆ. ಯುರೋಪಿನ ರಾಷ್ಟ್ರಗಳು ದ್ವಿಪಕ್ಷೀಯ ಫುಟ್‌ಬಾಲ್ ಟೂರ್ನಿಗಳಲ್ಲಿ ಆಡುತ್ತಿಲ್ಲ. ಅಲ್ಲಿ ಫುಟ್‌ಬಾಲ್ ಲೀಗ್‌ಗಳು ಹೆಚ್ಚಿರುವುದೇ ಇದಕ್ಕೆ ಕಾರಣ. ವಿಶ್ವಕಪ್‌ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಾರೆ. ಅಂತಹ ಗತಿ ಕ್ರಿಕೆಟಿಗೂ ಬರಬಹುದು ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅವರು ಇಂಗ್ಲಿಷ್‌ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನು ಅಲ್ಲಗಳೆಯುವಂತಿಲ್ಲ; ಮೂರು ದಿನಗಳ ಹಿಂದೆ ಐಸಿಸಿ ಬಿಡುಗಡೆ ಮಾಡಿರುವ 2023–27ರ ಅವಧಿಯ ಮುಂಬರುವ ಪ್ರವಾಸ ವೇಳಾಪಟ್ಟಿಯನ್ನು (ಎಫ್‌ಟಿಪಿ) ಒಂದು ಬಾರಿ ನೋಡಿದರೆ, ಏಕದಿನ ಪಂದ್ಯಗಳ ಆಯೋಜನೆಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತ ಹೋಗುವಂತೆ ಭಾಸವಾಗುತ್ತದೆ. ಈ ಅವಧಿಯಲ್ಲಿ ಐಸಿಸಿ ಪೂರ್ಣಸದಸ್ಯತ್ವ ಹೊಂದಿರುವ 12 ರಾಷ್ಟ್ರಗಳು ಒಟ್ಟು 777 ಪಂದ್ಯಗಳನ್ನು ಆಡಲಿವೆ. ಅದರಲ್ಲಿ 323 ಟಿ20 ಹಾಗೂ 281 ಏಕದಿನ ಪಂದ್ಯಗಳು ಇವೆ. ಅದರಲ್ಲೂ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಏಕದಿನಕ್ಕಿಂತ ಹೆಚ್ಚು ಚುಟುಕು ಪಂದ್ಯಗಳಲ್ಲಿ ಆಡಲಿವೆ. ಭಾರತ ತಂಡವು 42 ಏಕದಿನ ಹಾಗೂ 61 ಟಿ20 ಪಂದ್ಯಗಳಲ್ಲಿ ಆಡುವುದು. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಅಂಕಿ ಸಂಖ್ಯೆಯಷ್ಟೇ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನಡೆಯುವ ಫ್ರ್ಯಾಂಚೈಸಿ ಲೀಗ್‌ ಟೂರ್ನಿಗಳ ಪಂದ್ಯಗಳನ್ನು ಲೆಕ್ಕ ಹಾಕಿದರೆ, ಚುಟುಕು ಮಾದರಿ ಪರ್ವತಸದೃಶವಾಗುತ್ತದೆ. ಇದೀಗ ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್‌ನ ಎಲ್ಲ ಆರು ತಂಡಗಳನ್ನೂ ಭಾರತದ ಐಪಿಎಲ್ ಫ್ರ್ಯಾಂಚೈಸಿಗಳೇ ತೆಗೆದುಕೊಂಡಿವೆ. ಅದರಿಂದಾಗಿ ಭಾರತದ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಆಡುವ ಅನುಮತಿ ನೀಡಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಭಾರತದ ಆಟಗಾರರಿಗೆ ಇರುವ ತಾರಾಮೌಲ್ಯ ಇದಕ್ಕೆ ಕಾರಣ.

ಆದರೆ, ಈಗಾಗಲೇ 3 ಮಾದರಿಗಳ ಪಂದ್ಯಗಳಲ್ಲಿ ಆಡುತ್ತ ವಿಪರೀತ ಒತ್ತಡ ಅನುಭವಿಸುತ್ತಿರುವ ಪ್ರಮುಖ ಆಟಗಾರರು ಪದೇ ಪದೇ ವಿಶ್ರಾಂತಿಗೆ ತೆರಳುತ್ತಿರುವುದು ಕೂಡ ಬಿಸಿಸಿಐಗೆ ತಲೆನೋವಾಗಿದೆ. ಇದು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಹೋದ ತಿಂಗಳು ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್‌ ಏಕದಿನ ಮಾದರಿಗೆ ವಿದಾಯ ಹೇಳಿದ್ದಾರೆ. 2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ವಿಜಯ ಸಾಧಿಸಲು ಅವರ ಆಟವೇ ಪ್ರಮುಖವಾಗಿತ್ತು. ತಾವು ಟೆಸ್ಟ್ ಹಾಗೂ ಟಿ20 ಮಾದರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಅತ್ತ ನ್ಯೂಜಿಲೆಂಡ್ ಬೌಲರ್ ಟ್ರೆಂಟ್ ಬೌಲ್ಟ್ ಏಕದಿನ ಮಾದರಿಯ ಕೇಂದ್ರೀಯ ಗುತ್ತಿಗೆಯಿಂದ ಹೊರಗುಳಿದಿದ್ದಾರೆ. ಈ ಪರಿಪಾಟ ಬೇರೆ ದೇಶಗಳ ತಂಡಗಳಿಗೂ ಹಬ್ಬಬಹುದು. ಹೆಚ್ಚು ಹಣ, ಖ್ಯಾತಿ ಸಿಗುವ ಟಿ20 ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಎಂಬ ವಾದವೂ ಇದೆ.

ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ವಾಸೀಂ ಅಕ್ರಂ ಹೇಳುವಂತೆ ‘ಏಕದಿನ ಮಾದರಿಯಲ್ಲಿ ಆಕರ್ಷಣೆ ಉಳಿದುಕೊಂಡಿಲ್ಲ’. ಈ ಮಾದರಿಯನ್ನು ಶಾಶ್ವತವಾಗಿ ಸ್ಥಗಿತ ಮಾಡಬೇಕು ಎಂದೂ ಅವರು ಸಲಹೆ ಕೊಡುತ್ತಾರೆ.

ಅರ್ಧ ಶತಮಾನದಷ್ಟು ಹಳೆಯ ಮಾದರಿಯಾಗಿರುವ ಏಕದಿನ ಕ್ರಿಕೆಟ್‌ಗೂ ಇಂತಹದೊಂದು ದಿನ ಬರಲಿದೆ ಎಂದು ಬಹುಶಃ ಯಾರೂ ಅಂದುಕೊಂಡಿರಲಿಲ್ಲ. ಟಿ20 ಮಾದರಿ ಆರಂಭವಾದಾಗ ಏಕದಿನದಲ್ಲಿಯೂ ಗಮನಾರ್ಹ ಸುಧಾರಣೆಗಳನ್ನು ತರುವತ್ತ ಐಸಿಸಿ ಗಂಭೀರವಾಗಿ ಯೋಚನೆ ಮಾಡದಿರುವ ಫಲ ಇದು.

ನಾಲ್ಕು ವರ್ಷಕ್ಕೊಂದು ವಿಶ್ವಕಪ್ ಹಾಗೂ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳು ನಡೆಯುವ ಹೊತ್ತಿನಲ್ಲಿ ಮಾತ್ರ ವಾತಾವರಣ ಬಿಸಿಯಾಗಿರುತ್ತದೆ. ಉಳಿದಂತೆ ಟಿ20ಯದ್ದೇ ಗೌಜು ಗದ್ದಲ. ಅದಕ್ಕೆ ಕಾರಣ ಸುಸ್ಪಷ್ಟ. ಈ ಮಾದರಿಗೆ ಟೆಲಿವಿಷನ್ ವೀಕ್ಷಕರ ಸಂಖ್ಯೆ ಹೆಚ್ಚು. ‘ಮುಸ್ಸಂಜೆ ಮೋಜುಗಾರಿಕೆ’ಗೆ ಹೇಳಿ ಮಾಡಿಸಿದ ಕ್ರಿಕೆಟ್ ಇದು. ಮೂರು ಗಂಟೆ ಸಿನಿಮಾದಂತೆ ಮುಗಿದುಹೋಗುತ್ತದೆ. ಸಿಕ್ಸರ್, ಬೌಂಡರಿಗಳು ಯಥೇಚ್ಛವಾಗಿ ಸಿಡಿಯುವ ಪಂದ್ಯಗಳನ್ನು ಕುಟುಂಬ, ಸ್ನೇಹಿತರೊಂದಿಗೆ ನೋಡಿ ಆನಂದಿಸಬಹುದು. ಆದ್ದರಿಂದಲೇ ಪ್ರಾಯೋ ಜಕರಿಗೂ ಅಚ್ಚುಮೆಚ್ಚು. ಬೆಟ್ಟಿಂಗ್ ಲೋಕಕ್ಕಂತೂ ಚಿನ್ನದ ಮೊಟ್ಟೆಯಿಡುವ ಕೋಳಿಯೇ ಸೈ. ಬಿಸಿಸಿಐಗೆ ಮುಂಬರಲಿರುವ ಐಪಿಎಲ್ ಪ್ರಸಾರ ಹಕ್ಕುಗಳಿಂದ ₹ 48 ಸಾವಿರ ಕೋಟಿ ಬರಲಿರುವುದು ಸಣ್ಣ ಮಾತೇನಲ್ಲ.

ಆದರೆ, ಏಕದಿನ ಮಾದರಿಯಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯವಿದೆ. ನಾಲ್ಕು ಇನಿಂಗ್ಸ್‌ನಲ್ಲಿ (ತಲಾ 25 ಓವರ್‌) ಪಂದ್ಯವನ್ನು ವಿಭಜಿಸಬೇಕು. ಇದರಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಎಂದು ಏಳು ವರ್ಷಗಳ ಹಿಂದೆಯೇ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದರು. ಬ್ಯಾಟರ್‌ಗಳಿಗೆ ಒಂದೇ ಪಂದ್ಯದಲ್ಲಿ ಎರಡು ಅವಕಾಶ ಸಿಕ್ಕಂತಾಗುತ್ತದೆ. ಆದರೆ, ಆಗ ಅವರ ಹೇಳಿಕೆಯನ್ನು ವಿರೋಧಿಸಿದವರೇ ಹೆಚ್ಚು. ಏಕದಿನ ಮಾದರಿಯ ಔಚಿತ್ಯವೇ ನಗಣ್ಯವಾಗುತ್ತದೆ ಎಂದಿದ್ದರು. ಆದರೆ, ಈಗ ಸಚಿನ್ ಮಾತುಗಳನ್ನು ಮರುವಿಮರ್ಶೆ ಮಾಡುವ ಅಗತ್ಯವಿದೆ.

‘ಏಳು ತಾಸು ಕುಳಿತು ಏಕದಿನ ಪಂದ್ಯ ವೀಕ್ಷಿಸುವಷ್ಟು ವ್ಯವಧಾನ ಯಾರಿಗಿದೆ? ಈ ಮಾದರಿಯ ಆರಂಭದಲ್ಲಿ 60 ಓವರ್‌ಗಳ ಇನಿಂಗ್ಸ್ ಇತ್ತು. ಜನರ ಆಸಕ್ತಿ ಹೆಚ್ಚಿಸಲು 50 ಓವರ್‌ಗಳಿಗೆ ಇಳಿಸಲಾಗಿತ್ತು. ಈಗಲೂ ಅದೇ ಕಾರ್ಯ ಮಾಡಬಹುದು. 40 ಓವರ್‌ಗಳಿಗೆ ಇಳಿಸಿ ನೋಡಬಹುದು. ಸ್ಪರ್ಧೆ ಹೆಚ್ಚುವುದರಿಂದ ಜನರೂ ಬರಬಹುದು’ ಎಂಬ ಆಲ್‌ರೌಂಡರ್ ರವೀಂದ್ರ ಜಡೇಜ ಸಲಹೆಯನ್ನೂ ನಿರ್ಲಕ್ಷಿಸುವಂತಿಲ್ಲ. ಅಂದಹಾಗೆ ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದೆ. ಅದಕ್ಕೂ ಮುನ್ನ 27 ಏಕದಿನ ಪಂದ್ಯಗಳಲ್ಲಿ ತಂಡವು ಆಡಲಿದೆ.

ಆದರೆ, ಫ್ರ್ಯಾಂಚೈಸಿ ಲೀಗ್‌ಗಳು ಮತ್ತು ಹೊಸ ಮಾದರಿಗಳನ್ನು ಹುಟ್ಟುಹಾಕುವ ಭರಾಟೆಗೆ ಮೊದಲು ಕಡಿವಾಣ ಹಾಕುವತ್ತ ಐಸಿಸಿ ಮನಸ್ಸು ಮಾಡಬೇಕು. ಬದಲಾವಣೆ ಜಗದ ನಿಯಮ. ಅದಕ್ಕೆ ಒಗ್ಗಿಕೊಳ್ಳಬೇಕು. ಆಟಗಾರರು ಹಾಗೂ ಆಟದ ಹಿತಾಸಕ್ತಿಗಾಗಿ ಏಕದಿನ ಮತ್ತು ಟಿ20 ವಿಲೀನಕ್ಕೂ ಹಿಂಜರಿಯಬಾರದು. ತಮ್ಮ ಅಮೂಲ್ಯ ಸಮಯ ಹಾಗೂ ಹಣವನ್ನು ವಿನಿಯೋಗಿಸುವ ಕ್ರೀಡಾಪ್ರಿಯರಿಗೂ ಅಪ್ಪಟ ಕ್ರಿಕೆಟ್‌ ಮನರಂಜನೆ ನೀಡುವತ್ತಲೂ ಆದ್ಯತೆ ಸಿಕ್ಕರೆ ಆಟಕ್ಕೆ ಉಳಿಗಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.