ADVERTISEMENT

ವಿಶ್ಲೇಷಣೆ | ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ‘ಫ್ರ್ಯಾಂಚೈಸಿ’ ಸವಾಲು

ಹಣಬಲದ ಮುಂದೆ ನೈಜ ಕ್ರಿಕೆಟ್ ಸದ್ದು ಉಡುಗದಿರಲಿ: ಎಂಸಿಸಿ

ಗಿರೀಶದೊಡ್ಡಮನಿ
Published 14 ಮಾರ್ಚ್ 2023, 21:53 IST
Last Updated 14 ಮಾರ್ಚ್ 2023, 21:53 IST
   

ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಕ್ಕೆ ಅರ್ಹತೆ ಗಿಟ್ಟಿಸಿದ ಮೂರು ದಿನಗಳ ಮುನ್ನ ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್‌ (ಎಂಸಿಸಿ) ಸಭೆ ನಡೆಯಿತು. ಅಲ್ಲಿ, ಮುಂದಿನ ಹತ್ತು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ ಹೇಗಿರಬಹುದು ಎಂದು ಚರ್ಚಿಸಲಾಯಿತು.

‘ಫ್ರ್ಯಾಂಚೈಸಿ ಲೀಗ್‌ ಟೂರ್ನಿಗಳಿಂದಾಗಿ ಅಂತರ ರಾಷ್ಟ್ರೀಯ ಕ್ರಿಕೆಟ್ ಗೌಣವಾಗುವ ಅಪಾಯವಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಸೂತ್ರಕ್ಕಾಗಿ ಸಂಬಂಧಪಟ್ಟವರು ಮಧ್ಯಸ್ಥಿಕೆ ವಹಿಸಬೇಕು’ ಎಂಬ ನಿರ್ಣಯದೊಂದಿಗೆ ಸಭೆ ಮುಕ್ತಾಯವಾಯಿತು. ಲೀಗ್‌ ಟೂರ್ನಿಗಳ ಹಣಬಲದ ನಡುವೆ ಕ್ರಿಕೆಟ್‌ ಅಡಿಪಾಯ ಅಲುಗಾಡುತ್ತಿರುವುದನ್ನು ಈ ನಿರ್ಣಯ ಧ್ವನಿಸುತ್ತದೆ.

ಟ್ವೆಂಟಿ–20 ಕ್ರಿಕೆಟ್ ಆರಂಭವಾದಾಗಲೇ ಈ ಆತಂಕ ಶುರುವಾಗಿತ್ತು. ಅದರಲ್ಲೂ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಟಿ20 ಲೀಗ್ ಆರಂಭವಾದ ಮೇಲಂತೂ ಕ್ರಿಕೆಟ್ ಸ್ವರೂಪವೇ ಬದಲಾಯಿತು. ಕೋಟಿ ಕೋಟಿ ಹಣ ಕಣ್ಣು ಕುಕ್ಕತೊಡಗಿತು. ಟೆಸ್ಟ್ ಮತ್ತು ಏಕದಿನ ಪಂದ್ಯಗಳು ನೀರಸವೆನಿಸತೊಡಗಿದವು. ಆದರೆ, ವಿಪರ್ಯಾಸ ನೋಡಿ. ದಶಕಗಳಿಂದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ ನಲ್ಲಿ ಬೆಳೆದ ದಿಗ್ಗಜ ಆಟಗಾರರೇ ಐಪಿಎಲ್‌ ಟೂರ್ನಿಯ ಯಶಸ್ಸಿಗೆ ಕಾರಣರಾದರು. 2008ರಲ್ಲಿ ಆರಂಭವಾದ ಐಪಿಎಲ್‌ನಲ್ಲಿ ದಿಗ್ಗಜರ ದೊಡ್ಡ ಪಟ್ಟಿಯೇ ಇತ್ತು. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಆಗಿನಿಂದಲೂ ಆಡುತ್ತಿದ್ದಾರೆ. ಅವರ ಆಟವನ್ನು ನೋಡಲೆಂದೇ ಕ್ರೀಡಾಂಗಣಕ್ಕೆ ಬರುವ ನೂರಾರು ಅಭಿಮಾನಿಗಳಿದ್ದಾರೆ.

ADVERTISEMENT

ಈಗಲೂ ಅಷ್ಟೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಳಗುವ ತಾರೆಗಳೇ ಐಪಿಎಲ್‌ಗೆ ಬಂಡವಾಳ. ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತ ಗಳಿಸಿದ ಇಂಗ್ಲೆಂಡ್‌ನ ಸ್ಯಾಮ್ ಕರನ್, ಹ್ಯಾರಿ ಬ್ರೂಕ್ಸ್‌, ಭಾರತದ ಮಯಂಕ್ ಅಗರವಾಲ್ ಅವರೆಲ್ಲರೂ ಅಂತರರಾಷ್ಟ್ರೀಯ ಅಂಗಳದಿಂದಲೇ ಹೊರಹೊಮ್ಮಿದವರು. ಆದರೆ, ಹಣದ ಹೊಳೆ ಹರಿಸುವ ಫ್ರ್ಯಾಂಚೈಸಿ ಲೀಗ್‌ಗಳಿಗೆ ಪ್ರತಿಭಾವಂತ ಆಟಗಾರರನ್ನು ಒದಗಿಸುವ ಕಾರ್ಖಾನೆ ಗಳೇ ಆಗಿರುವ ಅಂತರರಾಷ್ಟ್ರೀಯ ಸರಣಿಗಳು ಮತ್ತು ದೇಶಿ ಕ್ರಿಕೆಟ್‌ ಅಪಾಯದಲ್ಲಿರುವುದು ಸೋಜಿಗದ ಸಂಗತಿ. ಆದರೆ, ಇಂತಹ ಆಟಗಾರರು ಮುಂದಿನ ದಿನ ಗಳಲ್ಲಿ ಹೊರಹೊಮ್ಮುವರೇ ಎಂಬುದೇ ಎಂಸಿಸಿಯನ್ನು ಕಾಡುತ್ತಿರುವ ಪ್ರಶ್ನೆ.

ಏಕೆಂದರೆ, ಫ್ರ್ಯಾಂಚೈಸಿ ಲೀಗ್‌ಗಳು ಅಣಬೆಗಳಂತೆ ಹುಟ್ಟುತ್ತಿವೆ. ಈ ಲೀಗ್‌ಗಳ ಆಯೋಜನೆಗಾಗಿ ಸಮಯಾವಕಾಶ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಐಸಿಸಿ ಸರಣಿ ಹಾಗೂ ಟೂರ್ನಿಗಳ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಸಿದ್ಧಗೊಳಿ ಸುವಾಗ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳುತ್ತದೆ. ಉದಾಹರಣೆಗೆ, ಐಪಿಎಲ್ ಟೂರ್ನಿಯಲ್ಲಿ ಆಡುವ ಸಲುವಾಗಿ ಸುಮಾರು 50 ದಿನಗಳವರೆಗೆ ಭಾರತ ತಂಡವು ಬೇರೆ ಯಾವುದೇ ಟೂರ್ನಿಯಲ್ಲಿ ಆಡುವುದಿಲ್ಲ. ಇನ್ನು ವೆಸ್ಟ್ ಇಂಡೀಸ್, ಶ್ರೀಲಂಕಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲಿಯೂ ಲೀಗ್‌ಗಳು ನಡೆಯುತ್ತಿವೆ. ಈ ವರ್ಷದಿಂದ ದಕ್ಷಿಣ ಆಫ್ರಿಕಾ ಲೀಗ್ ಮತ್ತು ಇಂಟರ್‌ನ್ಯಾಷನಲ್ ಟಿ20 ಲೀಗ್ ಕೂಡ ಆರಂಭವಾಗಲಿವೆ.

ಮನರಂಜನೆಯ ಕಣಜವೇ ಆಗಿರುವ ಈ ಲೀಗ್‌ಗಳ ಪ್ರಸಾರ ಹಕ್ಕುಗಳಿಗಾಗಿ ಪ್ರಸಾರಕ ಸಂಸ್ಥೆಗಳು ಸಹಜ ವಾಗಿಯೇ ಮುಗಿಬೀಳುತ್ತಿವೆ. ಆದ್ದರಿಂದ ಈ ಲೀಗ್‌ಗಳಿಗೆ ಹೆಚ್ಚು ಸಮಯ ಮೀಸಲಿಡುತ್ತವೆ. ಅವುಗಳನ್ನು ಬಿಟ್ಟರೆ ‘ಬಿಗ್‌ ತ್ರೀ’ ತಂಡಗಳಾದ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಸರಣಿಗಳಿಗೆ ಉಳಿದ ಸಮಯ ಮೀಸಲು. ಈ ಮೂರು ರಾಷ್ಟ್ರಗಳಿಂದ ಪ್ರಸಾರಕರು ಹಾಗೂ ಐಸಿಸಿಗೆ ಬರುವ ಆದಾಯ ದೊಡ್ಡದು.

ಇದರಿಂದಾಗಿ ದ್ವಿಪಕ್ಷೀಯ ಸರಣಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ತ್ರಿಕೋನ, ಚತುಷ್ಕೋನ ಸರಣಿಗಳಂತೂ ಅಪರೂಪವಾಗಿವೆ. ಅದರ ನೇರ ಪರಿಣಾಮವು ಕ್ರಿಕೆಟ್‌ ನಲ್ಲಿ ಬೆಳೆಯಲು ಪ್ರಯತ್ನಿಸುತ್ತಿರುವ ಅಫ್ಗಾನಿಸ್ತಾನ, ಐರ್ಲೆಂಡ್‌ ಸೇರಿದಂತೆ ಸಣ್ಣ ರಾಷ್ಟ್ರಗಳ ಮೇಲೆ ಆಗುತ್ತಿದೆ. ಒಲಿಂಪಿಕ್ ಕೂಟವನ್ನು ಪ್ರವೇಶಿಸಲು ತಂಡಗಳ ಸಂಖ್ಯೆ ಹೆಚ್ಚಿಸಿಕೊಳ್ಳುವತ್ತ ಐಸಿಸಿ ಚಿತ್ತ ನೆಟ್ಟಿದೆ. ಇನ್ನೊಂದೆಡೆ, ಯುರೋಪ್ ದೇಶಗಳ ಮಾರುಕಟ್ಟೆಯೂ ಕ್ರಿಕೆಟ್‌ಗೆ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ನಡೆದಿದೆ.

ಇನ್ನು ಭಾರತದ ಕ್ರಿಕೆಟ್ ರಂಗವೂ ಇದಕ್ಕೆ ಹೊರತಲ್ಲ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಇವತ್ತು ವಿಶ್ವ ಕ್ರಿಕೆಟ್‌ನಲ್ಲಿ ಆರ್ಥಿಕವಾಗಿ ದೊಡ್ಡಣ್ಣನಾಗಿ ಬೆಳೆಯಲು ಐಪಿಎಲ್ ಕಾರಣ. ಆದರೆ, ಇದೇ ಟೂರ್ನಿಯು ಇವತ್ತು ದೇಶದ ಕ್ರಿಕೆಟ್ ತಂಡಕ್ಕೂ ಆತಂಕ ತಂದಿರುವುದು ಸುಳ್ಳಲ್ಲ. ಐಪಿಎಲ್ ಆರಂಭವಾದ ನಂತರ ಭಾರತ ಒಂದು ಬಾರಿಯೂ ಟಿ20 ವಿಶ್ವಕಪ್ ಜಯಿಸಿಲ್ಲ. ಹೋದ ಬಾರಿ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿಯೂ ಮುಗ್ಗರಿಸಿತ್ತು. ಈ ಸಲವೂ ಅದೇ ರೀತಿಯಾಗುವುದೇ ಎಂಬ ಆತಂಕ ಕಾಡುತ್ತಿದೆ.

ಏಕೆಂದರೆ, ಭಾರತದ ಕ್ರಿಕೆಟಿಗರು ಮಾರ್ಚ್‌ 31ರಿಂದ ಮೇ 28ರವರೆಗೆ ಐಪಿಎಲ್‌ನಲ್ಲಿ ಆಡಲಿದ್ದಾರೆ. ಚೇತೇಶ್ವರ್ ಪೂಜಾರ ಅವರನ್ನು ಬಿಟ್ಟರೆ ಉಳಿದೆಲ್ಲ ಟೆಸ್ಟ್ ಆಟಗಾರರೂ ಐಪಿಎಲ್‌ನಲ್ಲಿ ಆಡುವರು. ಆದರೆ ಟೆಸ್ಟ್ ಫೈನಲ್ ಜೂನ್ 7ರಂದು ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ಅಭ್ಯಾಸ ಮಾಡಲು ಆಟಗಾರರಿಗೆ ಹೆಚ್ಚು ಸಮಯವಿಲ್ಲ. ಅಭ್ಯಾಸ ಪಂದ್ಯಗಳೂ ಇಲ್ಲ. ಬಿಳಿ ಚೆಂಡಿನ ಮಾದರಿಯಿಂದ ಕೆಂಪು ಚೆಂಡಿನ ಆಟಕ್ಕೆ ಹೊಂದಿಕೊಳ್ಳುವ ಸವಾಲು ಎದುರಾಗುವುದು ಬಹುತೇಕ ಖಚಿತ.

ಅದರಲ್ಲೂ ಈ ಬಾರಿಯ ಐಪಿಎಲ್‌ನಲ್ಲಿ ತಂಡಗಳು ಹಳೆಯ ವೇಳಾಪಟ್ಟಿ ಮಾದರಿಯಲ್ಲಿ ತಮ್ಮ ತವರಿನಂಗಳದಲ್ಲಿ ಪಂದ್ಯಗಳನ್ನು ಆಯೋಜಿಸಲಿವೆ. ಬೇಸಿಗೆಯ ಧಗೆಯಲ್ಲಿ ನಗರಗಳ ನಡುವೆ ಪ್ರಯಾಣ, ರಾತ್ರಿ ಪಂದ್ಯಗಳು ಮತ್ತು ಗಾಯದ ಸಮಸ್ಯೆಗಳಿಂದ ತಮ್ಮ ಫಿಟ್‌ನೆಸ್‌ ರಕ್ಷಿಸಿಕೊಳ್ಳುವ ಸವಾಲು ಆಟಗಾರರ ಮುಂದಿದೆ. ಇದು ಡಬ್ಲ್ಯುಟಿಸಿ ಫೈನಲ್‌ ಆಡುವ ಆಟಗಾರರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಆತಂಕವಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಬಿಸಿಸಿಐನಿಂದಾಗಲೀ ಅಥವಾ ಟೆಸ್ಟ್ ತಂಡದ ಆಟಗಾರರಿಂದಾಗಲೀ ಕಂಡುಬಂದಿಲ್ಲ. ದೇಶದ ತಂಡಕ್ಕಾಗಿ ಆಡಲು ಐಪಿಎಲ್‌ನಿಂದ ದೂರ ಇರುತ್ತೇನೆ ಎಂದು ಹೇಳುವ ಭಾರತದ ‘ಮೊದಲ ಆಟಗಾರ’ನಾಗುವ ಅವಕಾಶವನ್ನು ಯಾರೂ ಬಳಸಿಕೊಳ್ಳುವಂತೆ ಕಾಣುತ್ತಿಲ್ಲ!

ಆದರೆ ಒಂದಂತೂ ನಿಜ. ಎಂಸಿಸಿ ಹೇಳಿರುವಂತೆ, ಅಂತರರಾಷ್ಟ್ರೀಯ ಕ್ರಿಕೆಟ್ ಉಳಿಸಲು ‘ತುರ್ತು ಕ್ರಮ’ ಅಗತ್ಯ. ಈ ಹಿಂದೆ ಟೆಸ್ಟ್ ಕ್ರಿಕೆಟ್ ಉಳಿಸಲು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಜನ್ಮತಳೆಯಿತು. ದೀರ್ಘ ಮಾದರಿಯ ಪಂದ್ಯಗಳಲ್ಲಿಯೂ ರೋಚಕ ಫಲಿತಾಂಶಗಳು ಹೊರಹೊಮ್ಮತೊಡಗಿದವು. ಕ್ರೈಸ್ಟ್‌ ಚರ್ಚ್‌ನಲ್ಲಿ ಸೋಮವಾರ ಮುಕ್ತಾಯವಾದ ಟೆಸ್ಟ್ ಪಂದ್ಯವನ್ನೇ ನೋಡಿ. ನ್ಯೂಜಿಲೆಂಡ್ ತಂಡವು ಶ್ರೀಲಂಕಾ ಎದುರು ಕೊನೆಯ ಎಸೆತದಲ್ಲಿ ಜಯ ಗಳಿಸಿತ್ತು. ಇಂತಹ ಹತ್ತಾರು ರೋಚಕ ಕತೆಗಳು ಟೆಸ್ಟ್ ಮಾದರಿಯಲ್ಲಿ ಸಿಗುತ್ತವೆ. ಆದರೆ ಇದೀಗ ಟೆಸ್ಟ್ ಉಳಿಸುವ ಪ್ರಯತ್ನ ಕೈಗೂಡುತ್ತಿರುವ ಹೊತ್ತಿನಲ್ಲಿ ಏಕದಿನ ಮಾದರಿ ನೇಪಥ್ಯಕ್ಕೆ ಸರಿಯುತ್ತಿದೆ. ಈ ವರ್ಷ ಭಾರತದಲ್ಲಿ ನಡೆಯ ಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು 40 ಓವರ್‌ಗಳಿಗೆ (ಇನಿಂಗ್ಸ್‌ವೊಂದಕ್ಕೆ) ಸೀಮಿತ ಮಾಡ ಬೇಕು ಎಂದು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ಇಂತಹ ಹೊಸ ದಾರಿಗಳನ್ನು ಹುಡುಕುವುದು ಈಗ ಅನಿವಾರ್ಯವಾಗಿದೆ. ಟಿ20 ಮಾದರಿಯನ್ನು ಸಮರ್ಥವಾಗಿ ಬಳಸಿಕೊಂಡ ಫ್ರ್ಯಾಂಚೈಸಿಗಳು ಕೂಡ ದೀರ್ಘಕಾಲದವರೆಗೆ ಅಸ್ತಿತ್ವದಲ್ಲಿ ಇರಬೇಕೆಂದರೆ ಅಂತರರಾಷ್ಟ್ರೀಯ ಕ್ರಿಕೆಟ್‌ ಅನ್ನು ಉಳಿಸಲು ಕೈಜೋಡಿಸಲೇಬೇಕಾದ ಅನಿವಾರ್ಯ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.