ADVERTISEMENT

ಡಾ. ಗೀತಾ ವಸಂತ ಬರಹ: ದೇಹ– ಪ್ರಜ್ಞೆಗೆ ಬೇಕು ಧಾರಣಶಕ್ತಿ

ನಾವು ಸೃಷ್ಟಿಸಿಕೊಂಡ ತ್ರಿಶಂಕು ಸ್ವರ್ಗಗಳು ನಿತ್ಯ ನರಕಗಳಾಗಿ ಹೊರಹೊಮ್ಮಿದ್ದು ಏಕಾಏಕಿಯೇನಲ್ಲ

ಡಾ.ಗೀತಾ ವಸಂತ
Published 10 ಮೇ 2021, 19:31 IST
Last Updated 10 ಮೇ 2021, 19:31 IST
   

ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯಾ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ

ಅಕ್ಕಮಹಾದೇವಿಯ ಈ ಸಂಕಟದ ಸಾಲುಗಳು ಸರ್ವಕಾಲಕ್ಕೂ ಆತ್ಮನಿರೀಕ್ಷಣೆಗೆ ಸಲ್ಲುವಂಥವು. ನಮಗರಿ ವಿಲ್ಲದೇ ನಮ್ಮ ಸಾವನ್ನು ನಾವೇ ಆಹ್ವಾನಿಸಿಕೊಳ್ಳುವ ವಿಸ್ಮೃತಿಯಲ್ಲಿ ಬಂದಿಗಳು ನಾವು. ಟಿ.ವಿ. ಪರದೆಗಳ ಮೇಲೆ ಉರಿವ ಚಿತೆಗಳನ್ನೂ ಅಸಹಾಯಕರ ಚೀತ್ಕಾರಗಳನ್ನೂ ಕಾಣುತ್ತ ಕೇಳುತ್ತ ಇಂದ್ರಿಯ ಸಂವೇದನೆಯನ್ನೇ ಕಳೆದುಕೊಂಡಂಥ ನಿಷ್ಕ್ರಿಯತೆಗೆ ಒಡ್ಡಿಕೊಂಡಂಥ ಕಾಲವಿದು. ಎಲ್ಲೋ ಒಳಗೆ ದಹಿಸುವ ವಾಸನೆ ಸೂಕ್ಷ್ಮಗೊಂಡರಷ್ಟೇ ಅರಿವಿಗೆ ಬರುತ್ತದೆ.

ನಮ್ಮ ಮನದ ಬಯಕೆಗಳೇ ನಮ್ಮನ್ನು ದಹಿಸುತ್ತಿರುವುದಂತೂ ಕಟುಸತ್ಯ. ನಮ್ಮ ಅನುದಿನದ ಬಯಕೆಗಳನ್ನು ಪೂರೈಸಲು ನಮ್ಮ ಸುತ್ತಲೂ ನಾವೇ ನೇಯ್ದುಕೊಂಡಿರುವ ವ್ಯವಸ್ಥೆ ನಮ್ಮನ್ನೇ ಅಸಹಾಯಕರನ್ನಾಗಿಸುತ್ತಿರುವ ವ್ಯಂಗ್ಯವಿದು. ಆಧುನಿಕತೆಯು ಕಲಿಸಿದ ವ್ಯಕ್ತಿಪ್ರಜ್ಞೆಯು ನಮಗೆ ವೈಯಕ್ತಿಕ ಸ್ವರ್ಗಗಳನ್ನು ನಿರ್ಮಿಸಿಕೊಳ್ಳುವ ದುರಾಸೆಯನ್ನು ನೀಡಿದೆ. ಅದಕ್ಕೆ ಬೇಕಾದ ಹಣ ಹಾಗೂ ತಂತ್ರಜ್ಞಾನಗಳ ಬೇಟೆಗೆ ನಾವು ತೊಡಗಿಯಾಗಿದೆ. ನಮ್ಮ ಬೇರುಗಳಿಂದ ನಾವು ಬೇರ್ಪಟ್ಟು ನಗರಗಳೆಂಬ ತ್ರಿಶಂಕು ಸ್ವರ್ಗಗಳೆಡೆ ಆಕರ್ಷಿತರಾದೆವು. ಬೃಹತ್ ಕಟ್ಟಡಗಳು, ಥಳಕಿನ ರಸ್ತೆಗಳು, ಫ್ಲೈ ಓವರ್‌ಗಳು, ವೈಭವೋಪೇತ ಮಾಲ್‍ಗಳು, ರೆಸ್ಟೊರಂಟ್‌, ಪಬ್‍ಗಳು, ಜೂಜು ಅಡ್ಡೆಗಳು, ಹಣ ಗಳಿಸಲು ಹಾಗೂ ವ್ಯಯಿಸಲು ಇರುವ ಅಸಂಖ್ಯ ದಾರಿಗಳು ನಮ್ಮನ್ನು ರೋಮಾಂಚನಗೊಳಿಸಿದವು. ಈ ರೋಮಾಂಚನದ ಅಮಲು ನಮ್ಮನ್ನು ಸಂವೇದನಾರಹಿತರನ್ನಾಗಿಸುತ್ತ, ತಣ್ಣನೆಯ ಕ್ರೌರ್ಯವನ್ನು ನಮ್ಮ ನೆತ್ತರಿನಲ್ಲಿ ಬೆರೆಸಿಬಿಟ್ಟಿತು.

ADVERTISEMENT

ಇಂದು ಆರೋಗ್ಯ ತುರ್ತುಪರಿಸ್ಥಿತಿ ಎದುರಾಗಿ ಸಾವಿನ ಕ್ಷಣಗಳ ತುತ್ತತುದಿಯಲ್ಲಿ ನಿಂತು ಒಂಟಿಯಾಗಿ ಕಂಪಿಸಬೇಕಾದ ಅಸಹಾಯ ಉಮ್ಮಳಕ್ಕೆ ಬೆಚ್ಚಿಬಿದ್ದಿದ್ದೇವೆ. ಒಂದುಕಡೆ ಆಕ್ಸಿಜನ್‌ಗಾಗಿ ಅಲೆದಾಡುವ, ಚಿತಾಗಾರಗಳ ಮುಂದೆ ಸರದಿಯಲ್ಲಿ ನಿಂತ ಜನರ ತಲ್ಲಣವನ್ನು ಅಂದಾಜೂ ಮಾಡಲಾಗದ ಅಸಹಾಯಕತೆ. ಬೇಕೋ ಬೇಡವೋ ಎಲ್ಲರೂ ಅಂಗಡಿಗಳ ಮುಂದೆ ಸರದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ತರಹೇವಾರಿ ಸರಕುಗಳನ್ನು ಕಾಯ್ದಿರಿಸಿಕೊಳ್ಳುವ ಹೊಟ್ಟೆಬಾಕ ಸಂಭ್ರಮವೊಂದು ಮೈಮರೆತು ಕುಣಿಯುತ್ತಿದೆ. ನಾಳೆ ಸಾವಿನ ಸರದಿ ನಮ್ಮದೂ ಆಗಬಹುದೆಂಬ ಅರಿವಿಲ್ಲದ ಮೈಮರೆವು ಇದು.

ನಾವು ಸೃಷ್ಟಿಸಿಕೊಂಡ ತ್ರಿಶಂಕು ಸ್ವರ್ಗಗಳು ನಿತ್ಯ ನರಕಗಳಾಗಿ ಹೊರಹೊಮ್ಮಿದ್ದು ಏಕಾಏಕಿಯೇನಲ್ಲ. ನಮ್ಮ ಸ್ವಾರ್ಥವೇ ನಮ್ಮನ್ನು ನಮ್ಮ ಕೊನೆಯ ಕ್ಷಣಗಳಲ್ಲಿ ಏಕಾಂಗಿಗಳನ್ನಾಗಿಸಿದೆ. ಯುದ್ಧಗಳು, ನಿಸರ್ಗವಿಕೋಪಗಳು, ಸಾಂಕ್ರಾಮಿಕ ರೋಗಗಳು ಇಡೀ ಸಮೂಹ ಬದುಕನ್ನು ತುಂಡರಿಸುವ ವಿದ್ಯಮಾನಗಳು. ಎಲ್ಲ ಕಳೆದುಕೊಂಡ ವಿಹ್ವಲತೆಯಲ್ಲಿ ಆವರಿಸುವ ಖಾಲಿತನ ಹಾಗೂ ಬದುಕಿನ ಕೊಂಡಿ ಕಳಚಿದಂಥ ಆಘಾತಗಳು ಉದಾಸ ಭಾವವೊಂದು ಆವರಿಸುವಂತೆ ಮಾಡುತ್ತವೆ. ಆದರೆ ಇದೇ ಸಮಯದಲ್ಲಿ ಸಂವೇದನಾರಹಿತ ಸ್ವಾರ್ಥ ಮನಃಸ್ಥಿತಿಯೊಂದು ತನ್ನ ಹಲ್ಲು, ಉಗುರುಗಳನ್ನುಬೆಳೆಸಿಕೊಂಡುಬಿಟ್ಟಿರುತ್ತದೆ.

ಇಂದು ನಾವು ಎದುರಿಸುತ್ತಿರುವ ಸಾವಿನ ತಳಮಳ ಎರಡು ಬಗೆಯದು. ಒಂದು ದೈಹಿಕ ಸಾವಾದರೆ ಇನ್ನೊಂದು ನೈತಿಕ ಸಾವು. ಹಣ ಮಾಡುವ ಉನ್ಮಾದಕ್ಕೊಳಗಾದ ಜನ ಹೆಣ ಎಣಿಸಿ ಹಣ ಮಾಡಲು ಎಂಥ ಸುಲಿಗೆಗೂ ಇಳಿದುಬಿಟ್ಟಿದ್ದಾರೆ. ಸಾವಿನ ಬಾಗಿಲಲ್ಲಿ ನಿಂತವರಿಗೆ ಆಸ್ಪತ್ರೆಯ ಬಾಗಿಲುಗಳು ಮುಚ್ಚಿವೆ. ಆಸ್ಪತ್ರೆಯ ಹಾಸಿಗೆ ಬುಕ್ಕಿಂಗ್ ದಂಧೆಯ ಕರಾಳಮುಖ ಬಯಲಾಗುತ್ತಿರುವಂತೆಯೇ ವ್ಯವಸ್ಥೆಯ ಕರಾಳ ಮುಖ ತಲ್ಲಣ ಗೊಳಿಸುತ್ತಿದೆ. ‘ಒಲೆಹೊತ್ತಿ ಉರಿದಡೆ ನಿಲಲುಬಹುದಲ್ಲದೆ ಧರೆ ಹೊತ್ತಿ ಉರಿದರೆ ನಿಲಲುಬಾರದು’ ಎಂಬ ಅಸಹಾಯ ಮೊರೆ ಶ್ರೀಸಾಮಾನ್ಯನದಾಗಿದೆ.

ನಮ್ಮನ್ನು ಸಲಹುವ ವ್ಯವಸ್ಥೆಯೇ ಕತ್ತು ಹಿಸುಕಿದರೆ ಅದರ ವಿರುದ್ಧ ಪ್ರಾಣಚೈತನ್ಯವನ್ನು ಸಂಚಯಿಸಿ ಎದ್ದು ನಿಲ್ಲುವ ತ್ರಾಣವನ್ನೇ ಕಳೆದುಕೊಂಡ ನಿಷ್ಕ್ರಿಯಭಾವ ಆವರಿಸಿ ನಿಂತಿದೆ. ಹಣ ಹೀರುವ ಜಿಗಣೆಗಳಂತೆ ವರ್ತಿಸು ತ್ತಿರುವ ಕೆಲವು ಆಸ್ಪತ್ರೆಗಳ ದುರಾಸೆ, ಔಷಧಗಳ ಕೃತಕ ಅಭಾವ ಸೃಷ್ಟಿಸುವ ಕಾಳಸಂತೆಕೋರರ ನೀಚತನ ಮುಂತಾದವು ಬಯಲಿಗೆ ಬರುತ್ತಾ ವೈದ್ಯಕೀಯ ರಂಗದ ಘೋರ ಮಾಫಿಯಾ ಭಯ ಹುಟ್ಟಿಸುತ್ತಿದೆ. ಹಣ ಕಟ್ಟದೇ ಹೆಣ ಕೊಡುವುದಿಲ್ಲವೆಂದು ತೊಡೆ ತಟ್ಟಿ ನಿಂತ ವ್ಯವಸ್ಥೆಯೆದುರು ಅಸಹಾಯಕಳಾಗಿ ಪತಿಯ ಶವವನ್ನು ಆಸ್ಪತ್ರೆಯಲ್ಲೇ ಬಿಟ್ಟುಬಂದ ಹೆಂಡತಿ, ಮಕ್ಕಳ ಮನದಲ್ಲಿ ಏನು ಹೆಪ್ಪುಗಟ್ಟಿರಬಹುದೆಂದು ನಾವು ಊಹಿಸಲು ಸಾಧ್ಯವೇ?

ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಕಣ್ಣೆದುರೇ ಉಸಿರಿ ಗಾಗಿ ಪರದಾಡಿ ಉಸಿರು ನಿಲ್ಲಿಸುವ ಆಪ್ತರಿಗಾಗಿ ಕಣ್ಣೀರು ಮಿಡಿಯಲೂ ಆಗದಂತೆ ಸ್ತಬ್ಧವಾಗಿ ನಿಂತ ಮುಖಗಳನ್ನು ಎದುರುಗೊಳ್ಳುವುದು ಹೇಗೆ? ಇದಕ್ಕೆಲ್ಲ ಉತ್ತರಿಸಬೇಕಾದ, ನಿರ್ವಹಿಸಬೇಕಾದ ವ್ಯವಸ್ಥೆ
ಯನ್ನು ದೂರುವುದೇ? ಆ ವ್ಯವಸ್ಥೆಯಲ್ಲಿ ನಮ್ಮದೂ ಪಾಲಿದೆಯೆಂದು ಆತ್ಮವಿಮರ್ಶೆಗಿಳಿಯುವುದೇ?

ಜನಸಾಮಾನ್ಯರ ಬದುಕು ಇಂದು ಒಮ್ಮೆಲೇ ಕೊಂಡಿ ಕಳಚಿಬಿದ್ದ ಅತಂತ್ರ ಸ್ಥಿತಿಗೆ ಸಿಲುಕಿ ತತ್ತರಿಸುತ್ತಿದೆ. ಮುಂದೇನು ಎಂಬ ಬೃಹದಾಕಾರದ ಪ್ರಶ್ನೆ ಉತ್ತರ ಕಾಣದ ಭೀತಿಯಲ್ಲಿ ನಲುಗಿಸುತ್ತಿದೆ. ಮತ್ತೆ ತಮ್ಮ ಊರುಗಳಿಗೆ ಗುಳೆ ಹೊರಟವರಲ್ಲಿ ಅಭಾವ ವೈರಾಗ್ಯ. ಹಳ್ಳಿಗಳ ಬದುಕೇನೂ ಅವರನ್ನು ಸಂಭ್ರಮದಿಂದ ಸ್ವಾಗತಿಸುತ್ತಿಲ್ಲ. ತುಂಬು ಕುಟುಂಬಗಳ ಜೊತೆಗೇ ಮನಸ್ಸುಗಳೂ ಒಡೆದುಹೋಗಿವೆ. ಮನುಷ್ಯರ ದುರಾಸೆ ಗಳನ್ನು ತಣಿಸುವ ತ್ರಾಣ ಹಳ್ಳಿಗಳಿಗಿಲ್ಲ. ಇಲ್ಲಿರಲಾರೆ, ಅಲ್ಲಿಯೂ ಹೋಗಲಾರೆ ಎಂಬ ತ್ರಿಶಂಕು ನರಕಗಳಲ್ಲಿ ಯುವಜನತೆ ಬೇಯುತ್ತಿದೆ. ಬೇರುಗಳು ಗ್ರಾಮೀಣ ಪರಿಸರದಲ್ಲಿ ಹೂತಿದ್ದರೆ, ನಗರಗಳು ತೋರಿಸಿದ ಅವಕಾಶಗಳ ಆಕಾಶ ತನ್ನತ್ತ ಸೆಳೆಯುತ್ತಿದೆ.

ಹಾಗೆ ನೋಡಿದರೆ ನಗರಗಳು ಅನಾಮಿಕರಾಗುವ ಸುಖವೊಂದನ್ನು ನಮಗೆ ದಯಪಾಲಿಸಿದ್ದವು. ದಮನಿತ ಸಮುದಾಯಗಳಿಗೂ ಸ್ತ್ರೀಯರಿಗೂ ಜಾತಿ ಅವಮಾನಗಳಿಂದಲೂ ಲಿಂಗತಾರತಮ್ಯದ ಕುಲುಮೆಯಿಂದಲೂ ಹೊರಬಂದು ತಮ್ಮನ್ನು ಮರುಶೋಧಿಸಿಕೊಳ್ಳುವ ಹಾಗೂ ಪುನರ್‌ರಚಿಸಿಕೊಳ್ಳುವ ಕನಸಿಗೆ ರೆಕ್ಕೆ ಹಚ್ಚಿದ್ದವು. ಹಳ್ಳಿಗಳ ಸರ್ಕಾರಿ ಶಾಲೆಯಲ್ಲಿ ಓದಿಯೂ ಕಲಿಕೆಯ ಶ್ರದ್ಧೆಯಿಂದ ಎತ್ತರದ ಹುದ್ದೆಗಳಿಗೇರುವ, ವಿದೇಶಗಳಿಗೆ ಹಾರುವ ಉದಾಹರಣೆಗಳು ಕಿರಿಯರನ್ನು ನಗರಮುಖಿಯಾಗಿಸಿದವು. ಇಂದು ಕಿಕ್ಕಿರಿದ ನಗರಗಳು ನರಕಗಳಾಗಿದ್ದರೆ, ಪಾಳುಬಿದ್ದ ಹಳ್ಳಿಗಳಿಗೆ ಕನಸುಗಳಿಗೆ ಕಾವು ಕೊಡುವ ಚೈತನ್ಯವಿಲ್ಲ.

ಬದುಕಿನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅವಕಾಶಗಳಿಗಾಗಿ ಏನು ಬೇಕಾದರೂ ಮಾಡಿಯೇನು ಎಂಬ ನೈತಿಕ ಕುಸಿತವು ಸಮೂಹದಿಂದ ಅಗಲಿದ ಏಕಾಕಿ ಅಪರಾಧಿಗಳನ್ನು ಸೃಷ್ಟಿಸಿದೆ. ಇಂಥವರು ಸುತ್ತಲಿನವರ ಸಾವಿನ ಆಕ್ರಂದನವನ್ನೂ ಕೇಳದಷ್ಟು ಕಿವುಡರೂ ಮನೆಯುರಿಯುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳುವ ಸಮಯಸಾಧಕರೂ ಆಗಿ ಬದಲಾಗಿಬಿಟ್ಟಿದ್ದಾರೆ. ಹೇಗಾದರೂ ಬದುಕಬೇಕೆಂಬ ದಾಹ, ಹಿಂಬಾಲಿಸುವ ಸಾವಿನ ನೆರಳನ್ನು ಕಾಣದಷ್ಟು ಅಸೂಕ್ಷ್ಮವಾಗಿಬಿಟ್ಟಿದೆ.

ಬೆಳಕಿಗೆ ಬರದ ಇಂಥ ಇನ್ನೂ ಎಷ್ಟೋ ಘಟನೆಗಳು ಆತ್ಮಸಾಕ್ಷಿಯನ್ನು ಕೊಲ್ಲುತ್ತಲೇ ಹೋಗುತ್ತವೆ. ಈ ದೈಹಿಕ ಸಾವು ಹಾಗೂ ನೈತಿಕ ಸಾವುಗಳು ದಿನವೂ ಸಂಭವಿಸುತ್ತಿರುವ ಇಂದಿನ ದಿನಮಾನದಲ್ಲಿ ಎಳೆಯ ಮನಸ್ಸುಗಳನ್ನು ರೂಪಿಸುವ ಕೆಲಸದಿಂದ ಹಿಂದೆಗೆಯುವಂತಿಲ್ಲ. ಮೌಲ್ಯವ್ಯವಸ್ಥೆಯೊಂದನ್ನು ರೂಪಿಸಬೇಕಾದ ಕುಟುಂಬಗಳು ಆರ್ಥಿಕ ಅತಂತ್ರತೆಯಲ್ಲಿ ಹೊಯ್ದಾಡುತ್ತಿದ್ದರೆ ಶೈಕ್ಷಣಿಕ ವ್ಯವಸ್ಥೆಯು ಬರಿಯ ತಾಂತ್ರಿಕ ಆಕರಗಳಲ್ಲಿ ಪಠ್ಯಕ್ರಮವನ್ನು ಪೂರೈಸಲು ಹೆಣಗುತ್ತಿದೆ. ಜಾಣ್ಮೆಯೆಂದರೆ ಸದಾ ಅಪ್‌ಡೇಟ್ ಆಗುವುದು, ವೇಗಕ್ಕೆ ಹೊಂದಿಕೊಳ್ಳುವುದು ಎಂಬುದನ್ನೇ ನಿರೀಕ್ಷಿಸುವ ನಾವು, ವೇಗವು ತಲೆ ತಿರುಗುವಂತೆ ಮಾಡಿ ಭ್ರಮಿತ ಸ್ಥಿತಿಯನ್ನು ಸೃಷ್ಟಿಸಬಲ್ಲದು ಎಂಬ ಎಚ್ಚರವನ್ನೂ ಹೊಂದಿರಬೇಕಾಗುತ್ತದೆ.

ಕೃತಕ ಬುದ್ಧಿಮತ್ತೆಯ ಆವಿಷ್ಕಾರದ ಈ ಯುಗದಲ್ಲಿ ಇಂಥ ಚರ್ಚೆಗಳೇ ಅರ್ಥಹೀನವೆಂದು ಕೆಲವರು ಕಾಲೆಳೆಯುವುದಿದೆ. ಆದರೆ ಬುಗುರಿಯೊಂದು ತಿರುಗಿ ಮುಗಿದಮೇಲೆ ನೆಲಕ್ಕೊರಗಲೇಬೇಕಲ್ಲವೇ? ಆಗ ನೆಲದ ವಾಸ್ತವಗಳೇ ನಮ್ಮನ್ನು ಕಾಯಬೇಕು. ದೈಹಿಕವಾಗಿ ರೋಗನಿರೋಧಕ ಶಕ್ತಿ ಹಾಗೂ ಪ್ರಜ್ಞೆಯ ನೈತಿಕ ಧಾರಣ ಶಕ್ತಿಗಳೇ ನಮ್ಮನ್ನು ಪೊರೆಯಬೇಕು.

-ಡಾ. ಗೀತಾ ವಸಂತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.