ADVERTISEMENT

ಹಿಂದಿ ದಿವಸ್: ಏತಕ್ಕಾಗಿ ಹಿಂದಿ? ಇತಿಹಾಸ ಹಾಗೂ ವಿರೋಧ–ಇಲ್ಲಿದೆ ವಿವರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಸೆಪ್ಟೆಂಬರ್ 2021, 8:33 IST
Last Updated 15 ಸೆಪ್ಟೆಂಬರ್ 2021, 8:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಪ್ರಮುಖ ಭಾಷೆಯಾಗಿರುವ ಹಾಗೂ ಭಾರತ ಸರ್ಕಾರದ ಆಡಳಿತ ಭಾಷೆ ಎಂದು ಗುರುತಿಸಲ್ಪಟ್ಟಿರುವ ಹಿಂದಿ ಭಾಷೆಯನ್ನು ಗೌರವಿಸಲು, ಜಾಗೃತಿ ಮೂಡಿಸಲು ಇಂದು (ಸೆ.14) ದೇಶದಾದ್ಯಂತ 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿದೆ.

ಸಾವಿರಾರು ಭಾಷೆ ಹೊಂದಿರುವ ಭಾರತದಂತಹ ದೇಶದಲ್ಲಿ ಎಲ್ಲ ಭಾಷೆಗಳಿಗೆ ಅವುಗಳದೇಯಾದ ಪ್ರಾಮುಖ್ಯತೆ ಇದೆ. ಆದರೆ, ಬ್ರಿಟಿಷರು ದೇಶ ಬಿಟ್ಟು ಹೋದಾಗ ನಮ್ಮದೇಯಾದ ಆಡಳಿತ ಭಾಷೆ ಇರಬೇಕು ಎಂದು ಕೆಲವು ಹಿಂದಿ ಪ್ರೇಮಿಗಳು ಸರ್ಕಾರದ ಮೇಲೆ ಒತ್ತಡ ತಂದು ಹಿಂದಿಯನ್ನು ಇಂಗ್ಲಿಷ್ ಜೊತೆಗೆ ಆಡಳಿತ ಭಾಷೆಯನ್ನಾಗಿ ಮಾಡಲಾಯಿತು.

‘ಹಿಂದಿ ದಿವಸ್‘ ಪ್ರಯುಕ್ತ ದೇಶದಲ್ಲಿ ಇಂದು ಕೇಂದ್ರ ಸರ್ಕಾರ ಹಾಗೂ ಅನೇಕ ಹಿಂದಿ ಭಾಷೆಯ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದಿ ಬೆಳೆಸುತ್ತಿವೆ. ಸೆಪ್ಟೆಂಬರ್ ತಿಂಗಳನ್ನು ಹಿಂದಿ ಮಾಸಾಚರಣೆ ಕೂಡ ಎಂದು ಆಚರಿಸಲಾಗುತ್ತದೆ. ಹಾಗಾದರೆ, ಭಾರತದಂತಹ ಬಹುಭಾಷೆಯ ದೇಶದಲ್ಲಿ ಹಿಂದಿ ಹೇಗೆ ಆಡಳಿತ ಭಾಷೆಯಾಯಿತು, ಅದರ ಇತಿಹಾಸ ಏನು? ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ADVERTISEMENT

ಇತಿಹಾಸ

1918 ರಲ್ಲಿ ನಡೆದ ಮೊದಲ ಹಿಂದಿ ಸಾಹಿತ್ಯ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿ ಅವರು, ‘ಹಿಂದಿ ರಾಷ್ಟ್ರಭಾಷೆಯನ್ನು ಮಾಡಬೇಕು. ಅದೊಂದು ಜನಸಮೂಹದ ಭಾಷೆ‘ ಎಂದು ಹೇಳಿದ್ದರು.

ಬ್ರಿಟಿಷರು ಭಾರತ ತೊರೆದು ಹೋದಾಗ, ದೇಶಕ್ಕೆ ಬಹುಜನರು ಮಾತನಾಡುವ ಭಾಷೆಯೊಂದು ಆಡಳಿತ ಭಾಷೆ ಇರಬೇಕು ಎಂದು ಲೇಖಕ ಬೇವೊಹರ ರಾಜೇಂದ್ರ ಸಿಂಹ ಸೇರಿದಂತೆ ಅನೇಕರು ಸರ್ಕಾರದ ಮೇಲೆ ಒತ್ತಡ ತಂದರು.

1946, ಡಿಸೆಂಬರ್ 6 ರಲ್ಲಿ ಭಾರತಕ್ಕೆ ಸಂವಿಧಾನ ರಚಿಸಲು ಸಮಿತಿ ರಚಿಸಲಾಯಿತು. ಬೇವೊಹರ ರಾಜೇಂದ್ರ ಸಿಂಹ ಸೇರಿದಂತೆ ಅನೇಕ ಲೇಖಕರು, ಸಾಹಿತಿಗಳು, ಕವಿಗಳು ಈ ಸಮಿತಿ ಮುಂದೆ ಹಿಂದಿ ಆಡಳಿತ ಭಾಷೆಯಾಗಬೇಕು ಎಂದು ಬೇಡಿಕೆ ಸಲ್ಲಿಸಿದರು.‌

ರಾಜೇಂದ್ರ ಸಿಂಹ ಅವರ ಜೊತೆ ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಾಳಲೇಕರ್, ಮೈಥಿಲಿ ಶರಣ್ ಗುಪ್ತ ಹಾಗೂ ಸೇಠ್ ಗೋವಿಂದ ದಾಸ್ ಕೂಡ ಹಿಂದಿ ಆಡಳಿತ ಭಾಷೆಯಾಗಲು ಶ್ರಮಿಸಿದರು.

ನಂತರ 1949 ಸೆಪ್ಟೆಂಬರ್ 14 ರಂದು ಸಂವಿಧಾನ ರಚನಾ ಸಮಿತಿ, ಹಿಂದಿಯನ್ನು ದೇಶದ ಒಂದು ಆಡಳಿತ ಭಾಷೆಯನ್ನಾಗಿ ಒಪ್ಪಿ ಅದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿತು. (ವಿಧಿ 343ರಲ್ಲಿ ವಿವರಿಸಿದಂತೆ).

1953 ರ ಸೆಪ್ಟೆಂಬರ್ 14 ರಂದು ದೇಶದಾದ್ಯಂತ ಮೊದಲ ಬಾರಿಗೆ ರಾಷ್ಟ್ರೀಯ ಹಿಂದಿ ದಿವಸ್ ಆಚರಿಸಲಾಯಿತು. ಬೇವೊಹರ ರಾಜೇಂದ್ರ ಸಿಂಹ ಅವರ ಜನ್ಮದಿನವೂ ಕೂಡ ಸೆಪ್ಟೆಂಬರ್ 14 ಆಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿ ಬೆಳೆಸಬೇಕು ಎಂದು ಉತ್ತರ ಭಾರತದಲ್ಲಿ ಪ್ರಬಲವಾಗಿದ್ದ ಹಿಂದಿ ಅಧಿಕೃತವಾಗಿ ಆಡಳಿತ ಭಾಷೆಯಾಯಿತು.

ಇದಕ್ಕೆ ಕನ್ನಡ, ತಮಿಳು ಹಾಗೂ ತೆಲುಗಿನಂತಹ ದ್ರಾವಿಡ ಭಾಷಿಗರ ವಿರೋಧ ಕೂಡ ವ್ಯಕ್ತವಾಗಿತ್ತು. ಅದಾಗ್ಯೂ ಇಂಗ್ಲಿಷ್‌ಗೆ ಪರ್ಯಾಯವಾಗಿ ಭಾರತದಲ್ಲಿ ಹಿಂದಿಯನ್ನು ಮುನ್ನೆಲೆಗೆ ತರಲಾಗುತ್ತಿದೆ.

ಭಾರತವಲ್ಲದೇ, ನೇಪಾಳ, ಫಿಜಿ, ಭೂತಾನ್, ಮಾರಿಸಸ್ ಸೇರಿದಂತೆ ಕೆಲ ದೇಶಗಳು ಹಿಂದಿ ಭಾಷೆಯನ್ನು ಬಳಸುತ್ತವೆ.

‘ದೇವನಾಗರಿ‌‘ ಲಿಪಿಯನ್ನು ಹೊಂದಿರುವ ಹಿಂದಿ ಭಾಷೆಯು ಇಂಡೋ-ಯುರೋಪಿಯನ್ ವರ್ಗಗಳ ಭಾಷೆಗೆ ಸೇರಿದ ಒಂದು ಭಾಷೆಯಾಗಿದೆ. ಇದು ಸಂಸ್ಕೃತದ ಪರ್ಯಾಯವಾಗಿ ರೂಪಗೊಂಡರೂ ಪರ್ಶಿಯನ್ ಭಾಷೆಯಿಂದ ಸಾಕಷ್ಟು ಪ್ರಭಾವಿತ ಎನ್ನಲಾಗುತ್ತಿದೆ‌.

ಮೋಘಲರ ಕಾಲದಲ್ಲಿ ಹಿಂದಿ ಸಾಕಷ್ಟು ಬದಲಾವಣೆಗೆ ಒಳಗಾಯಿತು ಎಂದು ತಜ್ಞರು ಹೇಳುತ್ತಾರೆ.

‘ಹಿಂದಿ ದಿವಸ್‘ ಪ್ರಯುಕ್ತ, ಹಿಂದಿ ಮಾಸಾಚಾರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಅಲ್ಲದೆ, ಈ ದಿನದ ಪ್ರಯುಕ್ತ ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮ, ಭಾಷಣ, ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆ ಬೆಳವಣಿಗೆಗೆ ಶ್ರಮಿಸಿದವರಿಗೆ ‘ಹಿಂದಿ ಸನ್ಮಾನ್‘ ಪ್ರಶಸ್ತಿ ಸೇರಿದಂತೆ, ‘ರಾಜಭಾಷಾ ಕೃತಿ ಪುರಸ್ಕಾರ‘ ಹಾಗೂ ‘ರಾಜಭಾಷಾ ಗೌರವ ಪುರಸ್ಕಾರ‘ ನೀಡಲಾಗುತ್ತದೆ.

ಇನ್ನು, ಹಿಂದಿ ದಿವಸ್ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.

ಹಿಂದೆ ಹೇರಿಕೆಗೆ ವಿರೋಧ
ಕೇಂದ್ರ ಸರ್ಕಾರದ ಆಡಳಿತ ಭಾಷೆ ಹಿಂದಿಯಾದರೂ ದೇಶದಲ್ಲಿ ಸಂವಿಧಾನ 22 ಭಾಷೆಗಳಿಗೆ ಅಧಿಕೃತ ಮಾನ್ಯತೆ ನೀಡಿದೆ. ಅನೇಕ ರಾಜ್ಯಗಳು ತಮ್ಮ ಸ್ಥಳೀಯ ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿವೆ. ಸಂವಿಧಾನ ಕೂಡ ಹಿಂದಿ ಇತರ ಭಾಷೆಗಳಂತೆ ಒಂದು ಭಾಷೆಯಷ್ಟೇ, ಅದು ಈ ದೇಶದ ರಾಷ್ಟ್ರ ಭಾಷೆ ಅಲ್ಲ ಎಂದು ಹೇಳಿದೆ. ಅದಾಗ್ಯೂ ಕೇಂದ್ರ ಸರ್ಕಾರವೇ ಮುಂದೆ ನಿಂತು ‘ಹಿಂದಿ ದಿವಸ್‘ ಆಚರಿಸಲು ಎಲ್ಲ ರಾಜ್ಯಗಳಿಗೆ ಒತ್ತಡ ಹೇರುತ್ತಿರುವುದು ವಿವಾದ ಸೃಷ್ಟಿಸಿದೆ.

ಅದರಲ್ಲೂ ದಕ್ಷಿಣ ಭಾರತದ ದ್ರಾವಿಡ ಭಾಷಿಕರಿಂದ ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿ ವರ್ಷ ಹಿಂದಿ ದಿವಸ್ ದಿನ ಹಿಂದಿ ಹೇರಿಕೆ ನಿಲ್ಲಿಸಿ ಅಭಿಯಾನ ನಡೆಸಲಾಗುತ್ತಿದೆ.

ಟ್ವಿಟರ್‌ನಲ್ಲಿ#StopHindiImposition ಎಂದು ಸಾಕಷ್ಟು ಸಲ ಟ್ರೆಂಡಿಂಗ್ ಆಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗೂ ಕೇಂದ್ರ ಸರ್ಕಾರ ಮಾತ್ರ ಇತ್ತೀಚೆಗೆ ಹಿಂದಿ ಹೇರಿಕೆಯನ್ನು ವ್ಯಾಪಕವಾಗಿ ನಡೆಸುತ್ತಿರುವುದು ಮಾತೃಭಾಷಾ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.