ADVERTISEMENT

ಬೆಳೆವ ಕ್ರೀಡಾಸಿರಿ ಮೊಳಕೆಯಲ್ಲೇ ಕಾಣಿ

ಕ್ರೀಡೆಯ ಬಗೆಗಿನ ನಮ್ಮ ಮನೋಧೋರಣೆ ಬದಲಾಗಬೇಕಿದೆ

ಗಿರೀಶದೊಡ್ಡಮನಿ
Published 8 ಆಗಸ್ಟ್ 2021, 19:30 IST
Last Updated 8 ಆಗಸ್ಟ್ 2021, 19:30 IST
Lead 09.08.2021.jpg
Lead 09.08.2021.jpg   

ನೀರಜ್ ಚೋಪ್ರಾ ಹೆಸರು ಈಗ ಮನೆಮಾತಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್, ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸುತ್ತಿದ್ದಂತೆಯೇ ದೇಶದಾದ್ಯಂತ ಸಂಭ್ರಮ ಗರಿಗೆದರಿತು. ದೇಶಭಕ್ತಿ, ಕ್ರೀಡಾಪ್ರೀತಿಯ ಭಾವ ಹೊನಲಾಗಿ ಹರಿಯಿತು. ಹಳ್ಳಿಯ ಹುಡುಗರಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರೂ ಅಭಿನಂದನೆಯ ಮಳೆಗರೆದರು. ಹರಿಯಾಣದ ಕೃಷಿ ಕುಟುಂಬದ ಹುಡುಗನಿಗೆಹತ್ತಾರು ಕೋಟಿ ರೂಪಾಯಿ ಬಹುಮಾನ ಹರಿದುಬಂತು.

ಆದರೆ, 23 ವರ್ಷದ ಈ ಹುಡುಗ ಮಾತ್ರ ಒಂದೇ ದಿನದಲ್ಲಿ ತಾರೆಯಾಗಿದ್ದಲ್ಲ. ಅವರ ಸಾಧನೆಯ ಹಿಂದಿನ ಪ್ರಮುಖ ವ್ಯಕ್ತಿ ಕೋಚ್, ಜರ್ಮನಿಯ ಯುವೆ ಹಾನ್ ಎರಡು ವರ್ಷಗಳ ಹಿಂದೆ ಇಲ್ಲಿಯ ವ್ಯವಸ್ಥೆಗಳ ಬಗ್ಗೆ ಜುಗುಪ್ಸೆಗೊಂಡು ತಮ್ಮ ದೇಶಕ್ಕೆ ಮರಳಿದ್ದರೆ, ಈ ಚಿನ್ನದ ಕ್ಷಣ ಬಹುಶಃ ಮರೀಚಿಕೆಯಾಗುತ್ತಿತ್ತೇನೋ?

‘ನಾನು ಚೋಪ್ರಾಗೆ ಎರಡು ಭರ್ಜಿಗಳಿಗಾಗಿ ಬೇಡಿಕೆ ಸಲ್ಲಿಸಿದ್ದೆ. ಕೆಲವು ದಿನಗಳಾದರೂ ಅವು ಬರಲಿಲ್ಲ. ನಂತರ ವಿಚಾರಿಸಿದಾಗ, ಸಂಬಂಧಪಟ್ಟ ವ್ಯಕ್ತಿಯು ನಾನು ಮನವಿ ಮಾಡಿದ್ದ ಇ– ಮೇಲ್‌ ಅನ್ನೇ ತೆರೆದು ನೋಡಿರಲಿಲ್ಲ. ಇಲ್ಲಿ ವೃತ್ತಿಪರತೆಯ ಕೊರತೆ ಇದೆ’ ಎಂದು ಹಾನ್ ಎರಡು ವರ್ಷಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

ADVERTISEMENT

ಹೋದ ಜೂನ್‌ನಲ್ಲಿ ಪಟಿಯಾಲದಲ್ಲಿ ನೀರಜ್, ಶಿವಪಾಲ್ ಯಾದವ್ ಮತ್ತು ಅನುರಾಣಿ ಅವರಿಗೆ ತರಬೇತಿ ನೀಡುವಾಗಲೂ ಹಾನ್ ಬಹಳಷ್ಟು ತೊಂದರೆ ಗಳನ್ನು ಎದುರಿಸಿದ್ದರು. ‘ಭಾರತ ಕ್ರೀಡಾ ಪ್ರಾಧಿಕಾರ, ಭಾರತ ಅಥ್ಲೆಟಿಕ್ ಫೆಡರೇಷನ್‌ಗಳನ್ನು ಸುಧಾರಿಸುವುದು ಕಷ್ಟ. ಒಲಿಂಪಿಕ್ ಕೂಟಕ್ಕೆ ಹೋಗುವ ಕ್ರೀಡಾಪಟುಗಳಿಗೆ ಸರಿಯಾದ ಪೋಷಕಾಂಶಯುಕ್ತ ಆಹಾರದ ವ್ಯವಸ್ಥೆಯಾಗುತ್ತಿಲ್ಲ. ಆಡಳಿತ ನಡೆಸುವವರಿಗೆ ಜ್ಞಾನವಿಲ್ಲವೋ ಅಥವಾ ನಿರ್ಲಕ್ಷ್ಯ ಧೋರಣೆಯೋ ಗೊತ್ತಿಲ್ಲ. ನನಗೂ ಹಿಂದಿನ ಬಾಕಿ ನೀಡುವುದಿಲ್ಲವೆಂದು ಬೆದರಿಸಿ ಹೊಸ ಗುತ್ತಿಗೆಗೆ ಸಹಿ ಮಾಡಿಸಿಕೊಂಡಿದ್ದಾರೆ’ ಎಂದು ಮಾಧ್ಯಮಗಳ ಮುಂದೆ ಅವರು ಆರೋಪಿಸಿದ್ದರು.

ನೀರಜ್ ಒಲಿಂಪಿಕ್ ಪದಕ ಜಯಿಸುವ ನಿರೀಕ್ಷೆಯು ಮೂರು ವರ್ಷಗಳಿಂದಲೂ ಇದೆ. ಅವರಿಗೇ ಇಂತಹ ಪರಿಸ್ಥಿತಿ ಎದುರಾದರೆ, ಉಳಿದವರ ಪಾಡೇನು?

ಮಹಿಳೆಯರ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ ಲವ್ಲಿನಾ ಬೊರ್ಗೊಹೈನ್ ಟೋಕಿಯೊದಲ್ಲಿ
69 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜಯಿಸಿದ್ದೇ ತಡ, ಅವರ ಮನೆಯಿರುವ ಅಸ್ಸಾಂ ರಾಜ್ಯದ ಗೋಲ್‌ಘಾಟ್ ಜಿಲ್ಲೆಯ ಸರುಪಥರ್ ಗ್ರಾಮಕ್ಕೆ ಟಾರ್‌ ರಸ್ತೆ ಮಾಡುವ ಕೆಲಸ ಆರಂಭವಾಯಿತು. ಇದೀಗ ಅವರು ಈ ರಸ್ತೆಯ ಮೂಲಕ ತಮ್ಮ ಮನೆಗೆ ಮರಳಲಿದ್ದಾರೆ. ಆದರೆ, ಇದಕ್ಕೂ ಮುನ್ನ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತಿದ್ದ ರಸ್ತೆಯಲ್ಲಿ ಅದೆಷ್ಟು ಬಾರಿ ಬೀಳುತ್ತ, ಏಳುತ್ತ ಬಾಕ್ಸಿಂಗ್ ತರಬೇತಿ, ಶಾಲೆಗಳಿಗೆ ಹೋಗಿರಬಹುದು? ಲೆಕ್ಕ ಇಟ್ಟವರಾರು?

ಬೆಳ್ಳಿ ಗೆದ್ದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಬಾಲ್ಯದಲ್ಲಿ ಅಭ್ಯಾಸಕ್ಕಾಗಿ ತಮ್ಮ ಮನೆಯಿಂದ ನಗರಕ್ಕೆ ತೆರಳಲು ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಗಳನ್ನು ಅವಲಂಬಿಸಿದ್ದರು. ಈಚೆಗೆ ಆ ಲಾರಿ ಚಾಲಕರನ್ನು ಕರೆದು ಸತ್ಕರಿಸಿದರು. 41 ವರ್ಷದ ನಂತರ ಒಲಿಂಪಿಕ್‌ ಕೂಟದಲ್ಲಿ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡದ ‘ಗೋಡೆ’ ಪಿ.ಆರ್.ಶ್ರೀಜೇಶ್ ಅವರು ಗೋಲ್‌ಕೀಪಿಂಗ್ ಅರಂಭಿಸಲು ಇಷ್ಟಪಟ್ಟಾಗ, ಕಿಟ್ ಕೊಡಿಸಲು ಮನೆಯಲ್ಲಿದ್ದ ಹಸು ಮಾರಿ ಅವರ ತಂದೆ ದುಡ್ಡು ಹೊಂದಿಸಿದ್ದರಂತೆ.

ಈಗಷ್ಟೇ ಅಲ್ಲ, ಈ ಹಿಂದಿನ ಒಲಿಂಪಿಕ್ಸ್‌ ಸಂದರ್ಭದಲ್ಲಿಯೂ ಇಂತಹ ಕಥೆಗಳು ಅದೆಷ್ಟೋ ವರದಿಯಾಗಿ
ದ್ದವು. ಬಡತನ, ಸಮಾಜದ ವ್ಯಂಗ್ಯ, ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ಒಲಿಪಿಕ್ಸ್‌ನಂತಹ ಮಹಾ
ಕ್ರೀಡಾಮೇಳದಲ್ಲಿ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಯುವುದು ಸುಲಭಸಾಧ್ಯವಲ್ಲ. ನಗರದ ಮಧ್ಯಮವರ್ಗದ ಕುಟುಂಬದ ಮಕ್ಕಳಿಗೂ ಇದು ಕಷ್ಟ. ಏಕೆಂದರೆ, ಕ್ರಿಕೆಟ್‌ ರಂಗಿನ ಥಳುಕು ಬಳುಕು ಶ್ರೀಮಂತಿಕೆಯ ಮುಂದೆ ಉಳಿದ ಆಟಗಳತ್ತ ಆಸಕ್ತಿ ತೋರಿದರೆ ಸಿಗುವ ಪ್ರೋತ್ಸಾಹ ಅಷ್ಟಕ್ಕಷ್ಟೆ. ಅದರ ನಡುವೆಯೂ ಸ್ವಯಂ
ಪ್ರೇರಣೆಯೊಂದಿಗೆ ಆಟ ಮುಂದುವರಿಸುವುದು ಸುಲಭವಲ್ಲ. ಒಂದೊಮ್ಮೆ ಕುಟುಂಬದ ಪ್ರೋತ್ಸಾಹ ಸಿಕ್ಕರೂ, ಮಕ್ಕಳು ಯಾವ ಹಂತದವರೆಗೆ ಬೆಳೆಯಬಲ್ಲರು, ಅದಕ್ಕೆ ಸೂಕ್ತ ಸೌಲಭ್ಯಗಳು ಇವೆಯೇ, ಪ್ರತಿಭೆಗೆ ತಕ್ಕ ಮನ್ನಣೆ ನೀಡುವ ವ್ಯವಸ್ಥೆ ಇದೆಯೇ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗುವುದು ಮಹಾನಗರಗಳಲ್ಲಿಯೂ ಸಾಧ್ಯವಿಲ್ಲ.

ಅದಕ್ಕಾಗಿಯೇ 130 ಕೋಟಿ ಜನಸಂಖ್ಯೆಯ ಭಾರತ, ಒಲಿಂಪಿಕ್ಸ್‌ನಲ್ಲಿ ಬೆರಳೆಣಿಕೆಯಷ್ಟು ಪದಕಗಳನ್ನು ಗೆಲ್ಲುತ್ತಿದೆ. ಆದರೆ ಈಗ ಕ್ರೀಡೆಯ ಬಗ್ಗೆ ಇರುವ ನಮ್ಮ ಧೋರಣೆಯನ್ನು ಬದಲಿಸಿಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯವನ್ನು ಟೋಕಿಯೊ ಒಲಿಂಪಿಕ್ಸ್‌ ತೋರಿಸಿ ಕೊಟ್ಟಿದೆ. ಆಟಗಳು ಕೇವಲ ಮನರಂಜನೆ ಅಥವಾ ಕಾಲಹರಣದ ಚಟುವಟಿಕೆಯಲ್ಲ ಎಂಬ ಅರಿವು ಮನೆಯಿಂದ ಆರಂಭವಾಗಬೇಕು. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ರೂಪಿಸುವ ಶಕ್ತಿ ಇರುವ ಕ್ರೀಡೆಯು ಸಂಸ್ಕೃತಿಯಾಗಬೇಕಲ್ಲವೇ?

ತಮ್ಮ ಮಕ್ಕಳು ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಬಲ್ಲರೇ ಎಂದು ಪಾಲಕರು ಕೇಳುವುದು ನ್ಯಾಯ ಸಮ್ಮತವೇ ಆಗಿದೆ. ಅವರಿಗೆ ಅಭಯ ನೀಡುವ ಕೆಲಸ ಸರ್ಕಾರ ಮತ್ತು ಕ್ರೀಡಾಸಂಸ್ಥೆಗಳಿಂದ ಆಗಬೇಕು. ಗೆಲ್ಲುವ ಕುದುರೆಯ ಮೇಲೆ ಬಾಜಿ ಕಟ್ಟುವವರಿಗೆ ಕೊರತೆಯಿಲ್ಲ. ಆದರೆ ಕುದುರೆಗಳನ್ನು ಜಯಿಸುವ ಮಟ್ಟಕ್ಕೆ ಬೆಳೆಸುವ ಕೆಲಸ ಮೊದಲು ನಡೆಯಬೇಕು. ಗ್ರಾಮೀಣ ಮಟ್ಟದಿಂದಲೇ ಪ್ರತಿಭಾಶೋಧ, ಪೋಷಣೆ ಆರಂಭವಾಗಬೇಕು. ಕೈಗಾರಿಕೆ, ಕಾರ್ಪೊರೇಟ್ ಸಂಸ್ಥೆ, ಬ್ಯಾಂಕ್, ಸರ್ಕಾರದ ಇಲಾಖೆಗಳಲ್ಲಿ ಆಟಗಾರರಿಗೆ ನೌಕರಿ, ಪ್ರೋತ್ಸಾಹಧನ ನೀಡಬೇಕು. ಆಗ ಹೆಚ್ಚು ವಿಭಾಗ ಗಳಲ್ಲಿ ಸ್ಪರ್ಧಿಸಲು ತಂಡಗಳನ್ನು ಕಟ್ಟಲು ಸುಲಭವಾಗುತ್ತದೆ. ವಯೋಮಿತಿಯ ಸ್ಪರ್ಧೆಗಳು ಕಡ್ಡಾಯವಾಗಬೇಕು. ಏಕೆಂದರೆ, ಸ್ಪರ್ಧೆಗಳು ಹೆಚ್ಚು ಇದ್ದಷ್ಟೂ ಆಟಗಾರರು ಬೆಳಕಿಗೆ ಬರುತ್ತಾರೆ. ಒಲಿಂಪಿಕ್ ಅಲ್ಲದಿದ್ದರೂ ಇನ್ನಿತರ ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಕೂಟ ಗಳಲ್ಲಿಯೂ ಭಾಗವಹಿಸುವ ಅವಕಾಶ ಸಿಗಬಹುದಲ್ಲವೇ?

ಹೈದರಾಬಾದಿನಲ್ಲಿ ಬ್ಯಾಡ್ಮಿಂಟನ್, ಒಡಿಶಾದಲ್ಲಿ ಹಾಕಿ, ಈಶಾನ್ಯ ಭಾರತದಲ್ಲಿ ವೇಟ್‌ಲಿಫ್ಟಿಂಗ್, ಬಾಕ್ಸಿಂಗ್, ಫುಟ್‌ಬಾಲ್, ಹರಿಯಾಣದಲ್ಲಿ ಕುಸ್ತಿ, ಅಥ್ಲೆಟಿಕ್ಸ್‌ಗೆ ಸಿಗುತ್ತಿರುವ ಪ್ರೋತ್ಸಾಹವನ್ನು ಅಲ್ಲಗಳೆಯಲಾಗದು. ಇದು ಉಳಿದ ರಾಜ್ಯಗಳಿಗೂ ಮಾದರಿ. ಒಂದು ಪ್ರದೇಶದಲ್ಲಿ ಪ್ರಚಲಿತವಾಗಿರುವ ಕ್ರೀಡೆಯ ಬೆಳವಣಿಗೆಗೆ ಯೋಜನೆ ಜಾರಿ ಮಾಡಬೇಕು. ಸೌಲಭ್ಯಗಳು ಇರುವಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು.

ಮುಖ್ಯವಾಗಿ ಶಾಲೆ, ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಬಲಗೊಳಿಸಬೇಕು. ಏಕೆಂದರೆ, ಬೇರು
ಮಟ್ಟದಲ್ಲಿ ಪ್ರತಿಭೆಗಳನ್ನು ಮೊದಲಿಗೆ ಗುರುತಿಸುವವರೇ ಅವರು. ಆದರೆ ತಾವು ಬೆಳೆಸಿದ ಕ್ರೀಡಾಪಟು ಅಂತರ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದಾಗ, ತಮಗೆ ಯಾವ ಪುರಸ್ಕಾರವೂ ಸಿಗುತ್ತಿಲ್ಲ ಎನ್ನುವ ಹತಾಶೆ ಈ ವರ್ಗದಲ್ಲಿದೆ. ಅದನ್ನು ದೂರ ಮಾಡಬೇಕು. ದೈಹಿಕ ಶಿಕ್ಷಣ ಅವಧಿಗೂ ಉಳಿದ ವಿಷಯಗಳಿಗಿರುವಷ್ಟೇ ಪ್ರಾಧಾನ್ಯ ದೊರೆಯಬೇಕು.

ಇದರೊಂದಿಗೆ, ಪ್ರತಿಯೊಂದು ಕ್ರೀಡೆಯಲ್ಲಿ ಆಡುವ ಮಕ್ಕಳ ದತ್ತಾಂಶಗಳ ನಿರ್ವಹಣೆ ಶಿಸ್ತುಬದ್ಧವಾಗಿ ನಡೆಯ ಬೇಕು. ಡಿಜಿಟಲ್ ಯುಗದಲ್ಲಿ ಇದು ಅಸಾಧ್ಯವಲ್ಲ. ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್ ಕ್ರೀಡೆಗಳ ಯಶಸ್ಸಿನ ಹಿಂದಿರುವ ಗುಟ್ಟು ಕೂಡ ಇದೇ ಆಗಿದೆ. ಆದರೆ, ನೀರಜ್ ಚೋಪ್ರಾ ತಮ್ಮ 14ನೇ ವಯಸ್ಸಿನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಜಾವೆಲಿನ್ ಎಷ್ಟು ದೂರ ಎಸೆದಿದ್ದರು ಎಂದು ಹುಡುಕಿದರೆ ಮಾಹಿತಿ ಸಿಗುವುದಿಲ್ಲ. ವೃತ್ತಿಪರತೆ ಮತ್ತು ಪಾರದರ್ಶಕತೆಯಿಂದ ಮಾತ್ರ ಸಾಧನೆ ಸಾಧ್ಯ.

ಪದಕ, ಹೆಸರು, ಹಣದಾಚೆ ಕ್ರೀಡೆಯಿಂದ ಸಿಗುವ ಆರೋಗ್ಯವೂ ಕೋವಿಡ್ ಕಾಲಘಟ್ಟದಲ್ಲಿ ಅಮೂಲ್ಯ.

‘ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು, ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ?, ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ, ಗಟ್ಟಿತನ ಗರಡಿ ಫಲ ಮಂಕುತಿಮ್ಮ’– ಡಿ.ವಿ.ಗುಂಡಪ್ಪನವರ ಕಗ್ಗ ಎಂದೆಂದಿಗೂ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.