ADVERTISEMENT

ಎ. ನಾರಾಯಣ ಬರಹ: ಏಳು ವರ್ಷ, ಎರಡು ಸತ್ಯ

ಸಂಸದೀಯ ಪ್ರಜಾಸತ್ತೆ ಒಬ್ಬ ಪ್ರಬಲ ನಾಯಕನ ಸುಪರ್ದಿಯಲ್ಲಿ ಯಾಕಾದರೂ ಇರಬೇಕು?

ಎ.ನಾರಾಯಣ
Published 30 ಮೇ 2021, 21:00 IST
Last Updated 30 ಮೇ 2021, 21:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಿನ್ನೆಗೆ (ಮೇ 30) ಏಳು ವರ್ಷಗಳು ತುಂಬಿವೆ. ಕೋವಿಡ್ ಎರಡನೆಯ ಅಲೆಯನ್ನು ಎದುರಿಸುವಲ್ಲಿ ಎಡವಿದ ಕಾರಣ ಇಷ್ಟು ಸಮಯದ ನಂತರ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ ಮತ್ತು ಪ್ರಧಾನಮಂತ್ರಿಯ ವರ್ಚಸ್ಸು ಮೊದಲ ಬಾರಿಗೆ ಸೊರಗುತ್ತಿದೆ ಎನ್ನುವ ವರ್ತಮಾನವಿದೆ. ಈ ಬೆಳವಣಿಗೆಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕಿದೆ.

ಕೋವಿಡ್ ಸಂಬಂಧಿ ವೈಫಲ್ಯಗಳ ಒಂದೇ ಕಾರಣಕ್ಕಾಗಿ ಜನರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದಾದರೆ ಅದು ಈ ಸರ್ಕಾರದ ಸೋಲಲ್ಲ, ಗೆಲುವು. ಜನರಿಗೆ ಅಸಮಾಧಾನ ಮೂಡಿದ್ದು ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ಹೀಗೆಲ್ಲಾ ಆಗಿ ಹೋದದ್ದಕ್ಕೆ ಮಾತ್ರ ಎಂದಾದರೆ, ಈ ತನಕ ಈ ಸರ್ಕಾರದ ಅವಧಿಯಲ್ಲಿ ಆಗಿಹೋದ ಎಲ್ಲ ವಿದ್ಯಮಾನ ಗಳಿಗೂ ದೇಶದ ಬಹುಪಾಲು ಜನರ (ಕೊನೇಪಕ್ಷ ಚುನಾವಣೆಯಲ್ಲಿ ಬಹುಮತ ಪಡೆಯಲು ಅಗತ್ಯ ಇರುವಷ್ಟು ಸಂಖ್ಯೆಯ ಜನರ) ಅಂಗೀಕಾರದ ಮುದ್ರೆ ಇದೆ ಎಂದಾಯಿತು. ಇಲ್ಲಿಯತನಕ ಈ ಸರ್ಕಾರ ಸಾಧನೆಯ ಹಾದಿಯಲ್ಲಿ ಎಡವುತ್ತಾ ಸಾಗಿದ ಬಗ್ಗೆ, ಚುನಾವಣೆ ಗೆಲ್ಲಲು ಆಳುವ ಪಕ್ಷ ಬಳಸಿಕೊಂಡ ಕೆಟ್ಟ ತಂತ್ರಗಳ ಬಗ್ಗೆ ಜನ ತಲೆ ಕೆಡಿಸಿಕೊಂಡಿಲ್ಲ ಎಂದಾಯಿತು. ಅಂದಮೇಲೆ ಬಿಜೆಪಿಯನ್ನು ದೊಡ್ಡ ಮಟ್ಟಿಗೆ ಕಂಗೆಡಿಸುವಂತಹುದು ಏನೂ ಆಗಿಲ್ಲ ಅಂತಲೇ ಹೇಳಬೇಕಾಗುತ್ತದೆ.

ಈಗಿನ ಹಿನ್ನಡೆಯಿಂದ ಪಾರಾಗಲು ಅದಕ್ಕೆ ಬೇಕಾಗಿರುವುದು ಇನ್ನೊಂದು ಕಣ್ಕಟ್ಟು. ಅರ್ಧಸತ್ಯ
ಗಳನ್ನು ಮತ್ತು ಪೂರ್ಣ ಸುಳ್ಳುಗಳನ್ನು ಬೆರೆಸಿ ತಯಾರಿಸಿದ ಇನ್ನೊಂದು ನರೇಟಿವ್. ಇಷ್ಟನ್ನು ಮಾಡುವ ವಿದ್ಯೆ ಬಿಜೆಪಿಗೆ ಕರತಲಾಮಲಕ. ಅದಕ್ಕೆ ಅಗತ್ಯ ಇರುವ ಎಲ್ಲಾ ತಯಾರಿಯನ್ನು ಬಿಜೆಪಿಯ ಭಯಾನಕ ಐ.ಟಿ. ಸೆಲ್ ಮತ್ತು ಅದರ ಟ್ರೋಲ್ ಸೇನೆ ಈಗಾಗಲೇ ನಡೆಸುತ್ತಿವೆ ಎನ್ನುವ ಸೂಚನೆಗಳಿವೆ.

ADVERTISEMENT

ಬಿಜೆಪಿಯ ಈ ಏಳು ವರ್ಷಗಳ ಆಡಳಿತದ ಕುರಿತಾಗಿ ಎರಡು ಗಂಭೀರವಾದ ಸತ್ಯಗಳನ್ನು ಜನ ಮನಗಾಣದೇ ಹೋದ ಹೊರತು ಬಿಜೆಪಿಯ ರಾಷ್ಟ್ರ ಮಟ್ಟದ ಭದ್ರಕೋಟೆಯಲ್ಲಿ ಬಿರುಕು ಮೂಡುತ್ತಿದೆ ಎಂದು ಹೇಳುವ ಹಾಗಿಲ್ಲ. ಬಿಜೆಪಿಯ ಆಳ್ವಿಕೆಯ ಅವಧಿಯಲ್ಲಿ ಪ್ರಬಲವಾಗಿ ಬೆಳೆದದ್ದು ಆ ಪಕ್ಷವೇ ಹೊರತು ದೇಶವಲ್ಲ ಎನ್ನುವುದು ಮೊದಲ ಸತ್ಯ. ತಾನು ದೇಶವನ್ನು ಪ್ರಬಲವಾಗಿ ಕಟ್ಟಿದ ಹಾಗೆ ಇನ್ಯಾವ ಪಕ್ಷವೂ ಮಾಡಲು ಸಾಧ್ಯ ಇಲ್ಲ ಅಂತ ಜನರನ್ನು ಬಿಜೆಪಿ ನಂಬಿಸಿರಬಹುದು. ಆದರೆ ಏಳು ವರ್ಷಗಳಲ್ಲಿ ದೇಶ ಕಂಡ ವಾಸ್ತವವೇ ಬೇರೆ ಎನ್ನುವ ಸತ್ಯ ಅದು.

ಎರಡನೆಯದ್ದು, ದೇಶ ಬಹಳ ಕಾಲದಿಂದ ನಿರೀಕ್ಷಿಸುತ್ತಿದ್ದ ಪ್ರಬಲ ನಾಯಕನೊಬ್ಬ ಕೊನೆಗೂ 2014ರಲ್ಲಿ ಅವತರಿಸಿಯೇ ಬಿಟ್ಟ ಎಂಬ ನಂಬಿಕೆ ಕೂಡಾ ಸುಳ್ಳು ಎನ್ನುವ ಸತ್ಯ. ಏಳು ವರ್ಷಗಳ ಹಿಂದೆ ದೇಶ ಕಂಡುಕೊಂಡದ್ದು ಒಬ್ಬ ಪ್ರಬಲ ನಾಯಕನನ್ನಲ್ಲ- ಬದಲಿಗೆ ನಾಯಕತ್ವದ ಒಂದು ಹುಸಿ ಮಾದರಿಯನ್ನು, ನಾಯಕತ್ವದ ಒಂದು ಅಪ್ರಬುದ್ಧ ಪ್ರಭೇದವನ್ನು.

ಈ ಎರಡೂ ಸತ್ಯಗಳು ಜನಮನದ ಆಳಕ್ಕಿಳಿಯದಷ್ಟೂ ಕಾಲ ಬಿಜೆಪಿ ಅನುಭವಿಸುವ ಎಲ್ಲಾ ಹಿನ್ನಡೆಗಳು ತಾತ್ಕಾಲಿಕ ಆಗಬಹುದಾದ ಸಾಧ್ಯತೆಯೇ ಹೆಚ್ಚು. ಇತ್ತೀಚೆಗೆ ಪಂಚರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶ ಪಡೆಯಲಿಲ್ಲ ಎಂಬುದರಿಂದಾಗಲೀ ಅಥವಾ ಕೋವಿಡ್ ಎದುರಿಸುವಲ್ಲಿ ಕೇಂದ್ರ ಸರ್ಕಾರ ತೋರಿದ ಕಳಪೆ ನಿರ್ವಹಣೆಯ ಕುರಿತಾಗಿ ಜನರಲ್ಲಿ ಉಂಟಾಗಿರುವ ಅಸಮಾಧಾನದಿಂದಾಗಲೀ ರಾಷ್ಟ್ರ ರಾಜಕೀಯದ ದಿಕ್ಕು ಬದಲಾಗುವ ಸಾಧ್ಯತೆಗಳು ಉದ್ಭವಿಸಬಹುದು ಅಂತ ವಿರೋಧ ಪಕ್ಷಗಳು ಅಂದುಕೊಂಡಿದ್ದರೆ ಅದು ತುಸು ಅವಸರದ ತೀರ್ಮಾನ ಅಂತ ಭಾವಿಸಬೇಕಾಗುತ್ತದೆ. ಅಂತಹ ಸಾಧ್ಯತೆಯೊಂದು ಸೃಷ್ಟಿಯಾಗಬೇಕಾದರೆ, ವಿರೋಧ ಪಕ್ಷಗಳು ಮೇಲೆ ಹೇಳಿದ ಎರಡೂ ಸತ್ಯಗಳನ್ನು ಗಂಭೀರವಾಗಿ ಜನರಿಗೆ ತಲುಪಿಸಬೇಕಾಗುತ್ತದೆ.

ಮೊದಲಿಗೆ, ಪ್ರಬಲ ರಾಷ್ಟ್ರ ಕಟ್ಟುವ ವಿಚಾರವನ್ನು ನೋಡೋಣ. ಒಂದು ರಾಷ್ಟ್ರವನ್ನು ಪ್ರಬಲವಾಗಿ ಕಟ್ಟುವುದು ಎಂದರೆ ಮಿಲಿಟರಿ ಬಲ ಹೆಚ್ಚಿಸಿಕೊಳ್ಳುವುದು, ಸುತ್ತಲಿರುವ ಒಂದೆರಡು ದೇಶಗಳ ವಿರುದ್ಧ ಅಬ್ಬರಿಸುವುದು, ಸಮಸ್ತ ಅಧಿಕಾರವನ್ನು ಕೇಂದ್ರೀಕರಿಸಿ ಚಲಾಯಿಸುವುದು ಎಂಬುದೆಲ್ಲಾ ಆಧುನಿಕ ಜಗತ್ತಿನಲ್ಲಿ ಅಪ್ರಸ್ತುತ ಮಾದರಿಗಳು. ಆದರೆ ಅಧಿಕಾರದ ಅವಧಿಯುದ್ದಕ್ಕೂ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ್ದು ಮಾತ್ರ ಇದನ್ನೇ. ಈ ಕಾಲಕ್ಕೆ ಅನುಗುಣವಾಗಿ ರಾಷ್ಟ್ರವನ್ನು ಬಲಗೊಳಿಸುವುದು ಎಂದರೆ ಮೊದಲಿಗೆ ಅರ್ಥವ್ಯವಸ್ಥೆಯನ್ನು ಸುಸ್ಥಿರವಾಗಿ ಬೆಳೆಸುವುದು, ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು, ಪ್ರಜಾತಾಂತ್ರಿಕವಾಗಿ ಅಧಿಕಾರ ಚಲಾಯಿಸುವುದು. ಆದರೆ ಆದದ್ದೇನು? ಏಳು ವರ್ಷಗಳಲ್ಲಿ ಅರ್ಥವ್ಯವಸ್ಥೆ ಕಂಡುಕೇಳರಿಯದ ರೀತಿಯಲ್ಲಿ ಕುಸಿಯಿತು. ಕೋವಿಡ್ ಕಾಣಿಸಿಕೊಳ್ಳುವ ಮೊದಲೇ ಆದ ವಿದ್ಯಮಾನ ಇದು. ಅರ್ಥವ್ಯವಸ್ಥೆಗೆ ಸಂಬಂಧಿಸಿದಂತೆ ಸದ್ಯ ಯಾವ ಬೆಳ್ಳಿಗೆರೆಗಳೂ ಕಾಣಿಸುತ್ತಿಲ್ಲ.

ಸಾಮರಸ್ಯದ ಬದಲಿಗೆ ವ್ಯಾಪಕವಾಗಿ ದ್ವೇಷವನ್ನು ಬಿತ್ತಲಾಗಿದೆ. ದ್ವೇಷವೇ ಏಳು ವರ್ಷಗಳ ರಾಜಕೀಯದ ಮೂಲಮಂತ್ರ. ದೇಶದ ಹೆಮ್ಮೆಯ ಬಳುವಳಿಯಾದ ಪ್ರಜಾತಾಂತ್ರಿಕ ಸಂವಿಧಾನವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ ಕಡೆಗಣಿಸಿ ಅಧಿಕಾರ ಚಲಾಯಿಸಲಾಗಿದೆ. ದೇಶದ ಚರಿತ್ರೆಯ ಕರಾಳ ಅಧ್ಯಾಯ ಎಂದೇ ಭಾವಿಸಲಾದ ತುರ್ತುಪರಿಸ್ಥಿತಿಯನ್ನಾದರೂ ಸಂವಿಧಾನದ ಆವರಣದೊಳಗೆ ಹೇರಲಾಗಿತ್ತು. ತುರ್ತುಪರಿಸ್ಥಿತಿಯ ಕಾಲದಲ್ಲಿ ಸಂವಿಧಾನಕ್ಕೆಆ ಮಟ್ಟಿಗಾದರೂ ಇದ್ದ ಬೆಲೆಯೂ ಈಗ ಇಲ್ಲವಾಗಿದೆ.

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರಲ್ಲಿ, ಇನ್ನೊಂದು ರಾಮ ಮಂದಿರ ನಿರ್ಮಿಸುವುದರಲ್ಲಿ, ಬಾನೆತ್ತರದ ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ, ಭವ್ಯ ಪಾರ್ಲಿಮೆಂಟ್ ಭವನ, ಪ್ರಧಾನಮಂತ್ರಿಗಳ ವಾಸಕ್ಕೆ ಮಧ್ಯಯುಗದ ದೊರೆಗಳ ರೀತಿಯ ಐಷಾರಾಮಿ ಅರಮನೆ ಎಬ್ಬಿಸುವುದರಲ್ಲಿ ದೇಶದ ಶಕ್ತಿ, ಸ್ವಾಭಿಮಾನ ಮೆರೆಸುತ್ತಿದ್ದೇವೆ ಎಂಬ ಸರ್ಕಾರದ ಮಂದಿಯ ವಾದ, ಹೆಚ್ಚೆಂದರೆ ಒಂದು ಸೈದ್ಧಾಂತಿಕ ನಿಲುವು ಹೊಂದಿದವರ ಅಭಿಪ್ರಾಯವಾದೀತೇ ಹೊರತು ಅದನ್ನು ಸತ್ಯ ಅಂತ ಸ್ವೀಕರಿಸಲೂ ಸಾಧ್ಯವಿಲ್ಲ, ಇವೆಲ್ಲದರಿಂದಾಗಿ ಭಾರತ ಪ್ರಬಲ ರಾಷ್ಟ್ರ ಆಗುವುದೂ ಇಲ್ಲ.

ಈ ಏಳು ವರ್ಷಗಳಲ್ಲಿ ಸ್ಥಾಪನೆಯಾದ ಯಾವ ಸಂಸ್ಥೆ, ಕೈಗೆತ್ತಿಕೊಂಡ ಯಾವ ಯೋಜನೆ, ಜಾರಿಗೊಳಿಸಿದ ಯಾವ ಕಾನೂನು-ಕಟ್ಟಲೆಗಳು ಕಳೆದೆರಡು ತಿಂಗಳುಗಳ ಘೋರ ಸಂಕಷ್ಟದಲ್ಲಿ ದೇಶವಾಸಿಗಳ ರಕ್ಷಣೆಗೆ ಬಂದವು ಎನ್ನುವ ಒಂದೇ ಒಂದು ಪ್ರಶ್ನೆಗೆ ಸಿಗುವ ಉತ್ತರಕ್ಕಿಂತ ಹೆಚ್ಚಿನ ಯಾವ ಮಾನದಂಡ ಬೇಕು ಈ ಸರ್ಕಾರದ ಈ ತನಕದ ಸಾಧನೆಯನ್ನು ಅಳೆಯುವುದಕ್ಕೆ ಹೇಳಿ. ಈ ಅವಧಿಯಲ್ಲಿ ಬಿಜೆಪಿ ಮತ್ತೆ ಮತ್ತೆ ಚುನಾವಣೆಗಳನ್ನು ಗೆದ್ದಿದೆ, ಸಾಧ್ಯವಾದಲ್ಲೆಲ್ಲಾ ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅದರಿಂದ ಏನೀಗ?

ಇನ್ನು ಪ್ರಬಲ ನಾಯಕತ್ವದ ವಿಚಾರಕ್ಕೆ ಬಂದರೆ, ಒಂದು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಬಲ ನಾಯಕತ್ವ ಅಂದರೆ ಏನು ಮತ್ತು ಅದು ಯಾಕಾದರೂ ಬೇಕು ಎನ್ನುವ ಮೂಲಭೂತ ಪ್ರಶ್ನೆ ಇದೆ. ಪ್ರಬಲ ನಾಯಕತ್ವ ಬೇಕು ಎನ್ನುವ ಹಾಗೆ 2014ರ ವೇಳೆಗೆ ದೇಶಕ್ಕೆ ದೇಶವೇ ಹಾತೊರೆಯುವ ಹಾಗೆ ಮಾಡಿದ್ದೇ ಈಗ ನೋಡಿದರೆ ಒಂದು ರಾಜಕೀಯ ಗಿಮಿಕ್ ಎನ್ನುವಂತೆ ಕಾಣಿಸುತ್ತದೆ. ಅದಿರಲಿ. ಏಳು ವರ್ಷಗಳ ನಂತರ ಸಮಸ್ತ ದೇಶವಾಸಿಗಳು ಪ್ರಬಲ ನಾಯಕತ್ವದ ಲಕ್ಷಣಗಳ ಕುರಿತಂತೆ ಕೆಲ ಪ್ರಾಥಮಿಕ ಪಾಠಗಳನ್ನು ಕಲಿಯಬೇಕಾದ ಕಾಲ ಬಂದಿದೆ. ಇಲ್ಲದೇ ಹೋದರೆ ಅವರು ಮತ್ತೊಮ್ಮೆ ಅದೇ ತಪ್ಪು ಮಾಡುವ ಸಾಧ್ಯತೆ ಇದೆ. ಯಾವ ತಪ್ಪು ಎಂದರೆ, ತನ್ನ ಮೂಲ ವೈಯಕ್ತಿಕ ವಿವರಗಳಲ್ಲೇ (ಬಯೊ-ಡೇಟಾ) ಸತ್ಯಗಳನ್ನು ದಾಖಲಿಸಲಾಗದ, ಯಾವುದೇ ರೀತಿಯ ಪ್ರಶ್ನೆಗಳನ್ನೂ ಎದುರಿಸಲಾಗದ, ದೇಶದ ನಿರ್ವಹಣೆ ಎಂದರೆ ಪ್ರಚಾರದ ನಿರ್ವಹಣೆ ಅಂತ ಭಾವಿಸುವ, ಮಾತನಾಡಬೇಕಾದಲ್ಲಿ ಮೌನವನ್ನೂ ಮೌನದಿಂದಿರಬೇಕಾದಲ್ಲಿ ಮಾತುಗಳನ್ನೂ ಆಡುವ, ಸ್ಥಾನದ ಘನತೆ ಮರೆತು ಸಾರ್ವಜನಿಕ ಭಾಷಣಗಳಲ್ಲಿ ಕ್ಷುಲ್ಲಕ ಉದ್ಗಾರಗಳನ್ನು ಮಾಡುವ, ಸಂಕೀರ್ಣ ಸಮಸ್ಯೆಗಳಿಗೆ ಸರಳೀಕೃತ ಪರಿಹಾರಗಳು ಸಾಧ್ಯ ಅಂತ ನಂಬಿ ನಿರ್ಧಾರಗಳನ್ನೂ ಕೈಗೊಳ್ಳುವ ರಾಜಕಾರಣಿಗಳನ್ನು ಪ್ರಬಲ ನಾಯಕರು ಅಂತ ಒಪ್ಪಿ ಸ್ವೀಕರಿಸುವ ತಪ್ಪು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.