ADVERTISEMENT

ಬರಗೂರು ರಾಮಚಂದ್ರಪ್ಪ ಬರಹ: ಸಂಸದೀಯ ನಡಾವಳಿಯ ಸಂರಕ್ಷಣೆ

ಸಾಮೂಹಿಕ ಜವಾಬ್ದಾರಿಯ ಆಶಯಕ್ಕೆ ವಿರುದ್ಧವಾಗಿ ವ್ಯಕ್ತಿ ಕೇಂದ್ರಿತ ಪ್ರವೃತ್ತಿ ಪ್ರಮುಖವಾಗುತ್ತಿದೆ

ಪ್ರೊ.ಬರಗೂರು ರಾಮಚಂದ್ರಪ್ಪ
Published 1 ಆಗಸ್ಟ್ 2021, 19:30 IST
Last Updated 1 ಆಗಸ್ಟ್ 2021, 19:30 IST
ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ- ಪ್ರಾತಿನಿಧಿಕ ಚಿತ್ರ
ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ- ಪ್ರಾತಿನಿಧಿಕ ಚಿತ್ರ   

ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ ದಿನವೇ ಕೆಲವು ‘ಜನಪರ’ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಸಚಿವ ಸಂಪುಟದ ರಚನೆಯೇ ಆಗಿಲ್ಲದಿರುವಾಗ, ಒಬ್ಬ ಸಚಿವರಾದರೂ ಅಧಿಕಾರ ಸ್ವೀಕಾರ ಮಾಡಿಲ್ಲದಿರುವಾಗ ಹೀಗೆ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದವರಲ್ಲಿ ಇವರೇ ಮೊದಲಿಗರಲ್ಲ. ನನಗೆ ತಕ್ಷಣ ನೆನಪಿಗೆ ಬರುವುದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಒಟ್ಟು ಬಡವರ ಪರವಾದ ಬಹುಮುಖ್ಯಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದು.

ಅಂದೇ ನಡೆದ ಸುದ್ದಿವಾಹಿನಿ ಚರ್ಚೆಯೊಂದರಲ್ಲಿ ನಾನು ಹೀಗೆ ಹೇಳಿದ್ದೆ: ‘ಸಿದ್ದರಾಮಯ್ಯಅವರು ಘೋಷಿಸಿದ ಕಾರ್ಯಕ್ರಮಗಳು ಜನಪರವಾಗಿವೆ. ಆದರೆ ಮುಖ್ಯಮಂತ್ರಿಯವರ ಜೊತೆಗೆ ಒಬ್ಬ ಸಚಿವರೂ ಸರ್ಕಾರಕ್ಕೆ ಸೇರ್ಪಡೆಯಾಗಿಲ್ಲದಿರುವಾಗ ಈ ಕಾರ್ಯಕ್ರಮಗಳನ್ನು ಸಚಿವ ಸಂಪುಟದ ನಿರ್ಣಯಗಳೆಂದು ತಿಳಿಯಲಾಗದು. ಸಚಿವ ಸಂಪುಟ ರಚನೆಯಾದ ನಂತರ ಅಧಿಕೃತ ಒಪ್ಪಿಗೆಯೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಘೋಷಿಸುವುದು ಸಂಸದೀಯ ಪ್ರಜಾಪ್ರಭುತ್ವದ ನಿಜ ವಿಧಾನ’. ನನ್ನ ಈ ಮಾತುಗಳನ್ನು ಅಂದಿನ ಚರ್ಚೆಯಲ್ಲಿ ಭಾಗವಹಿಸಿದ್ದ ಡಿ.ಬಿ.ಚಂದ್ರೇಗೌಡರು ಸಮರ್ಥಿಸಿದ್ದು ಮಾತ್ರವಲ್ಲ, ‘ಸಚಿವ ಸಂಪುಟವೇ ಇಲ್ಲದಿರುವಾಗ ಸರ್ಕಾರದ ಮುಖ್ಯ ನಿರ್ಣಯಗಳನ್ನು ಒಬ್ಬ ವ್ಯಕ್ತಿಯೇ ಕೈಗೊಳ್ಳುವುದು ಸಂವಿಧಾನಕ್ಕೆ ವಿರುದ್ಧ’ ಎಂದು ಹೇಳಿದರು. ಅಂದು ನಾವಿಬ್ಬರೂ ಸಿದ್ದರಾಮಯ್ಯನವರ ಕಾರ್ಯಕ್ರಮಗಳನ್ನು ವಿರೋಧಿಸಿರಲಿಲ್ಲ. ಸಂವಿಧಾನದತ್ತ ಸಂಸದೀಯ ನಡಾವಳಿಯನ್ನು ಅನುಸರಿಸುವುದು ಅಗತ್ಯ ಎಂದು ಪ್ರತಿಪಾದಿಸಿದ್ದೆವು.

ಅದೇ ರೀತಿ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮ ಘೋಷಣೆಯ ಹಿಂದಿರುವ ಸದುದ್ದೇಶವನ್ನು ಇಲ್ಲಿ ಪ್ರಶ್ನಿಸುತ್ತಿಲ್ಲ. ಆದರೆ ಸಿದ್ದರಾಮಯ್ಯನವರಾಗಲಿ, ಬಸವರಾಜ ಬೊಮ್ಮಾಯಿಯವರಾಗಲಿ ಅಥವಾ ಯಾವುದೇ ಮುಖ್ಯಮಂತ್ರಿಯಾಗಲಿ, ಆರ್ಥಿಕ ಭಾರದ ಮತ್ತು ನೀತಿ ಆಧಾರಿತ ಕಾರ್ಯಕ್ರಮಗಳನ್ನು ಏಕವ್ಯಕ್ತಿ ನಿರ್ಣಯದ ಮೂಲಕ ಪ್ರಕಟಿಸುವುದು ಸಂಸದೀಯ ನಡಾವಳಿಯೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

ADVERTISEMENT

ಸಂವಿಧಾನದ 74 ಮತ್ತು 75ನೇ ವಿಧಿಗಳು ಪ್ರಧಾನಿ ಮತ್ತು ಅವರ ಸಚಿವ ಸಂಪುಟ ರಚನೆಯ ವಿಧಾನವನ್ನು, 163 ಮತ್ತು 164ನೇ ವಿಧಿಗಳು ರಾಜ್ಯಗಳ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ರಚನೆಯ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿವೆ. ಜವಾಬ್ದಾರಿಗಳನ್ನೂ ವಿವರಿಸಿವೆ. ಇಲ್ಲಿ ಪ್ರಧಾನಿ ಅಥವಾ ಮುಖ್ಯಮಂತ್ರಿ ಮಾತ್ರವೇ ಕಾರ್ಯಾಂಗವಾಗುವುದಿಲ್ಲ. ಸಚಿವ ಸಂಪುಟದ ಸಾಮೂಹಿಕ ಜವಾಬ್ದಾರಿಯ ಆಶಯವನ್ನು ಸಂವಿಧಾನ ಪ್ರತಿಪಾದಿಸಿದೆ. ಯಾವುದೇ ಪ್ರಮುಖ ಕಾರ್ಯಕ್ರಮಗಳು ಸಚಿವ ಸಂಪುಟದ ನಿರ್ಣಯಗಳಾದಾಗ, ಶಾಸಕಾಂಗದಲ್ಲೂ ಅಗತ್ಯ ಚರ್ಚೆಗೆ ಒಳಗಾಗಿ ಒಪ್ಪಿತವಾದಾಗ ಸಂಸದೀಯ ಸಾಮೂಹಿಕ ಜವಾಬ್ದಾರಿಯು ಅರ್ಥಪೂರ್ಣವಾಗುತ್ತದೆ. ಸಂವಿಧಾನಾತ್ಮಕವಾಗುತ್ತದೆ.

ಸಂಸದೀಯ ನಡಾವಳಿಗೆ ಸಂಬಂಧಿಸಿದ ಇನ್ನಷ್ಟು ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗಿದೆ. ಸಂವಿಧಾನದ ಪ್ರಕಾರ ಲೋಕಸಭೆ ಸದಸ್ಯರು ಪ್ರಧಾನಿಯನ್ನು, ವಿಧಾನಸಭೆ ಸದಸ್ಯರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು. ಆದರೆ ಇತ್ತೀಚೆಗೆ ಚುನಾವಣೆಗೆ ಮುಂಚೆಯೇ ಪ್ರಧಾನಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವ ಪ್ರವೃತ್ತಿ ಬೆಳೆಯುತ್ತಿದೆ. ಕೆಲವು ಪಕ್ಷಗಳ ಈ ಪ್ರವೃತ್ತಿಯು ಸಂಸದರು ಮತ್ತು ಶಾಸಕರ ಸಂವಿಧಾನಾತ್ಮಕ ಆಯ್ಕೆ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಈ ಪ್ರವೃತ್ತಿಯನ್ನು ಪ್ರಶ್ನಿಸಬೇಕಾದ ಮಾಧ್ಯಮ ವ್ಯಕ್ತಿಗಳಲ್ಲೇ ಅನೇಕರು ‘ನಿಮ್ಮ ಪಕ್ಷದ ಪ್ರಧಾನಿಮುಖ ಯಾರು, ಮುಖ್ಯಮಂತ್ರಿಮುಖ ಯಾರು’ ಎಂದು ಕೇಳುವುದು ಪ್ರಜಾಪ್ರಭುತ್ವದ ಅಣಕವೂ ಆಗುತ್ತದೆ.ಇನ್ನು ಪಕ್ಷಗಳ ಹೈಕಮಾಂಡ್‍ಗಳು ಮುಖ್ಯಮಂತ್ರಿಯ ಹೇರಿಕೆ ಮಾಡುತ್ತಿರುವ ವಿಧಾನವು ಸಂಸದೀಯ ಹಕ್ಕನ್ನೇ ಅಪಹಾಸ್ಯಗೊಳಿಸುತ್ತಿದೆ.

ತಮ್ಮ ಪಕ್ಷದ ನೇತೃತ್ವದ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ‘ಹೈಕಮಾಂಡ್’ ತನ್ನ ಶಾಸಕರ ಅಭಿಪ್ರಾಯವನ್ನು ಕ್ರೋಡೀಕರಿಸುವಷ್ಟರ ಮಟ್ಟಿಗಾದರೂ ಪ್ರಜಾಸತ್ತಾತ್ಮಕವಾಗಿರಬೇಕು. ಇತ್ತೀಚೆಗೆ ಅದಕ್ಕೂ ಅವಕಾಶ ನೀಡದೆ ಮುಖ್ಯಮಂತ್ರಿಯನ್ನು ಹೈಕಮಾಂಡ್‍ಗಳೇ ನೇಮಿಸುವ ಕೆಟ್ಟ ಚಾಳಿಯಿಂದ ಶಾಸಕರಿಗೆ ಅಭಿಪ್ರಾಯ ಹೇಳುವ ಹಕ್ಕೂ ಇಲ್ಲದಂತಾಗುತ್ತಿದೆ. ಹೆಸರು ಹೇಳಿ ಹತ್ತು ನಿಮಿಷದಲ್ಲಿ ಹೌದೆನ್ನಿಸಿ ಅದಕ್ಕೆ ‘ಸರ್ವಾನುಮತ’ದ ಹಣೆಪಟ್ಟಿ ಅಂಟಿಸುವ ವಿಧಾನ ವಿಜೃಂಭಿಸುತ್ತಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಖರ್ಗೆಯವರೂ ಸ್ಪರ್ಧಿಸಿ ಶಾಸಕರ ಮತದಾನ ನಡೆದದ್ದು ವಿಶೇಷವಾದರೂ ಇತ್ತೀಚೆಗೆ ಕೆಲವು ಶಾಸಕರು ‘ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಿಸುತ್ತಿರುವುದು ವಿಪರ್ಯಾಸ. ಕಡೆಗೆ ಹೈಕಮಾಂಡ್ ತೀರ್ಮಾನ ಎಂದು ಎಲ್ಲ ಪಕ್ಷದವರೂ ತಿಪ್ಪೆ ಸಾರಿಸುವುದೂ ಉಂಟು.

ಪ್ರಾದೇಶಿಕ ಪಕ್ಷಗಳ ಅಧಿಕಾರವಿದ್ದರೆ ಹೈಕಮಾಂಡ್ ಕಾಟವಿರುವುದಿಲ್ಲ ಎಂಬ ತಪ್ಪು ಕಲ್ಪನೆಯೂ ಕೆಲವರಲ್ಲಿದೆ. ರಾಷ್ಟ್ರೀಯ ಪಕ್ಷವಾದರೆ ದೇಶದ ರಾಜಧಾನಿಯಲ್ಲಿ, ಪ್ರಾದೇಶಿಕ ಪಕ್ಷವಾದರೆ ರಾಜ್ಯಗಳ ರಾಜಧಾನಿಯಲ್ಲಿ ಹೈಕಮಾಂಡ್‍ಗಳಿರುವುದು ಕಟುವಾಸ್ತವ. ಹಿಂದೆ ಜಯಲಲಿತಾ, ಕರುಣಾನಿಧಿ, ಈಗ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ಮಾಯಾವತಿ, ದೇವೇಗೌಡರಾದಿಯಾಗಿ ಆಯಾ ರಾಜ್ಯದ ಪ್ರಾದೇಶಿಕ ಪಕ್ಷಗಳ ಹೈಕಮಾಂಡ್‍ಗಳು ಚೆನ್ನಾಗಿಯೇ ಚಾಲ್ತಿಯಲ್ಲಿವೆ. ಇದು ಎಲ್ಲ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವದ ಪ್ರಶ್ನೆ.

ಮಂತ್ರಿಮಂಡಲ ರಚನೆಯಲ್ಲೂ ಹೈಕಮಾಂಡ್ ಹಾವಳಿಯು ಅತಿಯಾಗಿ ಬೆಳೆಯುತ್ತಿದೆ. ಪಕ್ಷದ ಸಿದ್ಧಾಂತ (ಇದ್ದರೆ) ಮತ್ತು ಸರ್ಕಾರದ ಹಿತದೃಷ್ಟಿಯಿಂದ ಹೈಕಮಾಂಡ್‍ಗಳು ಸಲಹೆ ಕೊಡುವುದನ್ನು ಒಪ್ಪಬಹುದು; ಆದೇಶ ಮಾಡುವುದನ್ನಲ್ಲ. ಆದೇಶದ ಅತಿರೇಕಕ್ಕೆ ಅತ್ಯುಗ್ರ ಉದಾಹರಣೆಯೆಂದರೆ, ಯಡಿಯೂರಪ್ಪನವರಿಗೆ ಒಂದು ಹಂತದಲ್ಲಿ ಮಂತ್ರಿಮಂಡಲ ರಚನೆಗೆ ಅವಕಾಶ ನೀಡದೆ ತಡೆಗೋಡೆಯಾದ ಹೈಕಮಾಂಡ್ ನಡೆ. ಇದನ್ನು ಸ್ವತಃ ಯಡಿಯೂರಪ್ಪನವರೇ ತಮ್ಮ ರಾಜೀನಾಮೆ ಘೋಷಣೆಯ ಭಾಷಣದಲ್ಲಿ ಹೇಳಿದ್ದಾರೆ.

ಸಂಸದೀಯ ನಡಾವಳಿಯ ನಯವಾದ ಉಲ್ಲಂಘನೆಗೆ ಮತ್ತೊಂದು ಸಾಕ್ಷಿಯೆಂದರೆ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಸದಸ್ಯರ ನಾಮಕರಣ ವಿಧಾನ. ಸಂವಿಧಾನದ 80ನೇ ವಿಧಿಯ ಪ್ರಕಾರ ರಾಜ್ಯಸಭೆಗೆ ರಾಷ್ಟ್ರಪತಿಯವರೂ 171ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿಗೆ ರಾಜ್ಯಪಾಲರೂ ಸಚಿವ ಸಂಪುಟದ ಶಿಫಾರಸಿನಂತೆ ವಿವಿಧ ಕ್ಷೇತ್ರಗಳ ತಜ್ಞರನ್ನು ನಾಮಕರಣ ಮಾಡುತ್ತಾರೆ.

ಸಂವಿಧಾನದ ಪ್ರಕಾರ, ಸಾಹಿತ್ಯ, ವಿಜ್ಞಾನ, ಕಲೆ, ಸಮಾಜಸೇವೆ, ಸಹಕಾರಿ ವಲಯವೇ ಮುಂತಾದ ಕ್ಷೇತ್ರಗಳ ಪರಿಣತರನ್ನು ನಾಮಕರಣ ಮಾಡಬೇಕು. ಅವರು ಯಾವುದೇ ಪಕ್ಷಕ್ಕೆ ಸೇರಿರಬೇಕಿಲ್ಲ. ಹಾಗೆಂದು ಪಕ್ಷದವರನ್ನು- ಪರಿಣತರಾಗಿದ್ದರೆ- ನಾಮಕರಣ ಮಾಡಬಾರದೆಂದೂ ಇಲ್ಲ. ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳು ತಂತಮ್ಮ ಪಕ್ಷದ ಸದಸ್ಯರಲ್ಲೇ ಪರಿಣತಿಯನ್ನು ಸಂಶೋಧಿಸಿ ನಾಮಕರಣ ಮಾಡಿಸಿದ್ದೇ ಹೆಚ್ಚು! ಅಪರೂಪಕ್ಕೆ ಒಂದಿಬ್ಬರು ಪಕ್ಷರಹಿತರ ನಾಮಕರಣವಾಗಿರುವುದೂ ಉಂಟು. ಆದರೆ ಒಟ್ಟಾರೆ ನೋಡಿದಾಗ ಪಕ್ಷವೇ ಪ್ರಮುಖಮಾನದಂಡವಾಗುತ್ತಿರುವುದು ಒಂದು ವಿಪರ್ಯಾಸ.

ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸಂಸದೀಯ ನಡಾವಳಿಗೆ ವಿರುದ್ಧವಾದ ನಡೆಗಳಿಗೆ ನಮ್ಮ ಸಂದರ್ಭವು ಸಾಕ್ಷಿಯಾಗುತ್ತಿದೆ. ಸಾಮೂಹಿಕ ಜವಾಬ್ದಾರಿಯ ಸಂವಿಧಾನಾತ್ಮಕ ಆಶಯಕ್ಕೆ ವಿರುದ್ಧವಾಗಿ ವ್ಯಕ್ತಿಕೇಂದ್ರಿತ ಪ್ರವೃತ್ತಿ ಪ್ರಮುಖವಾಗುತ್ತಿದೆ. ಎಲ್ಲ ‘ಇಸಂ’ಗಳನ್ನೂ ಮೀರಿ ‘ಹೀರೊಯಿಸಂ’ ಮುನ್ನೆಲೆಗೆ ಬಂದಿದೆ. ಈ ದಿಸೆಯಲ್ಲಿ ಡಾ. ಅಂಬೇಡ್ಕರ್ ಅವರು 1949ರ ನವೆಂಬರ್ 25ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ ಜಾನ್ ಸ್ಟುವರ್ಟ್ ಮಿಲ್ ಅವರ ಮಾತು ಮುಖ್ಯವಾಗುತ್ತದೆ: ‘ಯಾವ ಮಹಾನ್ ವ್ಯಕ್ತಿಯೇ ಆಗಲಿ, ಅವರ ಪಾದದಡಿಯಲ್ಲಿ ಸ್ವಾತಂತ್ರ್ಯವನ್ನು ಚೆಲ್ಲಬಾರದು. ನಮ್ಮ ಯಾವುದೇ ಸಂಸ್ಥೆಗಳನ್ನು ಬುಡಮೇಲು ಮಾಡುವ ಅಧಿಕಾರವನ್ನು ಏಕವ್ಯಕ್ತಿಗೆ ಕೊಡಬಾರದು’.

ಮಿಲ್ ಅವರ ಈ ಮಾತು ಸಾಮೂಹಿಕ ಸಂಸದೀಯ ಹೊಣೆಗಾರಿಕೆಗೆ ಉತ್ತಮ ಉದಾಹರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.