ADVERTISEMENT

ವಿಶ್ಲೇಷಣೆ | ಇತಿಹಾಸದ ಗ್ರಹಿಕೆ ಮತ್ತು ಸ್ಪಷ್ಟತೆ

ಇತಿಹಾಸದ ಕುರಿತು ವರ್ತಮಾನದಲ್ಲಿ ನಡೆಯುತ್ತಿರುವ ಚರ್ಚೆಗಳು ಇತಿಹಾಸದ್ದೇ ಚರ್ಚೆಗಳಲ್ಲ

ಅರವಿಂದ ಚೊಕ್ಕಾಡಿ
Published 20 ಆಗಸ್ಟ್ 2021, 19:45 IST
Last Updated 20 ಆಗಸ್ಟ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇತಿಹಾಸವು ಅನುಭವಗಳ ದಾಖಲೆ. ಅನುಭವವಿಲ್ಲದೆಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಇತಿಹಾಸದ ಜ್ಞಾನ ಜೀವನಕ್ಕೆ ಅವಶ್ಯವಾಗುತ್ತದೆ. ಆದರೆ, ಅದು ಇತಿಹಾಸದ ಜ್ಞಾನವೇ ಆಗಿರಬೇಕು ಹೊರತು ನಮಗೆ ಹೇಗೆ ಬೇಕೋ ಹಾಗೆ ಇತಿಹಾಸವಿದೆ ಎಂದುಕೊಂಡು ನಿರೂಪಿಸುವುದಾಗಿರಬಾರದು. ಒಂದು ಘಟನೆಯ ಎಲ್ಲ ಮಗ್ಗುಲುಗಳ ಪರಿಶೀಲನೆಯಿಲ್ಲದೆ ಇತಿಹಾಸ ನಿರೂಪಣೆ ಸಾಧ್ಯವಾಗುವುದಿಲ್ಲ.

ಭಾರತೀಯ ಸಂದರ್ಭದಲ್ಲಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವಾಗ ಪುರಾಣ, ಕಾವ್ಯ, ಚರಿತ್ರೆಗಳೆಲ್ಲವನ್ನೂ ಒಟ್ಟಾಗಿ ಸೇರಿಸಿ ಗೊಂದಲಮಯಗೊಳಿಸುವ ಸಂಭವನೀಯತೆ ಹೆಚ್ಚು. ಹೆಚ್ಚು ಕಡಿಮೆ ಗುಪ್ತ ಸಾಮ್ರಾಜ್ಯದ ಸ್ಥಾಪನೆಯ ನಂತರದ ಕಾಲದ ಬಗ್ಗೆ ಐತಿಹಾಸಿಕ ಸ್ಪಷ್ಟತೆ ಇದೆ. ಆದರೆ, ಅದಕ್ಕಿಂತ ಹಿಂದಕ್ಕೆ ಹೋದರೆ ಐತಿಹಾಸಿಕ ಸ್ಪಷ್ಟತೆ ಕಡಿಮೆ.

ಉದಾಹರಣೆಗೆ, ಇತಿಹಾಸ ನಿರೂಪಣೆಯಲ್ಲಿ ಋಗ್ವೇದ ಕಾಲ, ಇತರ ವೇದಗಳ ಕಾಲದ ಸುಮಾರು ಒಂದೂವರೆ ಸಾವಿರ ವರ್ಷಗಳು ಸಹಜ ಸಾಮಾಜಿಕ ಪ್ರಕ್ರಿಯೆಯ ಮೂಲಕವೇ ಹೇಗೆ ವಿಕಾಸವಾದವು ಎಂದು ಹೇಳಲು ಆಧಾರಗಳು ಸಾಲುವುದಿಲ್ಲ. ಕಂಡುಕೊಂಡ ಅಷ್ಟೂ ಬಹುತೇಕ ಸಾಹಿತ್ಯದ ಆಧಾರದಲ್ಲಿವೆ. ವೇದ ಸಾಹಿತ್ಯದಲ್ಲಿ ಲಭ್ಯವಾಗಿರುವುದೇ ಮೂರನೆಯ ಒಂದರಷ್ಟು ಮಾತ್ರ. ಅದರಲ್ಲೂ ಇತಿಹಾಸ ನಿರೂಪಣಾ ಪದ್ಧತಿಗೆ ಒಂದು ಸವಾಲಿನ ಹಾಗೆ ಭಾಸವಾಗುವುದು ಈಶಾವಾಸ್ಯೋಪನಿಷತ್ತು. ಇದು ಸನಾತನ ಧರ್ಮದ ಅತೀ ಪುರಾತನ ದಾಖಲೆ ಎಂದು ಗುರುತಿಸಲ್ಪಟ್ಟಿದೆ. ಆದರೆ ಅದು ವೇದಕಾಲೀನ ಅದ್ವೈತ ತತ್ವಜ್ಞಾನವನ್ನು
ಹೇಳುತ್ತದೆ. ಮಾನವ ನಾಗರಿಕತೆಯ ಪ್ರಾರಂಭದ ಹಂತವೇ ಅದ್ವೈತವಾಗಲು ಸಾಧ್ಯವಿಲ್ಲ. ಅದ್ವೈತವು ಉನ್ನತ ಜ್ಞಾನ ಮಾರ್ಗವನ್ನು ಬಯಸುತ್ತದೆ. ಕಣ್ಣಿಗೆ ಕಾಣುವ ದ್ವೈತ ಮಾರ್ಗದಲ್ಲಿ ಸಾವಿರಾರು ವರ್ಷ ಸಾಗಿದ ನಂತರ ಲಭ್ಯವಾಗುವ ಜ್ಞಾನವು ಅದ್ವೈತವಾಗಿ ರೂಪಾಂತರ ಆಗಬೇಕಾಗುತ್ತದೆ. ಆದರೆ ಆ ಚಲನೆಯನ್ನು ಐತಿಹಾಸಿಕ ಪದ್ಧತಿಯಲ್ಲಿ ಅರ್ಥ ಮಾಡಿಕೊಳ್ಳಲು ಬೇಕಾದ ದಾಖಲೆಗಳು ಲಭ್ಯವಿಲ್ಲ.

ADVERTISEMENT

ಭಾರತದಲ್ಲಿ ಇತಿಹಾಸ ನಿರೂಪಣೆಗಿಂತ ಭಿನ್ನವಾದ ಚರಿತ್ರೆ ನಿರೂಪಣಾ ಪದ್ಧತಿ ಇದೆ. ಶರಭ ಚರಿತೆ, ಬುದ್ಧ ಚರಿತೆ- ಈ ಮಾದರಿಯ ಚರಿತ್ರೆಗಳು. ನಡೆದ ಘಟನೆಗಳಲ್ಲಿ ಮುಂದಿನ ತಲೆಮಾರಿಗೆ ಮೌಲ್ಯ ಬೋಧಕವೆನಿಸಿದವುಗಳನ್ನು ಧಾರ್ಮಿಕ ಪರಿಕಲ್ಪನೆಯೊಂದಿಗೆ ನಿರೂಪಿಸುವುದು ಚರಿತ್ರೆ ನಿರೂಪಣೆ. ಚಾರಿತ್ರ್ಯ ಉಳ್ಳದ್ದು ಚರಿತ್ರೆ. ಇದರಲ್ಲಿ ಅಂದಿನ ತಲೆಮಾರು, ಮುಂದಕ್ಕೆ ಬೇಕಾದ ಉತ್ತಮ ವಿಷಯವೆಂದು ಭಾವಿಸಿದ್ದಕ್ಕೆ ಮಾತ್ರ ಪ್ರಾಧಾನ್ಯ ಇರುತ್ತದೆ. ಕೆಟ್ಟದ್ದಕ್ಕೆ ಪ್ರಾಮುಖ್ಯ ಇಲ್ಲ. ಉತ್ತಮವಾದದ್ದನ್ನು
ಧಾರ್ಮಿಕ ಹಿನ್ನೆಲೆಯಲ್ಲಿ ವಿವರಿಸುವುದು ಪದ್ಧತಿ.

ಇತಿಹಾಸವೆಂದರೆ ಹೀಗಲ್ಲ. ‘ಇತಿ’ ಅಂದರೆ ‘ಹೀಗೆ’, ‘ಹಾಸ’ ಎಂದರೆ ‘ಇತ್ತು’. ಆದ್ದರಿಂದ ‘ಹೀಗೆ ಇತ್ತು’ ಎಂದು ಹೇಳುವುದು ಇತಿಹಾಸ. ಇದು ಹೆಚ್ಚು ಯುರೋಪಿಯನ್ ಶೈಲಿಯಲ್ಲಿರುವುದು ಮತ್ತು ಇತಿಹಾಸಕ್ಕೆ ಒಳ್ಳೆಯದು ಕೆಟ್ಟದ್ದು ಎಂಬ ಪ್ರಶ್ನೆ ಇಲ್ಲ. ಲಭ್ಯ ದಾಖಲೆ ಏನಿದೆಯೋ ಅದನ್ನು ಹೇಳುವುದಷ್ಟೆ ಇತಿಹಾಸ. ಆದರೆ ಇತಿಹಾಸ ಎನ್ನುವುದು ನಿರೂಪಣೆ ಅಲ್ಲ. ಅದು ಕೇವಲ ಘಟನೆಗಳ ಲಭ್ಯ ದಾಖಲೆಯ ಸಂಗ್ರಹವಾಗಿದೆ. ನಿರೂಪಣೆಯಲ್ಲಿ ಇತಿಹಾಸಕಾರನ ದೃಷ್ಟಿಕೋನಕ್ಕೆ ಮಹತ್ವ ಬಂದುಬಿಡುತ್ತದೆ. ಒಂದೇ ಘಟನೆಯನ್ನು ಇಬ್ಬರು ಇತಿಹಾಸಕಾರರು ಎರಡು ರೀತಿಯಲ್ಲಿ ನಿರೂಪಿಸಬಹುದು. ಆಗ ಯಾವುದು ಸತ್ಯ ಎಂದು ಕೇಳಿದರೆ ಇದೇ ಸತ್ಯ ಎನ್ನಲು ಸಾಧ್ಯವಿಲ್ಲ. ಎರಡೂ ಅಲ್ಲದ ಮೂರನೆಯ ನಿರೂಪಣೆಯೂ ಇರಬಹುದು.

ಈ ರೀತಿ ಇತಿಹಾಸವನ್ನು ಸ್ವೀಕರಿಸುವಾಗಲೂ ಘಟನೆಯ ದಾಖಲೀಕರಣದ ಕಾಲ ಮುಖ್ಯವಾಗುತ್ತದೆ. ಉದಾಹರಣೆಗೆ, ಇತ್ತೀಚೆಗೆ ನಾನು 1837ರ ಕೊಡಗು ಮತ್ತು ಕರಾವಳಿ ಜನತಾ ಬಂಡಾಯವನ್ನು ಅಧ್ಯಯನ ಮಾಡುವಾಗ ಲಿಖಿತ ದೇಶೀಯ ದಾಖಲೆಯಾಗಿ ದೊರೆತದ್ದು 1952ರಲ್ಲಿ ಪ್ರಕಟವಾದ ತೀ.ತಾ. ಶರ್ಮರ ಕೃತಿ. ಅಂದರೆ ಘಟನೆ ನಡೆದು 115 ವರ್ಷಗಳ ನಂತರ ಬರೆಯಲ್ಪಟ್ಟ ಕೃತಿ. ಎರಡು ತಲೆಮಾರುಗಳೇ ಕಳೆದುಹೋಗಿವೆ. ಆಗ ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳೆದ ದೃಷ್ಟಿಕೋನವೊಂದರ ಪ್ರಭಾವ ತೀ.ತಾ. ಶರ್ಮರ ದೃಷ್ಟಿಕೋನದ ಮೇಲೆ ಇರುತ್ತದೆ. ಘಟನೆ ನಡೆದ ಕಾಲದ ಕೊನೆಯ ದಾಖಲೆ ಎಂದರೆ 1870ರಲ್ಲಿ ಪ್ರಕಟವಾದ ರಿಕ್ಟರ್ ಗೆಜೆಟಿಯರ್. ಆಗ ಘಟನೆಯ ಕಾಲದಲ್ಲಿ ಬದುಕಿದ್ದವರು ಬರೆದ ದಾಖಲೆಗೆ ಜಾಸ್ತಿ ಮಹತ್ವ ಇರುತ್ತದೆ. ಹಿಂದೆ ಹಿಂದಕ್ಕೆ ಹೋದ ಹಾಗೆ ಈ ಕಾಲಮಾನದ ಅಂತರ ಓದುಗನ ಪ್ರಜ್ಞೆಯಿಂದ ಹೊರಟು ಹೋಗುತ್ತದೆ.

ವೇದಗಳ ಕಾಲದಲ್ಲಿ ಜ್ಞಾನಿಗಳಾದ ವಿದುಷಿಯರು ಇದ್ದರು. ವೇದಗಳ ಕಾಲದಲ್ಲಿ ಸ್ತ್ರೀಶೋಷಣೆ ಇತ್ತು ಎನ್ನುವ ಎರಡು ಹೇಳಿಕೆಗಳು ಪರಸ್ಪರ ವಿರುದ್ಧವಾಗಿ ಕಾಣಿಸುತ್ತವೆ. ಆದರೆ ಈ ಎರಡು ಹೇಳಿಕೆಗಳ ನಡುವೆ ಸುಮಾರು ನೂರೈವತ್ತು ವರ್ಷಗಳ ಅಂತರವಿರುತ್ತದೆ. ಈ ಅಂತರವನ್ನು ಅರ್ಥ ಮಾಡಿಕೊಂಡು ಓದಿಕೊಂಡಾಗ ಹೇಳಿಕೆಗಳು ಪರಸ್ಪರ ವಿರುದ್ಧವಾಗಿ ಕಾಣುವುದಿಲ್ಲ.

ಇತಿಹಾಸವನ್ನು ಸಮರ್ಪಕವಾಗಿ ಅಧ್ಯಯನ ಮಾಡಬೇಕಾದರೆ ಮಾನವ ಸ್ವಭಾವಗಳ ಅರಿವು ಇರಬೇಕಾ
ಗುತ್ತದೆ. ತನ್ನದು ಶ್ರೇಷ್ಠ ಎನ್ನುವುದು, ತನಗೆ ಅನುಕೂಲವಾಗಬೇಕು ಎನ್ನುವುದು ಮನುಷ್ಯನ ಸಹಜ ಸ್ವಭಾವ. ಇನ್ನೊಬ್ಬರಿಗೆ ತೊಂದರೆ ಮಾಡಬೇಕು ಎಂದು ಯಾರಿಗೂ ಇರುವುದಿಲ್ಲ. ಆದರೆ ತನ್ನದನ್ನು ಗಟ್ಟಿಯಾಗಿ ಉಳಿಸಿಕೊಳ್ಳಲಿಕ್ಕಾಗಿ, ಬೆಳೆಸಿಕೊಳ್ಳಲಿಕ್ಕಾಗಿ ಇನ್ನೊಬ್ಬನಿಗೆ ತೊಂದರೆ ಮಾಡುತ್ತಾನೆ. ಅದನ್ನು ಆ ಕಾಲಮಾನದಲ್ಲಿ ನಿಂತು ನೋಡಬೇಕು. ಉದಾಹರಣೆಗೆ, ಚಾಳುಕ್ಯ ವಾಸ್ತುಶಿಲ್ಪದ ಶ್ರೇಷ್ಠತೆ ಮತ್ತು ಚೋಳ ವಾಸ್ತುಶಿಲ್ಪದ ಶ್ರೇಷ್ಠತೆಗಾಗಿ ಸಂಘರ್ಷ ಇದ್ದ ಕಾಲ ಇತ್ತು. ಇವತ್ತು ಅದು ಅಪ್ರಸ್ತುತವಾಗಿದೆ. ಹಾಗೆಂದು ಇವತ್ತು ಪ್ರಸ್ತುತವಾಗಿರುವ ವಿಷಯದ ಆಧಾರದಲ್ಲಿ ಅಂದಿನದನ್ನು ಅರ್ಥೈಸಲು ಬರುವುದಿಲ್ಲ.

ಎರಡನೆಯದಾಗಿ, ಇತಿಹಾಸವನ್ನು ಅಧ್ಯಯನ ಮಾಡುವವನಿಗೆ ಒಂದು ನಿರ್ಲಿಪ್ತ ಮನಃಸ್ಥಿತಿ ಇರಬೇಕು. ಏಕೆಂದರೆ ನಾಗರಿಕತೆಯ ವಿಕಾಸವು ಯುದ್ಧ ಮತ್ತು ಬೋಧನೆ ಈ ಎರಡು ರೂಪದಲ್ಲಿ ಆಗಿದೆ. ಭಾಗಶಃ ಐತಿಹಾಸಿಕವೂ ಭಾಗಶಃ ಪುರಾಣವೂ ಆದ ಕುರುಕ್ಷೇತ್ರ ಯುದ್ಧದ ನಂತರ ಅಲೆಗ್ಸಾಂಡರನ ದಾಳಿಯ ಆಸುಪಾಸಿನವರೆಗೆ ದೊಡ್ಡ ಯುದ್ಧಗಳು ನಡೆದ ದಾಖಲೆ ಲಭ್ಯವಿಲ್ಲ. ಬಹುಶಃ ದೊಡ್ಡ ಯುದ್ಧದಿಂದ ಆದ ಹಾನಿಯು ಸಮಾಜವನ್ನು ಸಹಸ್ರಮಾನಗಳಷ್ಟು ಹಿಂದಕ್ಕೆ ಒಯ್ದು ಯುದ್ಧ ಮಾಡಲು ಆಗದ ಸ್ಥಿತಿ ಬಂದಿರುತ್ತದೆ. ಆ ಸಂದರ್ಭದ ವಿಕಾಸಗಳು ಬೋಧನೆಯ ಪರಿಣಾಮದಿಂದ ಆಗಿರುತ್ತವೆ. ಯುದ್ಧದ ಮೂಲಕ ನಡೆದ ವಿಕಾಸದಲ್ಲಿ ಅನ್ಯಾಯ, ಅನಾಚಾರ, ಕಗ್ಗೊಲೆ, ಮೋಸ, ಅತ್ಯಾಚಾರ, ದಮನ ಎಲ್ಲವೂ ನಡೆದಿವೆ. ಇವು ತಂಡ ಸಂಘರ್ಷಗಳು. ಇವೆಲ್ಲವನ್ನೂ ಅಭ್ಯಾಸ ಮಾಡಿದಾಗಲೂ ಅಂದಿನ ದಮನಗಳನ್ನು ಇಂದು ಬಾಳುತ್ತಿರುವ ಯಾರ ಮುಖದಲ್ಲೋ ಗುರುತಿಸದೆ ಇರುವ ನಿರ್ಲಿಪ್ತತೆ ಇದ್ದಾಗ ಮಾತ್ರ ಇತಿಹಾಸದ ವಿದ್ಯಾರ್ಥಿಯಾಗುವ ಅಕಡೆಮಿಕ್ ಅರ್ಹತೆ ಬರುತ್ತದೆ. ಈ ಶಕ್ತಿ ಇಲ್ಲದೆ ಇದ್ದರೆ ಇತಿಹಾಸದ ಓದು‌ ಮಾನಸಿಕ ಕಿರುಕುಳ ಹೆಚ್ಚಿಸುತ್ತದೆ. ಆಗ ಸಂಕಥನ‌ ಮಾದರಿಯ ಚರ್ಚೆಗಳು ಜಾಸ್ತಿಯಾಗುತ್ತವೆ. ಆದರೆ ಸಂಕಥನಗಳು ಸಂಕಥನಕಾರನ ಭಾವನೆಗಳನ್ನು ಹೇಳಲು ಆತ ಇತಿಹಾಸದ ದಾಖಲೆಗಳನ್ನು ಬಳಸಿದ ಕ್ರಮವನ್ನು ಸೂಚಿಸುತ್ತವೆಯೇ ವಿನಾ ಇತಿಹಾಸವನ್ನೇ ಸೂಚಿಸುವುದಿಲ್ಲ. ಸಂಕಥನಗಳು ಏಕಮುಖಿ ನಿಲುವಿನವು.

ವರ್ತಮಾನದ ಇತಿಹಾಸದ ಚರ್ಚೆಗಳು ಬಹುಮಟ್ಟಿಗೆ ಪರಸ್ಪರ ಎದುರಾಳಿಗಳೆಂದು ಭಾವಿಸಿಕೊಂಡ ತಂಡಗಳು ನಡೆಸುವ ಸಂಕಥನ ಮಾದರಿಯ ಚರ್ಚೆಗಳೇ ವಿನಾ ಇತಿಹಾಸದ್ದೇ ಚರ್ಚೆಗಳಲ್ಲ. ಉದ್ಯೋಗದ ಕಾರಣಕ್ಕಾಗಿ ಇತಿಹಾಸ ವಿಷಯವನ್ನು ಆರಿಸದೆ ಇರುವವರು ಇತಿಹಾಸದ ಬಗ್ಗೆ ಚರ್ಚಿಸುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ. ಆದರೆ ಅದು ಇತಿಹಾಸದ ಚರ್ಚೆಯಾಗಬೇಕೇ ವಿನಾ ಯಾವುದು ಇತಿಹಾಸವಾಗಬೇಕು ಎಂದು ಭಾವಿಸಿಕೊಂಡು ನಡೆಸುವ ಚರ್ಚೆಯಾಗಬಾರದು. ಅದಕ್ಕಾಗಿ ಇತಿಹಾಸವನ್ನು ಹೇಗೆ ಅಧ್ಯಯನ ಮಾಡಬೇಕು ಎಂದು ಅರಿತುಕೊಂಡು ಇತಿಹಾಸದ ಚರ್ಚೆಯನ್ನು ಮಾಡಬೇಕಾದ ಅಗತ್ಯವಿದೆ. ಇತಿಹಾಸದ ಕುರಿತು ಆಸಕ್ತಿ ಜಾಸ್ತಿಯಾಗಿದ್ದರೆ, ಕಾಲೇಜಿನ ಇತಿಹಾಸ ವಿಭಾಗಗಳು ತುಂಬಿ ತುಳುಕಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.